ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ಲೆಕ್ಕದ ಪುಸ್ತಕ

Published 19 ಮಾರ್ಚ್ 2024, 23:54 IST
Last Updated 19 ಮಾರ್ಚ್ 2024, 23:54 IST
ಅಕ್ಷರ ಗಾತ್ರ

ತುಂಬಿದ ಮಧ್ಯಮ ವರ್ಗದ ಕುಟುಂಬ. ಅಪ್ಪ ಅಧಿಕಾರಿಯಾಗಿ ನಿವೃತ್ತರು. ಈಗ ಮಕ್ಕಳೆಲ್ಲಾ ಸ್ವಂತ ಕಾಲ ಮೇಲೆ ನಿಂತವರು. ಅಪ್ಪನಿಗೆ ಎಲ್ಲವನ್ನೂ ಬರೆದಿಡುವ ಅಭ್ಯಾಸ. ಯಾವುದಕ್ಕೆ ಎಷ್ಟು ಖರ್ಚಾಯಿತು, ಉಳಿದ ಹಣವೆಷ್ಟು, ಕೊಡಬೇಕಾದ ಸಾಲವೆಷ್ಟು? ಎಲ್ಲವೂ ಪುಸ್ತಕದಲ್ಲಿ ದಾಖಲು. ದುಡ್ಡುಕಾಸಿನ ವಿಷಯದಲ್ಲಿ ಕಠೋರ ವ್ಯಕ್ತಿ.

ಒಂದು ದಿನ ಕಿರಿ ಮಗನಿಗೂ ಅಪ್ಪನಿಗೂ ಹಣದ ಮಾತಿಗೆ ಜಗಳ. ಎಂದೂ ದುಸರಾ ಮಾತಾಡದ ಕೊನೆಯ ಮಗ ಹೆಂಡತಿ, ಮಗಳ ಮುಂದೆ ಅಪ್ಪ ಹಂಗಿಸಿ ಮಾತಾಡಿದರೆಂದು ಬೆಂಕಿಯಾಗಿದ್ದ. ಈತ ದುಡಿಯುತಿದ್ದರೂ ಅದು ಬೇರೆ ಮಕ್ಕಳಷ್ಟು ಹೆಚ್ಚಿನದಲ್ಲ. ಆ ದಿನ ಮಾತುಗಳು ಕೊಂಚ ವಿಕೋಪಕ್ಕೆ ಹೋದವು. ಅಪ್ಪ ಒಳಗೆ ಹೋಗಿ ಲೆಕ್ಕದ ಪುಸ್ತಕ ತಂದರು. ಕಿರಿ ಮಗನು ತಾಯ ಹೊಟ್ಟೆಯೊಳಗೆ ಇದ್ದಾಗಿನಿಂದ ಲಾಗಾಯ್ತು ಇಲ್ಲೀ ತನಕದ ಎಲ್ಲವೂ ಅಲ್ಲಿತ್ತು. ಹೆರಿಗೆಗೆ, ಹಾಲಿಗೆ, ಆಸ್ಪತ್ರೆಗೆ, ಬಟ್ಟೆಗೆ, ಔಷಧಿಗೆ, ಸ್ಕೂಲಿಗೆ, ಕಾಲೇಜಿಗೆ ಆದ ಖರ್ಚಿನ ವಿವರ ದಿನಾಂಕ ಸಮೇತವಿತ್ತು. ಇದೆಲ್ಲಾ ಮೊದಲು ಮಡಗಿ ಆಮೇಲೆ ಮಾತಾಡು ಎಂದರು.

ತನ್ನ ಹೆಸರಿನ ಒಂದು ಸಾಲದ ಖಾತೆ ಬಾಲ್ಯದಿಂದ ನಿರ್ವಹಣೆ ಆಗುತ್ತಿರುವುದು ಕಿರಿಯನಿಗೆ ಗೊತ್ತಿರಲಿಲ್ಲ. ಅಲ್ಲಿ ಮನೆಯ ಸಕಲರ
ಖರ್ಚಿನ ವಿವರದ ಪ್ರತ್ಯೇಕ ಪುಟಗಳಿದ್ದವು. ಅಪ್ಪ ಲೆಕ್ಕ ತೆರೆದು ತೋರಿಸಿ ನಾನು ಅಪ್ಪನೆಂಬ ಮರ್ಯಾದೆ ನಿನಗಿಲ್ಲ ಎಂದಾದ ಮೇಲೆ ಇಷ್ಟು ಹಣವನ್ನು ಕೊಟ್ಟು ನಿನ್ನ ಸಂಬಂಧ ಕಡಿದುಕೊಂಡು ಹೋಗಬಹುದು ಎಂದು ನಿರ್ದಾಕ್ಷಿಣ್ಯವಾಗಿ ಕಿರುಚಿದರು.

ಕಿರಿಯನಿಗೆ ಅವಮಾನವೂ ಚಿತ್ರ ಹಿಂಸೆಯೂ ಒಟ್ಟಿಗೆ ಆದವು. ಮನೆಯವರೆಲ್ಲಾ ಥಂಡ ಹೊಡೆದು ನಿಂತಿದ್ದರು. ಅವನೆಂದೂ ಅಪ್ಪನಿಂದ ಈ ಲೆಕ್ಕದ ಒಕ್ಕಣಿಕೆ ನಿರೀಕ್ಷೆ ಮಾಡಿರಲಿಲ್ಲ. ಆಯಿತು ಸಂಜೆ ಒಳಗೆ ರೊಕ್ಕ ತರುತ್ತೇನೆ ಎಂದು ಹೇಳಿ ಹೋದ ಮಗ ಮತ್ತೆ ಬರಲೇ ಇಲ್ಲ. ಇದಾಗಿ ಸರಿ ಸುಮಾರು 30 ವರ್ಷಗಳಾಗಿವೆ. ಈಗ ಲೆಕ್ಕದ ಪುಸ್ತಕ, ಲೆಕ್ಕ ಹಾಕಿದವರು, ಲೆಕ್ಕ ಚುಕ್ತಾ ಮಾಡುತ್ತೇನೆಂದು ಹೋದವನು ಯಾರೂ ಇಲ್ಲ. ಬದುಕು, ಭಾವನೆ, ಸಂಬಂಧಗಳನ್ನು ಕೊಳ್ಳುವ ಇಲ್ಲವೇ ಮಾರುವ ಶಕ್ತಿ ಹಣಕ್ಕೆಂದೂ ಬರಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT