ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸುಸ್ಥಿರ ಅಭಿವೃದ್ಧಿ ಗುರಿ 'ಸಾಧನೆ ದುಬಾರಿ'; ಎರಡು ಹೆಜ್ಜೆ ಹಿಂದಕ್ಕಿರಿಸಿದ ಭಾರತ

ಒಳನೋಟ
Last Updated 6 ಜೂನ್ 2021, 19:31 IST
ಅಕ್ಷರ ಗಾತ್ರ

ವಿಶ್ವಸಂಸ್ಥೆಯ ‘ಸುಸ್ಥಿರ ಅಭಿವೃದ್ಧಿ ಗುರಿ’ (ಎಸ್‌ಡಿಜಿ) ಸಾಧನೆಯಲ್ಲಿ ಭಾರತ ಎಡವಿದೆ. ಕಳೆದ ವರ್ಷಕ್ಕಿಂತ ಎರಡು ಶ್ರೇಯಾಂಕ ಕೆಳಗಿಳಿದಿದ್ದು, 117ನೇ ರ‍್ಯಾಂಕ್‌ಗೆ ತೃಪ್ತಿಪಟ್ಟುಕೊಂಡಿದೆ. ‘ಭಾರತದಪರಿಸರ ಸ್ಥಿತಿಗತಿ ವರದಿ2021’ರಲ್ಲಿ ಈ ಅಂಶ ಉಲ್ಲೇಖವಾಗಿದೆ.ಭಾರತವು 100ಕ್ಕೆ ಒಟ್ಟಾರೆ61.9 ಅಂಕಗಳನ್ನು ಪಡೆದಿದ್ದು, ದಕ್ಷಿಣ ಏಷ್ಯಾದ ನಾಲ್ಕು ದೇಶಗಳಾದ ಭೂತಾನ್, ನೇಪಾಳ, ಶ್ರೀಲಂಕಾ ಮತ್ತು ಬಾಂಗ್ಲಾದೇಶಕ್ಕಿಂತ ಕಡಿಮೆ ಅಂಕ ಸಂಪಾದಿಸಿದೆ.

ವಿಶ್ವಸಂಸ್ಥೆಯ 193 ಸದಸ್ಯ ರಾಷ್ಟ್ರಗಳು 2015ರಲ್ಲಿ ರೂಪಿಸಿದ್ದ ‘2030 ಕಾರ್ಯಸೂಚಿ’ಯ ಭಾಗವಾಗಿ ಒಟ್ಟು 17 ಸುಸ್ಥಿರ ಅಭಿವೃದ್ಧಿ ಗುರಿಗಳನ್ನು (ಎಸ್‌ಡಿಜಿ) ನಿಗದಿಪಡಿಸಲಾಗಿದೆ. ಭಾರತದ ಶ್ರೇಯಾಂಕವು 115ರಿಂದ 117ಕ್ಕೆ ಕುಸಿಯಲು ಕಾರಣವಾಗಿರುವ ಎಸ್‌ಡಿಜಿಗಳನ್ನು ವರದಿಯು ಪಟ್ಟಿ ಮಾಡಿದೆ.

ಹಸಿವು ಕೊನೆಗೊಳಿಸುವುದು ಮತ್ತು ಆಹಾರ ಭದ್ರತೆ ಸಾಧಿಸುವುದು (ಎಸ್‌ಡಿಜಿ 2), ಲಿಂಗ ಸಮಾನತೆ ಸಾಧಿಸುವುದು (ಎಸ್‌ಡಿಜಿ 5) ಮತ್ತು ಮೂಲಸೌಕರ್ಯ ನಿರ್ಮಾಣ, ಸುಸ್ಥಿರ ಕೈಗಾರಿಕೀಕರಣ ಉತ್ತೇಜನ ಹಾಗೂ ನಾವೀನ್ಯತೆ ಉತ್ತೇಜಿಸುವ (ಎಸ್‌ಡಿಜಿ 9) ಅಂಶಗಳು ದೇಶಕ್ಕೆ ಸವಾಲಾಗಿವೆ ಎಂದು ವರದಿ ಹೇಳಿದೆ.

ರಾಜ್ಯವಾರು ಸಾಧನೆಯನ್ನು ಗಮನಿಸಿದರೆ, ಜಾರ್ಖಂಡ್ ಮತ್ತು ಬಿಹಾರ 2030ರೊಳಗೆ ಸಾಧಿಸಬೇಕಾದ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ತಲುಪುವ ವಿಚಾರದಲ್ಲಿ ಕೊನೆಯ ಸಾಲಿನಲ್ಲಿ ನಿಂತಿವೆ. ಜಾರ್ಖಂಡ್ ಐದು ಗುರಿಗಳಲ್ಲಿ ಹಾಗೂ ಬಿಹಾರ ಏಳು ಗುರಿಗಳಲ್ಲಿ ಹಿಂದಿವೆ. ಆದರೆ ಕೇರಳ, ಹಿಮಾಚಲ ಪ್ರದೇಶ ಮತ್ತು ಚಂಡೀಗಡ ಗುರಿ ಸಾಧನೆಗೆ ನಿಗದಿಪಡಿಸಿರುವ ಒಟ್ಟಾರೆ ಅಂಕ ಗಳಿಕೆಯಲ್ಲಿ ಉತ್ತಮ ಸಾಧನೆ ಮಾಡಿವೆ ಎಂದು ವರದಿ ತಿಳಿಸಿದೆ.

ಪ್ರಸ್ತುತ ಮತ್ತು ಭವಿಷ್ಯದಲ್ಲಿ ಈ ಭೂಮಂಡಲ ಮತ್ತು ವಿಶ್ವದ ಎಲ್ಲ ಜನರು ಶಾಂತಿ ಮತ್ತು ಸಮೃದ್ಧಿಯನ್ನು ಸಾಧಿಸುವ ನೀಲನಕ್ಷೆಯನ್ನು 2030 ಎಸ್‌ಡಿಜಿ ಒದಗಿಸುತ್ತದೆ.

ಪರಿಸರ ವಿಕೋಪ, ಹವಾಮಾನ, ವಾಯುಮಾಲಿನ್ಯ, ನೈರ್ಮಲ್ಯ ಮತ್ತು ಕುಡಿಯುವ ನೀರು, ಪರಿಸರ ವ್ಯವಸ್ಥೆಯ ಸೇವೆಗಳು, ಜೀವವೈವಿಧ್ಯ ಸೇರಿದಂತೆ ವಿವಿಧ ಸೂಚ್ಯಂಕಗಳ ಮೇಲೆ ನಿಗದಿಪಡಿಸಲಾದ ‘ಪರಿಸರ ಸಾಧನೆ ಸೂಚ್ಯಂಕ’ದ (ಇಪಿಐ) ಪ್ರಕಾರ ಭಾರತವು 180 ದೇಶಗಳ ಪೈಕಿ 168ನೇ ಸ್ಥಾನದಲ್ಲಿದೆ ಎಂದು ವರದಿಯಲ್ಲಿ ತಿಳಿಸಲಾಗಿದೆ.

ಪರಿಸರ ವಿನಾಶದ ಅಪಾಯಗಳಿಂದ ವಿವಿಧ ದೇಶಗಳು ತಮ್ಮ ಜನರನ್ನು ಎಷ್ಟು ಚೆನ್ನಾಗಿ ರಕ್ಷಿಸುತ್ತಿವೆ ಎಂಬುದರ ಸೂಚಕ ವಾಗಿರುವ ‘ಪರಿಸರ ಆರೋಗ್ಯ ವಿಭಾಗ’ದಲ್ಲಿ ಭಾರತದ ಶ್ರೇಯಾಂಕ 172 ಆಗಿದೆ.

ಯೇಲ್ ವಿಶ್ವವಿದ್ಯಾಲಯದ ಇಪಿಐ 2020ರ ವರದಿಯ ಪ್ರಕಾರ, ಭಾರತವು 148ನೇ ಸ್ಥಾನ ಗಳಿಸಿದ್ದು, ಪಾಕಿಸ್ತಾನಕ್ಕಿಂತ21 ಸ್ಥಾನ ಹಿಂದಿದೆ. ‘ಜೀವವೈವಿಧ್ಯ ಮತ್ತು ಆವಾಸಸ್ಥಾನ’ ವಿಭಾಗದಲ್ಲಿ 127ನೇ ಸ್ಥಾನದಲ್ಲಿರುವ ಪಾಕಿಸ್ತಾನವು ನೈಸರ್ಗಿಕ ಪರಿಸರ ವ್ಯವಸ್ಥೆ ಉಳಿಸಿಕೊಳ್ಳುವ ಮತ್ತು ಜೀವವೈವಿಧ್ಯ ರಕ್ಷಿಸುವ ವಿಚಾರದಲ್ಲಿ ಉತ್ತಮವಾಗಿದೆ.

ಗುರಿಗಳು

ಬಡತನ ನಿರ್ಮೂಲನೆ– ಯಾವ ಸ್ವರೂಪದಲ್ಲಿಯೂ ಬಡತನವಿರಬಾರದು. ಸಮಸ್ತ ನಾಗರಿಕರಿಗೂ ಸಾಮಾಜಿಕ ಭದ್ರತೆ ಇರಬೇಕು

ಶೂನ್ಯ ಹಸಿವು– ಹಸಿವಿನಿಂದ ಯಾರೂ ಬಳಲಬಾರದು. ಎಲ್ಲರಿಗೂ ಆಹಾರ ಭದ್ರತೆ ಇರಬೇಕು. ಪೌಷ್ಟಿಕಾಂಶಯುಕ್ತ ಆಹಾರ ದೊರೆಯಬೇಕು. ಸುಸ್ಥಿರ ಕೃಷಿ ನೀತಿಗೆ ಉತ್ತೇಜನ

ಉತ್ತಮ ಆರೋಗ್ಯ– ಎಲ್ಲರಿಗೂ ಉತ್ತಮ ವೈದ್ಯಕೀಯ ಸೌಲಭ್ಯ ದೊರೆಯಬೇಕು. ಎಲ್ಲಾ ವಯಸ್ಸಿನವರು, ವರ್ಗದವರ ಆರೋಗ್ಯ ಉತ್ತಮ ಸ್ಥಿತಿಯಲ್ಲಿ ಇರಬೇಕು

ಗುಣಮಟ್ಟದ ಶಿಕ್ಷಣ– ಎಲ್ಲರನ್ನೂ ಒಳಗೊಂಡ ಶಿಕ್ಷಣ ನೀತಿ. ಜೀವನ ನಿರ್ವಹಣೆಗೆ ಅವಕಾಶಗಳನ್ನು ಒದಗಿಸುವಂತಹ ಗುಣಮಟ್ಟದ ಶಿಕ್ಷಣ ನೀತಿ

ಲಿಂಗ ಸಮಾನತೆ– ಲಿಂಗ ಸಮಾನತೆ ಎಲ್ಲೆಡೆ ಸಾಧ್ಯವಾಗಬೇಕು. ಮಹಿಳೆಯರು ಮತ್ತು ಬಾಲಕಿಯರ ಸಬಲೀಕರಣ

ಶುದ್ಧ ನೀರು ಮತ್ತು ಶುಚಿತ್ವ– ಎಲ್ಲರಿಗೂ ಶುದ್ಧನೀರಿನ ನಿರಂತರ ಲಭ್ಯತೆ ಮತ್ತು ಶುಚಿತ್ವ ನಿರ್ವಹಣೆಗೆ ಅಗತ್ಯವಾದ ಸೌಲಭ್ಯ

ಕೈಗೆಟಕುವ ಶುದ್ಧ ಇಂಧನ– ಎಲ್ಲರಿಗೂ ಕೈಗೆಟಕುವ ಬೆಲೆಯಲ್ಲಿ ಪರಿಸರ ಸ್ನೇಹಿ ಇಂಧನ ದೊರೆಯಬೇಕು

ಗುಣಮಟ್ಟದ ಕೆಲಸ ಮತ್ತು ಆರ್ಥಿಕ ಬೆಳವಣಿಗೆ– ಎಲ್ಲರಿಗೂ ಉತ್ತಮ ಗುಣಮಟ್ಟದ ಕೆಲಸ ದೊರೆಯಬೇಕು. ಎಲ್ಲರನ್ನೂ ಒಳಗೊಳ್ಳುವ ಮತ್ತು ಸುಸ್ಥಿರ ಆರ್ಥಿಕ ಬೆಳವಣಿಗೆ

ಕೈಗಾರಿಕೆ/ಅನ್ವೇಷಣೆ/ಮೂಲಸೌಕರ್ಯ– ಎಲ್ಲರನ್ನೂ ಒಳಗೊಂಡ ಮತ್ತು ಸುಸ್ಥಿರ ಕೈಗಾರಿಕಾ ಅಭಿವೃದ್ಧಿ

ಅಸಮಾನತೆ ನಿರ್ಮೂಲನೆ– ಜನರು/ಜಿಲ್ಲೆಗಳು/ರಾಜ್ಯಗಳು/ದೇಶಗಳ ನಡುವಣ ಅಸಮಾನತೆ ನಿರ್ಮೂಲನೆ

ಸುಸ್ಥಿರ ನಗರ ಮತ್ತು ಸಮುದಾಯಗಳು– ಜನವಸತಿ ಪ್ರದೇಶಗಳು ಸುರಕ್ಷಿತ ಮತ್ತು ಸುಸ್ಥಿರವಾಗಿರಬೇಕು

ಹೊಣೆಯಾಧಾರಿತ ಬಳಕೆ ಮತ್ತು ಉತ್ಪಾದನೆ– ಎಲ್ಲಾ ಸರಕು ಮತ್ತು ಸೇವೆಗಳ ಸುಸ್ಥಿರವಾದ ಉತ್ಪಾದನಾ ನೀತಿ ಮತ್ತು ಜವಾಬ್ದಾರಿಯುತ ಬಳಕೆ ಉತ್ತೇಜನ

ಹವಾಮಾನ– ಹವಾಮಾನ ವೈಪರೀತ್ಯ ಮತ್ತು ಅದರ ಪರಿಣಾಮಗಳ ನಿಯಂತ್ರಣಕ್ಕೆ ತಕ್ಷಣದ ಕ್ರಮಗಳು

ಜಲಚರ ಜೀವಿಗಳು– ಜಲಚರ ಜೀವಿಗಳ ಸಂರಕ್ಷಣೆ ಮತ್ತು ಸಮುದ್ರದ ಸಂಪನ್ಮೂಲಗಳ ಸುಸ್ಥಿರ ಬಳಕೆ

ನೆಲಜೀವಿಗಳು– ಪರಿಸರ ಸಂರಕ್ಷಣೆ, ಜೀವವೈವಿಧ್ಯ ಸಂರಕ್ಷಣೆ

ಶಾಂತಿ, ನ್ಯಾಯ ಮತ್ತು ಪ್ರಬಲ ಸಂಸ್ಥೆಗಳು– ಸಮುದಾಯಗಳಲ್ಲಿ ಶಾಂತಿಯನ್ನು ಉತ್ತೇಜಿಸಬೇಕು. ಎಲ್ಲರಿಗೂ ನ್ಯಾಯ ಕೈಗೆಟುಕಬೇಕು

ಕೇರಳ

70 -2019ರಲ್ಲಿನ ಅಂಕಗಳು

75-2020ರಲ್ಲಿನ ಅಂಕಗಳು

ಎಲ್ಲಾ 16 ಗುರಿಗಳಲ್ಲಿ ಹೆಚ್ಚು ಪ್ರಗತಿ ಸಾಧಿಸಿದ ರಾಜ್ಯಗಳ ಪಟ್ಟಿಯಲ್ಲಿ ಕೇರಳ ಮೊದಲ ಸ್ಥಾನದಲ್ಲಿದೆ. ಗರಿಷ್ಠ 100 ಅಂಕಗಳಲ್ಲಿ ಕೇರಳವು ಒಟ್ಟು 75 ಅಂಕಗಳನ್ನು ಪಡೆದಿದೆ. ಉತ್ತಮ ಪ್ರಗತಿ ಸಾಧಿಸಿದ್ದರೂ, ಸುಧಾರಿಸಿಕೊಳ್ಳಬೇಕಾದ ಅಂಶಗಳನ್ನು ಪಟ್ಟಿ ಮಾಡಲಾಗಿದೆ

*ಗ್ರಾಮೀಣ ಉದ್ಯೋಗವಕಾಶಕ್ಕೆ ಅವಕಾಶ ನೀಡುವ ನರೇಗಾ ಯೋಜನೆ ನಿರೀಕ್ಷಿತ ಪ್ರಗತಿ ಸಾಧಿಸಬೇಕಿದೆ

*ಮಹಿಳೆಯರ ಮೇಲೆ ಎಸಗಲಾದ ಅಪರಾಧ ಕೃತ್ಯಗಳ ಪ್ರಮಾಣದಲ್ಲಿ ನಿರೀಕ್ಷಿತ ಇಳಿಕೆ ಸಾಧ್ಯವಾಗಿಲ್ಲ. ಮಹಿಳೆಯರಿಗೆ ಸಮಾನ ಕೆಲಸಕ್ಕೆ ಸಮಾನ ವೇತನ ದೊರೆಯುತ್ತಿಲ್ಲ

*ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯವಿರುವ ಶಾಲೆಗಳ ಸಂಖ್ಯೆ ಸುಧಾರಿಸಬೇಕಿದೆ

*ಇಂಟರ್ನೆಟ್ ಬಳಕೆದಾರರ ಸಂಖ್ಯೆ ಇಳಿಕೆಯಾಗಿದೆ

*ಘನತ್ಯಾಜ್ಯ, ಕೊಳಚೆನೀರು ನಿರ್ವಹಣೆ ಸುಧಾರಿಸಬೇಕಿದೆ

*ಒಟ್ಟು ಅಪರಾಧಗಳ ಸಂಖ್ಯೆ ಏರಿಕೆಯಾಗಿದೆ

ಕರ್ನಾಟಕ

66-2019ರಲ್ಲಿ ಪಡೆದ ಅಂಕಗಳು

72-2020ರಲ್ಲಿ ಪಡೆದ ಅಂಕಗಳು

100ಕ್ಕೆ 72 ಅಂಕಗಳನ್ನು ಪಡೆದಿರುವ ಕರ್ನಾಕಟವು ಗೋವಾ, ಆಂಧ್ರಪ್ರದೇಶ ಮತ್ತು ಉತ್ತರಾಖಂಡದ ಜತೆ ಜಂಟಿಯಾಗಿ ಮೂರನೇ ಸ್ಥಾನವನ್ನು ಪಡೆದುಕೊಂಡಿದೆ.ಈ ಗುರಿಗಳನ್ನು ಸಾಧಿಸುವಲ್ಲಿ ಕರ್ನಾಟಕವು ಒಟ್ಟಾರೆ ತನ್ನ ಅಂಕಗಳನ್ನು ಉತ್ತಮಪಡಿಸಿಕೊಂಡಿದ್ದರೂ, ಕೆಲವು ಗುರಿಗಳಲ್ಲಿ ಋಣಾತ್ಮಕ ಪ್ರಗತಿ ಸಾಧಿಸಿದೆ. ಈ ಕಾರಣದಿಂದಲೇ ರಾಜ್ಯದ ಒಟ್ಟು ಸ್ಥಿತಿ ಗರಿಷ್ಠಮಟ್ಟದಲ್ಲಿ ಪ್ರಗತಿ ದಾಖಲಿಸಲು ವಿಫಲವಾಗಿದೆ. ಋಣಾತ್ಮಕ ಪ್ರಗತಿ ಸಾಧಿಸಿದ ಕ್ಷೇತ್ರಗಳ ಪಟ್ಟಿ ಈ ಮುಂದಿನಂತಿದೆ

*ರಾಜ್ಯದ ಲಿಂಗಾನುಪಾತ 2019ರಲ್ಲಿ 1,000 ಬಾಲಕರಿಗೆ 929 ಬಾಲಕಿಯರು; 2020ರಲ್ಲಿ 1,000 ಬಾಲಕರಿಗೆ ಬಾಲಕಿಯರ ಸಂಖ್ಯೆ 924ಕ್ಕೆ ಇಳಿದಿದೆ

*ಹೊಸ ಶಾಲೆಗಳನ್ನು ಆರಂಭಿಸಲಾಗಿದ್ದರೂ, ಬಾಲಕಿಯರಿಗೆ ಪ್ರತ್ಯೇಕ ಶೌಚಾಲಯ ಇರುವ ಶಾಲೆಗಳ ಪ್ರಮಾಣ ಇಳಿಕೆಯಾಗಿದೆ

*ಕೈಗಾರಿಕೆಗಳಲ್ಲಿ ಮಾಲಿನ್ಯ ನಿಯಂತ್ರಣ ನಿಯಮಗಳ ಪಾಲನೆ ಗರಿಷ್ಠಮಟ್ಟದಲ್ಲಿ ಇಲ್ಲ. ಕೊಳಚೆ ನೀರಿನ ಪ್ರಮಾಣ ಹೆಚ್ಚಾಗಿದ್ದು, ಕೊಳಚೆ ನೀರಿನ ಸಂಸ್ಕರಣ ಘಟಕಗಳ ಸಂಖ್ಯೆ ಏರಿಕೆಯಾಗಿಲ್ಲ

*ಮಹಿಳಾ ಜನ ಪ್ರತಿನಿಧಿಗಳ ಪ್ರಮಾಣ ಇಳಿಕೆಯಾಗಿದೆ

*ಮಕ್ಕಳ ಮೇಲೆ ಎಸಗಲಾದ ಅಪರಾಧ ಪ್ರಕರಣಗಳ ಪ್ರಮಾಣ ಏರಿಕೆಯಾಗಿದೆ

ಆಧಾರ: ನೀತಿ ಆಯೋಗದ ಎಸ್‌ಡಿಜಿ ಇಂಡೆಕ್ಸ್ ಮತ್ತು ಡ್ಯಾಷ್‌ಬೋರ್ಡ್‌ 2021

ಜಾರ್ಖಂಡ್‌

53-2019ರಲ್ಲಿ ಪಡೆದ ಅಂಕಗಳು

56-2020ರಲ್ಲಿ ಪಡೆದ ಅಂಕಗಳು

ಸುಸ್ಥಿರ ಅಭಿವೃದ್ಧಿ ಗುರಿಗಳಲ್ಲಿ ಕನಿಷ್ಠ ಅಂಕ ಪಡೆದ ರಾಜ್ಯಗಳ ಪಟ್ಟಿಯಲ್ಲಿ ಜಾರ್ಖಂಡ್ ಕೊನೆಯಿಂದ ಎರಡನೇ ಸ್ಥಾನದಲ್ಲಿದೆ. 8 ಗುರಿಗಳಲ್ಲಿ ರಾಜ್ಯವು 60ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದೆ. ಒಂದು ಗುರಿಯಲ್ಲಿ ಮಾತ್ರವೇ 80ಕ್ಕಿಂತ ಹೆಚ್ಚು ಅಂಕ ಪಡೆದಿದೆ. 2019ರ ಸ್ಥಿತಿಗೆ ಹೋಲಿಸಿದರೆ 2020ರಲ್ಲಿನ ಪ್ರಗತಿಯೂ ಸಮಾಧಾನಕರವಾಗಿಲ್ಲ ಎಂದು ವರದಿಯಲ್ಲಿ ಹೇಳಲಾಗಿದೆ. ಇದರ ಮಧ್ಯೆ ಹಲವು ಅಂಶಗಳಲ್ಲಿ ರಾಜ್ಯವು ಋಣಾತ್ಮಕ ಪ್ರಗತಿ ಸಾಧಿಸಿದೆ

* ಮಹಿಳೆಯರ ಮೇಲೆ ಎಸಗಲಾದ ಅಪರಾಧ ಕೃತ್ಯಗಳ ಪ್ರಮಾಣ ಏರಿಕೆಯಾಗಿದೆ

* ರಾಜ್ಯದಲ್ಲಿ ಮಹಿಳಾ ಜನಪ್ರತಿನಿಧಿಗಳ ಪ್ರಮಾಣವೂ ಇಳಿಕೆಯಾಗಿದೆ

* ರಾಜ್ಯದಲ್ಲಿ ಅರಣ್ಯದ ಪ್ರಮಾಣವೂ ಕಡಿಮೆಯಾಗಿದೆ

* ಮಕ್ಕಳ ಮೇಲೆ ಎಸಗಲಾದ ಅಪರಾಧ ಕೃತ್ಯಗಳ ಪ್ರಮಾಣ ಏರಿಕೆಯಾಗಿದೆ

* ನವೀಕರಿಸಬಹುದಾದ ಮೂಲದ ವಿದ್ಯುತ್‌ ಉತ್ಪಾದನೆ ಪ್ರಮಾಣ ಇಳಿಕೆಯಾಗಿದೆ

ಬಿಹಾರ

50-2019ರಲ್ಲಿ ಪಡೆದ ಅಂಕಗಳು

52-2020ರಲ್ಲಿ ಪಡೆದ ಅಂಕಗಳು

ಈ ಗುರಿಗಳನ್ನು ಸಾಧಿಸುವಲ್ಲಿ ನಿಗದಿಪಡಿಸಲಾದ ಅಂಕಗಳಲ್ಲಿ ಅತ್ಯಂತ ಕಡಿಮೆ ಅಂಕಗಳನ್ನು ಪಡೆದ ರಾಜ್ಯಗಳ ಪಟ್ಟಿಯಲ್ಲಿ ಬಿಹಾರ ಕೊನೆಯ ಸ್ಥಾನದಲ್ಲಿದೆ. 10 ಗುರಿಗಳಲ್ಲಿ ಬಿಹಾರವು 60ಕ್ಕಿಂತ ಕಡಿಮೆ ಅಂಕಗಳನ್ನು ಪಡೆದಿದೆ. ಎರಡು ಗುರಿಗಳಲ್ಲಿ ಋಣಾತ್ಮಕ ಪ್ರಗತಿ ಸಾಧಿಸಿದೆ.

*ರಾಜ್ಯದಲ್ಲಿ ವೈದ್ಯರು, ದಾದಿಯರ ಸಂಖ್ಯೆ ಕಡಿಮೆ ಇದೆ

*ಮಹಿಳೆಯರ ಮೇಲೆ ಎಸಗಲಾದ ಅಪರಾಧ ಕೃತ್ಯಗಳ ಪ್ರಮಾಣ ಏರಿಕೆಯಾಗಿದೆ

*ದುಡಿಯುವ ಮಹಿಳೆಯರ ಪ್ರಮಾಣ ಇಳಿಕೆಯಾಗಿದೆ

*ಲಿಂಗಾನುಪಾತವು 1,000:900ರಿಂದ 1,000:895ಕ್ಕೆ ಇಳಿಕೆಯಾಗಿದೆ

*ಕೊಳಚೆ ನಿರ್ಮೂಲನಾ ನಿಯಮಗಳ ಅನುಷ್ಠಾನ ಪರಿಣಾಮಕಾರಿಯಾಗಿಲ್ಲ

*ನಿರುದ್ಯೋಗದ ಪ್ರಮಾಣ ಏರಿಕೆಯಾಗಿದೆ. ಮೊಬೈಲ್ ಬಳಕೆದಾರರ ಸಂಖ್ಯೆ ಇಳಿಕೆಯಾಗಿದೆ

*ಪ್ರತ್ಯೇಕ ಶೌಚಾಲಯ ಇರುವ ಮನೆಗಳ ಪ್ರಮಾಣ ಇಳಿಕೆಯಾಗಿದೆ

*ಅರಣ್ಯದ ಪ್ರಮಾಣ ಇಳಿಕೆಯಾಗಿದೆ

*ಮಕ್ಕಳ ಮೇಲೆ ಎಸಗಲಾದ ಅಪರಾಧ ಕೃತ್ಯಗಳ ಪ್ರಮಾಣ ಏರಿಕೆಯಾಗಿದೆ

ಆಧಾರ : ಪಿಟಿಐ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT