ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ನುಡಿ ಬೆಳಗು | ಮನುಷ್ಯನ ವೈರಿ!

Published 20 ಆಗಸ್ಟ್ 2024, 0:58 IST
Last Updated 20 ಆಗಸ್ಟ್ 2024, 0:58 IST
ಅಕ್ಷರ ಗಾತ್ರ

ಒಬ್ಬ ಯುವಕ ಮಲಗಿದ್ದ. ಯಜಮಾನನೊಬ್ಬ ಬಂದು ಆತನನ್ನು ಎಬ್ಬಿಸಿ ‘ಬೆಳಿಗ್ಗೆ 8 ಗಂಟೆ ಆಗೈತಿ, 8 ಗಂಟೆತನ ಮಕ್ಕಂಡ್ರ ಜೀವನ ಹ್ಯಾಂಗ್ ನಡೀತೈತೋ’ ಎಂದು ಕೇಳಿದನಂತೆ. ಆಗ ಆ ಹುಡುಗ ‘ಎದ್ದರೆ ನಾನ್ ಏನ್ ಮಾಡಬೇಕು’ ಎಂದು ಕೇಳಿದ. ಅದಕ್ಕ ಯಜಮಾನ, ‘ಎದ್ದು ಹೊಲಕ್ಕೆ ಹೋಗು’ ಎಂದ. ‘ಹೊಲಕ್ಕೆ ಹೋಗಿ ಏನ್ ಮಾಡಬೇಕು’ ಎಂದು ಹುಡುಗ ಕೇಳಿದ. ‘ಏನಾರ ಬೆಳೆ ಬೆಳಿ, ಬೀಜ ಬಿತ್ತು’ ಎಂದ ಯಜಮಾನ. ‘ಬಿತ್ತಿದ ಮೇಲೆ ಏನ್ ಮಾಡಬೇಕು’ ಮತ್ತೆ ಹುಡುಗನ ಪ್ರಶ್ನೆ. ‘ಬಿತ್ತಿದ ಮೇಲೆ ಎಡೆ ಹೊಡಿ’. ‘ಎಡೆ ಹೊಡದು ಏನ್ ಮಾಡ್ಲಿ’. ‘ಜೋಳ ರಾಶಿ ಮಾಡು’. ‘ರಾಶಿ ಮಾಡಿ ಏನ್ ಮಾಡಲಿ’. ‘ಅದನ್ನು ದಲಾಲಿ ಅಂಗಡಿಗೆ ಹಾಕು. ರೊಕ್ಕ ಬರತ್ತೆ. ರೊಕ್ಕ ಬಂದಮ್ಯಾಲೆ ಒಳ್ಳೆ ಕನ್ಯಾ ನೋಡಿ ಮದಿವ್ಯಾಗು’ ಎಂದು ಸಲಹೆ ಕೊಟ್ಟ ಯಜಮಾನ.

‘ಮದಿವ್ಯಾಗಿ ಏನ್ ಮಾಡಲಿ’ ಎಂದು ಕೇಳಿದ ಹುಡುಗ. ‘ಎರಡು ಚಲೋ ಮಕ್ಕಳು ಮಾಡಕೊ. ಅವರನ್ನ ಒಳ್ಳೇತರ ಓದಿಸು. ಶಾಣ್ಯಾ ಮಾಡು. ಅವರು ಚಲೋ ಆಫೀಸರ್ ಆಗ್ತಾರೆ. ಆಗ ಅವರು ನಿನಗೆ ತಿಂಗಳಾ ತಿಂಗಳಾ ಚಲೋ ಹಣ ಕಳಿಸ್ತಾರ. ಆಗ ಅರಾಂ ಮಕ್ಕಬಹುದು’ ಎಂದನಂತೆ ಯಜಮಾನ. ಅದಕ್ಕೆ ಹುಡುಗ ‘ಈಗ ನಾನ್ ಏನ್ ಮಾಡಕತ್ತೀನಿ. ಇಷ್ಟೆಲ್ಲಾ ಮಾಡಿದ ಮ್ಯಾಲೂ ಇದನ್ನ ಮಾಡಬೇಕು ಅಂದರ ನಾ ಅದನ್ನೇ ಈಗ ಮಾಡಕತ್ತೇನಲ್ಲ. ಆಗ ಅರಾಂ ಮಕ್ಕಳಾಕ ಇಷ್ಟೆಲ್ಲಾ ಕೆಲಸ ಮಾಡಬೇಕಾ? ಅರಾಂ ಅದೀವ್ ನಾವ್, ನನ್ ತಂಟೆಗೆ ಬರಬೇಡಿ ಹೋಗ್’ ಎಂದು ಕಳಿಸಿದನಂತೆ.

ಮನುಷ್ಯನಿಗೆ ವೈರಿ ಹೊರಗಿಲ್ಲ. ನಮ್ಮೊಳಗೇ ಅದಾನ. ನಮ್ಮ ನೆರೆಮನೆಯಲ್ಲಿಯೂ ನಮ್ಮ ವೈರಿಗಳಿಲ್ಲ. ನಮ್ಮೊಳಗಿರುವ ಆಲಸ್ಯವೇ ನಮ್ಮ ಶತ್ರು. ಮನುಷ್ಯ ಉತ್ಸಾಹಿ ಆಗಿರಬೇಕು. ಕಾರ್ಯಶೀಲ ಆಗಿರಬೇಕು. ಏನಾದರೂ ಕೆಲಸ ಮಾಡುತ್ತಿರಬೇಕು. ಸುಮ್ಮನಿರಬಾರದು.

‘ಹೌದ್ರೀ ಕೆಲಸ ಮಾಡಬೇಕು ಅಂತೀರಿ. ಎಷ್ಟು ಕೆಲಸ ಮಾಡಬೇಕು. ಎಷ್ಟು ಅದಾವ ಅವು?’ ಮನುಷ್ಯ ಜೀವನದಲ್ಲಿ ಬಂದ ಮೇಲೆ ಏನು ಮಾಡಲಿ ಬಿಡಲಿ ಪ್ರಶ್ನೆ ಇಲ್ಲ. ಮೂರು ಕೆಲಸ ಮಾಡಲೇ ಬೇಕು. ಒಂದನೇದ್ದು, ನಮ್ಮ ಕುಟುಂಬ ನಡೀಬೇಕಲ್ಲ, ಅದಕ್ಕೆ ಯಾವುದಾದರೂ ಉಪಜೀವನ ನಡೆಸಲೇ ಬೇಕು. ಉಪಜೀವನಕ್ಕಾಗಿ ಕೆಲಸ ಮಾಡು. ಎರಡನೇದ್ದು, ಬರೀ ಉಪಜೀವನಕ್ಕೆ ಕೆಲಸ ಮಾಡೋದಲ್ಲ, ನಾವು ಈ ಭೂಮಿಗೆ ಬರಲು ಕಾರಣರಾದ ಮತ್ತು ನಮ್ಮನ್ನು ದೊಡ್ಡವರನ್ನಾಗಿ ಮಾಡಿದವರ ಉಪಕಾರ ಸ್ಮರಣೆಗಾಗಿ ಒಂದಿಷ್ಟು ಕೆಲಸ ಮಾಡಬೇಕು.

ಬರೀ ಇಷ್ಟೇ ಅಲ್ಲ. ಮೂರನೇದ್ದು ಇದೆ. ನನ್ನ ದೇಹ, ದೇಶ, ವಿಶ್ವ ವಿಕಾಸ ಆಗಬೇಕಲ್ಲ. ಅದಕ್ಕಾಗಿಯಾದರೂ ನಾವು ಏನಾದರೂ ಕೆಲಸ ಮಾಡಬೇಕು. ಉಪಜೀವನ, ಉಪಕಾರ ಸ್ಮರಣೆ, ವಿಕಾಸಕ್ಕಾಗಿ ಕೆಲಸ ಇವನ್ನು ಎಲ್ಲರೂ ನೆನಪಿಟ್ಟುಕೊಳ್ಳಬೇಕು. ಕೆಲಸ ಮಾಡಬೇಕು ಅಂದ್ರ ನಮ್ಮೊಳಗಿನ ಆಲಸ್ಯ ಎಂಬ ವೈರಿಯನ್ನು ಓಡಿಸಬೇಕು. ನಾವು ದುಡಿದೇ ಉಣ್ಣಬೇಕು. ಇದೇ ನಿಸರ್ಗದ ತತ್ವ. ದುಡಿಯದೇ ಇದ್ದರೆ ಇಲ್ಲಿ ಅವಕಾಶವೇ ಇಲ್ಲ. ಈ ಮಾತನ್ನು ಎಲ್ಲರೂ ನೆನಪಿನಲ್ಲಿ ಇಟ್ಟುಕೊಳ್ಳಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT