ಶುಕ್ರವಾರ, 17 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನುಡಿ ಬೆಳಗು | ನಾಲಿಗೆ ಮೇಲಿನ‌ ಮಾತು

Published 2 ಮೇ 2024, 23:51 IST
Last Updated 2 ಮೇ 2024, 23:51 IST
ಅಕ್ಷರ ಗಾತ್ರ

ನನ್ನ ಗುರುಗಳಾದ ಪ್ರೊ. ಪ್ರಭುಶಂಕರ ಅವರು ಹೇಳಿದ ಒಂದು ತಮಾಷೆಯ ಪ್ರಸಂಗ ಇದು. ಕೇಳಿ, ಸಾಹೇಬರೊಬ್ಬರಿಗೆ ವರ್ಗ ಆಗಿತ್ತು. ಅದರ ನಿಮಿತ್ತವಾಗಿ ಆ ಕಚೇರಿಯಲ್ಲಿ ಸಾಹೇಬರಿಗೊಂದು ಬೀಳ್ಕೊಡುಗೆ ಸಮಾರಂಭ. ನೂರಾರು ಜನ‌ ಕೆಲಸ ಮಾಡುವ ಕಚೇರಿ ಅದು. ಅಂಥ ಸಮಾರಂಭಗಳು ಹೇಗಿರುತ್ತವೆ ಅಂತ ನಿಮಗೂ ಬಹುಶಃ ಗೊತ್ತು. ಒಂದು ದೇವತಾ ಪ್ರಾರ್ಥನೆ, ಸ್ವಾಗತ, ಆಮೇಲೊಂದು ಅಭಿನಂದನಾ ಭಾಷಣ. ಆ ಭಾಷಣದಲ್ಲಿ ವರ್ಗ ಆದ ಸಾಹೇಬರು ಅದೆಷ್ಟು ಮೇಧಾವಿಗಳು, ಪ್ರಾಮಾಣಿಕರು, ಅವರ ಶಿಸ್ತು, ಶ್ರದ್ಧೆ, ಬದ್ಧತೆ ಎಲ್ಲಾ ಯಾವ ಮಟ್ಟದ್ದು ಇತ್ಯಾದಿಯನ್ನೆಲ್ಲಾ ಸೋದಾಹರಣವಾಗಿ ನಿರೂಪಿಸಿ, ಬಗೆಬಗೆಯಾಗಿ ವರ್ಣಿಸಿ, ಇಂಥ ಮಹನೀಯರು ಇರುವುದರಿಂದಲೇ ಇನ್ನೂ ಲೋಕದಲ್ಲಿ ಮಳೆ ಬೆಳೆ ಆಗುತ್ತಿದೆ ಎನ್ನುವ ರೇಂಜಿಗೆ ಕೊಂಡಾಡುವುದು, ಆಮೇಲೆ ಹೆಗಲಿಗೊಂದು ಶಾಲು, ತಲೆಗೊಂದು ಪೇಟ ಹಾಕಿ, ಕೈಗೊಂದು ಹಣ್ಣಿನ ಬುಟ್ಟಿ, (ಸಾಧ್ಯವಾದರೆ) ಒಂದು ನೆನಪಿನ‌ ಕಾಣಿಕೆ ಕೊಡುವುದು... ಹೀಗೇ ತಾನೆ? ಎಲ್ಲಾ ಹಾಗೇ ವ್ಯವಸ್ಥೆ ಆಗಿತ್ತು. ಸಂಜೆ ನಾಲ್ಕು ಗಂಟೆಗೆ ಸಮಾರಂಭ.

ಸುಮಾರು ಮೂರು ಗಂಟೆಯ ಹೊತ್ತಿಗೆ ಸಾಹೇಬರಿಗೆ ಶೌಚಾಲಯಕ್ಕೆ ಹೋಗಬೇಕಾದ ಒತ್ತಡ ಸೃಷ್ಟಿಯಾಯಿತು. ಆ ಕಾಲದಲ್ಲಿ ಸಾಹೇಬರಿಗೆ ಅಂತ ಅವರ ಚೇಂಬರಿನೊಳಗೇ ಶೌಚಾಲಯ ಇದ್ದಿರಲಿಲ್ಲ. ಸಾಹೇಬರು, ಸಿಬ್ಬಂದಿಯೆಲ್ಲರೂ ಹೋಗುವ ಕಾಮನ್ ಬಾತ್ ರೂಮಿಗೆ ಹೋಗಿ ಬಾಗಿಲು ಹಾಕಿಕೊಂಡರು.

ಸಾಹೇಬರು ಶೌಚಾಲಯದೊಳಗೆ ಇರುವಾಗಲೇ ಕಚೇರಿಯ ಮೂರ್ನಾಲ್ಕು ಸಿಬ್ಬಂದಿ ಸಹ ಆ ಕಡೆ ಬಂದರು. ಅವರಿಗೆ ಸಾಹೇಬರು ಶೌಚಾಲಯದೊಳಗೆ ಇರುವುದು ಗೊತ್ತಿಲ್ಲ. ಅವರಲ್ಲೊಬ್ಬ ಮತ್ತೊಬ್ಬನನ್ನು ಕೇಳಿದ. ‘ಏನ್ರೀ ರಾಮನಾಥ್, ಅಭಿನಂದನಾ ಭಾಷಣಕ್ಕೆ ಎಲ್ಲಾ ಸಿದ್ಧಾನೋ?’

ಅದಕ್ಕೆ ರಾಮನಾಥ್ ಹೇಳಿದ, ‘ನನ್ನ ಕರ್ಮ, ಈ ಪಾಪಿಗೆ ಅಭಿನಂದನಾ ಭಾಷಣ ಮಾಡೋದು ಏನ್ ಕರ್ಮ ಅಲ್ವ? ಥೂ, ಮನುಷ್ಯನೇನ್ರಿ ಅವನು? ದರಿದ್ರ... ಅದ್ಯಾವ ಸುಡುಗಾಡು ಯೂನಿವರ್ಸಿಟಿ ಈ ಅವಿವೇಕಿಗೆ ಡಿಗ್ರಿ ಕೊಡ್ತೋ ಕಾಣೆ. ತಲೆಯಲ್ಲಿ ಅರೆಪಾವು ಬುದ್ಧಿ ಇಲ್ಲ, ಜಂಭ ಮಾತ್ರ ಒಂದೂರಿಗೇ ಹಂಚೋ ಅಷ್ಟಿದೆ. ಸದ್ಯ, ಇವತ್ತು ಈ ಪೀಡೆ ತೊಲಗ್ತಾ ಇದೆ. ಹಾಳಾಗಿ ಹೋಗ್ಲಿ...’

ಹೀಗೆ ಮಾತಾಡುತ್ತಾ ಅವರೆಲ್ಲಾ ಶೌಚ ಕಾರ್ಯ ಮುಗಿಸಿ ಹೊರಗಡೆ ಹೋದರು. ಅವರ ಪ್ರತೀ ಮಾತೂ ಒಳಗೇ ಇದ್ದ ಸಾಹೇಬರ ಮರ್ಮಕ್ಕೆ ತಾಕಿತ್ತು.

ಸಂಜೆ ನಾಲ್ಕಕ್ಕೆ ಸರಿಯಾಗಿ ಬೀಳ್ಕೊಡುಗೆ ಸಮಾರಂಭ ಆರಂಭವಾಯಿತು. ಪ್ರಾರ್ಥನೆ ಸ್ವಾಗತ ಎಲ್ಲಾ ಮುಗಿದ ಮೇಲೆ ರಾಮನಾಥ್ ಅವರಿಂದ ಸಾಹೇಬರಿಗೆ ಅಭಿನಂದನಾ ಭಾಷಣ ಕೂಡಾ ನಡೆಯಿತು.

ಕಾರ್ಯಕ್ರಮ ಮುಗಿದ ಮೇಲೆ ರಾಮನಾಥ್ ಸಾಹೇಬರನ್ನು ಕೇಳಿದ: ‘ಹೇಗಿತ್ತು ಸಾರ್ ನನ್ನ ಭಾಷಣ? ಎಲ್ಲಾ ಸರಿಯಾಗಿ ಹೇಳಿದ್ನಾ?’

ಸಾಹೇಬರು ಹೇಳಿದರು, ‘ನಾಲಿಗೆ ಮೇಲಿನ ಮಾತು ಮಾತಲ್ಲ ರಾಮನಾಥ್. ಮನಸಿನ ಮಾತು ಕೇಳಿಸ್ಕೋಬೇಕು. ನಾನು‌ ಕೇಳಿಸಿಕೊಂಡಿದ್ದೇನೆ’.

ಮನಸಿನ‌ ಮಾತು ಕೇಳಿಸ್ಕೋಬೇಕು, ಹೌದಲ್ಲ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT