ಗುರುವಾರ, 28 ಸೆಪ್ಟೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ತಾಳ್ಮೆಯ ಫಲ ಸಿಹಿ

Published 23 ಆಗಸ್ಟ್ 2023, 19:27 IST
Last Updated 23 ಆಗಸ್ಟ್ 2023, 19:27 IST
ಅಕ್ಷರ ಗಾತ್ರ

ಮಹೇಂದ್ರ ಸಿಂಗ್ ಧೋನಿ ಭಾರತದ ಅತ್ಯಂತ ಜನಪ್ರಿಯ ಮತ್ತು ಯಶಸ್ವೀ ಕ್ರೀಡಾಪಟುಗಳಲ್ಲಿ ಮುಂಚೂಣಿಯಲ್ಲಿರುವವರು. ಜಾರ್ಖಂಡ್‌ನಂತಹ ಹಿಂದುಳಿದ ರಾಜ್ಯದಿಂದ ಬಂದ ತರುಣ ಜಗತ್ತೇ ಮೂಗಿನ ಮೇಲೆ ಬೆರಳಿಡುವ ಸಾಧನೆ ಮಾಡಲು ಪ್ರತಿಭೆಯ ಜತೆಗೆ ಅವರ ತಾಳ್ಮೆಯೂ ಪ್ರಮುಖ ಕಾರಣ ಎಂಬುದು ಬಹಳ ಮುಖ್ಯವಾದ ಸಂಗತಿ.

ಒಮ್ಮೆ ದೊಡ್ಡ ಅಪಘಾತವೊಂದರಿಂದ ಕೂದಲೆಳೆಯ ಅಂತರದಲ್ಲಿ ಧೋನಿ ಮತ್ತವರ ಸ್ನೇಹಿತರು ಬಚಾವಾಗಿದ್ದರು. ಒಂದೆರಡು ಸೆಕೆಂಡ್‌ ವ್ಯತ್ಯಾಸವಾಗಿದ್ದರೆ ಎಲ್ಲರ ಜೀವವೂ ಹೋಗಿರುತ್ತಿತ್ತು. ಸ್ನೇಹಿತರು ಎದುರಿಗಿನ ವಾಹನದವನ ಮೇಲೆ ರೇಗಲು ಹೊರಟರೆ ಧೋನಿ ಶಾಂತಚಿತ್ತರಾಗಿದ್ದರು, ಸ್ನೇಹಿತರಿಗೂ ಜಗಳ ಮಾಡಲು ಬಿಡಲಿಲ್ಲ. ಧೋನಿಯ ಪ್ರಕಾರ ಕೂಗಿ ಅಬ್ಬರಿಸಿ ಗರ್ಜಿಸುವುದು ನಿಜವಾದ ಸಾಮರ್ಥ್ಯವಲ್ಲ, ಅದು ಅತ್ಯಂತ ಸುಲಭವಾದದ್ದು. ಆದರೆ ಕೂಗಾಡುವ ಪರಿಸ್ಥಿತಿಯಲ್ಲೂ ತಾಳ್ಮೆಯಿಂದ ಮೌನವಾಗಿ ಇರುವುದು ಸಾಮರ್ಥ್ಯ. ರಣಜಿ ಆಡುವಾಗಲೊಮ್ಮೆ ಆರೋಗ್ಯ ಹದಗೆಟ್ಟು ಇಂಡಿಯಾ ‘ಎ’ ತಂಡಕ್ಕೆ ಆಯ್ಕೆಯಾಗುವ ಹೊಸ್ತಿಲಲ್ಲಿದ್ದ ಮಹಿಗೆ ಆ ಅವಕಾಶ ತಪ್ಪಿಹೋಗುವ ಸಾಧ್ಯತೆಯಿತ್ತು. ಕೋಚ್‌ ಬೇಸರಿಸಿದಾಗ ಇದಲ್ಲದಿದ್ದರೆ ಮತ್ತೊಂದು ಅವಕಾಶ ಬರುತ್ತದೆ ಚಿಂತಿಸಬೇಡಿ ಎಂದು ಕೋಚ್‌ಗೇ ಸಮಾಧಾನ ಹೇಳಿದ ವ್ಯಕ್ತಿ ಈ ಧೋನಿ!! ತಲೆಯಲ್ಲಿ ತಣ್ಣನೆಯ ಹಿಮಾಲಯವನ್ನೇ ಇಟ್ಟುಕೊಳ್ಳುವ ಇದೇ ಸ್ವಭಾವದಿಂದಲೇ ಎಂತಹ ಪ್ರತಿಕೂಲ ಪರಿಸ್ಥಿತಿಯಲ್ಲೂ ಮಹಿ ಎದೆಗುಂದುತ್ತಿರಲಿಲ್ಲ.

ತಾಳ್ಮೆಯ ಮಹತ್ವವನ್ನು ಅರ್ಥಮಾಡಿಕೊಳ್ಳದಿದ್ದರೆ ಯಶಸ್ಸಾಗಲೀ, ನೆಮ್ಮದಿಯಾಗಲೀ ಕನ್ನಡಿಯೊಳಗಿನ ಗಂಟೇ. ತಣ್ಣೀರನ್ನಾದರೂ ತಣಿಸಿ ಕುಡಿಯಬೇಕು ಎಂಬ ಮಾತು ತಾಳ್ಮೆಯ ಕುರಿತು ಹೇಳುತ್ತದೆ. ತಾಳಿದವನು ಬಾಳಿಯಾನು, ತಾಳ್ಮೆಯ ಫಲ ಸಿಹಿಯಾಗಿರುತ್ತದೆ ಎಂಬ ಗಾದೆಗಳು ಬದುಕಿನಲ್ಲಿ ಸಹನೆಯ ಮಹತ್ವವನ್ನು ಒತ್ತಿ ಹೇಳುತ್ತದೆ. ತಾಳ್ಮೆ ಎಂದರೆ ಕಾಯುವುದಲ್ಲ, ಕಾಯುವಾಗ ಸಮಾಧಾನದಿಂದಿರುವುದು. ಕ್ಲಿಷ್ಟ ಸನ್ನಿವೇಶಗಳಲ್ಲಿ ಶಾಂತರಾಗಿ ಯೋಚಿಸುವಂತಿದ್ದರೆ ಮತ್ತು ಧನಾತ್ಮಕವಾಗಿದ್ದರೆ ಬದುಕಿನಲ್ಲಿ ಅರ್ಧ ಗೆದ್ದಂತೆ! ಒಂದು ಕ್ಷಣದ ತಾಳ್ಮೆ ಹತ್ತು ವರ್ಷದ ನೆಮ್ಮದಿ ತರಬಲ್ಲುದು ಎಂದರೆ ಈ ಜಗತ್ತು ಅದೆಷ್ಟು ಅನಾಹುತಗಳನ್ನುಂಟುಮಾಡಿದೆ ಎಂಬುದು ಸ್ಪಷ್ಟವಾಗುತ್ತದೆ.

ಜೈಲಿನಲ್ಲಿ ಕೊಲೆ ಆಪಾದನೆಗೆ ಒಳಗಾಗಿರುವ ಅರ್ಧಕ್ಕಿಂತ ಹೆಚ್ಚು ಕೈದಿಗಳು ಕೋಪದ ಕೈಗೆ ತಮ್ಮ ಬುದ್ಧಿ ಕೊಟ್ಟವರೆ ಆಗಿದ್ದಾರೆ! ಸಣ್ಣ ಸಣ್ಣ ಸಂಗತಿಗಳಿಗೆ ತಾಳ್ಮೆಗೆಟ್ಟು ಆಡುವ ಕಟು ಮಾತುಗಳು ಅದೆಷ್ಟು ದಾಂಪತ್ಯಗಳನ್ನು, ಸ್ನೇಹ ಸಂಬಂಧಗಳನ್ನು ಹಾಳು ಮಾಡುತ್ತವೆಂದರೆ ಜೀವನಪೂರ್ತಿ ಪಶ್ಚಾತ್ತಾಪದ ಬೇಗೆಯಲ್ಲಿ ಬೇಯುವುದೇ ಉಳಿದಿರುವ ಮಾರ್ಗ! ಮಾತಿನಲ್ಲಾಗಲೀ ಕೃತಿಯಲ್ಲಾಗಲೀ ದುಡುಕುವ ಮುನ್ನ ನಾವೆಲ್ಲ ಅರೆಕ್ಷಣ ತಾಳ್ಮೆಯಿಂದ ಯೋಚಿಸಿದರೆ ಈ ಜಗತ್ತು ಬದುಕಲು ಇನ್ನಷ್ಟು ಯೋಗ್ಯವಾದ ಸ್ಥಳವಾಗುವುದರಲ್ಲಿ ಯಾವ ಸಂದೇಹವೂ ಇಲ್ಲ.

–ದೀಪಾ ಹಿರೇಗುತ್ತಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT