ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ಬೆಂಗಳೂರು– ನವೋದ್ಯಮದ ತವರು

Last Updated 28 ಆಗಸ್ಟ್ 2022, 6:16 IST
ಅಕ್ಷರ ಗಾತ್ರ

ಬೆಂಗಳೂರು: ‘ತಂತ್ರಜ್ಞಾನ ಆಧಾರಿತ ನವೋದ್ಯಮಗಳು ಅತಿಹೆಚ್ಚಿನ ಸಂಖ್ಯೆಯಲ್ಲಿರುವ ನಗರಗಳ ಪಟ್ಟಿಯಲ್ಲಿ ಬೆಂಗಳೂರು ಇಡೀ ವಿಶ್ವದಲ್ಲಿ ಮೂರನೇ ಸ್ಥಾನದಲ್ಲಿದೆ. ಅತ್ಯಂತ ಚೆನ್ನಾಗಿ ಬೆಳೆದಿರುವ ನವೋದ್ಯಮ ಕಾರ್ಯವ್ಯವಸ್ಥೆ, ತಾಂತ್ರಿಕ ನಿಪುಣರ ಜಾಲ, ಔದ್ಯಮಿಕ ಗುಣವನ್ನು ಗೌರವಿಸುವ ಮನಸ್ಸು ಈ ನಗರದಲ್ಲಿದೆ...’

ದೇಶದ ನವೋದ್ಯಮಗಳ ಭೂಪಟದಲ್ಲಿ ಬೆಂಗಳೂರಿನ ಸ್ಥಾನ ಏನು ಎಂಬ ಪ್ರಶ್ನೆಗೆ ಉತ್ತರ ಅರಸಲು ಮುಂದಾದರೆ ಸಿಗುವುದು ನಗರದ ಹಿರಿಮೆಯನ್ನು ಹೆಚ್ಚಿಸುವ ಇಂತಹ ಉತ್ತರಗಳು. ಉದ್ಯಾನ ನಗರಿ ಬೆಂಗಳೂರಿನ ನವೋದ್ಯಮಗಳ ಸಂಖ್ಯೆ, ಅವುಗಳ ಶಕ್ತಿ ಹಾಗೂ ವ್ಯಾಪ್ತಿಯ ಕುರಿತು ಕೆಲವು ನೋಟಗಳನ್ನು ನೀಡುವ ‘ಆಸ್ಕ್‌ ಪ್ರೈವೇಟ್ ವೆಲ್ತ್‌ ಹುರೂನ್ ಇಂಡಿಯಾ ಫ್ಯೂಚರ್ ಯೂನಿಕಾರ್ನ್‌ ಇಂಡೆಕ್ಸ್ 2022’ ವರದಿಯನ್ನು ಹುರೂನ್ ಇಂಡಿಯಾ ಈಚೆಗೆ ಬಿಡುಗಡೆ ಮಾಡಿದ್ದು, ಅದರಲ್ಲಿ ಈ ಮೇಲಿನ ವಿವರಗಳು ಇವೆ.

ಯೂನಿಕಾರ್ನ್‌ಗಳ (₹ 7,981 ಕೋಟಿಗಿಂತ ಹೆಚ್ಚಿನ ಮೌಲ್ಯದ ಕಂಪನಿ) ಸಂಖ್ಯೆಯನ್ನು ಪರಿಗಣಿಸಿದರೆ ಭಾರತದ ನವೋದ್ಯಮಗಳ ಕಾರ್ಯವ್ಯವಸ್ಥೆಯು ವಿಶ್ವದಲ್ಲಿ ಮೂರನೆಯ ಅತಿದೊಡ್ಡದು ಎನ್ನುತ್ತದೆ ಹುರೂನ್‌ ವರದಿ. ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವಾಲಯ ನೀಡಿರುವ ಮಾಹಿತಿ ಅನ್ವಯ ದೇಶದಲ್ಲಿನ ನವೋದ್ಯಮಗಳ ಸಂಖ್ಯೆ 69 ಸಾವಿರಕ್ಕಿಂತ ಹೆಚ್ಚು. ಈ ವರ್ಷದ ಮೊದಲಾರ್ಧದಲ್ಲಿ ದೇಶವು ಒಟ್ಟು 20 ಹೊಸ ಯೂನಿಕಾರ್ನ್‌ಗಳಿಗೆ ಜನ್ಮ ನೀಡಿದೆ.

‘ಜಾಗತಿಕ ನವೋದ್ಯಮ ಕಾರ್ಯವ್ಯವಸ್ಥೆ ವರದಿ’ಯು (ಜಿಎಸ್‌ಇಆರ್) ಜೂನ್‌ ತಿಂಗಳಲ್ಲಿ ಬಿಡುಗಡೆ ಆಗಿದೆ. ಇದು ಸಾಧನೆ, ಹಣಕಾಸಿನ ಲಭ್ಯತೆ, ಮಾರುಕಟ್ಟೆ ವ್ಯಾಪ್ತಿ, ಸಂಪರ್ಕ, ಪ್ರತಿಭೆ ಮತ್ತು ಅನುಭವ, ಜ್ಞಾನ ಆಧರಿಸಿ ನಗರಗಳಿಗೆ ರ್‍ಯಾಂಕ್ ನೀಡಿದೆ. ಈ ವರದಿಯಲ್ಲಿ ಬೆಂಗಳೂರು ಜಾಗತಿಕ ಮಟ್ಟದಲ್ಲಿ 22ನೇ ಸ್ಥಾನ ಪಡೆದಿದೆ.

ತಂತ್ರಜ್ಞಾನ ಆಧಾರಿತ ಉದ್ದಿಮೆಗಳನ್ನು ಪೋಷಿಸುವ ಸಂಸ್ಕೃತಿಯು ಇನ್ಫೊಸಿಸ್‌ ಸ್ಥಾಪನೆ ಆದ ಕಾಲದಿಂದಲೂ ಇಲ್ಲಿದೆ. ನವೋದ್ಯಮಗಳನ್ನು ಪೋಷಿಸಲು ಬೇಕಿರುವ ಸಮುದಾಯ, ಹೂಡಿಕೆದಾರರು ಮತ್ತು ಸರ್ಕಾರದ ನೀತಿಗಳು ಕೂಡ ಇದಕ್ಕೆ ಪೂರಕವಾಗಿದೆ ಎಂದು ಹುರೂನ್‌ ಇಂಡಿಯಾ ಸಂಸ್ಥೆಯ ಮುಖ್ಯ ಸಂಶೋಧಕ ಅನಸ್ ರೆಹ್ಮಾನ್ ಜುನೈದ್ ಅವರು ಈಚೆಗೆ ಹೇಳಿದ್ದರು.

ಬೆಂಗಳೂರಿನಲ್ಲಿ ಇರುವ ನವೋದ್ಯ ಮಗಳ ಪೈಕಿ ಹೆಚ್ಚಿನವು ಸಾಫ್ಟ್‌ವೇರ್‌ ತಂತ್ರಜ್ಞಾನವನ್ನು ಆಧರಿಸಿವೆ. ತಂತ್ರಜ್ಞಾನ ಕಂಪನಿಗಳಲ್ಲಿ ಕೆಲಸ ಮಾಡುವವರೇ ಹೆಚ್ಚಿನ ಸಂಖ್ಯೆಯಲ್ಲಿ ನವೋದ್ಯಮ ಕಟ್ಟಲು ಮುಂದೆ ಬರುತ್ತಿದ್ದಾರೆ.

ಅವರಲ್ಲಿ ಆರಂಭಿಕ ಬಂಡವಾಳ ಇದೆ. ಅವರಲ್ಲಿನ ಹಣ ಸಾಲದಿದ್ದರೆ, ಒಂದಿಷ್ಟು ಹಣ ತೊಡಗಿಸಲು ಜೊತೆಗಾರರು ಇದ್ದಾರೆ. ತಂತ್ರಜ್ಞಾನ ಆಧಾರಿತ ನವೋದ್ಯಮದ ಪರಿಕಲ್ಪನೆಯನ್ನು ಸ್ಪಷ್ಟವಾಗಿ ವಿವರಿಸಿದರೆ, ದೊಡ್ಡ ಬಂಡವಾಳ ಹೂಡಿಕೆ ಮಾಡುವ ಕಂಪನಿಗಳು ಇವೆ.

‘ತಂತ್ರಜ್ಞಾನ ಆಧಾರಿತ ನವೋದ್ಯಮಕ್ಕೆ ಅಗತ್ಯವಿರುವ ‍ಪರಿಸರ ಬೆಂಗಳೂರಿನಲ್ಲಿ ಬೆಳೆದಿದೆ. ಬಂಡವಾಳ ಹೂಡಿಕೆ ಮಾಡುವವರಲ್ಲಿಯೂ ತಂತ್ರಜ್ಞಾನ ಹಿನ್ನೆಲೆಯವರೇ ಹೆಚ್ಚಿದ್ದಾರೆ. ಇವೆಲ್ಲವೂ ಪೂರಕವಾಗಿ ಕೆಲಸ ಮಾಡುತ್ತಿವೆ’ ಎಂದು ವಿಶ್ಲೇಷಿಸುತ್ತಾರೆ ತೇಜಸ್‌ ನೆಟ್‌ವರ್ಕ್ಸ್‌ ಕಂಪನಿಯ ನಿವೃತ್ತ ಹಿರಿಯ ಉಪಾಧ್ಯಕ್ಷ, ನವೋದ್ಯಮಗಳ ಕುರಿತು ಅಧ್ಯಯನ ನಡೆಸಿರುವ ಸತ್ಯೇಶ್ ಬೆಳ್ಳೂರ್.

ಬಂಡವಾಳದಲ್ಲಿ ಮುಂದು
ನವೋದ್ಯಮಗಳ ರಾಜಧಾನಿಯಾಗಿ ಬೆಂಗಳೂರು ಬೆಳೆದು ನಿಂತಿದ್ದಕ್ಕೆ ಐ.ಟಿ. ಮತ್ತು ಬಿ.ಟಿ. ಸಚಿವ ಡಾ.ಸಿ.ಎನ್. ಅಶ್ವತ್ಥನಾರಾಯಣ ಅವರು ಜಿಎಸ್‌ಇಆರ್‌ ವರದಿಯನ್ನು ಆಧರಿಸಿ ಇನ್ನೊಂದಿಷ್ಟು ಕಾರಣಗಳನ್ನು ನೀಡುತ್ತಾರೆ. ‘ಬಂಡವಾಳ ಸಂಗ್ರಹಿಸುವ ವಿಚಾರದಲ್ಲಿ ಬೆಂಗಳೂರು ಜಗತ್ತಿನ ಟಾಪ್ 15 ನಗರಗಳ ಪೈಕಿ ಒಂದು, ನವೋದ್ಯಮಗಳ ಯಶಸ್ಸಿನ ದೃಷ್ಟಿಯಿಂದ ಬೆಂಗಳೂರು ಟಾಪ್‌ 25 ನಗರಗಳ ಪೈಕಿ ಒಂದು’ ಎಂದು ಅವರು ವಿವರಿಸುತ್ತಾರೆ.

ಬೆಂಗಳೂರಿನಲ್ಲಿ ಇರುವ ಮೂಲಸೌಕರ್ಯ, ತಾಂತ್ರಿಕ ನಿಪುಣರ ಸಂಖ್ಯೆ ಮತ್ತು ಬಂಡವಾಳ ಸಂಗ್ರಹ ಅವಕಾಶಗಳು ಈ ನಗರವನ್ನು ನವೋದ್ಯಮಗಳ ಪಾಲಿನ ಗಮ್ಯ ಸ್ಥಾನವನ್ನಾಗಿಸಿವೆ ಎಂದು ಅಶ್ವತ್ಥನಾರಾಯಣ ಅವರು ಜಿಎಸ್‌ಇಆರ್ ವರದಿ ಉಲ್ಲೇಖಿಸುತ್ತಾರೆ. ಬಂಡವಾಳ ಸಂಗ್ರಹ ಅವಕಾಶದ ಬಗ್ಗೆ ಸಚಿವರ ಮಾತು ಅನುಮೋದಿಸುವ ನವೋದ್ಯಮ ಕಂಪನಿ ಮೈಲ್ಯಾಂಗ್‌ ಬುಕ್ಸ್ ಪ್ರೈ.ಲಿ. ಸಹಸಂಸ್ಥಾಪಕ ಹಾಗೂ ಬರಹಗಾರ ವಸಂತ ಶೆಟ್ಟಿ, ‘ಸಾಫ್ಟ್‌ವೇರ್‌ ಲೋಕದ ಪ್ರತಿಭಾವಂತರು ಹೊಸ ಆಲೋಚನೆಗಳ ಮೂಲಕ ಇಲ್ಲಿ ನವೋದ್ಯಮಗಳನ್ನು ಸೃಷ್ಟಿಸಿದರು. ಹೂಡಿಕೆಗಳ ಮೂಲಕ ಸಂಪತ್ತು ಸೃಷ್ಟಿಸಿದ್ದ ಇಲ್ಲಿನ ಹಲವರು, ನವೋದ್ಯಮಗಳ ಮೇಲೆ ಹೂಡಿಕೆಗೆ ಮುಂದಾದರು’ ಎಂದು ವಿವರಿಸುತ್ತಾರೆ.

ತಂತ್ರಜ್ಞಾನ ಆಧಾರಿತ ನವೋದ್ಯಮಗಳಲ್ಲಿ ಆಗುತ್ತಿರುವ ವೆಂಚರ್ ಕ್ಯಾಪಿಟಲ್ ಹೂಡಿಕೆಯಲ್ಲಿ ಬೆಂಗಳೂರು ಈಗ ಜಾಗತಿಕ ಮಟ್ಟದಲ್ಲಿ ಐದನೆಯ ಸ್ಥಾನದಲ್ಲಿದೆ. 2017ರಿಂದ 2021ರ ನಡುವಿನ ಅವಧಿಯಲ್ಲಿ ಬೆಂಗಳೂರಿನಲ್ಲಿ ಆಗಿರುವ ವೆಂಚರ್ ಕ್ಯಾಪಿಟಲ್ ಹೂಡಿಕೆಯ ಮೊತ್ತವು ಅಂದಾಜು ₹ 1.67 ಲಕ್ಷ ಕೋಟಿ. ಈ ಅವಧಿಯಲ್ಲಿ ಜಗತ್ತಿನ ಇತರ ನವೋದ್ಯಮ ನಗರಗಳಲ್ಲಿನ ಸರಾಸರಿ ವೆಂಚರ್ ಕ್ಯಾಪಿಟಲ್‌ ಹೂಡಿಕೆ ₹ 35 ಸಾವಿರ ಕೋಟಿ ಮಾತ್ರ ಎಂಬ ಮಾಹಿತಿಯನ್ನು ಜಿಎಸ್‌ಇಆರ್ ವರದಿ ಹೇಳಿದೆ.

‘ಈ ವರ್ಷದ ಜನವರಿಯಿಂದ ಮೇ ತಿಂಗಳವರೆಗಿನ ಅವಧಿಯಲ್ಲಿ ಬೆಂಗಳೂರಿನ ತಂತ್ರಜ್ಞಾನ ಆಧಾರಿತ ನವೋದ್ಯಮಗಳಲ್ಲಿ ಒಟ್ಟು ₹ 59 ಸಾವಿರ ಕೋಟಿ ವೆಂಚರ್ ಕ್ಯಾಪಿಟಲ್ ಹೂಡಿಕೆ ಆಗಿದೆ. ಹಿಂದಿನ ವರ್ಷದ (2021ರ) ಮೊದಲ ಆರು ತಿಂಗಳ ಅವಧಿಯಲ್ಲಿ ಆದ ಹೂಡಿಕೆ ₹ 41 ಸಾವಿರ ಕೋಟಿ ಮಾತ್ರ. ಬೆಂಗಳೂರು ನಗರವು ಈಗ ಸಿಂಗಪುರ, ಪ್ಯಾರಿಸ್ ಮತ್ತು ಬರ್ಲಿನ್‌ಗಿಂತ ಹೆಚ್ಚಿನ ಹೂಡಿಕೆ ಆಕರ್ಷಿಸುತ್ತಿದೆ. ಆದರೆ ಬೋಸ್ಟನ್ ಹಾಗೂ ನ್ಯೂಯಾರ್ಕ್‌ಗಿಂತ ಹಿಂದೆ ಇದೆ’ ಎಂದು ಅಶ್ವತ್ಥನಾರಾಯಣ ತಿಳಿಸುತ್ತಾರೆ.

ನವೋದ್ಯಮಗಳು ಬೆಂಗಳೂರಿನಲ್ಲಿ ಬೆಳೆದು ನಿಂತಿರುವುದಕ್ಕೆ ಒಂದು ದೊಡ್ಡ ಕಾರಣ ಇಲ್ಲಿ ವೆಂಚರ್ ಕ್ಯಾಪಿಟಲಿಸ್ಟ್‌ಗಳು, ಏಂಜೆಲ್‌ ಇನ್ವೆಸ್ಟರ್‌ಗಳು ಹೆಚ್ಚಿನ ಸಂಖ್ಯೆಯಲ್ಲಿ ಇರುವುದು. ‘ದೇಶದ ಇತರ ಯಾವ ನಗರಕ್ಕೂ ಈ ಬಗೆಯ ಔದ್ಯಮಿಕ ಸಂಸ್ಕೃತಿಯನ್ನು ಕಟ್ಟುವ ವಿಚಾರದಲ್ಲಿ ಬೆಂಗಳೂರನ್ನು ಮೀರಿ ನಿಲ್ಲಲು ಆಗದು. ಬೇರೆ ರಾಜ್ಯಗಳ ನಗರಗಳಲ್ಲಿಯೂ ಮುಂದೆ ನವೋದ್ಯಮಗಳು ಬೆಳೆಯುತ್ತವೆ ಎಂಬುದು ನಿಜ. ಆದರೆ, ಬೆಂಗಳೂರು ಯಾವತ್ತಿಗೂ ಇತರ ನಗರಗಳಿಗಿಂತ ಮುಂದಿರಲಿದೆ’ ಎನ್ನುತ್ತಾರೆ.

ಮೈಸೂರು ಮಹಾರಾಜರ ಆಡಳಿತ ಇದ್ದ ಕಾಲದಿಂದಲೂ ಬೆಂಗಳೂರು ವಿಜ್ಞಾನ ನಗರವಾಗಿ ಗುರುತಿಸಿಕೊಂಡಿದೆ. ಇಲ್ಲಿನ ಹವಾಗುಣ, ಸರ್ಕಾರ ನೀತಿಗಳು ಕೂಡ ಇಂದಿನ ಉತ್ತಮ ಸ್ಥಿತಿಗೆ ಕಾರಣ ಎನ್ನುವುದು ಸಚಿವರ ವಾದ. ನವೋದ್ಯಮಗಳಲ್ಲಿ ಹಲವರು ಈ ಮಾತನ್ನು ಅನುಮೋದಿಸುವರು.

ದೇಶದ ನವೋದ್ಯಮಗಳ ರಾಜಧಾನಿ ಎಂಬ ಹೆಗ್ಗಳಿಕೆಯು ಈಗಲೂ ಬೆಂಗಳೂರಿಗೇ ಇದೆ. ಯೂನಿಕಾರ್ನ್‌ ಆಗಬಹುದಾದ 46 ನವೋದ್ಯಮಗಳು ಬೆಂಗಳೂರಿನಲ್ಲಿವೆ. ದೆಹಲಿ ಹಾಗೂ ಮುಂಬೈನಲ್ಲಿ ಇರುವ ಇಂತಹ ನವೋದ್ಯಮಗಳ ಸಂಖ್ಯೆ ಕ್ರಮವಾಗಿ 25 ಹಾಗೂ 16 ಎಂದು ಹುರೂನ್‌ ವರದಿಯಲ್ಲಿ ಹೇಳಲಾಗಿದೆ.

ರಾಜ್ಯ ಸರ್ಕಾರದ ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಇ.ವಿ.ರಮಣ ರೆಡ್ಡಿ ಅವರು ಸಚಿವರ ಮಾತಿಗೆ ಪೂರಕವಾಗಿ ಇನ್ನೊಂದಿಷ್ಟು ಆಯಾಮಗಳನ್ನು ಮುಂದಿರಿಸುತ್ತಾರೆ. ‘ಸರ್ಕಾರ, ಅಕಾಡೆಮಿಕ್ ವಲಯ ಹಾಗೂ ಉದ್ಯಮ ವಲಯವು ಕರ್ನಾಟಕದಲ್ಲಿ ಒಟ್ಟಾಗಿ ಕೆಲಸ ಮಾಡುತ್ತದೆ. ಅಗತ್ಯವಾದ ನೀತಿಗಳನ್ನು ರೂಪಿಸುತ್ತದೆ. ಹೀಗಾಗಿ ಇಲ್ಲಿ ನವೋದ್ಯಮಗಳು ಬೆಳೆದಿವೆ’ ಎಂದು ಅವರು ವಿವರಿಸುತ್ತಾರೆ.

ಉನ್ನತ ಶಿಕ್ಷಣ ಖಾಸಗೀಕರಣದ ಫಲ
‘ಮೈಸೂರಿನ ಮಹಾರಾಜರು ಕೈಗಾರಿಕೆಗಳಿಗೆ ಆದ್ಯತೆ ನೀಡಿದ್ದರು. ಕೈಗಾರಿಕೀಕರಣದ ಬಗ್ಗೆ ಜನ ಹೆಚ್ಚು ಆಲೋಚನೆ ಮಾಡದೇ ಇದ್ದ ಸಂದರ್ಭದಲ್ಲಿಯೇ ಸರ್.ಎಂ. ವಿಶ್ವೇಶ್ವರಯ್ಯ ಅವರು ಕೈಗಾರಿಕೀಕರಣ ಇಲ್ಲವೇ ವಿನಾಶ ಎಂಬ ಮಾತು ಆಡಿದ್ದರು. ರಾಜ್ಯವು 60 ವರ್ಷಗಳ ಹಿಂದೆಯೇ ಉನ್ನತ ಶಿಕ್ಷಣದಲ್ಲಿ ಖಾಸಗಿಯವರಿಗೆ ಅವಕಾಶ ಕಲ್ಪಿಸಿತು. ಹಲವು ಎಂಜಿನಿಯರಿಂಗ್ ಕಾಲೇಜುಗಳು ಇಲ್ಲಿ ತಲೆಯೆತ್ತಿದವು. ಬೆಂಗಳೂರಿನಲ್ಲಿ ಆರಂಭಗೊಂಡ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳು, ಆಡಳಿತದಲ್ಲಿ ತಂತ್ರಜ್ಞಾನವನ್ನು ಬಹಳ ಹಿಂದೆಯೇ ಅಳವಡಿಸಿಕೊಂಡಿದ್ದು, ನೀತಿಗಳನ್ನು ರೂಪಿಸುವಲ್ಲಿ ಮುಂಚೂಣಿಯಲ್ಲಿ ಇದ್ದಿದ್ದು... ಇವೆಲ್ಲವುಗಳ ಒಟ್ಟು ಫಲವಾಗಿ ಬೆಂಗಳೂರು ಇಂದು ನವೋದ್ಯಮಗಳ ರಾಜಧಾನಿಯಾಗಿ ಬೆಳೆದಿದೆ’ ಎನ್ನುತ್ತಾರೆ ರೆಡ್ಡಿ.

ದೇಶವು ಆರ್ಥಿಕ ಉದಾರೀಕರಣಕ್ಕೆ ತೆರೆದುಕೊಂಡ ನಂತರದಲ್ಲಿ ಬೆಂಗಳೂರು ಐ.ಟಿ. ಕ್ರಾಂತಿಗೆ ಸಾಕ್ಷಿಯಾಯಿತು. ಬೆಂಗಳೂರು ಮೂಲದ ಐ.ಟಿ. ಕಂಪನಿಗಳು ವಿಶ್ವ ಮಟ್ಟದಲ್ಲಿ ಬೆಳೆದವು. ಈ ಕಂಪನಿಗಳಲ್ಲಿ ಹೂಡಿಕೆ ಮಾಡಿದ್ದ ಹಲವರ ಸಂಪತ್ತು ಅಗಾಧವಾಗಿ ಬೆಳೆಯಿತು. ದೇಶದ ಮೂಲೆ ಮೂಲೆಗಳಿಂದ ಐ.ಟಿ. ತಜ್ಞರು ಬೆಂಗಳೂರಿಗೆ ಬಂದು ನೆಲೆ ಕಂಡುಕೊಂಡರು. ಟೆಕಿಗಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂಬ ಕಾರಣಕ್ಕೆ ಬೆಂಗಳೂರಿಗೆ ಹೊಸ ಹೊಸ ಐ.ಟಿ. ಕಂಪನಿಗಳು ಬಂದವು. ಇದು ಬೆಂಗಳೂರಿನಲ್ಲಿ ನವೋದ್ಯಮಗಳ ಹುಟ್ಟು, ಬೆಳವಣಿಗೆಗೆ ಅನುಕೂಲ ಕಲ್ಪಿಸುವ ವಾತಾವರಣವನ್ನು ರೂಪಿಸಿತು.

‘ಏಂಜೆಲ್‌ ಇನ್ವೆಸ್ಟರ್‌ಗಳ ಬಹುದೊಡ್ಡ ಸಮುದಾಯ ಬೆಂಗಳೂರಿನಲ್ಲಿದೆ. ಇವರೆಲ್ಲ ಬೆಂಗಳೂರಿನಲ್ಲಿ ಇದ್ದಾರೆ ಎಂಬ ಕಾರಣಕ್ಕೆ, ಕಚೇರಿ ಕೆಲಸಗಳಿಗೆ ಅಗತ್ಯವಿರುವ ಸೇವೆಗಳನ್ನು ಒಂದೇ ಕಡೆ ನೀಡುವ ವಿ–ವರ್ಕ್‌ನಂತಹ ಕಂಪನಿಗಳು ಬಂದು, ನವೋದ್ಯಮಗಳಿಗೆ ಅಗತ್ಯವಿರುವ ಕೆಲವು ಅಗತ್ಯ ಸೌಲಭ್ಯಗಳನ್ನು ಒದಗಿಸಲು ಆರಂಭಿಸಿದವು. ರಾಜ್ಯದ ಶಾಂತಿ, ಸುವ್ಯವಸ್ಥೆ, ಎಲ್ಲರನ್ನೂ ಜೊತೆಗೂಡಿಸಿಕೊಳ್ಳುವ ಕನ್ನಡ ಮನಸ್ಸು ಕೂಡ ಈ ಕ್ರಾಂತಿಗೆ ನೆರವಾಗಿದೆ’ ಎಂದು ವಸಂತ ಶೆಟ್ಟಿ ಅಭಿಪ್ರಾಯ ಹಂಚಿಕೊಳ್ಳುತ್ತಾರೆ.

‘ಎಚ್‌.ಡಿ. ದೇವೇಗೌಡ, ಎಸ್.ಎಂ. ಕೃಷ್ಣ ಅವರು ಮುಖ್ಯಮಂತ್ರಿ ಆಗಿದ್ದ ಕಾಲದಿಂದಲೂ ಯಾವ ಪಕ್ಷದ ಮುಖ್ಯಮಂತ್ರಿಯೂ ಇಲ್ಲಿನ ಐ.ಟಿ. ಜಗತ್ತಿಗೆ ತೊಂದರೆ ಆಗದಂತೆ ನೋಡಿಕೊಂಡರು. ಇದು ಕೂಡ ಇಂದಿನ ನವೋದ್ಯಮಗಳ ಬೆಳವಣಿಗೆಗೆ ಮಹತ್ವದ ಕೊಡುಗೆ ನೀಡಿದೆ’ ಎನ್ನುತ್ತಾರೆ ಶೆಟ್ಟಿ ಅವರು.

‘ಸರ್ಕಾರದ ನೀತಿಗಳು ಬಹಳ ಚೆನ್ನಾಗಿವೆ. ಅನುಮೋದನೆಗಳು ತ್ವರಿತವಾಗಿ ಸಿಗುತ್ತವೆ. ನಾವು ಇಲ್ಲಿ ನಮ್ಮ ಉದ್ದಿಮೆಯ ಮೇಲೆ ಹೆಚ್ಚು ಗಮನ ಕೊಡಬಹುದು’ ಎಂದು ನವೋದ್ಯಮ ಕಂಪನಿ ಡೀಲ್‌ಶೇರ್‌ನ ಸಹ ಸಂಸ್ಥಾಪಕ ಸೌರ್ಜ್ಯೇಂದು ಮೆಡ್ಡಾ ಅವರು ಹೇಳುತ್ತಾರೆ. ಆದರೆ, ಬೆಂಗಳೂರಿನ ಸಾರ್ವಜನಿಕ ಸಾರಿಗೆ, ನಗರದ ಒಳಗಿನ ರಸ್ತೆ ಜಾಲ ಇನ್ನಷ್ಟು ಚೆನ್ನಾಗಿ ಆಗಬೇಕು ಎಂದು ಬಯಸುತ್ತಾರೆ. ಇವೆರಡು ಇನ್ನಷ್ಟು ಸುಧಾರಣೆ ಕಂಡರೆ ನವೋದ್ಯಮಗಳ ಪಾಲಿಗೆ ಹೆಚ್ಚು ಒಳಿತಾಗುತ್ತದೆ ಎಂಬುದು ಅವರ ಅನಿಸಿಕೆ. ಡೀಲ್‌ಶೇರ್‌ ಕಂಪನಿಯು ಜೈಪುರದಲ್ಲಿ ಆರಂಭವಾದರೂ, ಎರಡು ವರ್ಷಗಳ ಹಿಂದೆ ಬೆಂಗಳೂರಿಗೆ ಸ್ಥಳಾಂತರಗೊಂಡಿದೆ.

‘ಸರ್ಕಾರದ ನೀತಿಯು ನವೋದ್ಯಮಗಳಿಗೆ ಇನ್ನಷ್ಟು ಹಣಕಾಸಿನ ಉತ್ತೇಜನ ಒದಗಿಸಲು, ನವೋದ್ಯಮಗಳಿಗೆ ಬಂಡವಾಳ ಲಭ್ಯತೆಯನ್ನು ಹೆಚ್ಚಿಸಲು ನೆರವಾಗುವಂತೆ ಇರಬೇಕು’ ಎಂದು ಬೆಂಗಳೂರಿನ ನವೋದ್ಯಮ ಸೈವೇರ್‌ನ ಸಹ ಸಂಸ್ಥಾಪಕ ಅಕ್ಷತ್ ಜೈನ್ ಬಯಸುತ್ತಾರೆ. ತಂತ್ರಜ್ಞಾನ ಜಗತ್ತಿನ ನವೋದ್ಯಮಗಳನ್ನು ಬೆಂಬಲಿಸಲು ಇಲ್ಲಿ ಸರ್ಕಾರವೇ ಒಂದು ವೆಂಚರ್ ಕ್ಯಾಪಿಟಲ್‌ ನಿಧಿಯನ್ನು ಆರಂಭಿಸಿದೆ ಎಂಬ ಮೆಚ್ಚುಗೆಯ ಮಾತನ್ನೂ ಅವರು ಹೇಳುತ್ತಾರೆ. ಇನ್‌ಸ್ಟಾಮೊಜೊ ಕಂಪನಿಯ ಸಹಸಂಸ್ಥಾಪಕ ಆಕಾಶ್ ಗೆಹಾನಿ ಅವರು ಕೂಡ ಬೆಂಗಳೂರಿನ ಮೂಲಸೌಕರ್ಯದ ಕುರಿತು ಉಲ್ಲೇಖಿಸುತ್ತಾರೆ. ‘ಒಳ್ಳೆಯ ಮೂಲಸೌಕರ್ಯ ಇಲ್ಲದಿರುವುದು ದೊಡ್ಡ ಹಿನ್ನಡೆ’ ಎಂದು ಅವರು ಹೇಳುತ್ತಾರೆ.

ನವೋದ್ಯಮಗಳಿಗೆ ಹೂಡಿಕೆದಾರರಿಂದ ಬಂಡವಾಳ ಸಿಗುವುದು ಈಗ ತುಸು ಕಷ್ಟವಾಗುತ್ತಿದೆ. ಜಾಗತಿಕ ಅಸ್ಥಿರತೆ ಮತ್ತು ಆರ್ಥಿಕ ಹಿಂಜರಿತದ ಭೀತಿ ಕೂಡ ಇದಕ್ಕೆ ಒಂದು ಕಾರಣ. ಆದರೆ, ಈ ಪರಿಸ್ಥಿತಿ ತಿಳಿಯಾಗುತ್ತದೆ. ನವೋದ್ಯಮಗಳಿಗೆ ಹೂಡಿಕೆ ಮತ್ತೆ ಹೆಚ್ಚಾಗುವುದು ಖಂಡಿತ ಎನ್ನುವ ಅಭಿಪ್ರಾಯವು ಉದ್ಯಮ ಹಾಗೂ ಸರ್ಕಾರದ ಪ್ರಮುಖರಲ್ಲಿ ಇದೆ.

ಕರ್ನಾಟಕ, ಗುಜರಾತ್‌ ಅತ್ಯುತ್ತಮ
ನವೋದ್ಯಮಗಳ ಬೆಳವಣಿಗೆಯ ವಿಚಾರದಲ್ಲಿ ಕರ್ನಾಟಕದ ಸಾಧನೆ ‘ಅತ್ಯುತ್ತಮ’ ಎಂದು ಕೇಂದ್ರ ಸರ್ಕಾರದ ಕೈಗಾರಿಕೆ ಮತ್ತು ಆಂತರಿಕ ವ್ಯಾಪಾರ ಉತ್ತೇಜನ ಇಲಾಖೆಯು (ಡಿಪಿಐಐಟಿ) ಈಚೆಗೆ ಹೇಳಿದೆ.

ವಿವಿಧ ರಾಜ್ಯಗಳಲ್ಲಿ ನವೋದ್ಯಮಕ್ಕೆ ಇರುವ ಪ್ರೋತ್ಸಾಹ, ಪೂರಕ ವಾತಾವರಣ ಮತ್ತು ಇತರ ಕೆಲವು ಅಂಶಗಳನ್ನು ಪರಿಶೀಲಿಸಿ ಇಲಾಖೆಯು ಈ ಶ್ರೇಣಿ ನೀಡಿದೆ. ‘ಅತ್ಯುತ್ತಮ’ ರಾಜ್ಯಗಳ ಪಟ್ಟಿಯಲ್ಲಿ ಕರ್ನಾಟಕ, ಗುಜರಾತ್ ಸ್ಥಾನ ಪಡೆದಿವೆ.

ನವೋದ್ಯಮಗಳಿಗಾಗಿ ಪ್ರತ್ಯೇಕ ಬ್ಯಾಂಕ್‌ ಶಾಖೆ
ದೇಶದಲ್ಲಿ ನವೋದ್ಯಮಗಳ ಹಣಕಾಸಿನ ಅಗತ್ಯಗಳನ್ನು ಪೂರೈಸಲು ಪ್ರತ್ಯೇಕ ಬ್ಯಾಂಕ್‌ ಶಾಖೆ ಇರುವುದು ಬೆಂಗಳೂರಿನಲ್ಲಿ ಮಾತ್ರ. ಭಾರತೀಯ ಸ್ಟೇಟ್ ಬ್ಯಾಂಕ್‌ ಬೆಂಗಳೂರಿನ ಕೋರಮಂಗಲದಲ್ಲಿ ಈಚೆಗೆ ಈ ಶಾಖೆಯನ್ನು ಆರಂಭಿಸಿದೆ.

‘ನವೋದ್ಯಮಗಳ ಹಣಕಾಸಿನ ಅಗತ್ಯಗಳು ಇತರ ಉದ್ಯಮಗಳಿಗಿಂತ ತುಸು ಭಿನ್ನ. ನವೋದ್ಯಮಗಳಿಗಾಗಿನ ಶಾಖೆಯಲ್ಲಿ ಅವುಗಳ ಅಗತ್ಯವನ್ನು ಅರ್ಥ ಮಾಡಿಕೊಳ್ಳಬಲ್ಲ ಸಿಬ್ಬಂದಿ ಇರುತ್ತಾರೆ. ಎಸ್‌ಬಿಐ ಇಲ್ಲಿ ಶಾಖೆ ಆರಂಭಿಸಿರುವುದರ ಹಿಂದೆ ನಮ್ಮ ಒತ್ತಾಯವೂ ಕೆಲಸ ಮಾಡಿದೆ. ಈ ಬಗೆಯ ಶಾಖೆ ಆರಂಭಿಸುವಂತೆ ನಾವು ಇತರ ಬ್ಯಾಂಕ್‌ಗಳ ಜೊತೆಯೂ ಮಾತುಕತೆ ನಡೆಸಲಿದ್ದೇವೆ’ ಎಂದು ಅಶ್ವತ್ಥನಾರಾಯಣ ಹೇಳಿದರು.

‘ಪ್ರತ್ಯೇಕ ಶಾಖೆ ಆರಂಭಿಸುವಂತೆ ಎಸ್‌ಬಿಐಗೆ ಪ್ರಸ್ತಾವ ಸಲ್ಲಿಕೆಯಾಗಿದ್ದು ನಮ್ಮಿಂದಲೇ. ಇಂತಹ ಶಾಖೆ ಆರಂಭಿಸುವ ವಿಚಾರವಾಗಿ ಇತರ ಬ್ಯಾಂಕ್‌ಗಳ ಜೊತೆಯೂ ನಾವು ಸಂಪರ್ಕದಲ್ಲಿದ್ದೇವೆ’ ಎಂದು ರಮಣ ರೆಡ್ಡಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT