ಶುಕ್ರವಾರ, 3 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು: ಉಪಕಾರ ನೆನೆಯೋಣ ಅಪಕಾರ ಮರೆಯೋಣ

Published 6 ಡಿಸೆಂಬರ್ 2023, 23:07 IST
Last Updated 6 ಡಿಸೆಂಬರ್ 2023, 23:07 IST
ಅಕ್ಷರ ಗಾತ್ರ

ಇಬ್ಬರು ಅತ್ಯಾಪ್ತ ಸ್ನೇಹಿತರು ಪ್ರವಾಸ ಹೊರಟಿದ್ದರು. ದಾರಿಯಲ್ಲಿ ಇಬ್ಬರಿಗೂ ಏನೋ ವಾಗ್ವಾದ ನಡೆದು ಒಬ್ಬ ಮತ್ತೊಬ್ಬನ ಕೆನ್ನೆಗೆ ಒಂದೇಟು ಬಿಗಿದ. ಹೊಡೆಸಿಕೊಂಡ ಸ್ನೇಹಿತನಿಗೆ ಬಹಳ ಬೇಸರವಾದರೂ ಅದನ್ನು ತೋರಿಸಿಕೊಳ್ಳದೇ ಮುನ್ನಡೆದ. ಮಧ್ಯೆ ಒಂದೆಡೆ ಸಮುದ್ರತೀರದಲ್ಲಿ ನಡೆಯುವಾಗ ‘ಇವತ್ತು ನನ್ನ ಆಪ್ತಮಿತ್ರ ನನ್ನ ಕೆನ್ನೆಗೆ ಹೊಡೆದ’ ಎಂದು ಮರಳಿನ ಮೇಲೆ ಬರೆದ. ಹಾಗೆಯೇ ಸಮುದ್ರದಲ್ಲಿ ಆಟವಾಡುತ್ತಿರುವಾಗ ನಡುವೆ ಒಂದೆಡೆ ಅಲೆಗಳಿಗೆ ಸಿಕ್ಕಿ ಕೆನ್ನೆಗೆ ಹೊಡೆಸಿಕೊಂಡವನು ಸಮುದ್ರದ ಪಾಲಾಗುವುದರಲ್ಲಿದ್ದ. ಅಷ್ಟರಲ್ಲಿ ಸ್ನೇಹಿತ ಬಂದು ಜೀವದ ಹಂಗು ತೊರೆದು ಅವನನ್ನು ಕಾಪಾಡಿದ. ಸಂಜೆ ಸಮುದ್ರ ತಟದ ಬಂಡೆಗಲ್ಲೊಂದರ ಮೇಲೆ ‘ಇವತ್ತು ನನ್ನ ಆಪ್ತಮಿತ್ರ ನನ್ನ ಜೀವ ಉಳಿಸಿದ’ ಎಂದು ಚೂಪುಗಲ್ಲೊಂದರಿಂದ ಕೆತ್ತಿದ ಬದುಕುಳಿದವ. ಇದನ್ನು ನೋಡುತ್ತಿದ್ದ ಜೀವ ಉಳಿಸಿದ ಸ್ನೇಹಿತ ಕೇಳಿದ, ‘ನಾನು ಹೊಡೆದಾಗ ಅದನ್ನು ನೀನು ಮರಳಿನ ಮೇಲೆ ಬರೆದೆ, ಅದೇ ಕಾಪಾಡಿದಾಗ ಕಲ್ಲಿನ ಮೇಲೆ ಬರೆದೆಯಲ್ಲ ಏಕೆ?’ ಆಗ ಸ್ನೇಹಿತ ಹೇಳಿದ, ‘ಬೇರೆಯವರು ನಮಗೆ ನೋವನ್ನು ನೀಡಿದಾಗ ಅದನ್ನು ಮರಳಿನ ಮೇಲೆ ಬರೆಯಬೇಕು. ಏಕೆಂದರೆ ಕ್ಷಮೆಯ ಗಾಳಿ ಅದನ್ನು ಅಳಿಸಿಹಾಕಬಹುದು. ಆದರೆ ಯಾರಾದರೂ ನಮಗೆ ಒಳ್ಳೆಯದನ್ನು ಮಾಡಿದಾಗ ಅದನ್ನು ಕಲ್ಲಿನಲ್ಲಿ ಕೆತ್ತಬೇಕು, ಆಗ ಯಾವ ಮರೆವಿನ ಗಾಳಿಯೂ ಅದನ್ನು ಅಳಿಸಲಾರದು.’

ಎಂತಹ ಅಪರೂಪದ ಮಾತು! ನಿಜ, ಬಹಳ ಸಂದರ್ಭದಲ್ಲಿ ನಾವು ನೆನಪಿಟ್ಟುಕೊಳ್ಳಬೇಕಾದ ವಿಷಯವನ್ನು ಮರೆಯುತ್ತೇವೆ. ಚಿಕ್ಕ ಉದಾಹರಣೆಯೆಂದರೆ ನಮ್ಮವರಿಗ್ಯಾರಿಗೋ ಅಪಘಾತವಾದಾಗ ಯಾರೋ ಪುಣ್ಯಾತ್ಮರು ರಕ್ತ ಕೊಡುತ್ತಾರೆ. ಅಷ್ಟೇ. ಆಮೇಲೆ ಹೋಗಿ ಅವರಿಗೆ ಒಂದಿಷ್ಟು ಹಣ್ಣು ಕೊಟ್ಟು ಧನ್ಯವಾದ ಹೇಳುವುದು ಬದಿಗಿರಲಿ, ಅವರು ಯಾರೆಂದು ತಿಳಿಯುವ ಪ್ರಯತ್ನವನ್ನೂ ಬಹುತೇಕರು ಮಾಡುವುದೇ ಇಲ್ಲ! ಅಪರಿಚಿತರಿಗೆ ರಕ್ತ ಕೊಡುವುದು ಒಂದು ಉದಾತ್ತ ಮನಸ್ಸಿನ ದಾನ. ಅಮೂಲ್ಯವಾದ ರಕ್ತ ಮಾತ್ರವಲ್ಲ, ಸಮಯವನ್ನೂ ಅವರು ತ್ಯಾಗ ಮಾಡಿರುತ್ತಾರೆ. ರಕ್ತದಾನ ಕೊಡುವವರ ಕರ್ತವ್ಯ ಎಂದು ಭಾವಿಸಿ ಜನರು ಕೃತಘ್ನರಾಗುವುದು ನಿಜಕ್ಕೂ ಹಾಸ್ಯಾಸ್ಪದ.

ಇನ್ನು ನಾವು ಅದೆಷ್ಟೋ ಸಲ ಬೇರೆಯವರ ಮನಸ್ಸನ್ನು ನೋಯಿಸಿರುತ್ತೇವೆ. ಅವರೂ ನಮ್ಮನ್ನು ಕ್ಷಮಿಸಿರುತ್ತಾರೆ. ಅದೇ ರೀತಿ ನಾವೂ ಇತರರಿಗೆ ಇನ್ನೊಂದು ಅವಕಾಶ ಕೊಡಬೇಕಾಗುತ್ತದೆ. ಸಣ್ಣ ಪುಟ್ಟ ತಪ್ಪುಗಳನ್ನೆಲ್ಲ ಮರೆಯದಿದ್ದರೆ ಜಗತ್ತಿನ ಪ್ರತೀ ವ್ಯಕ್ತಿಯೂ ಒಂಟಿಯಾಗಿಬಿಡುವ ಅಪಾಯವಿದೆ! ಹಾಗಾಗಿ ಇತರರ ತಪ್ಪುಗಳನ್ನು ಮರಳಿನ ಮೇಲೂ ಉಪಕಾರವನ್ನು ಕಲ್ಲಿನ ಮೇಲೂ ಬರೆಯುವ ಮನಸ್ಸು ನಮ್ಮದಾಗಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT