ಅಪ್ಪನ ಮಾತನ್ನು ನಡೆಸುವ ಉದ್ದೇಶದಿಂದ ಕಾಡಿಗೆ ಹೊರಟ ರಾಮ ದಶರಥನನ್ನು ಭೇಟಿಯಾಗುತ್ತಾನೆ. ಕಟ್ಟಕಡೆಯ ಬಾರಿಗೆ ಎಂಬಂತೆ ಬಂದ ಮಗನನ್ನು ತಬ್ಬಿಕೊಂಡು ‘ಇದೊಂದು ರಾತ್ರಿ ಇದ್ದುಹೋಗು’ ಎಂದು ಅಪ್ಪ ಅಂಗಲಾಚುತ್ತಾನೆ. ರಾಮ ಆಲೋಚಿಸುತ್ತಾನೆ: ‘ಅರಮನೆ, ಸುಪ್ಪತ್ತಿಗೆ, ಅಧಿಕಾರ.... ಹೀಗೆ ಇದೊಂದು ರಾತ್ರಿ ಈ ಸುಖವನ್ನೆಲ್ಲಾ ಯಾಕೆ ಅನುಭವಿಸಬಾರದು? ನಾಳೆಯಿಂದ ಇದು ಯಾವುದೂ ಇರುವುದಿಲ್ಲ. ಕಾಡು, ಕಣಿವೆ, ಕಷ್ಟ ನಿಷ್ಠುರಗಳು, ಹಸಿವು,... ಹೀಗೆ ಕೊನೆಯಿಲ್ಲದ ಬವಣೆಗಳು. ಇವತ್ತು ಇದ್ದು ನಾಳೆ ಹೋದರಾಯಿತು’ ಅಂತ ಅನಿಸುತ್ತದೆ. ಮರುಕ್ಷಣವೇ ‘ಇದು ಸಲ್ಲದ ಆಲೋಚನೆ. ಹಾಗೇನಾದರೂ ಇವತ್ತು ಉಳಿದುಬಿಟ್ಟರೆ ನಾಳೆ, ನಾಡಿದ್ದು ಅಂತ ವನವಾಸವನ್ನು ಮುಂದೂಡುತ್ತಲೇ ಇರಬೇಕಾದೀತು. ಮನಸ್ಸಿನ ಈ ಆಸೆಯನ್ನು ಬಲಿಯುವುದಕ್ಕೆ ಬಿಡಬಾರದು, ಹೊರಡುವುದೇ ಸರಿ’ ಅಂತ ತೀರ್ಮಾನಕ್ಕೆ ಬರುತ್ತಾನೆ. ದುಃಖತಪ್ತ ದಶರಥನ ಆಶೀರ್ವಾದ ಪಡೆದು ತಾಯಿ ಕೌಸಲ್ಯೆಯ ಬಳಿ ಬರುತ್ತಾನೆ. ಅಮ್ಮನ ನೀಡಿದ ತುತ್ತನ್ನು ಆದರದಿಂದ ಸ್ವೀಕರಿಸಿದ ರಾಮ ಕಾಡಿಗೆ ತೆರಳುತ್ತಾನೆ.

ಇದು ಶ್ರೀರಾಮನ ಭಾವುಕ ತೀರ್ಮಾನವಲ್ಲ; ಅತ್ಯಂತ ಪ್ರಜ್ಞಾಪೂರ್ವಕವಾದ ಗಟ್ಟಿ ನಿರ್ಧಾರವಾಗಿತ್ತು. ತನ್ನನ್ನು ತಾನು ಕಡುಕಷ್ಟಗಳಿಗೆ ಒಡ್ಡಿಕೊಂಡ ನಿಲುವಾಗಿತ್ತು. ರಾಮನ ಪ್ರಜ್ಞೆಗೆ ನ್ಯಾಯ ಮತ್ತು ಸುಖ ಎನ್ನುವ ಸಂಗತಿಗಳು ಕಾಡಿದವು. ರಾಮನಿಗೆ ಇವುಗಳ ನಡುವಿನ ಆಯ್ಕೆ ಕಷ್ಟವಾಗಲೇ ಇಲ್ಲ. ಅವನ ವಿಶ್ಲೇಷಣೆಯ ಬುದ್ಧಿಗೆ ನ್ಯಾಯವೇ ಮಹತ್ವದ್ದಾಗಿ ಕಂಡಿತು. ಮಾತಿಗೆ ಬದ್ಧವಾಗಿರುವುದು ಅಂದರೆ ನುಡಿದಂತೆ ನಡೆಯುವುದು. ಅದೇ ನ್ಯಾಯ. ಇದೊಂದು ರಾತ್ರಿ ಉಳಿಯುವ ಸುಖದ ಮಾರ್ಗವನ್ನು ಆರಿಸಿಕೊಂಡಿದ್ದರೆ ಈ ಕ್ಷಣಕ್ಕೆ, ಇವತ್ತಿಗೆ ಹಿತವಾಗಿರುತ್ತಿತ್ತು. ಆದರೆ ಭೌತಿಕ ಸುಖಾಪೇಕ್ಷಿಯಾದ ರಾಮನಿಂದ ಯಾವ ನ್ಯಾಯವನ್ನು ನಿರೀಕ್ಷಿಸಬಹುದು ಎಂಬ ಪ್ರಶ್ನೆ ಎಂದೆಂದಿಗೂ ಉಳಿದುಬಿಡುತ್ತಿತ್ತು. ಶ್ರೀರಾಮನ ಸಂವೇದನಾಶೀಲ ಮನಸ್ಸು ನ್ಯಾಯದ ಮಾರ್ಗದಲ್ಲಿ ನಡೆಯುವ ಕಡುಕಷ್ಟದ ಹಾದಿಯನ್ನು ಆರಿಸಿಕೊಂಡಿತು. ರಾಮನ ಈ ಚಿಂತನಶೀಲ ಆಯ್ಕೆ ಅವನ ಪ್ರಬುದ್ಧ ನೈತಿಕ ರಾಜಕಾರಣವೇ ಆಗಿದೆ.

ದೊರೆತನದ ದಾರಿಯನ್ನು ಮಾದರಿ ಎಂದೇ ಜನಮಾನಸ ಭಾವಿಸುತ್ತದೆ. ಕರುಳ ಕಾಳಜಿಯಿಂದ ಕೂಡಿದ ಕಾನೂನು, ಅಂತಃಕರಣವನ್ನು ಆಲಿಸುವ ಆಡಳಿತ ಇಂತಹ ನ್ಯಾಯದ ಒಡಲಿನಿಂದಲೇ ಹುಟ್ಟುತ್ತದೆ. ದೊರೆತನ ಹಿರಿತನಕ್ಕೆ ಸಾಕ್ಷಿ ಎನಿಸಿಕೊಳ್ಳಬೇಕು. ಅದು ನ್ಯಾಯದ ಪರಂಪರೆಗೆ ಅಡಿಪಾಯವಾಗಬೇಕು. ರಾಮನ ಈ ನ್ಯಾಯದ ಆಯ್ಕೆ ಕಷ್ಟನಿಷ್ಠುರಗಳನ್ನು ಈಗಲೇ ಎದುರಿಸಿಬಿಡಲು ಅಗತ್ಯವಾದ ಮಾನಸಿಕ ಸಿದ್ಧತೆಯ ಸೂಚನೆಯಾಗಿದೆ. ಕಷ್ಟಕೋಟಲೆಗಳು ನಾಳೆಯ ಬದಲು ಇಂದೇ ಬರಲಿ, ಇಂದಿನ ಬದಲು ಈಗಲೇ ಬರಲಿ ಎನ್ನುವ ಮನಸ್ಥಿತಿಯಿದ್ದರೆ ಅವುಗಳನ್ನು ಎದುರಿಸುವ ದೃಢತೆ ಇನ್ನಷ್ಟು ಬಲಿಷ್ಠವಾಗುತ್ತದೆ.

ಸದ್ಯದ ಲೌಕಿಕ ಜಗತ್ತು ಸರಕುನಿಷ್ಠ ಸುಖಭೋಗದ ಲೋಲುಪತೆಯಲ್ಲಿ ಮುಳುಗಿದೆ. ಸುಖ ನೀಡುತ್ತವೆ ಎಂದು ಆಶಿಸಲಾಗುವ ಹಣ, ಅಧಿಕಾರ, ಪದವಿ ಮುಂತಾದವುಗಳು ನ್ಯಾಯೋಚಿತ ಉತ್ಪನ್ನಗಳಾಗಿದ್ದರೆ ಮಾತ್ರ ಘನತೆ. ಇಲ್ಲದಿದ್ದರೆ ಮಾನಗೇಡು. ಯಾವ ಬಗೆಯ ಸುಖವಾಗಲೀ ನ್ಯಾಯಮೂಲದಿಂದ ಹುಟ್ಟಬೇಕು. ಅದು ಆಪ್ಯಾಯಮಾನ, ಅನನ್ಯ. ನ್ಯಾಯಸ್ಪರ್ಶವಿಲ್ಲದ ಸುಖ ಯೋಗ್ಯವೆನಿಸುವುದಿಲ್ಲ. ಆದುದರಿಂದ ನಮ್ಮೊಳಗಿನ ನ್ಯಾಯಪ್ರಜ್ಞೆ ನಾಶವಾಗದಂತೆ ಕಾಪಾಡಿಕೊಳ್ಳಬೇಕು.

ಅತಿಯಾದ ಸುಖಮೋಹಿಯೂ ನ್ಯಾಯವಿದೂರವೂ ಆದ ತಂತ್ರಜ್ಞಾನದ ಕಾಲದಲ್ಲಿ ನಾವಿದ್ದೇವೆ. ಸ್ವಾರ್ಥಪರ ಸ್ವಕೇಂದ್ರಿತ ಬುದ್ಧಿಯು ಬಲಗೊಳ್ಳುತ್ತಿರುವಾಗ ರಾಮನ ನ್ಯಾಯಪರ ನಿರ್ಧಾರ ನಮಗೆ ಪಾಠವಾಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.