ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು: ಹೆಪ್ಪಿಟ್ಟ ಹೃದಯಗಳ ಮಾತು

Published 19 ಡಿಸೆಂಬರ್ 2023, 23:30 IST
Last Updated 19 ಡಿಸೆಂಬರ್ 2023, 23:30 IST
ಅಕ್ಷರ ಗಾತ್ರ

ವಯಸ್ಸಾದ ದಂಪತಿ. ಇಬ್ಬರು ಗಂಡು ಮಕ್ಕಳಿಗೂ ಕೆಲಸ ಸಿಕ್ಕು ಬೇರೆ ಬೇರೆ ಊರುಗಳಲ್ಲಿ ನೆಲೆಸಿದ್ದಾರೆ. ಈಗ ಹೆಚ್ಚು ಕಡಿಮೆ ಒಂಟಿಯಾಗಿ ಇರುತ್ತಾರೆ. ಮಕ್ಕಳ ಜೊತೆ ಆಗಾಗ ಫೋನು, ಮಾತುಕತೆ, ಆರೋಗ್ಯ, ಇತ್ಯಾದಿ. ಮಕ್ಕಳು ವಾರಕ್ಕೆ ಒಮ್ಮೆಯಾದರೂ ಬಂದು ಹೋಗಲಿ ಎಂದು ಬಯಸುವ ಅವ್ವ. ಅವರಿಗೆ ಏನೇನು ಕೆಲಸವಿದೆಯೋ ಏನೋ? ಇರಲಿ ಬಿಡು ಎಂದು ಗದರುವ ಅಪ್ಪ. ಆತನಿಗೂ ಮಕ್ಕಳು ಬರಲಿ ಎಂಬ ಒಳಾಸೆ ಇದ್ದರೂ ತೋರಗೊಡುವುದಿಲ್ಲ. ಸೊಸೆಯಂದಿರು ಸ್ವಂತ ಮಕ್ಕಳಿಗಿಂತ ಹೆಚ್ಚು ಪ್ರೀತಿ ತೋರುತ್ತಾರೆ ಎಂದು ಮನದುಂಬಿ ಹೇಳುತ್ತಾರೆ. ಮಕ್ಕಳಿರುವ ಕಡೆ ಹೋಗಿರಲು ನೆಲೆಸಿ, ಬಾಳಿ, ಬದುಕಿದ ಊರಿನ ಬೇರುಗಳು ಬಿಡುತ್ತಿಲ್ಲ. ಅವರಿಗೆ ಯಾಕೆ ಹೊರೆ ಎಂಬ ಸ್ವಾಭಿಮಾನ ಬೇರೆ ಅಡ್ಡವಿದೆ.

ಅವರು ಆಗಾಗ ನನಗೆ ಫೋನ್ ಮಾಡಿ ತಾಸುಗಟ್ಟಲೆ ಮಾತಾಡುತ್ತಾರೆ. ಅಪಾರ ನೆನಪಿನ ಜೀವ ಮಾಹಿತಿ. ಪ್ರೀತಿ ತುಂಬಿದ ಎಳೆಯ ಮುಗ್ಧತೆ. ಹಾಸ್ಯಪ್ರಜ್ಞೆ ಬತ್ತಿಲ್ಲ, ಅದು ಚಿಗುರುತ್ತಲೇ ಇದೆ. ‘ಜಗತ್ತಿನ ಡಾಕ್ಟ್ರುಗಳು ಮೈ ತುಂಬಾ ಕೊಯ್ದಾಗಿದೆ. ಜಾಸ್ತಿ ನಕ್ಕರೆ ಯಾವ ಹೊಲಿಗೆ ಫಟ್‌ ಎಂದು ಸಿಡಿವುದೋ? ಗೊತ್ತಿಲ್ಲ. ಎದ್ದು ಈಗ ನಡೆಯಲಾಗಲ್ಲ. ಸೂಜಿ ಚುಚ್ಚಲು ತಕ್ಕ ಮಾಂಸವೂ ಉಳಿದಿಲ್ಲ. ನರನಾಡಿಗಳೂ ದುಡಿದು ದಣಿದಿವೆ. ಅವಕ್ಕೂ ವಿಶ್ರಾಂತಿ ಬೇಕು. ಆದರೆ ನಾನು ಅವನ್ನು ತೂಕಡಿಸಲು ಬಿಡದೆ ದುಡಿಸಿಕೊಳ್ಳುತ್ತಿದ್ದೇನೆ’ ಎಂದು ನಗುತ್ತಾರೆ.

ಅವ್ವನ ಮಾತು ಕಡಿಮೆ. ವಾತ್ಸಲ್ಯ ಇದ್ದರೂ ಚೌಕಾಶಿ. ಸಣ್ಣ ಬೇಸರ, ಪುಟ್ಟ ಅಸಹನೆ. ಮುಗಿಯದ ತಕರಾರುಗಳು. ನಡುವೆ ಹೆಂಡತಿಯಿಂದ ಫೋನು ಕಿತ್ತುಕೊಂಡು ಮತ್ತೆ ಯಜಮಾನರು, ‘ಜೀವನ ಏನು ವಿಚಿತ್ರ ವೃತ್ತ ನೋಡಿ. ಎಲ್ಲಿಂದ ಶುರುವಾಗಿತ್ತೋ ಮತ್ತೆ ಅಲ್ಲಿಗೆ ಬಂದು ನಿಲ್ಲುತ್ತಿದೆ. ನಾವಿಬ್ಬರೂ ಸೇರಿ ಗೂಡು ಕಟ್ಟಿದೆವು. ಮರಿಗಳನ್ನು ಹೆತ್ತು ಸಾಕಿದವು. ಅವು ಇವೇ ಮನೆಯಲ್ಲಿ ಇರುತ್ತವೆ ಎಂದು ಭ್ರಮಿಸಿದೆವು. ಇದೆಲ್ಲ ತಪ್ಪು ಹೀಗೆ ಮಾಡಬಾರದಿತ್ತು. ಪುಟ್ಟ ಮನೆ ಭವ್ಯವಾಗಬಾರದಿತ್ತು. ನೀರ ಮೇಲೆ ಅಕ್ಷರ ಬರೆದು ನಿರೀಕ್ಷೆ ಮಾಡಿದ್ದು ನಮ್ಮ ಸ್ವಾರ್ಥ. ಬಾಳಿ ಬದುಕಬೇಕಾದವರು, ಅನ್ನ ನೆಮ್ಮದಿ ಸಿಕ್ಕ ಕಡೆ ಹೊರಟು ಹೋಗುತ್ತಾರೆ. ನಾನು ಹಿಂದೆ ಮಾಡಿದ್ದೂ ಇದನ್ನೇ ಎಂದು ಮರೆಯುತ್ತೇವೆ’.

‘ಸಮಯ ಸಿಕ್ಕಾಗ ಖಂಡಿತ ಬರುತ್ತಾರೆ. ನೋಡಿ, ಮಾತಾಡಿಸಿ, ಉಣಿಸಿ, ಉಂಡು ಸಂತಸ ಹಂಚಿ ಹೊರಡುತ್ತಾರೆ. ಮಕ್ಕಳಾಗಿದ್ದಾಗ ಹೊರಗೆ ಹೋಗಿ ಎಂದೆವು. ಈಗ ಬನ್ನಿ ಎನ್ನುತ್ತಿದ್ದೆವೆ. ಒಮ್ಮೆ ಹೋದವರು ಮತ್ತೆ ಮನೆಗೇ ಅತಿಥಿಗಳು. ಈ ಸತ್ಯ ಗೊತ್ತಿದ್ದೂ ಭಾವುಕರಾಗುತ್ತೇವೆ. ಒಂದು ಸಣ್ಣ ಹೆದರಿಕೆ ಕಾಡಿಸುತ್ತಿದೆ. ನಮ್ಮ ಸಾವು ಬಂದಾಗ ಮಕ್ಕಳು ಎದುರಿಗಿದ್ದರೆ ಒಳ್ಳೆಯದಲ್ಲವೇ? ಅವರನ್ನು ನೋಡುತ್ತಾ ಕಣ್ಣು ತುಂಬಿಕೊಂಡು ಪ್ರಾಣ ಬಿಡುವುದು ನಮ್ಮಾಸೆ ಎಂದರೆ ತಪ್ಪೆ? ಈ ಸಂಸಾರ ಶುರು ಮಾಡುವಾಗಲೂ ಇಬ್ಬರಿದ್ದೆವು. ಈ ವ್ಯಾಪಾರ ಮುಗಿಸುವಾಗಲೂ ಇಬ್ಬರೇ ಇದ್ದೇವೆ. ಈ ಸತ್ಯ ಗೊತ್ತಿತ್ತು. ಆದರೆ ಇದು ಇಷ್ಟು ನೋವು ಮತ್ತು ಕಹಿ ಎನ್ನುವುದು ಗೊತ್ತಿರಲಿಲ್ಲ. ಎಲ್ಲವೂ ಅರ್ಥವಾಗುವುದಕ್ಕೆ ಆಯಾ ಸಮಯವೇ ಬರಬೇಕು. ಇಷ್ಟು ಬದುಕಿದ್ದು ಸಾಕು. ಈಗ ಸುಖವಾದ ಸಾವನ್ನು ಕಾಣುವ ದರಿದ್ರ ಬಯಕೆ. ಆದರೆ ಸುಖದ ಸಾವೆಲ್ಲಿದೆ? ಸಾವಲ್ಲೇ ಸುಖವಿದೆ. ಹೀಗೆ ಅವರ ಮಾತು ನಡೆಯುತ್ತಲೇ ಇರುತ್ತದೆ.

ಜೀವನವನ್ನು ಸಂಪೂರ್ಣ ಅನುಭವಿಸಿದವರ ಒಂದೊಂದು ಮಾತು ಅಮೂಲ್ಯ. ಎಷ್ಟು ದಿನ ಬದುಕುತ್ತೇವೆ ಎನ್ನುವುದು ಮುಖ್ಯವಲ್ಲ. ಎಷ್ಟು ಚೆನ್ನಾಗಿ ಎಲ್ಲರೊಟ್ಟಿಗೆ ಬಾಳುತ್ತೇವೆ ಎನ್ನುವುದೇ ಮುಖ್ಯ. ಕೊರಗು, ನೋವಿನ ನಡುವೆಯೂ ಬತ್ತದ ಹಾಸ್ಯಪ್ರಜ್ಞೆ ಜೀವನಕ್ಕೆ ಅಮೃತವಿದ್ದಂತೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT