ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ | ಹಳಿಗೆ ಮರಳದ ಬದುಕು: ನೆರೆ ಹೋದರೂ ತೀರದ ಬವಣೆ

ಶ್ರಾವಣ.. ಇಲ್ಲಿ ಕುಣಿದ್ಹಾಂಗ ರಾವಣ, ಬದುಕೆಂಬುದು ಇಲ್ಲಿ ಕೀಲಿಲ್ಲದ ಬಂಡಿ.. ಮಳೆ ಇದರ ಸಾಹೇಬ
Last Updated 20 ಆಗಸ್ಟ್ 2022, 20:00 IST
ಅಕ್ಷರ ಗಾತ್ರ

ಹುಬ್ಬಳ್ಳಿ: ‘ಅದ್ಯಾವ ಕಾಲದಾಗ, ಅಡಗಿಮನಿಯೊಳಗ ಚಕ್ಕಳಂಬಕ್ಕಳ ಹಾಕ್ಕೊಂಡು, ಬಿಸಿಬಿಸಿ ರೊಟ್ಟಿ ಉಂಡ್ವಿ... ಪಡಸಾಲಿಯೊಳಗ ಅಡಕಿ ಹಾಕ್ಕೊಂಡು ಮಾತಾಡ್ಕೊಂತ ಕುಂತಿದ್ವಿ? ನಮ್ಮ ಖೋಲಿಯೊಳಗ ಬೆಚ್ಚನೆಯ ಕೌದಿ ಹೊದ್ದು ಮಲಗಿದ್ವಿ..? ನೆನಪ ಆಗವಲ್ದ್ರಿ... ಎರಡು ಮೂರು ವರ್ಷ ಕಳದೇ ಹೋದ್ವು. ಈ ಶೆಡ್ಡಿನಾಗ ಚೀಟ ಸಂಸಾರ ಶುರು ಮಾಡಿ... (ಚೀಟ್‌ ಸಂಸಾರ: ಪುಡಿಕೆಗಳಲ್ಲಿಯೇ ಇಷ್ಟಿಷ್ಟೇ ದವಸ ಧಾನ್ಯಗಳನ್ನು ತೆಗೆದಿಟ್ಟು ಅಲೆಮಾರಿಗಳಂತೆ ಬದುಕುವುದಕ್ಕೆ ಹಾಗೆ ಕರೆಯುತ್ತಾರೆ).

ಪ್ರತಿ ಕೋಣೆಯಲ್ಲಿಯೂ ಗೋಡೆಗೆ ಕಟ್ಟಿದ ಹಗ್ಗಗಳು. ಅಲ್ಲಲ್ಲೇ ತೇಪೆ ಹಾಕಿದ, ಮಾಸಿದ ಬಟ್ಟೆಗಳು, ಮೂಲೆಯಲ್ಲಿ ಒಂದಷ್ಟು ಹಾಸಿಗೆ, ಹೊದಿಕೆ ಬಟ್ಟೆಯ ಗಂಟು, ಕಿಟಕಿ ಅಡಿಯಲ್ಲಿ ಸಣ್ಣದೊಂದು ಒಲೆ ಹೂಡಿದ್ದು, ಕರಿಮಸಿ ಬಳಿದ ಪಾತ್ರೆಗಳು. ಕೆಲವರು ಗ್ಯಾಸನ್ನೂ ಇರಿಸಿಕೊಂಡಿದ್ದಾರೆ. ಬೆರಳೆಣಿಕೆಯ ಪಾತ್ರೆಗಳಲ್ಲಿ ಇವರ ಬದುಕು ತೇಯ್ದು, ತೊಯ್ದು ಹೊರಟಿದೆ.

ಹಾವೇರಿ ತಾಲ್ಲೂಕಿನ ಹಳೆಮೇಲ್ಮುರಿ ಗ್ರಾಮಕ್ಕೆ ಬಂದರೆ, ಈ ಚಿತ್ರಣ ನಿಮಗೆ ಕಾಣಸಿಗುತ್ತದೆ. 2019ರ ಪ್ರವಾಹ ಬಂದಾಗ 31 ಕುಟುಂಬಗಳಿಗೆ ಇಲ್ಲಿ ತಾತ್ಕಾಲಕ ವಾಸಕ್ಕೆ ಶೆಡ್‌ ನಿರ್ಮಿಸಿ ನೀಡಲಾಗಿತ್ತು. ಈಗಲೂ ಹದಿನೈದು ಕುಟುಂಬಗಳು ಇಲ್ಲಿಯೇ ವಾಸವಾಗಿವೆ. ಈ ಭಾಗದ ಬಹುತೇಕ ಕುಟುಂಬಗಳಿಗೆ ಸೂರು ಕೈಗೆಟುಕದ ಕನಸಾಗಿಯೇ ಉಳಿದಿದೆ. ಕೃಷ್ಣೆ, ಕೃಷ್ಣೆಯ ಉಪನದಿಗಳಾದ ವೇದಗಂಗಾ, ದೂದ್‌ಗಂಗಾ, ಮತ್ತು ಘಟಪ್ರಭಾ, ಮಲಪ್ರಭಾ, ವರದಾ, ಕುಮದ್ವತಿ, ಭೀಮಾ ನದಿ ತೀರದ ಗ್ರಾಮಗಳಿಗೆ ತೀರದ ಸಮಸ್ಯೆಗಳು.ಅತಿವೃಷ್ಟಿ ಮತ್ತು ಪ್ರವಾಹ ಇವೆರಡೂ ಒಂದಕ್ಕೆ ಒಂದು ಬೆನ್ನಟ್ಟಿಕೊಂಡು ಬರುತ್ತವೆ. ನೆರೆಯ ಮಹಾರಾಷ್ಟ್ರವು ಈ ಗಡಿ ಭಾಗದ ಜಿಲ್ಲೆಗಳಿಗೆ ಹೊರೆಯಂತೆಯೇ ಆಗಿದೆ. ಅಲ್ಲಿ ಜೋರು ಮಳೆ ಬಂದರೂ ಇಲ್ಲಿಯ ಸೇತುವೆಗಳು, ಗ್ರಾಮಗಳು ಜಲಾವೃತವಾಗುತ್ತವೆ.

ಘಟಪ್ರಭಾ, ಮಲಪ್ರಭಾ, ಕೃಷ್ಣಾ ನದಿಯೊಳಗಿನ ಏರಿಳಿತದಲ್ಲಿ ಈ ಭಾಗದವರ ಕಣ್ಣೀರು ಮತ್ತು ನಿದ್ದೆ ಎರಡೂ ಹರಿದು ಹೋಗುತ್ತವೆ. 2019ರ ನೆರೆಯಲ್ಲಿ ಮನೆ ಕುಸಿದವರಲ್ಲಿ ಬಹುತೇಕರಿಗೆ ಬಯಲು ಬದುಕಾಗಿದೆ. ಕಡತಗಳಲ್ಲಿ ಪರಿಹಾರ ಸಂದಾಯವಾಗಿದೆ. ಆದರೆ ಬದುಕು ಕಟ್ಟಿಕೊಳ್ಳಲಾಗಿಲ್ಲ. ಮನೆ ನಿರ್ಮಾಣ ಸಂಪೂರ್ಣವಾಗಿಲ್ಲ.

ತುಂಗಭದ್ರೆಯಲ್ಲಿ ಹರಿವು ಹೆಚ್ಚಾದರೆ ಗದಗ ಜಿಲ್ಲೆಯ ಮುಂಡರಗಿ ತಾಲ್ಲೂಕಿನ ಕತೆಯೂ ಇದೇ ಆಗುತ್ತದೆ. ಈ ತಾಲ್ಲೂಕಿನ ಹಳೆಶಿಂಗಟಾಲೂರು, ಗುಮ್ಮಗೋಳ, ಬಿದರಳ್ಳಿ ವಿಠಲಾಪೂರ ಗ್ರಾಮಗಳು ಪ್ರವಾಹಭೀತಿ ಎದುರಿಸುತ್ತವೆ.

ಹಳೆಶಿಂಗಟಾಲೂರು ಗ್ರಾಮ ನವನಗರಕ್ಕೆ ಸ್ಥಳಾಂತರವಾಗಿದೆ. ಅದರೆ ಈಗಲೂ ಅಲ್ಲಿಯ 13 ಕುಟುಂಬಗಳು ಸರ್ಕಾರಿ ಕಟ್ಟಡಗಳಲ್ಲಿಯೇ ವಾಸವಾಗಿವೆ. ಮನೆ ಇಲ್ಲದ ಕಾರಣ ನೀರಾವರಿ ಇಲಾಖೆ ಕಟ್ಟಡಗಳಲ್ಲಿ ವಾಸಿಸುತ್ತಿರುವ ಇವರು, ಗ್ರಾಮ ಪಂಚಾಯ್ತಿಯವರು ಮನೆಗಳನ್ನು ನಿರ್ಮಿಸಿಕೊಟ್ಟ ತಕ್ಷಣ ಅಲ್ಲಿಗೆ ತೆರಳುವುದಾಗಿ ತಿಳಿಸುತ್ತಾರೆ.

ವರದಾ ನದಿ ಪ್ರವಾಹ
ವರದಾ ನದಿ ಪ್ರವಾಹ

‘ಮೂರು ವರ್ಷಗಳಿಂದ ನಿರಾಶ್ರಿತ ರಾಗಿದ್ದೇವೆ. ಸರ್ಕಾರ ಮನೆ ನಿರ್ಮಿಸಿ ಕೊಡುವಲ್ಲಿ ವಿಳಂಬ ಮಾಡುತ್ತಿದೆ. ಮನೆ ಕಟ್ಟುವವವರೆಗೂ ಸರ್ಕಾರಿ ಕಟ್ಟಡಗಳಲ್ಲೇ ವಾಸಿಸುತ್ತೇವೆ ಎನ್ನುತ್ತಾರೆ’ ಎನ್ನುತ್ತಾರೆ ಶಿಂಗಟಾಲೂರ ಗ್ರಾಮದ ನಿರಾಶ್ರಿತ ಈರಣ್ಣ ಬಾಗೋಡಿ.

ಕೃಷಿಯನ್ನು ನಂಬಿಕೊಂಡಿರುವ ಕುಟುಂಬಗಳೆಲ್ಲ ಕೂಡುಕುಟುಂಬ ದಂತೆಯೇ ಬಾಳಿದರೂ, ಒಂದೇ ಮನೆಯಲ್ಲಿ ಹಲವು ಸಂಸಾರಗಳಿರುತ್ತವೆ. ಮುಂದಿನಮನಿ, ಹಿಂದಿನ ಮನಿ, ಮ್ಯಾಗಿನಮನಿ, ಕೆಳಗಿನ ಮನಿ.... ಹೀಗೆ ಭಾಗವಾಗಿರುತ್ತಾರೆ. ಆದರೆ ಸರ್ಕಾರಿ ಕಡತಗಳಲ್ಲಿ ಅದು ಒಂದೇ ಮನೆ. ಒಂದು ಮನೆಗೆ ಮಾತ್ರ ಕೊಡುವ ಪರಿಹಾರ ಯಾವುದಕ್ಕೂ ಸಾಲುವುದಿಲ್ಲ.

ಪರಿಹಾರವೂ ಹಂತಹಂತವಾಗಿ ಬಿಡುಗಡೆಯಾಗುತ್ತದೆ. ಪ್ರತಿಸಲವೂ ದಾಖಲೆ ಒದಗಿಸಿ, ಪರಿಹಾರ ಪಡೆಯುವುದರಲ್ಲಿ ನಿರ್ಮಾಣ ವೆಚ್ಚ ಮುಗಿಲು ಮುಟ್ಟುತ್ತಿದೆ. ದೊರೆತ ಪರಿಹಾರದಲ್ಲಿ ಹಲವಾರು ಜನರು ಮನೆ ಕಟ್ಟುವುದನ್ನು ಬಿಟ್ಟು ತಗಡಿನ ಶೀಟುಗಳನ್ನು ಹೊದಿಸಿ ಬದುಕುತ್ತಿದ್ದಾರೆ.

ಬೆಳಗಾವಿ ಜಿಲ್ಲೆಯ ಗೋಕಾಕ ತಾಲ್ಲೂಕಿಗೆ ಹೋದರೆ ಇಂಥ ಕತೆಗಳು ಸಾಕೆನಿಸುವಷ್ಟು ಕೇಳಿಬರುತ್ತವೆ. ‘ಮನೆ ಬಿದ್ದು ಮೂರು ವರ್ಷಗಳಾದರೂ ಪರಿಹಾರ ಸಿಕ್ಕಿಲ್ಲ. ತಗಡಿನ ಶೆಡ್‌ನಲ್ಲಿ ವಾಸಿಸುತ್ತಿದ್ದೆವು. ಈಚೆಗೆ ಸುರಿದ ಮಳೆ–ಗಾಳಿಗೆ ತಗಡಿನ ಶೀಟುಗಳೂ ಹಾರಿಹೋದವು. ಈಗ ದಿಕ್ಕೇ ತೋಚದಂತಾಗಿದೆ. ಮತ್ತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದೇವೆ’ ಎಂದು ಬೆಳಗಾವಿ ಜಿಲ್ಲೆ ಗೋಕಾಕ ತಾಲ್ಲೂಕಿನ ಮೆಳವಂಕಿ ಗ್ರಾಮದ ಎಸ್‌.ಜಿ. ಹಿರೇಮಠ ಅಳಲು ತೋಡಿಕೊಂಡರು

ಕೃಷಿ ಮತ್ತು ಕೃಷಿ ಕಾರ್ಮಿಕರಾಗಿಯೇ ಬದುಕುವ ಈ ಭಾಗದ ಜನರಿಗೆ, ಮಳೆ ಯಾವತ್ತಿಗೂ ಸಾಲದ ಸುಳಿಯಲ್ಲಿಯೇ ನೂಕುತ್ತದೆ. ಬಂದರೂ ಕಷ್ಟ, ಬಾರದಿದ್ದರೂ ಕಷ್ಟ. ಒಮ್ಮೆ ನೆರೆ ಮತ್ತು ಅತಿವೃಷ್ಟಿ ಕಾಡಿದರೆ, ಬದುಕಿನ ಗತಿ ಹತ್ತು ವರ್ಷಗಳ ಹಿಂದೆ ಹೋಗುತ್ತದೆ. ಕೆಲವು ಕುಟುಂಬದವರಿಗಂತೂ ತಲೆಮಾರು ಗಳಷ್ಟು ಹಿಂಚಲನೆಯಾಗುತ್ತದೆ. ಸ್ವಂತದ ಮನೆ ಕಳೆದುಕೊಳ್ಳುತ್ತಾರೆ. ಜಮೀನಿನ ಮಣ್ಣು ಸವಳಾಗುತ್ತದೆ. ಮಣ್ಣು ಹರಿದುಹೋಗುತ್ತದೆ. ಬೆಳೆ ನೆಲಕಚ್ಚಿರುತ್ತದೆ. ಕೂಡಲೇ ಪರಿಹಾರ ಕಾರ್ಯ ಕೈಗೊಳ್ಳಬೇಕೆಂದರೆ ಆಡಳಿತಾತ್ಮಕ ಅಡಚಣೆಗಳು. ಸಮೀಕ್ಷೆ ಯಾಗಬೇಕು. ಫೋಟೊ ತೆಗೆಯಬೇಕು. ಅಧಿಕಾರಿಗಳು ಭೇಟಿ ನೀಡಬೇಕು. ಹಾನಿಯನ್ನು ಅಂದಾಜಿಸಬೇಕು. ಇವೆಲ್ಲ ಕ್ರಮಕೈಗೊಳ್ಳುವುದರಲ್ಲಿ, ಇವರೆಲ್ಲರ ಬದುಕು ಬೀದಿಗೆ ಬಂದಿರುತ್ತದೆ. ಇದ್ದವರು, ಹೊಲ ತೋಟದ ಮನೆಗಳಲ್ಲಿ ಆಶ್ರಯ ಪಡೆಯುತ್ತಾರೆ. ಇಲ್ಲದವರು ಶಾಲೆ, ದೇಗುಲಗಳಲ್ಲಿ ಮಲಗುವುದನ್ನು ಅಭ್ಯಾಸ ಮಾಡಿಕೊಳ್ಳುತ್ತಾರೆ.

ಬಾಲ್ಯವಿವಾಹಗಳು ಹೆಚ್ಚಾಗಿರುವ, ಬಾಣಂತಿ ಮತ್ತು ಶಿಶು ಮರಣದರವೂ ಹೆಚ್ಚಿರುವ ಈ ಜಿಲ್ಲೆಗಳಿಗೆ ಮಳೆಯೂ ತನ್ನ ಪಾಲಿನ ಕಷ್ಟವನ್ನು ಸುರಿಯುತ್ತಿದೆ. ‘ನಮ್ಮ ಎರಡೂ ಮನೆ ಬಿದ್ದಾವ್ರಿ. ಆದ್ರೂ ಇನ್ನೂಮಟಾ ಪರಿಹಾರ ಬಂದಿಲ್ರಿ. ಹೀಂಗಾಗಿ ಇರಾಕ್‌ ಆಸರೆ ಇಲ್ದಂಗ್‌ ಆಗೇತ್ರಿ. ಇಬ್ರೂ ಹೆಣ್ಮಕ್ಳು ಹಡದಾರ‍್ರೀ. ಮನೀ ಬಿದ್ದ ಜಾಗದಾಗ್‌ ಪತ್ರಾಸ್‌ ಬಡಿದೇವ್ರಿ. ಹೆಣ್ಮಕ್ಳೆಲ್ಲ ಪತ್ರಾಸ್‌ನಲ್ಲೇ ಮಲಗತೇವ್ರಿ. ಗಂಡ್ಮಕ್ಳು ಮಲಗಾಕ ದೇವಸ್ಥಾನ, ಸಮುದಾಯ ಭವನಕ್ಕ ಹೋಗ್ತಾರ‍್ರೀ.. ನಮ್ಮ ಕಷ್ಟ ಯಾರ್‌ ಕೇಳ್ತಾರ‍್ರೀ. ಮತ್ತ್‌ ಮಳಿಗಾಲ ಬಂತ್ರಿ; ನಮ್ಗ ಪರಿಹಾರೂನ ಸಿಗಾಂಗಿಲ್ಲ. ಮನೆ ಕಟ್ಟಿಸಿಕೊಳ್ಳಾಕೂ ಆಗಂಗಿಲ್ಲ ಅನ್ನೋದು ಖಾತ್ರಿ ಆಗಿಬಿಟ್ಟೇತ್ರಿ’ ಎಂದು ಹೇಳುವ ಬೆಳಗಾವಿ ಜಿಲ್ಲೆಯ ಅಥಣಿ ತಾಲ್ಲೂಕಿನ ದರೂರ ಗ್ರಾಮದ ಸವಿತಾ ಕಾಂಬಳೆ ಮಾತುಗಳು ಈ ಸಮಸ್ಯೆಗಳಿಗೆ ಕನ್ನಡಿ ಹಿಡಿಯುತ್ತವೆ.

ಪಿಶಬಿ (ಚೀಲ)ಯೊಳಗಿದೆ ಬದುಕು: ಒಮ್ಮೆ ಪ್ರವಾಹ ಏರತೊಡಗಿದರೆ, ಚೀಲಗಳಲ್ಲಿ ಅಗತ್ಯದ ಪಾತ್ರೆ, ಬಟ್ಟೆಗಳನ್ನು ತುಂಬಿಸಿಕೊಂಡು ಮನೆ ಬಿಡಬೇಕಾಗುತ್ತದೆ. 2019ರ ನೆರೆಯಲ್ಲಿ ರಾತೋರಾತ್ರಿ ಮನೆ ನೀರುಪಾಲಾಗಿತ್ತು. ಹಳೆ ಕಾಲದ ಮನೆಗಳಲ್ಲಿರುವ ಹಗೆವು (ನೆಲಮಾಳಿಗೆಯಂತಿರುವ ಧಾನ್ಯದ ಸಂಗ್ರಹಾಲಯಗಳು) ಅಲ್ಲಲ್ಲೇ ಕುಸಿದು ಬಿದ್ದಿದ್ದವು. ಉಳಿಕೆ, ಗಳಿಕೆಗಳೆಲ್ಲವೂ ನೀರುಪಾಲಾಗಿತ್ತು. ಕಾಗದ ಪತ್ರಗಳೂ ಉಳಿದಿರಲಿಲ್ಲ. ಬದುಕಿಗೆ ಅಗತ್ಯವಾದ ಯಾವ ದಾಖಲೆಗಳೂ ಇಲ್ಲದೆ ಅದೆಷ್ಟೋ ಕುಟುಂಬಗಳು ಪರಿಹಾರ ವಂಚಿತರಾದವು. ಬದುಕನ್ನರಸಿ ಗುಳೆ ಹೊರಟವು.

ಸಾಲಿ ಪಡಸಾಲಿ: ಇದೊಂದು ಮಾತು ಇಲ್ಲಿ ಜನಜನಿತ. ಶಾಲೆಗಳೆಲ್ಲ ಪಡಸಾಲೆಗಳಾಗಿ ಬದಲಾಗುತ್ತವೆ. ಬಹುತೇಕ ಶಾಲೆಗಳು ಕಾಳಜಿಕೇಂದ್ರಗಳಾಗಿ ಬದಲಾಗುತ್ತವೆ. ವಸತಿಶಾಲೆಗಳದ್ದೂ ಇದೇ ಕತೆ. ವರ್ಷದಲ್ಲಿ ಆರಂಭದ ಮೂರು ತಿಂಗಳು ಇದೇ ಪರಿಸ್ಥಿತಿ. ಶಾಲೆಯ ಹಜಾರಗಳಲ್ಲಿ, ತರಗತಿಗಳಲ್ಲಿ ತಾತ್ಕಾಲಿಕ ಸಂಸಾರ ಹೂಡುವಂತಾಗುವುದರಿಂದ ಸಾಲಿ–ಪಡಸಾಲಿ ಅನ್ನುವ ಮಾತು ಸರಳವೆಂಬಷ್ಟು ಸಹಜವಾಗಿದೆ.

ಕೃಷ್ಣೆಯ ತೀರದ ಬಾಗಲಕೋಟೆಯ ಜಿಲ್ಲೆಗಂತೂ ಈ ಮಾತು ಅಕ್ಷರಶಃ ಅನ್ವಯಿಸುತ್ತದೆ. ಜಿಲ್ಲೆಯಲ್ಲಿ 1334 ಮನೆಗಳಿಗೆ ಹಾನಿಯಾಗಿದೆ. 1,200 ಮನೆಗಳವರಿಗೆ ಪರಿಹಾರ ನೀಡಲಾಗಿದೆ. 89 ಶಾಲಾ ಕೊಠಡಿಗಳು, 60 ಅಂಗನವಾಡಿ ಕಟ್ಟಡಗಳಿಗೆ ಹಾನಿಯಾಗಿದೆ. ಅತಿವೃಷ್ಟಿಯಿಂದಾಗಿ ₹160 ಕೋಟಿ ಹಾನಿಯಾಗಿದೆ.

2019ರಿಂದ 22ರವರೆಗೂ ಆದ ಮಳೆ, ಪ್ರವಾಹಗಳಿಂದಾಗಿ ಈಗಲೂ ಐನೂರು ಕೊಠಡಿಗಳ ನಿರ್ಮಾಣ ಆಗಬೇಕಿದೆ.ಮೂರು ವರ್ಷಗಳಲ್ಲಿ 462 ಶಾಲಾ ಕೊಠಡಿಗಳನ್ನು ಹೊಸದಾಗಿ ಕಟ್ಟಿದ್ದೇವೆ. 484 ಕೊಠಡಿಗಳನ್ನು ದುರಸ್ತಿ ಮಾಡಿದ್ದೇವೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆ ಉಪನಿರ್ದೇಶಕ ಶ್ರೀಶೈಲ ಬಿರಾದಾರ ಹೇಳುತ್ತಾರೆ.

ಅನುದಾನದ ಕೊರತೆ, ಗುತ್ತಿಗೆದಾರರ ವಿಳಂಬಗತಿಯ ಕಾರ್ಯವೈಖರಿಯಿಂದಾಗಿ ಮಕ್ಕಳು ಈಗಲೂ ತಾತ್ಕಾಲಿಕ ಶೆಡ್‌ಗಳಲ್ಲಿ ಅಕ್ಷರಾಭ್ಯಾಸ ಮಾಡಬೇಕಿದೆ. ಮೇ ತಿಂಗಳಲ್ಲಿಯೇ ಶಾಲೆ ಆರಂಭಿಸಿದಾಗ ಸೂರ್ಯನ ತಾಪ, ನೆಲದ ಧಗೆ ತಡೆಯದೆ ಬಳಲುವಂತಾಗಿದ್ದೂ ಮರೆಯುವಂತಿಲ್ಲ. ಶಿಕ್ಷಣದಲ್ಲಿ ಈ ಜಿಲ್ಲೆಗಳು ಹಿಂದುಳಿಯಲು ಹೀಗೆ ಮಳೆರಾಯನೂ ಕಾರಣನಾಗುತ್ತಿದ್ದಾನೆ.

ಸ್ಥಳಾಂತರಕ್ಕೆ ಯಾಕಿಲ್ಲ ಒಲವು?
ಗ್ರಾಮಗಳ ಸ್ಥಳಾಂತರ ಅಥವಾಪುನರ್ವಸತಿಯಂಥ ಯೋಜನೆಗಳನ್ನು ಅನುಷ್ಠಾನಕ್ಕೆ ತರುವಾಗ ಗ್ರಾಮಸ್ಥರಿಂದಲೇ ವಿರೋಧ ವ್ಯಕ್ತವಾಗುತ್ತದೆ.

ಇಲ್ಲಿ ಕಟ್ಟಡಗಳನ್ನಷ್ಟೇ ಅಲ್ಲ,ಬದುಕಿನ ವಿಧಾನವನ್ನೇ ಬದಲಿಸಬೇಕಾಗುತ್ತದೆ. ಹಳೆಯ ವಸ್ತಿಯಲ್ಲಿ ಜಾನುವಾರುಗಳಿಗೆ ಚಕ್ಕಡಿಬಂಡಿಗಳಿಗೆ ತಮ್ಮದೇ ಜಾಗ ಮಾಡಿಕೊಂಡಿರುತ್ತಾರೆ. ಮನೆಯಲ್ಲಿ, ಮನೆಯ ಅರ್ಧದಷ್ಟು ಕೊಟ್ಟಿಗೆ ಇರುತ್ತದೆ. ಹಿತ್ತಲ ವನದೈನಂದಿನ ತರಕಾರಿ ಖರ್ಚು ಕಳೆಯುವಂತೆ ಬೆಳೆಸಿಕೊಂಡಿರುತ್ತಾರೆ. ಬಣವೆ ಹಾಕಲು, ಹೂ, ತರಕಾರಿ ಬಳ್ಳಿಗಳನ್ನು ಬೆಳೆಸಿ, ಖರ್ಚು ನೀಗಿಸುವಂತೆ ಬದುಕುವುದು ಸಾಧ್ಯವಾಗಿರುತ್ತದೆ. ಸ್ಥಳಾಂತರವಾದರೆ, ಜಾನುವಾರುಗಳಿಗೆ ಕೊಟ್ಟಿಗೆ ಹೊಂದಿಸುವುದು ಹೇಗೆ? ದೇವರಿಗೆ ಏರಿಸಲು ಹೂ ಬೆಳೆಸುವುದೆಲ್ಲಿ? ಊಟಕ್ಕೆ ತರಕಾರಿಯನ್ನೂ, ಪೂಜೆಗೆ ಹೂವನ್ನು ಕೊಂಡು ತರುವುದಾದರೆ ಅಷ್ಟು ಆದಾಯ ತರುವುದು ಎಲ್ಲಿಂದ? ಜಮೀನು ಸಹ ದೂರ. ಇಂಥ ಸಮಸ್ಯೆಗಳಿಂದಾಗಿ ಹಲವು ಗ್ರಾಮಸ್ಥರು ಹಳೆಯ ವಸ್ತಿಯಿಂದ ಸ್ಥಳಾಂತರ ಆಗುವುದೇ ಇಲ್ಲ.

ಹೀಗೆ ಸ್ಥಳಾಂತರವಾಗದವರಿಗೆ ಸರ್ಕಾರದಿಂದ ಯಾವ ಸೌಲಭ್ಯವೂ ಸಿಗುವುದಿಲ್ಲ.

ಹಾವೇರಿಯಲ್ಲಿ ವರದೆಯ ಹಾವು ಏಣಿ ಆಟ
ವರದಾ ಮತ್ತು ಕುಮುದ್ವತಿ ಎರಡೂ ನದಿಗಳು ಹಾವೇರಿ ಜಿಲ್ಲೆಯಲ್ಲಿ ಹರಿಯುತ್ತವೆ. ವರದಾ ಮಾತ್ರ ಬದುಕಿಗೆ ವರದಾನವಾಗುವುದರ ಜೊತೆಗೆ ಒಂದಷ್ಟು ಬಲಿದಾನವನ್ನೂ ಬೇಡುವ ನದಿ. ಈ ಭಾಗದಲ್ಲಿ 19 ಗ್ರಾಮಗಳು ಸ್ಥಳಾಂತರವಾಗಬೇಕಿವೆ.

ಹಾವೇರಿ ತಾಲ್ಲೂಕಿನ ಗುಯಿಲಗೊಂದಿ, ಮೇಲ್ಮುರಿ, ನಾಗನೂರು, ಸವಣೂರು ತಾಲ್ಲೂಕಿನ ಮಂಟಗಣಿ, ಚಿಕ್ಕಮುಗದೂರು, ಕಲಕೋಟಿ, ಅರಳಿಹಳ್ಳಿ, ನದಿನೀರಲಗಿ, ಡೊಂಬರಮತ್ತೂರು, ಹಳೇಹಲಸೂರ, ಕುಣಿಮೆಳ್ಳಹಳ್ಳಿ, ಮನ್ನಂಗಿ, ಮೆಳ್ಳಾಗಟ್ಟಿ, ಹಾನಗಲ್‌ ತಾಲ್ಲೂಕಿನ ಲಕ್ಮಾಪುರ (ಮ) ಆಡೂರು, ಅಲ್ಲಾಪುರ, ಶೀಗಿಹಳ್ಳಿ, ಹರವಿ, ಬಸಾಪುರ, ನಿಡಸಂಗಿ, ಕೂಡಲ (ಹಳೇ ಗ್ರಾಮ) ಈ 19 ಗ್ರಾಮಗಳಲ್ಲಿರುವ ಜನರು ಇಂದಿಗೂ ಮಳೆಗಾಲದಲ್ಲಿ ಆತಂಕದಲ್ಲೇ ಜೀವನ ಸಾಗಿಸುತ್ತಿದ್ದಾರೆ.

ಪದೇ ಪದೇ ಪ್ರವಾಹಕ್ಕೆ ತುತ್ತಾಗುವ 19 ಗ್ರಾಮಗಳಲ್ಲಿ (ಹಾವೇರಿ ತಾಲ್ಲೂಕಿನ 11 ಮತ್ತು ಸವಣೂರು ತಾಲ್ಲೂಕಿನ 8 ಗ್ರಾಮಗಳು) ‘ಶಾಶ್ವತ ತಡೆಗೋಡೆ’ ನಿರ್ಮಿಸಲು ಹಾವೇರಿ ಜಿಲ್ಲಾಡಳಿತ ಸರ್ಕಾರಕ್ಕೆ ಪ್ರಸ್ತಾವ ಸಲ್ಲಿಸಿತ್ತು. ಗ್ರಾಮಗಳ ಸ್ಥಳಾಂತರ ಮತ್ತು ತಡೆಗೋಡೆ ನಿರ್ಮಾಣಕ್ಕೆ ಕೆಲವು ಗ್ರಾಮಸ್ಥರಿಂದಲೇ ವಿರೋಧ ವ್ಯಕ್ತವಾದ್ದರಿಂದ ಯೋಜನೆಗಳು ನನೆಗುದಿಗೆ ಬಿದ್ದಿವೆ ಎನ್ನಲಾಗುತ್ತಿದೆ.

ಹಾವೇರಿ ತಾಲ್ಲೂಕು ಮೇಲ್ಮುರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ನೆರೆ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳ ಶೀಟುಗಳು ಹಾರಿ ಹೋಗಿರುವ ದೃಶ್ಯ
ಹಾವೇರಿ ತಾಲ್ಲೂಕು ಮೇಲ್ಮುರಿ ಗ್ರಾಮದಲ್ಲಿ ಭಾನುವಾರ ರಾತ್ರಿ ಬೀಸಿದ ಭಾರಿ ಗಾಳಿಗೆ ನೆರೆ ಸಂತ್ರಸ್ತರ ತಾತ್ಕಾಲಿಕ ಶೆಡ್‌ಗಳ ಶೀಟುಗಳು ಹಾರಿ ಹೋಗಿರುವ ದೃಶ್ಯ

‘1104 ಕೊಠಡಿಗಳ ದುರಸ್ತಿಗೆ ವಿಪತ್ತು ಪರಿಹಾರ ನಿಧಿಯಿಂದ ₹9.62 ಕೋಟಿ ಬಿಡುಗಡೆಗೆ ಜಿಲ್ಲಾಧಿಕಾರಿಗೆ ಪ್ರಸ್ತಾವ ಸಲ್ಲಿಸಿದ್ದೇವೆ. ಶಿಥಿಲವಾಗಿರುವ ಕೊಠಡಿಗಳಿಂದ ಮಕ್ಕಳನ್ನು ಲಭ್ಯವಿರುವ ಸುಸಜ್ಜಿತ ಕೊಠಡಿಗಳಿಗೆ ಸ್ಥಳಾಂತರ ಮಾಡಿ ತರಗತಿ ನಡೆಸುತ್ತಿದ್ದೇವೆ’ ಎಂದು ಡಿಡಿಪಿಐ ಜಗದೀಶ್ವರ ತಿಳಿಸಿದರು.

ಗದುಗಿಗೆ ಮಲಪ್ರಭೆ ಮತ್ತು ತುಂಗಭದ್ರೆಯ ಜಲದಿಗ್ಬಂಧನ
ಮಲಪ್ರಭೆ ಉಕ್ಕಿ ಹರಿದ ಪರಿಣಾಮ ಎರಡು ವರ್ಷಗಳ ಹಿಂದೆ ಗದಗ ಜಿಲ್ಲೆ ನರಗುಂದ ತಾಲ್ಲೂಕಿನ ಕೊಣ್ಣೂರ, ಕಪಲಿ, ವಾಸನ, ಬೂದಿಹಾಳ ಸೇರಿದಂತೆ ಮಲಪ್ರಭೆ, ಬೆಣ್ಣೆಹಳ್ಳದ ದಡದಲ್ಲಿ ಇರುವ ಗ್ರಾಮಗಳು ಪ್ರವಾಹಕ್ಕೆ ತುತ್ತಾದವು. ಅನೇಕ ಸಂತ್ರಸ್ತರು ಮನೆ ಕಳೆದುಕೊಂಡರೆ, ಕೆಲವರ ಮನೆಗಳು ಭಾಗಶಃ ಬಿದ್ದು ಹೋದವು.

ತಾಲ್ಲೂಕು ಆಡಳಿತ ಕೊಣ್ಣೂರಿನಲ್ಲಿ 121, ವಾಸನದಲ್ಲಿ 42 ಹಾಗೂ ಕಪಲಿ ಗ್ರಾಮದಲ್ಲಿ 30 ಸೇರಿದಂತೆ ಒಟ್ಟು 193 ಶೆಡ್‌ಗಳನ್ನು ನಿರ್ಮಿಸಿತು. ಇವುಗಳಲ್ಲಿಯೇ ಸಂತ್ರಸ್ತರು ಮತ್ತು ಸಂತ್ರಸ್ತರಲ್ಲದವರು ಕೂಡ ವಾಸಿಸುತ್ತಿದ್ದಾರೆ. ಕೆಲವರಿಗೆ ಪರಿಹಾರ ದೊರೆತರೂ ಶೆಡ್ ಬಿಟ್ಟಿಲ್ಲ. ಸಂಪೂರ್ಣ ಮನೆ ಬಿದ್ದವರ ಮನೆ ನಿರ್ಮಾಣ ಕೊನೆ ಹಂತದಲ್ಲಿವೆ.

ಭೀಮೆಯೂ ನಿಷ್ಕರುಣಿ, ಜನರಿಗೂ ನಿರ್ಲಕ್ಷ್ಯ
ಕಲಬುರಗಿ ಜಿಲ್ಲೆಯ ಅಫಜಲಪುರ ತಾಲ್ಲೂಕಿನಲ್ಲಿ 180 ಕಿಲೋಮೀಟರ್ ವ್ಯಾಪ್ತಿಯಲ್ಲಿ ಭೀಮಾ ನದಿ ಹರಿಯುತ್ತದೆ. ಭೀಮಾನದಿಗೆ 4 ಬ್ಯಾರೇಜುಗಳನ್ನು ನಿರ್ಮಿಸಲಾಗಿದೆ.

ಮಹಾರಾಷ್ಟ್ರದ ಉಜನಿ ಜಲಾಶಯ ಮತ್ತು ವೀರ ಭಟ್ಕಲ್ ಸೇರಿ ವಿವಿಧ ಜಲಾಶಯಗಳಿಂದ ಭೀಮಾ ನದಿಗೆ 4 ಲಕ್ಷ ಕ್ಯುಸೆಕ್ ನೀರು ಹರಿ ಬಿಟ್ಟಾಗ, ತಾಲ್ಲೂಕಿನಲ್ಲಿ ಭೀಮಾ ನದಿ ದಡದ 40 ಗ್ರಾಮಗಳಿಗೆ ತೊಂದರೆ ಆಗುತ್ತದೆ.

ಅಫಜಲಪುರ ತಾಲ್ಲೂಕಿನ ಬಳ್ಳುಂಡಗಿ, ಅಳ್ಳಗಿ (ಕೆ) ,ಅಳ್ಳಗಿ, (ಬಿ) ಬಂಕಲಗಿ,ದುದ್ಧನಿಗಿ, ಮಂಗಳೂರು, ಹಿರಿಯಾಳ ಹಾಗೂ ಸಿಂದಗಿ ತಾಲ್ಲೂಕಿನ ತಾರಾಪುರರ, ತಾವರಖೇಡ, ಬ್ಯಾಡಗಿ ಹಾಳ ಮತ್ತು ಮಡನಹಳ್ಳಿ ಗ್ರಾಮಗಳು ಪ್ರವಾಹ ಸ್ಥಿತಿಯನ್ನು ಎದುರಿಸುತ್ತವೆ.

ಭೀಮಾ ಬ್ಯಾರೇಜ್‌ನ ಹಿನ್ನೀರಿನಿಂದ 11 ಗ್ರಾಮಗಳು ಪ್ರವಾಹದ ಪರಿಸ್ಥಿತಿ ಎದುರಿಸುತ್ತವೆ. ಬೇರೆಡೆ ಸ್ಥಳಾಂತರ ಆಗುವಂತೆ ಸರ್ಕಾರವು ಸೂಚಿಸಿದರೂ ಗ್ರಾಮಸ್ಥರು ಹೊಸ ಗ್ರಾಮಕ್ಕೆ ಹೋಗುತ್ತಿಲ್ಲ. ಹಳೆಯ ಗ್ರಾಮವನ್ನೂ ಬಿಡುತ್ತಿಲ್ಲ. ಹಳೆಯ ಗ್ರಾಮದ ಮನೆಗಳ ಮೌಲ್ಯವನ್ನು ಲೆಕ್ಕ ಹಾಕಿ, ಗ್ರಾಮಸ್ಥರಿಗೆ ಹಣ ನೀಡಲಾಗಿದೆ. ಆದರೂ ಜನರು ಅಲ್ಲಿಂದ ಹಳೆಯ ಗ್ರಾಮ ಬಿಡುತ್ತಿಲ್ಲ.

ಊಟಕ್ಕಿಲ್ಲ ರೊಟ್ಟಿ, ತೋಳುಗಳಿಲ್ಲ ಗಟ್ಟಿ
ಜೋಳ ತಿಂದವ ತೋಳನಾದ, ರೊಟ್ಟಿ ತಿಂದವ ಗಟ್ಟಿಯಾದ ಎನ್ನುವ ಮಾತು ಈ ಕಡೆ ಊಟಕ್ಕೆ ಕುಳಿತಾಗಲೆಲ್ಲ ಹೇಳುತ್ತಾರೆ. ಬೆಲೆ ಏರಿಕೆಯ ಈ ದಿನಗಳಲ್ಲಿ ಬಿಳಿಜೋಳದ ಬೆಲೆ ಸರಾಸರಿ 30–40 ರೂಪಾಯಿವರೆಗೂ ಇದೆ. ಪಡಿತರದಲ್ಲಿ ಅಕ್ಕಿ ಮಾತ್ರ ನೀಡುತ್ತಾರೆ. ದವಸಗಳ ಪ್ಯಾಕೇಟುಗಳನ್ನು ನೀಡಿದಾಗಲೂ, ಅಕ್ಕಿ, ಬೇಳೆ, ಎಣ್ಣೆ, ಸಕ್ಕರೆ, ಖಾರದ ಪುಡಿ, ಅರಿಶಿಣ, ಸಾಸಿವೆ, ಜೀರಿಗೆ ಮತ್ತು ಉಪ್ಪನ್ನು ನೀಡುತ್ತಾರೆ.

ಈ ವರ್ಷದ ಸುತ್ತೋಲೆಯ ಪ್ರಕಾರ, ಮೂವರು ಇರುವ ಕುಟುಂಬದ ಘಟಕಕ್ಕೆ ಪಡಿತರ ಪ್ಯಾಕೇಜುಗಳನ್ನು ನೀಡಲಾಗುತ್ತಿದೆ. ಈ ಭಾಗದಲ್ಲಿ ಅನಾರೋಗ್ಯ ಪೀಡಿತರಾದಾಗ, ಜ್ವರ ಬಾಧೆ ಇರುವಾಗ ಅನ್ನ ಉಂಡು ಅಭ್ಯಾಸವಿತ್ತು. ಪ್ರತಿದಿನವೂ ಜೋಳದ ರೊಟ್ಟಿ ಸೇವಿಸುವ ಈ ಭಾಗದವರಿಗೆ ಹೊಟ್ಟೆ ತುಂಬ ಊಟ ಮಾಡುವುದೂ ಕಷ್ಟವಾಗಿದೆ. ಬಿಸಿರೊಟ್ಟಿಯೊಟ್ಟಿಗೆ ಹಸಿತರಕಾರಿಗಳ ಪಚಡಿ ಉಣ್ಣುವ, ಮೊಳಕೆ ಕಾಳಿನ ಉಸುಳಿ ಉಣ್ಣುವ ಅಭ್ಯಾಸ ಇರುವವರಿಗೆ ರೊಟ್ಟಿಯೂಟವೇ ಇದೀಗ ಹಬ್ಬದೂಟದಂತಾಗಿದೆ.

ಕಳೆದ ಮೂರು ವರ್ಷಗಳಿಂದ ದ್ವಿದಳ ಧಾನ್ಯಗಳ ದಾಸ್ತಾನು ಸಹ ಇಲ್ಲದಂತಾಗಿದೆ. ಮಳೆ ಬಂದು ಮನೆಯನ್ನಷ್ಟೇ ಅಲ್ಲ, ಇವರ ಜೀವನಶೈಲಿಯೇ ಏರುಪೇರು ಆಗಿದೆ.

ಪೂರಕ ಮಾಹಿತಿ: ಬಸವರಾಜ ಹವಾಲ್ದಾರ್‌,ವೆಂಕಟೇಶ್‌ ಜಿ.ಎಚ್‌, ಕೆ.ಎಂ.ಸತೀಶ್‌ ಬೆಳ್ಳಕ್ಕಿ, ಸಿದ್ದು ಆರ್‌.ಜಿ. ಹಳ್ಳಿ, ಸಂತೋಷ ಚಿನಗುಡಿ,ಇಮಾಮ್‌ಹುಸೇನ್‌ ಗೂಡುನವರ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT