ಸೋಮವಾರ, ಜನವರಿ 17, 2022
27 °C

ಒಳನೋಟ | ಸಿರಿಧಾನ್ಯ: ಬೇಕು ಮಾರುಕಟ್ಟೆ ಬಲ

ವಿನಾಯಕ ಭಟ್‌ Updated:

ಅಕ್ಷರ ಗಾತ್ರ : | |

ದಾವಣಗೆರೆ: ‘ನಾವು ಬರಿ ರೈತರಾಗಿ ಯೋಚಿಸುತ್ತಿದ್ದರೆ ಬಡವರಾಗಿಯೇ ಉಳಿಯುತ್ತೇವೆ; ಸಾಲ ಮಾಡಿ ನೇಣು ಹಾಕಿಕೊಳ್ಳಬೇಕಾಗುತ್ತದೆ. ಅದರ ಬದಲು ಒಬ್ಬ ಉದ್ಯಮಿಯಂತೆ ಯೋಚಿಸಿದರೆ ಕೃಷಿಯಲ್ಲೂ ಲಾಭ ಕಾಣಬಹುದು. ನಮ್ಮ ಉತ್ಪನ್ನಗಳಿಗೆ ನಾವೇ ಮಾರುಕಟ್ಟೆ ಕಂಡುಕೊಂಡರೆ ಸಂಕಷ್ಟವೂ ನಿವಾರಣೆಯಾಗಲಿದೆ’

– ಇದು ಚಿತ್ರದುರ್ಗ ಜಿಲ್ಲೆಯ ಹೊಸದುರ್ಗ ತಾಲ್ಲೂಕಿನ ಆದ್ರಿಕಟ್ಟೆ ಗ್ರಾಮದಲ್ಲಿ ಸಿರಿಧಾನ್ಯ ಬೆಳೆಯುವ ರೈತ ಮಹಿಳೆ ಎಂ.ಶೋಭಾ ಅವರ ಮನದಾಳದ ಮಾತು.

‘ರಾಗಿ ಬೆಳೆಯಲು ನಾಲ್ಕು ತಿಂಗಳು ಭರ್ಜರಿ ಕೆಲಸ ಮಾಡುತ್ತೇವೆ. ಆಮೇಲೆ ಆರು ತಿಂಗಳು ಸುಮ್ಮನೆ ಕುಳಿತರೆ ಬಡವರಾಗದೇ ಇರುತ್ತೇವೆಯೇ? ವರ್ಷದ 12 ತಿಂಗಳೂ ಕೆಲಸ ಮಾಡಿದಾಗ ಮಾತ್ರ ಸ್ವಾವಲಂಬಿ ಬದುಕು ಕಾಣಬಹುದು. ನಾವು ಬೆಳೆದ ಉತ್ಪನ್ನಗಳಿಗೆ ಮೌಲ್ಯವರ್ಧನೆ ಮಾಡದಿದ್ದರೆ ಆರು ತಿಂಗಳು ಕೃಷಿ ಮಾಡಿ, ಉಳಿದ ಆರು ತಿಂಗಳು ಕೈಕಟ್ಟಿಕೊಂಡು ಕೂರಬೇಕಾಗುತ್ತದೆ. ನಾವು ಶ್ರಮಪಟ್ಟು ಬೆಳೆದಿದ್ದನ್ನು ಖರೀದಿಸಿದ ಮತ್ಯಾರೋ ಲಾಭ ಮಾಡಿಕೊಳ್ಳುತ್ತಾರೆ’ ಎನ್ನುತ್ತಾರೆ ಶೋಭಾ.

ಇತರ ಕೃಷಿ ಬೆಳೆಯ ಜೊತೆಗೆ ಸಿರಿಧಾನ್ಯವನ್ನೂ ಬೆಳೆಯುತ್ತಿರುವ ಶೋಭಾ ಅವರು ಸಾಮೆ, ನವಣೆಯನ್ನು ಸಂಸ್ಕರಿಸಿ ತಾವೇ ಮಾರಾಟ ಮಾಡುವ ವ್ಯವಸ್ಥೆಯನ್ನು ಕಂಡುಕೊಂಡಿದ್ದಾರೆ. ಜೊತೆಗೆ ಸಿರಿಧಾನ್ಯದಿಂದ ಹಪ್ಪಳ–ಸಂಡಿಗೆಯನ್ನೂ ಮಾಡಿ ಮಾರುತ್ತಿದ್ದಾರೆ. ‘ಸಿರಿಧಾನ್ಯವನ್ನು ಬೆಳೆದು ಬೀಜವನ್ನಷ್ಟೇ ಮಾರಿದರೆ ಹೆಚ್ಚೆನೂ ಲಾಭ ಸಿಗುವುದಿಲ್ಲ; ಅದನ್ನು ಸಂಸ್ಕರಿಸಿ ಮಾರಾಟ ಮಾಡಿದರೆ ಮಾತ್ರ ಒಳ್ಳೆಯ ಲಾಭ ಪಡೆಯಬಹುದು’ ಎಂಬುದು ಅವರ ಅನುಭವದ ಮಾತು.

‘ಸಿರಿಧಾನ್ಯ ಬೆಳೆಯಲು ರಾಸಾಯನಿಕ ಗೊಬ್ಬರ, ಕೀಟನಾಶಕ ಬೇಕಾಗಿಲ್ಲ. ಹೀಗಾಗಿ ಕೂಲಿ ವೆಚ್ಚ ಸೇರಿ ಒಂದು ಎಕರೆ ಸಿರಿಧಾನ್ಯ ಬೆಳೆಯಲು ₹ 10 ಸಾವಿರದಿಂದ ₹ 12 ಸಾವಿರ ವೆಚ್ಚವಾಗಲಿದೆ. ಎಕರೆಗೆ 6ರಿಂದ 8 ಕ್ವಿಂಟಲ್‌ ಬೀಜ ಸಿಗುತ್ತದೆ. ಬೀಜವನ್ನೇ ಮಾರಿದರೆ ಒಂದು ಕೆ.ಜಿಗೆ ₹ 30ರಿಂದ ₹ 40ರ ಒಳಗೆ ಸಿಗುತ್ತದೆ. ನಾವು ಸಾಮೆಯನ್ನು ಬೇಯಿಸಿ, ಒಣಗಿಸಿಟ್ಟುಕೊಳ್ಳುತ್ತೇವೆ. ಬೇಡಿಕೆಗೆ ತಕ್ಕಂತೆ ಅಕ್ಕಿ (ಸಂಸ್ಕರಿತ ಸಿರಿಧಾನ್ಯ) ಮಾಡಿ ಮಾರುತ್ತಿದ್ದೇವೆ. ಒಂದು ಕ್ವಿಂಟಲ್‌ ಬೀಜವನ್ನು ಸಂಸ್ಕರಿಸಿದರೆ ಸುಮಾರು 45 ಕೆ.ಜಿ. ಅಕ್ಕಿ ಸಿಗುತ್ತದೆ. ಒಂದು ಕೆ.ಜಿ. ಅಕ್ಕಿಯನ್ನು ₹ 150ರಿಂದ ₹ 200ರವರೆಗೂ ಮಾರಾಟ ಮಾಡುತ್ತೇವೆ. ಅಕ್ಕಿ ಮಾರಾಟ ಆಗದೇ ಉಳಿದರೆ ಹಪ್ಪಳ–ಸಂಡಿಗೆಯಂತಹ ಉಪ ಉತ್ಪನ್ನಗಳನ್ನು ಮಾಡುತ್ತಿದ್ದೇವೆ. ಇದರಿಂದ ವರ್ಷಪೂರ್ತಿ ಮನೆಯ ಮಂದಿಗೆ ಕೆಲಸ ಇರುತ್ತದೆ. ಜೊತೆಗೆ ಒಳ್ಳೆಯ ಲಾಭವೂ ಸಿಗುತ್ತಿದೆ’ ಎಂದು ಶೋಭಾ ಮುಗುಳ್ನಕ್ಕರು.

‘ಮನೆಯವರೆಲ್ಲ ಸೇರಿಕೊಂಡು ಸಿರಿಧಾನ್ಯ ಬೆಳೆದರೆ ಎಕರೆಗೆ ಖರ್ಚು ತೆಗೆದು ₹ 20 ಸಾವಿರ ಸಿಗುತ್ತದೆ. ನಾವೇ ಅಕ್ಕಿ ಮಾಡಿಸಿ ಮಾರಾಟ ಮಾಡಿದರೆ ಇನ್ನೂ ಹೆಚ್ಚಿನ ಲಾಭ ಪಡೆಯಬಹುದು. ಅಕ್ಕಿ ಮಾಡಿಸಿದ ಒಂದೆರಡು ತಿಂಗಳಲ್ಲಿ ಮಾರಾಟ ಆಗದಿದ್ದರೆ ಹುಳು ಕಾಣಿಸಿಕೊಳ್ಳುತ್ತದೆ. ಸರ್ಕಾರ ಸಿರಿಧಾನ್ಯ ಮೇಳಗಳನ್ನು ಆಗಾಗ ಆಯೋಜಿಸಿದರೆ ರೈತರಿಗೆ ಅನುಕೂಲವಾಗಲಿದೆ. ಎನ್‌ಜಿಒಗಳ ಮೂಲಕ ಸ್ಥಳೀಯವಾಗಿ ಮಾರುಕಟ್ಟೆ ಕಲ್ಪಿಸಿ ರೈತರಿಗೆ ಅನುಕೂಲ ಮಾಡಿಕೊಡಬೇಕು’ ಎಂಬುದು ವಿಜಯನಗರ ಜಿಲ್ಲೆಯ ಹೂವಿನಹಡಗಲಿಯ ಉತ್ತಂಗಿ ಗ್ರಾಮದ ರೈತ ಕಾಟ್ರಹಳ್ಳಿ ಕಲ್ಲಪ್ಪ ಅವರ ಬೇಡಿಕೆ.

‘ಮಳೆಯಾಶ್ರಿತ ಒಣಭೂಮಿಯಲ್ಲಿ ಹೆಚ್ಚಿನ ಆರೈಕೆ ಇಲ್ಲದೇ ಸಿರಿಧಾನ್ಯ ಬೆಳೆಯುತ್ತದೆ. ಸರ್ಕಾರ ಪ್ರೋತ್ಸಾಹಧನವನ್ನೂ ನೀಡುತ್ತಿದೆ. ಖರ್ಚು ಕಡಿಮೆ ಇರುವುದರಿಂದ ಬೆಳೆ ಕೈಕೊಟ್ಟರೂ ಹೆಚ್ಚಿನ ನಷ್ಟವಂತೂ ಆಗುವುದಿಲ್ಲ. ಸಿರಿಧಾನ್ಯ ಬೀಜವನ್ನು ಮಿಲ್‌ಗೆ ತೆಗೆದುಕೊಂಡು ಹೋಗಿ ಮಾರಿದರೆ ಒಂದು ಕೆ.ಜಿ.ಗೆ ₹ 30ರಿಂದ ₹ 35ರವರೆಗೆ ಸಿಗುತ್ತದೆ. ಅದರ ಬದಲು ಅಕ್ಕಿ ಮಾಡಿ ಮಾರಿದರೆ ಕನಿಷ್ಠ ₹ 80ರಿಂದ ₹ 100 ಸಿಗುತ್ತದೆ. ಹೀಗಾಗಿ ಮನೆಯಲ್ಲೇ ಮಿಕ್ಸರ್‌ನಲ್ಲಿ ಅಕ್ಕಿ ಮಾಡಿ ಚಿತ್ರದುರ್ಗ–ದಾವಣಗೆರೆಗೆ ತೆಗೆದುಕೊಂಡು ಹೋಗಿ ಮಾರಾಟ ಮಾಡುತ್ತಿದ್ದೇವೆ. ಬರೀ ಬೀಜವನ್ನು ಮಾರಾಟ ಮಾಡುತ್ತೇವೆ ಎಂದರೆ ನಮ್ಮ ಊಟದ ಖರ್ಚಷ್ಟೇ ಹುಟ್ಟುತ್ತದೆ’ ಎನ್ನುತ್ತಾರೆ ಚಳ್ಳಕೆರೆಯ ರೈತ ದಯಾನಂದಮೂರ್ತಿ.

ಭರವಸೆಯ ಬೆಳಕಾದ ‘ಭೂಸಿರಿ ಮಿಲೆಟ್ಸ್‌’

ಹಾವೇರಿ ಜಿಲ್ಲೆಯ ಸಂಗೂರಿನಲ್ಲಿ ರೈತರೇ ಸೇರಿಕೊಂಡು ಸ್ಥಾಪಿಸಿದ ‘ಭೂಸಿರಿ ಮಿಲೆಟ್ಸ್‌ ಫಾರ್ಮರ್ಸ್‌ ಪ್ರೊಡ್ಯೂಸರ್‌ ಕಂಪನಿ’ಯು ಸಿರಿಧಾನ್ಯ ಬೆಳೆಯುವ ರೈತರ ಪಾಲಿಗೆ ಭರವಸೆಯಾಗಿದೆ.

ಸುಮಾರು 1,200 ರೈತರು ಬೆಳೆಯುವ ಸಿರಿಧಾನ್ಯಗಳನ್ನು ಖರೀದಿಸುತ್ತಿರುವ ‘ಭೂಸಿರಿ ಮಿಲೆಟ್ಸ್‌’ ಕಂಪನಿಯು, ಧಾನ್ಯವನ್ನು ಸಂಸ್ಕರಿಸಿ ದೇಶದ 20 ರಾಜ್ಯಗಳಲ್ಲಿ ಮಾರಾಟ ಮಾಡುವ ಸಂಪರ್ಕ ಜಾಲವನ್ನು ಸೃಷ್ಟಿಸಿಕೊಂಡಿದೆ.

‘ಉತ್ತರ ಕರ್ನಾಟಕದ ರೈತರಿಂದ ಸಿರಿಧಾನ್ಯಗಳನ್ನು ಖರೀದಿಸುತ್ತಿದ್ದೇವೆ. ಸಣ್ಣ ರೈತರು ಸಿರಿಧಾನ್ಯಗಳನ್ನು ಸಂಸ್ಕರಿಸಿ ಮಾರಾಟ ಮಾಡುವುದು ಕಷ್ಟದ ಕೆಲಸ. ರೈತರೇ ಸೇರಿಕೊಂಡು ಕಂಪನಿ ಮಾಡಿಕೊಂಡು ಒಂದು ಕಡೆ ಸಂಸ್ಕರಿಸಿ ಮಾರಾಟ ಮಾಡುವುದರಿಂದ ಬ್ರ್ಯಾಂಡ್‌ ಇಮೇಜ್‌ ಸಿಗಲಿದೆ. ಗುಣಮಟ್ಟವನ್ನೂ ಕಾಯ್ದುಕೊಳ್ಳಲು ಸಾಧ್ಯ’ ಎನ್ನುತ್ತಾರೆ ಸಿರಿಧಾನ್ಯ ಬೆಳೆಯುವ ರೈತರೂ ಆಗಿರುವ ‘ಭೂಸಿರಿ ಮಿಲೆಟ್ಸ್‌’ ಕಂಪನಿಯ ಸಿಇಒ ಚಂದ್ರಕಾಂತ ಸಂಗೂರು.

 

****

ಕೋವಿಡ್‌ ಬಂದ ಬಳಿಕ ಸಿರಿಧಾನ್ಯಗಳಿಗೆ ಬೇಡಿಕೆ ಹೆಚ್ಚಾಗಿದೆ. ಸರ್ಕಾರಿ ಶಾಲೆಗಳಲ್ಲಿ ವಾರಕ್ಕೆ ಎರಡು ದಿನ ಮಧ್ಯಾಹ್ನದ ಬಿಸಿಯೂಟದಲ್ಲಿ ಸಿರಿಧಾನ್ಯ ಬಳಕೆ ಮಾಡಿದರೆ ಬೆಳೆಗಾರರಿಗೂ ಅನುಕೂಲವಾಗಲಿದೆ. 

-ಎಂ. ಶೋಭಾ, ರೈತ ಮಹಿಳೆ, ಆದ್ರಿಕಟ್ಟೆ, ಹೊಸದುರ್ಗ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು