ಆತನಿಗೆ ವಯಸ್ಸು ಇನ್ನೂ 35. ಮಗುವಿನಂತಹ ಮುಖಚಹರೆ. ಯಾರಾದರೂ ಸರಿ ಇವನನ್ನು ಮಾತಾಡಿಸಿಯೇ ಮುಂದಕ್ಕೆ ಹೋಗಬೇಕು. ಇಲ್ಲದಿದ್ದರೆ ಇವನು ಬಿಡಬೇಕಲ್ಲ, ಕಲ್ಲನ್ನೂ ಅಲ್ಲಾಡಿಸಿ ನಗಿಸಿ ಬಿಡುವವನು. ಹೊಲಕ್ಕೆ ಹೊರಟನೆಂದರೆ ದಣಿವು ಕಾಣದಂತೆ ಹಗಲಿಡೀ ಬೆವರು ಸುರಿಸುತ್ತಾನೆ. ವರ್ಷಕ್ಕೆ ಎರಡು ಸಲ ಮಾತ್ರ ಈದ್ಗಾ ನಮಾಜಿಗೆ ಸೇರಿದವರ ಎದುರು ಎತ್ತುಗಳಿಗೆ ನೊಗ ಕಟ್ಟಿ ನೇಗಿಲು ನೇತು ಹಾಕಿಕೊಂಡು ಹೊರಡುತ್ತಾನೆ. ಮೂರೂ ಹೊತ್ತು ಏನು ದುಡೀತೀಯೋ ತಮ್ಮಾ, ಹಬ್ಬದ ದಿನನಾದರೂ ನಮಾಜಿಗೆ ಬಾರೋ’ ಅಂತ ಕರೆದರೆ ‘ನೀವು ದೇವರ ಹತ್ರ ಬೇಡಿಕೊಳ್ರಿ, ನಾನು ಭೂಮ್ತಾಯಿ ಹತ್ರ ಬೇಡಿಕೊಳ್ತೀನಿ' ಅನ್ನುವ ಲೋಕನಿಷ್ಠುರಿ. ಈತ ಶಾಲೆಗಿಂತ ಹೊಲಮನೆ ಕೆಲಸದಲ್ಲಿ ಕಲಿತದ್ದೇ ಹೆಚ್ಚು. ಇವನ ಬಿಡುವಿನ ಜಾಗವೆಂದರೆ ಊರುಬಾಕಲು. ಅಲ್ಲಿ ತರಾವರಿ ಜನ, ಇಕಾತಿ ಮಾತು, ತಾರಾತಿಗಡಿ, ನಗೆಸುಗ್ಗಿ, ಹಾಡು ಹಬ್ಬ. ಅಲ್ಲಿ ನಾಲ್ಕು ಜನರಿಗೆ ತಿನಿಸಿ ಕುಡಿಸಿದರೆ ಅವನ ಜೀವಕ್ಕೆ ತನುವು. ಇವನ ಇನ್ನೊಂದು ಮುಖ, ಊರಲ್ಲಿ ಯಾರು ಸತ್ತರೂ ಸರಿ, ಹಾರೆ, ಸಲಾಕೆ, ಪುಟ್ಟಿ ಹಿಡಿದು ಗುದ್ದು ತೆಗೆಯಲು ಇವನದೇ ಮೊದಲ ಹಾಜರಿ. ಇಲ್ಲಿಗೆ ಎಲ್ಲರೂ ಬರಬೇಕು. ನನಗೂ ಜಾಗ ಬೇಕಲ್ಲ ಅನ್ನುತ್ತಾನೆ. ಶವಕ್ಕೆ ಮನೆ ಮಾಡಿ ಬಂದವನೇ ಸೀದಾ ಹೆಣದ ಮೈ ತೊಳೆಯಲು ತೋಳೇರಿಸುತ್ತಾನೆ.

ಹುಟ್ಟಿದ ಮೇಲೆ ಊರು, ಸಮಾಜ ತನ್ನ ಮೇಲೆ ತೀರಿಸಲಾಗದ ಮುಯ್ಯಿ ಹೊರಿಸಿದೆ. ಅದರ ಭಾರವನ್ನು ಸ್ವಲ್ಪವಾದರೂ ಕಡಿಮೆ ಮಾಡಿಕೊಳ್ಳಲು ಇರುವ ದಾರಿ ಎಂದರೆ ಒಂದು ಕೆಲಸ, ಮತ್ತೊಂದು ಕಾಯಕ. ನೂರಕ್ಕೆ ನೂರು ಲೌಕಿಕವಾಗುವುದು ದುಡಿಮೆ ತರುವ ಕೆಲಸದಿಂದ ಮಾತ್ರ ಸಾಧ್ಯ. ಕೆಲಸದಿಂದ ಕಾಯಕದ ಪಾವಿತ್ರ್ಯಕ್ಕೆ ಜೀವ ಜಿಗಿಯಬೇಕು. ಅದು ಸಂಸಾರವನ್ನು ಮೀರಿ ಸಮಾಜಕ್ಕೆ ವಿಸ್ತರಿಸಿಕೊಳ್ಳಬೇಕು. ದುಡಿಮೆಯ ಒಂದು ಪಾಲನ್ನು ಯಾವುದಾದರೂ ರೂಪದಲ್ಲಿ ಸಮಾಜಕ್ಕೆ ಕೊಟ್ಟು ಕಳೆದುಕೊಳ್ಳುವುದೇ ಕಾಯಕದ ಕೇಂದ್ರ ಪ್ರಾಣ. ಹಾಗೆ ಕಳೆದುಕೊಳ್ಳುವ ಮೂಲಕ ಪಡೆದುಕೊಂಡದ್ದನ್ನು ಒಮ್ಮೆ ಲೆಕ್ಕ ಹಾಕಬೇಕು. ಪಡೆದುಕೊಂಡದ್ದರ ಭಾರವೇ ಹೆಚ್ಚಾಗಿರುತ್ತದೆ. ಇರುವಷ್ಟು ದಿನ ಸಮಾಜ ಸಂಬಂಧಗಳನ್ನು ಜೀವಂತವಾಗಿ ಇಟ್ಟುಕೊಳ್ಳಲು ಬೇಕಾದದ್ದು ಹೀಗೆ ಕಳೆದುಕೊಳ್ಳುವ ಭಾವ. ನಾವು ಬದುಕಿದ ಪರಿಸರದಿಂದ, ಸಮಾಜದಿಂದ ಪಡೆದುಕೊಂಡ ಎಲ್ಲವನ್ನೂ ಪೂರ್ತಿ ಹಿಂತಿರುಗಿಸಲಾದೀತೇ? ಎಲ್ಲರೂ ಆ ಋಣಭಾರವನ್ನು ಹೊತ್ತೇ ಹೊರಡಬೇಕು. ಕೂಡಿಟ್ಟದ್ದನ್ನು ತಿನ್ನಲು ತಾನೇ ಇರುವುದಿಲ್ಲ ಅನ್ನುವ ಸತ್ಯ ಗೊತ್ತಾಗುವ ಹೊತ್ತಿಗೆ ಪರಿತಪಿಸಲೂ ಆಗದಂತಹ ಪ್ರಮಾದಗಳು ಜರುಗಿ ಹೋಗಿರುತ್ತವೆ. ಅಷ್ಟೇ ಅಲ್ಲ, ಏನೂ ಮಾಡಲಾಗದ ಅಸಹಾಯಕ ಸ್ಥಿತಿಗೆ ಬದುಕು ಬಂದು ನಿಂತಿರುತ್ತದೆ. ಇಲ್ಲದವರಿಗಾಗಿ ಮಿಡಿಯುವ ಕರುಳ ಕಾಳಜಿಯಿಂದ ಕಾಯಕ ಕೈಲಾಸವಾಗುತ್ತದೆ. ನಮ್ಮ ಬದುಕಿಗೆ ಸತ್ಯವೂ ಶುದ್ಧವೂ ಆದ ಪಾವಿತ್ರ್ಯ ಬರುತ್ತದೆ.

‘ಹೀಗೆ ಹಗಲು ರಾತ್ರಿ ದುಡಿದು ಸಿಕ್ಕ ಸಿಕ್ಕವರಿಗೆಲ್ಲಾ ಕೊಟ್ಟು ಕಳೀತಿಯಲ್ಲಾ, ಮಕ್ಕಳು ಮರಿ ಅದಾವೆ, ಮದುವೆ ಮುಂಜಿ ಆಗೋದಿದೆ , ಅಕಸ್ಮಾತ್ ನಿನಿಗೇನಾದ್ರೂ ಆದ್ರೆ ಗತಿ ಏನು’ ಅಂತ ಯಾರಾದರೂ ಅಂದರೆ ಆತನ ಉತ್ತರ: ‘ನಾನು ಸಾಕ್ತೀನಿ ಅನ್ನೋದು ಅಹಂಕಾರ. ಕೊಡೋನು ಕಿತ್ಕೊಳ್ಳೋನು ಮೇಲಿದ್ದಾನೆ. ಆಕಳೇನು ಕರುಗಳಿಗೆ ಬಣವೆ ಒಟ್ಟಿ ಸಾಯುತ್ತಾ?'

ಬಂದ ಹಾಗೆ ಬದುಕುವ ಇಂತಹ ನಂಬಿಕೆ, ಭರವಸೆ ವಿಶ್ವಾಸಗಳಿಗಿಂತ ಬೇರೆ ತಾತ್ವಿಕತೆ ಏನಿದೆ? ಯಾವ ಓದೂ, ಜ್ಞಾನವೂ ಸಾಧಿಸಲಾಗದ ಇಂಥ ಜೀವನ ಶ್ರದ್ಧೆ ಲೋಕಾನುಭವದಿಂದ ಸಾಧ್ಯವಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.