ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಜೆಎನ್‌ಯುನಲ್ಲಿ ಹೊಳೆವ ಕನ್ನಡದ ಘನತೆ

ದೇಶದ ರಾಜಧಾನಿಯಲ್ಲಿ ಕರ್ತವ್ಯ ನಿರತ ‘ಕನ್ನಡ ಭಾಷೆ ಪೀಠ’
Last Updated 28 ಡಿಸೆಂಬರ್ 2019, 22:30 IST
ಅಕ್ಷರ ಗಾತ್ರ

ಬಳ್ಳಾರಿ: ಅಧ್ಯಯನ ಪೀಠಗಳ ಹೊಣೆಗಾರಿಕೆಯಿಂದ ನುಣುಚಿಕೊಳ್ಳಲು ಅನುದಾನ ಮತ್ತು ಸೌಕರ್ಯದ ಕೊರತೆಯನ್ನು ಮುಂದೊಡ್ಡುವ ಪರಿಪಾಠ ಕರ್ನಾಟಕದಲ್ಲಿ ಸಹಜ ನಡೆಯಾಗಿದೆ. ಇಂಥ ಸನ್ನಿವೇಶದಲ್ಲಿ, ಕನ್ನಡಿಗರು ಅಲ್ಪಸಂಖ್ಯಾತರಾಗಿರುವ ದೆಹಲಿಯ ಜವಾಹರಲಾಲ್‌ ನೆಹರು ವಿಶ್ವವಿದ್ಯಾಲಯದ ಕನ್ನಡ ಭಾಷೆ ಪೀಠದ ಪ್ರೊ.ಪುರುಷೋತ್ತಮ ಬಿಳಿಮಲೆ ಪೀಠದ ನಿರ್ವಹಣೆಯ ಶ್ರೇಷ್ಠ ಮಾದರಿಯಾಗಿ ಕಾಣಿಸುತ್ತಾರೆ. ಪೀಠವು ಅಲ್ಲಿ ಕರ್ನಾಟಕವನ್ನೂ, ಕನ್ನಡ ಸಾಹಿತ್ಯ–ಸಂಸ್ಕೃತಿಯನ್ನೂ ಪ್ರತಿನಿಧಿಸುತ್ತಿದೆ.

ದೆಹಲಿ ಕನ್ನಡಿಗರ ಸಂಘದ ಅಧ್ಯಕ್ಷರೂ ಆಗಿದ್ದ ಬಿಳಿಮಲೆ, ಜೆಎನ್‌ಯುನಲ್ಲಿ ಕನ್ನಡ ಪೀಠ ಆರಂಭವಾಗಬೇಕು ಎಂದು ಹೋರಾಟ ನಡೆಸಿದ್ದವರು. ಹೋರಾಟದ ವೇಳೆಗೆ, ದೆಹಲಿ ವಿಶ್ವವಿದ್ಯಾಲಯದಲ್ಲಿದ್ದ ಕನ್ನಡ ವಿಭಾಗವು ಸಿ.ಎ. ಸತ್ಯಾನಂದ ಅವರ ನಿಧನದ ಬಳಿಕ ಬಾಗಿಲು ಮುಚ್ಚಿತ್ತು. ಅದನ್ನು ಆರಂಭಿಸಬೇಕೆಂಬ ದನಿಗಳೂ ಇರಲಿಲ್ಲ.

ಅಂಥ ಸಂದರ್ಭದಲ್ಲಿ ನಡೆದ ಹೋರಾಟದ ಫಲವಾಗಿ, ಕನ್ನಡ ಸಂಸ್ಕೃತಿ ಇಲಾಖೆ ಮತ್ತು ಜೆಎನ್‌ಯು ನಡುವೆ ಆದ ಒಪ್ಪಂದದ ಮೇರೆಗೆ ಜೆಎನ್‌ಯು ಭಾರತೀಯ ಭಾಷಾ ಕೇಂದ್ರದಲ್ಲಿ ಕನ್ನಡ ಭಾಷೆ ಪೀಠವು 2015ರ ಅಕ್ಟೋಬರ್‌ನಿಂದ ಶುರುವಾಗಿ ನಾಲ್ಕು ವರ್ಷ ಪೂರೈಸಿದೆ. ಪೀಠ ಎಂದರೆ ಬೇರೇನಿಲ್ಲ. ಕೇಂದ್ರದ ಬೃಹತ್‌ ಕಟ್ಟಡದ ಒಂದು ಕೊಠಡಿಯಷ್ಟೇ. ಅಲ್ಲಿಂದಲೇ ಕನ್ನಡದ ಘನತೆ ಹರಳುಗಟ್ಟುತ್ತಿದೆ. ಅದು, ಭಾರತೀಯ ಭಾಷೆಗಳಾದ ಹಿಂದಿ, ಉರ್ದು ಮತ್ತು ತಮಿಳು ಅಧ್ಯಯನ ಪೀಠಗಳ ಜೊತೆಗೆ ಕನ್ನಡದ ಸಾಂಗತ್ಯವೂ ಹೌದು.

ಒಪ್ಪಂದದ ಪ್ರಕಾರ ಇಲಾಖೆಯು ಪ್ರತಿ ವರ್ಷ ₹43 ಲಕ್ಷದಂತೆ ಐದು ವರ್ಷವೂ ಅನುದಾನ ನೀಡಬೇಕಿತ್ತು. ಆದರೆ ಎರಡು ವರ್ಷ ಮಾತ್ರ ನೀಡಿದ ಇಲಾಖೆ ಸುಮ್ಮನಾಗಿತ್ತು. ನಂತರ ಬಿಳಿಮಲೆಯವರು ಅಂದಿನ ಮುಖ್ಯಮಂತ್ರಿ ಸಿದ್ಧರಾಮಯ್ಯನವರ ಗಮನ ಸೆಳೆದ ಪರಿಣಾಮವಾಗಿ ಇಲಾಖೆಯು ₹5 ಕೋಟಿ ಇಡುಗಂಟು ನೀಡಿತು.

‘ಪೀಠಕ್ಕೆ ಅನುದಾನ ದೊರಕದೇ ಇದ್ದಿದ್ದರೆ ದೆಹಲಿಯಲ್ಲಿ ಕನ್ನಡಕ್ಕೆ ಜಾಗವೇ ಇರುತ್ತಿರಲಿಲ್ಲ. ದೆಹಲಿ, ವಾರಾಣಾಸಿ, ಅಹಮದಾಬಾದ್‌ ವಿ.ವಿ.ಗಳಲ್ಲಿದ್ದ ಕನ್ನಡ ವಿಭಾಗಗಳು ಮುಚ್ಚಿಹೋಗಿವೆ. ದೆಹಲಿ ವಿ.ವಿ.ಯಲ್ಲಿ ತೆಲುಗು, ತಮಿಳು ಪೀಠ ವಿದೆ. ಕನ್ನಡದ್ದಿಲ್ಲ. ಇಂಥ ಸಂದರ್ಭದಲ್ಲಿ ನಮ್ಮ ಪೀಠವು ಕನ್ನಡದ ಅಸ್ಮಿತೆಗಾಗಿ ದುಡಿ ಯುತ್ತಾ, ತನ್ನ ಅಸ್ತಿತ್ವದ ಘನತೆಯನ್ನೂ ಹೆಚ್ಚಿಸಿಕೊಳ್ಳುತ್ತಿದೆ’ ಎಂದು ಪ್ರೊ.ಬಿಳಿಮಲೆ ಹೇಳುತ್ತಾರೆ.

ಪೀಠದಿಂದ www.kannadakalike.org ಎಂಬ ಆನ್‌ಲೈನ್‌ ಕನ್ನಡದ ಪಾಠಗಳೂ ಇವೆ. ಕನ್ನಡೇತರ ಭಾಷಿಕರಿಗೆ ಮೂಲಪಠ್ಯ, ಭಾಷಾಂತರ, ಲಿಪ್ಯಂತರದ ಸೌಕರ್ಯವುಳ್ಳ ಕನ್ನಡದ ವೀಡಿಯೋಗಳಿಂದಲೂ ಕಲಿಯುವ ಅವಕಾಶವಿದೆ. ಪೀಠದ ಕಾರ್ಯಕ್ರಮ ಗಳನ್ನು ಯುಟ್ಯೂಬ್‌ನಲ್ಲೂ ವೀಕ್ಷಿಸಬಹುದು. ಇಂಥ ಪ್ರಯತ್ನವನ್ನು ಕರ್ನಾಟ ಕದ ಬೇರಾವ ಪೀಠಗಳೂ ಮಾಡಿಲ್ಲ.

ಪೀಠದಲ್ಲಿ ಇದುವರೆಗೆ ಕನ್ನಡದ ಆರು ಅನುವಾದ ಕೃತಿಗಳನ್ನು ಪ್ರಕಟಿಸಲಾಗಿದೆ. ಶ್ರೀವಿಜಯನ ‘ಕವಿರಾಜ ಮಾರ್ಗ’, ರನ್ನನ ‘ಗದಾಯದ್ಧ, ಏಣಗಿ ಬಾಳಪ್ಪ. ಅಮೀರ್‌ಬಾಯಿ ಕರ್ನಾಟಕಿ ಜೀವನಚರಿತ್ರೆ, ತುಳು ಕತೆಗಳ ಅನುವಾದ ‘ದಿ ರೈನ್‌ ಬಾಯ್‌’, ಶಿವರಾಮ ಕಾರಂತರ ಅಳಿದ ಮೇಲೆ ‘ಬಿಯಾಂಡ್ ಲೈಫ್’ ಪ್ರಕಟವಾಗಿದ್ದು, ಶಿವಕೋಟ್ಯಾಚಾರ್ಯನ ‘ವಡ್ಡಾರಾಧನೆ’ ಅನುವಾದ ಜನವರಿಯಲ್ಲಿ ಬಿಡುಗಡೆಯಾಗಲಿದೆ.

ಪೀಠದಲ್ಲಿ ಪಿಎಚ್‌.ಡಿ ಮತ್ತು ಎಂ.ಫಿಲ್‌ ಕೋರ್ಸ್ ಆರಂಭಿಸಲು ಎಲ್ಲ ಸಿದ್ಧತೆಗಳು ಪೂರ್ಣಗೊಂಡಿದ್ದರೂ, ತಾಂತ್ರಿಕ ಕಾರಣ ಗಳಿಂದ ಅನುಮೋದನೆ ದೊರಕಿಲ್ಲ. 2020ರ ಆಗಸ್ಟ್‌ ವೇಳೆಗೆ ಬಿಳಿಮಲೆಯವರು ನಿವೃತ್ತರಾಗುತ್ತಿದ್ದು, ಆ ಹೊತ್ತಿಗೆ ಪ್ರಾಧ್ಯಾಪಕರ ನೇಮಕ ಮಾಡಿದರೆ ಮಾತ್ರ ಪೀಠ ಎಂದಿನಂತೆ ಮುಂದುರಿಯಲು ಸಾಧ್ಯ.

ಮಂಟೇಸ್ವಾಮಿ ಪೀಠವನ್ನೇ ಕೊಡಿ!
ಮೈಸೂರಿನ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿರುವ ಪಿ.ಆರ್‌.ತಿಪ್ಪೇಸ್ವಾಮಿ ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಪಿ.ಕೆ.ರಾಜಶೇಖರ್‌ ಅವರಿಗೆ ದೂರವಾಣಿ ಮೂಲಕ ಆ ಬಗ್ಗೆ ಮಾಹಿತಿ ದೊರೆತಾಗ ಅವರು, ‘ವಿಮರ್ಶಕ ಡಾ.ಎಚ್‌.ತಿಪ್ಪೇರುದ್ರಸ್ವಾಮಿ’ ಅಧ್ಯಯನ ಪೀಠ ಎಂದು ಭಾವಿಸಿದ್ದರು. ನೇಮಕಾತಿ ಪತ್ರ ಓದಿಕೊಂಡ ಬಳಿಕವೇ ಅದು ತಾವಂದುಕೊಂಡ ಹೆಸರಿನ ಪೀಠವಲ್ಲ ಎಂದು ಗೊತ್ತಾಗಿದ್ದು.

ಪತ್ರ ಕೊಟ್ಟ ಅಧಿಕಾರಿಯನ್ನು ಅವರು, ‘ಇನ್ಯಾವ ಪೀಠಗಳಿವೆ’ ಎಂದು ಕೇಳಿದ್ದರು. ಅಧಿಕಾರಿ, ‘ಮಂಟೇಸ್ವಾಮಿ ಪೀಠ ಇದೆ’ ಎಂದಿದ್ದರು. ಕೂಡಲೇ ರಾಜಶೇಖರ್‌, ‘ನಾನು ಮಂಟೇಸ್ವಾಮಿ ಕುರಿತು ಕೆಲಸ ಮಾಡಿದ್ದು, ಆ ಪೀಠದ ಹೊಣೆಯನ್ನೇ ಕೊಡಿ ಎಂದು ಕೇಳಿಕೊಂಡಿದ್ದರು.

ಅದನ್ನು ನಯವಾಗಿ ನಿರಾಕರಿಸಿದ್ದ ಅಧಿಕಾರಿಯು, ‘ಆ ಪೀಠದಲ್ಲಿ ಕೇವಲ ₹30 ಲಕ್ಷ ಇಡುಗಟಿದೆ. ನಿಮಗೆ ಮೂರು ಸಾವಿರ ಗೌರವ ಧನವೂ ಬರಲ್ಲ. ತಿಪ್ಪೇಸ್ವಾಮಿ ಪೀಠದಲ್ಲಿ ಹೆಚ್ಚು ಇಡುಗಂಟಿದೆ. ಅದನ್ನು ಒಪ್ಪಿಕೊಳ್ಳಿ’ ಎಂದಿದ್ದರು. ರಾಜಶೇಖರ್‌ ಆ ನೆನಪನ್ನು ಸೊಗಸಾಗಿ ವಿವರಿಸುತ್ತಾರೆ.

ಇದಕ್ಕೆ ವ್ಯತಿರಿಕ್ತವಾದ ಇನ್ನೊಂದು ಸನ್ನಿವೇಶವೂ ಉಂಟು. ಬಸವ ಪೀಠವನ್ನು ಮೈಸೂರು ವಿಶ್ವವಿದ್ಯಾಲಯದಲ್ಲಿ ಸ್ಥಾಪಿಸಿ, ಬರಗೂರು ರಾಮಚಂದ್ರಪ್ಪ ಅವರನ್ನು ಆಹ್ವಾನಿಸಿದಾಗ ಅವರು ಕೆಲವು ಷರತ್ತುಗಳನ್ನು ಪೂರೈಸಿದರೆ ಮಾತ್ರ ಬರುವುದಾಗಿ ಹೇಳಿದ್ದರು. ವಿಶ್ವವಿದ್ಯಾಲಯ ಒಪ್ಪಿದ ಬಳಿಕವೇ ಬಂದಿದ್ದರು. ಒಂದು ವರ್ಷದಲ್ಲಿ ಅವರು 31 ಪುಸ್ತಕಗಳನ್ನು ಪೀಠದಿಂದ ಪ್ರಕಟಿಸಿದ್ದರು.

ಗೌರವಧನ ಒಲ್ಲೆ ಎಂದವರು!
ಪೀಠದಲ್ಲಿ ಅನುದಾನ, ಸೌಕರ್ಯವಿಲ್ಲ ಎಂದು ಹೊರನಡೆವವರ ನಡುವೆ, ಪೀಠದ ಸಂಚಾಲಕರಾಗಿ, ಸಂದರ್ಶಕ ಪ್ರಾಧ್ಯಾಪಕರಾಗಿ ನಿಗದಿಯಾದ ಗೌರವಧನವನ್ನು ಪಡೆಯದೇ ಕೆಲಸ ಮಾಡಿದವರು, ಮಾಡುತ್ತಿರುವವರೂ ಇದ್ದಾರೆ.

ಮಂಗಳೂರು ವಿಶ್ವವಿದ್ಯಾಲಯ ಕನಕದಾಸ ಅಧ್ಯಯನ ಪೀಠದ ಸಂಚಾಲಕರಾಗಿದ್ದಪ್ರೊ. ಶಿವರಾಮಶೆಟ್ಟಿ ತಾವು ಕಾರ್ಯನಿರ್ವಹಿಸಿದ್ದ 13 ವರ್ಷವಿಡೀ ಗೌರವಧನ ಪಡೆಯಲಿಲ್ಲ.

ಮೈಸೂರು ವಿಶ್ವವಿದ್ಯಾಲಯದ ಕುವೆಂಪು ಕಾವ್ಯಾಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕರಾಗಿರುವ ಎನ್‌.ಬೋರಲಿಂಗಯ್ಯ ಗೌರವಧನ ಪಡೆಯುತ್ತಿಲ್ಲ. ಅದೇ ಪೀಠದಲ್ಲಿದ್ದ ಪ್ರೊ.ಬರಗೂರು ರಾಮಚಂದ್ರಪ್ಪ, ಎರಡು ತಿಂಗಳು ಪೀಠಕ್ಕೆ ಬರಲು ಆಗದೇ ಇದ್ದಾಗಗೌರವಧನವನ್ನು ಪಡೆಯಲಿಲ್ಲ.

ಹೊಸಪೀಠಗಳಿಗೆ ಪ್ರಸ್ತಾವನೆ!
ಇರುವ ಪೀಠಗಳೇ ಅನುದಾನ, ಸ್ಥಳಾವಕಾಶ, ಸಿಬ್ಬಂದಿ ಇಲ್ಲದೆ ಬಳಲುತ್ತಿರುವ ಸನ್ನಿವೇಶದಲ್ಲಿ ಕೆಲವು ವಿಶ್ವವಿದ್ಯಾಲಯಗಳು ಹೊಸಪೀಠಗಳನ್ನು ಸ್ಥಾಪಿಸಬೇಕೆಂದು ಕೋರಿ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿವೆ.

ವಾಲ್ಮೀಕಿ ಮತ್ತು ಬುದ್ಧ ಅಧ್ಯಯನ ಪೀಠಗಳಿಗಾಗಿ ಮೈಸೂರು ವಿಶ್ವವಿದ್ಯಾಲಯ ಮತ್ತು ಡಿ.ದೇವರಾಜ ಅರಸು ಪೀಠಕ್ಕಾಗಿ ತುಮಕೂರು ವಿಶ್ವವಿದ್ಯಾಲಯ ಪ್ರಸ್ತಾವನೆ ಸಲ್ಲಿಸಿವೆ.

ಈಗಾಗಲೇ ಡಿ.ದೇವರಾಜ ಅರಸು ಹಿಂದುಗಳಿದ ವರ್ಗಗಳ ಅಭಿವೃದ್ಧಿ ನಿಗಮ ಇರುವುದರಿಂದ ಅವರ ಹೆಸರಿನ ಪೀಠ ಅಗತ್ಯವಿಲ್ಲ ಎಂದು ಸರ್ಕಾರ ತುಮಕೂರು ವಿವಿಗೆ ಪತ್ರ ಬರೆದಿದೆ. ‘ನಿಗಮ ಬೇರೆ, ಸಂಶೋಧನೆ ನಡೆಸುವ ಪೀಠ ಬೇರೆ’ ಎಂದು ವಿವಿ ಮತ್ತೆ ಪತ್ರ ಬರೆದಿದೆ. ಇನ್ನೂ ಪ್ರತಿಕ್ರಿಯೆ ಬಂದಿಲ್ಲ.

ಕುವೆಂಪು ವಿಶ್ವವಿದ್ಯಾಲಯದ ಬಸವೇಶ್ವರ ಪೀಠ ದಾನಿಯೊಬ್ಬರ ₹10 ಸಾವಿರ ಇಡುಗಂಟನ್ನಿಟ್ಟುಕೊಂಡು ಅಸಹಾಯಕವಾಗಿದೆ. ಈ ಸನ್ನಿವೇಶದಲ್ಲೇ ಬಸವಣ್ಣ, ಅಲ್ಲಮಪ್ರಭು ಮತ್ತು ಕುವೆಂಪು ಅಧ್ಯಯನಪೀಠಗಳ ಸ್ಥಾಪನೆಗೆ ಪ್ರಸ್ತಾವನೆ ಸಿದ್ಧಪಡಿಸಿದ್ದು ವಿದ್ಯಾವಿಧಾಯಕ ಪರಿಷತ್ತಿನ ಅನುಮೋದನೆಯೂ ದೊರಕಿದೆ.

*
ವಿಶ್ವವಿದ್ಯಾಲಯಗಳಲ್ಲಿ ಪೀಠಗಳನ್ನು ಸ್ಥಾಪಿಸಲು ಬಳಸುವ ಕೋಟ್ಯಂತರ ರೂಪಾಯಿಯನ್ನು ಪ್ರಾಥಮಿಕ ಶಾಲೆಗಳ ಅಭಿವೃದ್ಧಿಗೆ ಬಳಸಿದರೆ ಹೆಚ್ಚು ಪ್ರಯೋಜನಾಗುತ್ತದೆ.
-ಎನ್‌.ಬೋರಲಿಂಗಯ್ಯ, ಕುವೆಂಪು ಕಾವ್ಯಾಧ್ಯಯನ ಪೀಠ, ಮೈಸೂರು ವಿ.ವಿ

*
ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿ ವೃದ್ಧಿ ನಿಗಮ ಇರುವುದರಿಂದ ಅಧ್ಯಯನ ಪೀಠ ಅಗತ್ಯವಿಲ್ಲ ಎಂದು ಸರ್ಕಾರ ಹೇಳಿದೆ. ಪ್ರತ್ಯುತ್ತರ ನೀಡಿ ಮತ್ತೆ ಪ್ರಸ್ತಾವನೆ ಸಲ್ಲಿಸಿದ್ದೇವೆ.
-ಪ್ರೊ.ಬಿ.ನಿತ್ಯಾನಂದ ಶೆಟ್ಟಿ, ತುಮಕೂರು ವಿಶ್ವವಿದ್ಯಾಲಯ

*
ನಮ್ಮ ಬಹುಪಾಲು ಅಧ್ಯಯನ ಪೀಠಗಳು ಬಡ್ಡಿಪೀಠಗಳು. ಇಡುಗಂಟಿನ ಬಡ್ಡಿ ಹಣವನ್ನಷ್ಟೇ ನೆಚ್ಚಿಕೊಂಡ ಪೀಠ ಗಳನ್ನು ಇನ್ನಷ್ಟು ಬಲಗೊಳಿಸುವುದು ಅತ್ಯಗತ್ಯ.
-ಪ್ರೊ.ಬರಗೂರು ರಾಮಚಂದ್ರಪ್ಪ, ಬಸವ ಪೀಠದ ನಿಕಟಪೂರ್ವ ಸಂದರ್ಶಕ ಪ್ರಾಧ್ಯಾಪಕರು

*
ವಿಶ್ವವಿದ್ಯಾಲಯಗಳು ಪರಾಮರ್ಶೆ ಆಯೋಗದ ಶಿಫಾ ರಸನ್ನು ಒಪ್ಪಿಲ್ಲ. ಯಾವುದೇ ಪೀಠಗ ಳನ್ನು ಮುಚ್ಚಬಾರದು. ಪೀಠಗಳನ್ನು ಸಮರ್ಪಕವಾಗಿ ನಡೆಸುವಂತೆ ಕುಲಪತಿ ಗಳಿಗೆ ಸೂಚಿಸುವಂತೆ ಸರ್ಕಾರಕ್ಕೆ ಸಲಹೆ ನೀಡಿದ್ದೇವೆ.
-ಒ. ಅನಂತರಾಮಯ್ಯ, ಸದಸ್ಯರು, ರಾಜ್ಯ ಉನ್ನತ ಶಿಕ್ಷಣ ಪರಿಷತ್ತು

*
ಜಾತಿ ಸಮುದಾಯಗಳು ಒತ್ತಡ ಹೇರಿವೆ ಎಂದು ಪೀಠಗಳನ್ನು ಸ್ಥಾಪಿಸಬಾರದು. ಪೀಠಗಳ ಬಗ್ಗೆ ಸಮುದಾಯಗಳಲ್ಲಿ ನಂಬಿಕೆ ಉಳಿಯಬೇಕಾದರೆ ಅಗತ್ಯ ಅನುದಾನ, ಸಿಬ್ಬಂದಿಯನ್ನು ಕೊಡಬೇಕು.
-ಪ್ರೊ.ಎಚ್‌.ಟಿ.ಪೋತೆ, ಡೀನ್‌, ಕಲಾ ನಿಕಾಯ, ಗುಲ್ಬರ್ಗಾ ವಿ.ವಿ

*
ಇಡುಗಂಟಿನ ಬಡ್ಡಿಯನ್ನು ಮಿತ ವಾಗಿ ಬಳಸಿಯೇ 13 ವರ್ಷ ಕನಕ ಪೀಠದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿತ್ತು.
-ಶಿವರಾಮಶೆಟ್ಟಿ, ನಿವೃತ್ತ ಪ್ರಾಧ್ಯಾಪಕ, ಮಂಗಳೂರು ವಿ.ವಿ

*
ಕುವೆಂಪು ಕಾವ್ಯಾಧ್ಯಯನ ಪೀಠದ ಇಡು ಗಂಟನ್ನು ಹೆಚ್ಚಿಸ ಬೇಕು ಎಂದು ಕೋರಿ ಸರ್ಕಾರಕ್ಕೆ ಪತ್ರ ಬರೆಯಲು ನಿರ್ಧರಿಸಲಾಗಿದೆ.
-ಪ್ರೊ.ಎನ್‌.ಎಂ.ತಳವಾರ್‌, ನಿರ್ದೇಶಕರು, ಕುವೆಂಪು ಕನ್ನಡ ಅಧ್ಯಯನ ಸಂಸ್ಥೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT