ಸೋಮವಾರ, 29 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಕಲಿತ ಯಾವ ವಿದ್ಯೆಯೂ ವ್ಯರ್ಥವಲ್ಲ

ನುಡಿ ಬೆಳಗು: ಕಲಿತ ಯಾವ ವಿದ್ಯೆಯೂ ವ್ಯರ್ಥವಲ್ಲ
Published 19 ಫೆಬ್ರುವರಿ 2024, 20:21 IST
Last Updated 19 ಫೆಬ್ರುವರಿ 2024, 20:21 IST
ಅಕ್ಷರ ಗಾತ್ರ

ಅವನೊಬ್ಬ ಉತ್ಸಾಹಿ ತರುಣ. ಆಗ ತಾನೆ ಮೇಷ್ಟ್ರಾಗಿ ಕೆಲಸಕ್ಕೆ ಸೇರಿದ್ದ. ಮಕ್ಕಳಿಗೆ ಪಠ್ಯಪುಸ್ತಕದ ಜೊತೆಗೆ ಏನಾದರೂ ಕಲಿಸಬೇಕೆನ್ನುವ ಆಸೆ. ಜೊತೆಯಲ್ಲಿರುವವರಿಗೆ ‘ನಮ್ಮ ಕೆಲಸವನ್ನು ನಾವು ಮಾಡಿದರೆ ಸಾಕು, ಬೇರೆಲ್ಲ ನಮಗೆ ಏಕೆ ಬೇಕು’ ಎನ್ನುವ ಭಾವ. ಹಾಗಾಗಿ ಎಲ್ಲರೂ ‘ಇಲ್ದಿರೋದನ್ನೆಲ್ಲಾ ಯಾಕಪ್ಪ ಹೇಳೋದು ಸಂಬಳ ತೆಗೆದುಕೊಳ್ಳುವುದಕ್ಕೆ ಏನು ಬೇಕೋ ಅದನ್ನ ಮಾಡೋಣ’ ಎನ್ನುತ್ತಿದ್ದರು.

ಎಲ್ಲದರ ಮಧ್ಯೆಯೂ ಆ ಯುವ ಮೇಷ್ಟ್ರು ಹುಡುಗರಲ್ಲಿ ಹುದುಗಿರುವ ಪ್ರತಿಭೆಯನ್ನು ಹೊರಕ್ಕೆ ತೆಗೆದು ಅವರಿಗೆ ಏನು ಬೇಕೋ ಅದನ್ನು ಹೇಳಿಕೊಡುವ ಪ್ರಯತ್ನವನ್ನು ಮಾಡುತ್ತಿದ್ದ. ನಿಧಾನವಾಗಿ ಆತ ಹುಡುಗರಿಗೆ ಪ್ರಿಯವಾಗತೊಡಗಿದ. ಪುಸ್ತಕದ ಎಷ್ಟೋ ಬೋರ್ ಹೊಡೆಯುವ ಸಂಗತಿಗಳಿಗಿಂತ ತಮ್ಮೊಳಗಿನ ಉತ್ಸಾಹಕ್ಕೆ ನೀರೆರೆಯುವ ಮೇಷ್ಟ್ರು ಅವರಿಗೆ ಹಿತವಾಗತೊಡಗಿದ್ದ. ಯುವ ಮೇಷ್ಟ್ರು ಮಾತ್ರ ಕಾಡನ್ನು ತೋರಿಸಿ, ಹಕ್ಕಿ ಪಕ್ಷಿಗಳನ್ನು ತೋರಿಸಿ, ಗಿಡಮರಗಳನ್ನು ತೋರಿಸಿ ಇವನ್ನೆಲ್ಲಾ ಹೊಸದಾಗಿ ಹೇಗೆ ನೋಡಬೇಕು ಎಂದೆಲ್ಲಾ ಹೇಳಿಕೊಡುತ್ತಿದ್ದ. ಹೀಗೆ ಆದರೆ ನಮ್ಮ ಅಸ್ತಿತ್ವವೇ ಇಲ್ಲವಾಗುತ್ತದೆ ಎಂದು ಬೇರೆ ಶಿಕ್ಷಕರು ಪಾಠವನ್ನು ಬಿಟ್ಟು ಮಕ್ಕಳಿಗೆ ಇಲ್ಲದ್ದನ್ನು ಹೇಳಿಕೊಡುತ್ತಾನೆ ಎಂದು ಹೆಡ್ ಮೇಷ್ಟ್ರಿಗೆ ದೂರನ್ನು ಕೊಟ್ಟರು.  

ಮುಖ್ಯೋಪಾಧ್ಯಾಯ ಆ ಯುವ ಮೇಷ್ಟ್ರನ್ನು ಕರೆದು ಕೇಳಿಯೇ ಬಿಟ್ಟರು. ಅದಕ್ಕೆ ಆತ, ‘ಸರ್ ದ್ರೋಣಾಚಾರ‍್ಯರು ಅರ್ಜುನನಿಗೆ ಬಿಲ್ಲು ವಿದ್ಯೆ ಹೇಳಿಕೊಡುವಾಗ ಅನೇಕ ಅಸ್ತ್ರಗಳ ಬಗ್ಗೆ ಹೇಳುತ್ತಾರೆ. ಆಗ ಅರ್ಜುನ, ‘ಗುರುಗಳೇ ಇಷ್ಟೊಂದು ಅಸ್ತ್ರಗಳನ್ನು ಹೇಗೆ ಉಪಯೋಗಿಸಬೇಕು ಅನ್ನುವುದನ್ನು ಹೇಳುತ್ತಿದ್ದೀರಿ. ಇದರಿಂದ ಏನು ಪ್ರಯೋಜನ? ಸುಮ್ಮನೆ ಬತ್ತಳಿಕೆಯಲ್ಲಿರುತ್ತವೆ ಅಷ್ಟೇ. ಜೀವನದಲ್ಲಿ ಅದನ್ನು ಒಮ್ಮೆಯಾದರೂ ಬಳಸುತ್ತೇವೋ ಇಲ್ಲವೋ’ ಎನ್ನುತ್ತಾನೆ. ಆಗ ದ್ರೋಣರು, ‘ಅರ್ಜುನ, ಕಲಿಯುವಾಗ ಎಲ್ಲವನ್ನೂ ಕಲಿತುಕೋ. ಕಲಿಯುವುದರಲ್ಲಿ ತಪ್ಪೇನಿದೆ? ಅದರ ಉಪಯೋಗವನ್ನು ಕಾಲ ನಿರ್ಧರಿಸುತ್ತದೆ’ ಎನ್ನುತ್ತಾರೆ.

ಈ ಮಾತನ್ನು ಅರ್ಜುನ ಮರೆತೂ ಬಿಡುತ್ತಾನೆ. ಕುರುಕ್ಷೇತ್ರ ರಣರಂಗದಲ್ಲಿ ಎಲ್ಲ ಬಾಣಗಳು ಬತ್ತಳಿಕೆಯಲ್ಲಿ ಖಾಲಿಯಾಗುತ್ತಾ ಬರುತ್ತವೆ. ಸಾಮಾನ್ಯ ಸೈನಿಕನೊಬ್ಬ ಅವನ ಮೇಲೆ ಎರಗಿ ಬಂದಾಗ ಬತ್ತಳಿಕೆಯಲ್ಲಿ ಸಾಮಾನ್ಯ ಎಂದುಕೊಂಡಿದ್ದ ಅರ್ಜುನ ಮರೆತೇ ಹೋಗಿದ್ದ ಅಸ್ತ್ರ ಸಿಗುತ್ತದೆ. ಅದರಿಂದ ಅವನು ಆ ಸೈನಿಕನನ್ನು ಕೊಲ್ಲುತ್ತಾನೆ. ಆಗ ಅವನಿಗೆ ದ್ರೋಣರು ಹೇಳಿದ ಮಾತು ನೆನಪಾಗುತ್ತದೆ– ‘ಜಗತ್ತಿನಲ್ಲಿ ಯಾವುದೂ ವ್ಯರ್ಥವಲ್ಲ’ ಎಂದು. ಈಗ ಹೇಳಿ ‘ನಾನು ನನ್ನ ವಿದ್ಯಾರ್ಥಿಗಳಿಗೆ ಹೇಳಿಕೊಡುತ್ತಿರುವ ಈ ಸಂಗತಿಗಳು ಹೇಗೆ ವ್ಯರ್ಥವಾಗುತ್ತವೆ? ಈಗ ನಮಗೆ ಇವರು ಮಕ್ಕಳು, ಭವಿಷ್ಯದಲ್ಲಿ ಏನೋ ಆಗಬಲ್ಲ ಚೇತನಗಳು. ನಾವು ಕಲಿಸಿದ್ದು ಈಗ ಪ್ರಯೋಜನಕ್ಕೆ ಬರದೇ ಹೋಗಬಹುದು, ಕಾಲ ಬಂದಾಗ ಅವು ಅವರಿಗೆ ಸಣ್ಣ ಆಸರೆ ಕೊಟ್ಟರೂ ನಮ್ಮ ಪ್ರಯತ್ನ ಸಾರ್ಥಕವಾಗುತ್ತವೆ ಅಲ್ಲವೆ?’ ಎನ್ನುತ್ತಾನೆ.

ತಮ್ಮ ವೃತ್ತಿ ಜೀವನದ ಬಹುದೊಡ್ಡ ಪಾಠವನ್ನು ಕಲಿತಂತಾಗಿ ಮುಖ್ಯೋಪಾಧ್ಯಾಯ ಆ ಯುವಮೇಷ್ಟ್ರನ್ನು ಅಪ್ಪಿಕೊಳ್ಳುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT