ಗುರುವಾರ, 30 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಸಕಾರಾತ್ಮಕ ದೃಷ್ಟಿಕೋನ

Published 5 ಮೇ 2024, 23:44 IST
Last Updated 5 ಮೇ 2024, 23:44 IST
ಅಕ್ಷರ ಗಾತ್ರ

ಒಮ್ಮೆ ಒಂದು ಬಹು ಉತ್ಪನ್ನಗಳ ಬಹು ರಾಷ್ಟ್ರೀಯ ಕಂಪನಿಯಲ್ಲಿ ಪ್ರತಿಷ್ಠಿತ ಕಾಲೇಜೊಂದರಿಂದ ಎಂಬಿಎ ಪದವಿ ಪಡೆದು ಕೆಲಸಕ್ಕೆ ಸೇರಿದ್ದ ಇಬ್ಬರು ಯುವ ಮಾರಾಟ ಅಧಿಕಾರಿಗಳನ್ನು, ತಮ್ಮ ಕಂಪನಿಯ ಪಾದರಕ್ಷೆಗಳ ಮಾರಾಟಕ್ಕೆ ಇರುವ ಅವಕಾಶದ ಕುರಿತು ಮಾರುಕಟ್ಟೆ ಸಮೀಕ್ಷೆ ಮಾಡಲು ಆಫ್ರಿಕಾದ ದಟ್ಟ ಕಾಡಿನಿಂದ ಸುತ್ತುವರಿದಿರುವ ಪ್ರದೇಶ ಒಂದಕ್ಕೆ ಕಳಿಸಲಾಯಿತು.


ಈ ಇಬ್ಬರು ಯುವ ಅಧಿಕಾರಿಗಳು ತಮಗೆ ಸೂಚಿಸಿದ್ದ ಜಾಗಕ್ಕೆ ಹೋಗಿ ನೋಡಿದರೆ, ಅಲ್ಲಿರುವುದು ಬಹುಪಾಲು ಆದಿವಾಸಿಗಳು. ಅವರಿಗೆ ನಾಗರಿಕತೆಯ ಪರಿಚಯ ಸ್ವಲ್ಪವೂ ಇಲ್ಲ. ಅವರು ಪಾದರಕ್ಷೆಗಳನ್ನು ಧರಿಸುವುದಿರಲಿ ಮೈಮೇಲೆ ಸರಿಯಾಗಿ ಉಡುಪುಗಳನ್ನೂ ಧರಿಸುವುದನ್ನು ಅರಿತವರಲ್ಲ. ಇಲ್ಲಿನ ಸ್ಥಿತಿಯನ್ನು ಕಂಡು ಕಂಗಾಲಾದ ಮೊದಲನೆಯ ಮಾರಾಟ ಅಧಿಕಾರಿ, ಇಲ್ಲಿ ಪಾದರಕ್ಷೆಗಳನ್ನು ಮಾರಾಟ ಮಾಡುವುದು ಅಸಾಧ್ಯವೆಂಬ ತೀರ್ಮಾನಕ್ಕೆ ಬಂದು ತಕ್ಷಣ ಅಲ್ಲಿಂದ ವಾಪಸ್ ಹೊರಟ.


ಆದರೆ ಎರಡನೆಯ ಮಾರಾಟ ಅಧಿಕಾರಿ, ‘ಇಲ್ಲಿಗೆ ತಕ್ಷಣ ಎರಡು ಟ್ರಕ್ ಲೋಡ್ ಪಾದರಕ್ಷೆಗಳನ್ನು ಕಳಿಸಿಕೊಡಿ ಹಾಗೂ ಅದರ ಜೊತೆಗೆ ಹೊಸ ವಿನ್ಯಾಸದ ಉಡುಪುಗಳನ್ನೂ ಸಹ ಕಳಿಸಿ. ಏಕೆಂದರೆ ಇಲ್ಲಿನ ಜನಕ್ಕೆ ಬಟ್ಟೆ, ಪಾದರಕ್ಷೆಗಳನ್ನು ಹಾಕುವುದನ್ನು ಕಲಿಸಿದ್ದೇ ಆದರೆ ಅದ್ಭುತವಾದ ಮಾರುಕಟ್ಟೆ ನಮಗಿಲ್ಲಿ ಲಭ್ಯವಿದೆ’ ಎಂಬ ಸಂದೇಶವನ್ನು ತಕ್ಷಣ ತನ್ನ ಸಂಸ್ಥೆಯ ಕೇಂದ್ರ ಕಚೇರಿಗೆ ರವಾನಿಸಿದ.

ಮೊದಲನೆಯ ಮಾರಾಟ ಅಧಿಕಾರಿ ಪಾದರಕ್ಷೆಯಿರಲಿ ಬಟ್ಟೆಯನ್ನೇ ನೋಡಿರದ ಜನರಿಗೆ ಹೇಗೆ ಪಾದರಕ್ಷೆ ಮಾರಲು ಸಾಧ್ಯ ಎಂದು ಋಣಾತ್ಮಕವಾಗಿ ಯೋಚಿಸಿದರೆ, ಎರಡನೆಯಾತ ಇಲ್ಲಿಗೆ ಯಾವ ಕಂಪನಿಯವರು ಪ್ರವೇಶಿಸಿರದ ಕಾರಣ, ಇಲ್ಲಿನ ಜನರಿಗೆ ಪಾದರಕ್ಷೆಯ ಅಗತ್ಯದ ಕುರಿತು ಅರಿವೇ ಇಲ್ಲ, ಆ ಅರಿವನ್ನು ಮೂಡಿಸಿದ್ದೇ ಆದರೆ ಒಳ್ಳೆಯ ವ್ಯಾಪಾರ ಸಾಧ್ಯ ಹಾಗೂ ಅದರ ಜೊತೆಗೆ ಹೊಸ ವಿನ್ಯಾಸದ ಬಟ್ಟೆಗಳನ್ನೂ ಅವರಿಗೆ ಪರಿಚಯಿಸಿದರೆ ತಮ್ಮ ಕಂಪನಿಯ ಮಾರುಕಟ್ಟೆಯನ್ನು ಇನ್ನಷ್ಟು ವಿಸ್ತರಿಸಬಹುದು ಎನ್ನುವ ಧನಾತ್ಮಕ ಚಿಂತನೆಯನ್ನು ಮಾಡಿದ.

ಒಂದೇ ರೀತಿಯ ಸನ್ನಿವೇಶವನ್ನು ಎರಡು ವಿಭಿನ್ನ ದೃಷ್ಟಿಕೋನಗಳಿಂದ ನೋಡಿದ ಪರಿಯಿದು. ಎಷ್ಟೋ ಸಂದರ್ಭದಲ್ಲಿ ನಾವಿರುವ ಜಾಗ ನಮ್ಮ ಪ್ರತಿಭೆಗೆ ಸೂಕ್ತವಾಗಿಲ್ಲ, ಇಲ್ಲಿನ ವಾತಾವರಣ ನಮಗೆ ಪೂರಕವಾಗಿಲ್ಲ, ನಾವು ಬೇರೆಡೆ ಇದ್ದರೆ ಇನ್ನೇನನ್ನೋ ಸಾಧಿಸುತ್ತಿದ್ದೆವು ಎಂದೆಲ್ಲಾ ಅಂದುಕೊಂಡು ಕೊರಗುತ್ತಿರುತ್ತೇವೆ. ಆದರೆ ನಾವಿರುವ ಜಾಗದಲ್ಲಿಯೇ, ನಮಗಿರುವ ಅವಕಾಶಗಳ ಮಿತಿಯಲ್ಲಿಯೇ ಸಕಾರಾತ್ಮಕವಾಗಿ ಚಿಂತಿಸುವುದೇ ಸಾಧಕರ ಮಾರ್ಗ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT