ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ: ದಾಹ ಇಂಗಿಸದ ಕುಡಿಯುವ ನೀರಿನ ಯೋಜನೆ, 35ಕ್ಕೂ ಅಧಿಕ ಕಡೆ ವಿಫಲ

Last Updated 13 ಮಾರ್ಚ್ 2021, 19:31 IST
ಅಕ್ಷರ ಗಾತ್ರ

ಬೆಂಗಳೂರು: ಗ್ರಾಮೀಣ ಪ್ರದೇಶದಲ್ಲಿ ಕುಡಿಯುವ ನೀರಿನ ಸಮಸ್ಯೆ ಬಗೆಹರಿಸಲು ಸರ್ಕಾರ ಜಾರಿಗೊಳಿಸುತ್ತಿರುವ ಮಹತ್ವಾಕಾಂಕ್ಷಿ ಕಾರ್ಯಕ್ರಮವೇ ಬಹುಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆ. ಆದರೆ ಈ ಕಾರ್ಯಕ್ರಮದಡಿ ಅನುಷ್ಠಾನಗೊಂಡ 35ಕ್ಕೂ ಅಧಿಕ ಯೋಜನೆಗಳು ಇದುವರೆಗೆ ವಿಫಲಗೊಂಡಿವೆ. ಕೆಲವು ಕಡೆ ಈ ಯೋಜನೆ ನಿರೀಕ್ಷೆಗೂ ಮೀರಿ ಯಶಸ್ವಿಯಾಗಿ ನೀರಿನ ಸಮಸ್ಯೆ ಪರಿಹಾರವಾಗಿದೆ.

ರಾಜ್ಯದಲ್ಲಿ 2003ರಿಂದಲೇ ಬಹು ಗ್ರಾಮ ಕುಡಿಯುವ ನೀರು ಪೂರೈಕೆ ಯೋಜನೆಗಳು ಆರಂಭವಾದವಾ ಗಿದ್ದರೂ, ಈ ಕಾರ್ಯಕ್ರಮ ವ್ಯಾಪಕವಾಗಿ ಜಾರಿಯಾಗಿದ್ದು 2008ರ ಬಳಿಕ.ಇದುವರೆಗೆ 465 ಯೋಜನೆಗಳು ಪೂರ್ಣಗೊಂಡಿದ್ದು, 30 ಯೋಜನೆಗಳು ಅನುಷ್ಠಾನದ ಹಂತದಲ್ಲಿವೆ. ಪೂರ್ಣಗೊಂಡಿರುವ 35ಕ್ಕೂ ಅಧಿಕ ಯೋಜನೆಗಳ ವ್ಯಾಪ್ತಿಯ ಗ್ರಾಮಗಳಲ್ಲಿ ಕುಡಿಯುವ ನೀರಿಗೆ ತತ್ವಾರ ಈಗಲೂ ಮುಂದುವರಿದಿದೆ. ವರ್ಷ ಪೂರ್ತಿ ಕುಡಿಯುವ ನೀರನ್ನು ಪೂರೈಸಬಲ್ಲ ಸುಸ್ಥಿರ ಜಲಮೂಲಗಳನ್ನು ಗುರುತಿಸುವಲ್ಲಿ ಆಗಿರುವ ಲೋಪ, ಭ್ರಷ್ಟಾಚಾರ ಹಾಗೂ ಕಳಪೆ ಕಾಮಗಾರಿ ಹಾಗೂ ಅನುಷ್ಠಾನ ಹಂತದಲ್ಲಿನ ತಾಂತ್ರಿಕ ದೋಷಗಳು ಈ ವೈಫಲ್ಯದ ಹಿಂದಿರುವ ಪ್ರಮುಖ ಕಾರಣಗಳು.

ಉದಾಹರಣೆಗೆ, ಕೊಪ್ಪಳ ಜಿಲ್ಲೆಯಲ್ಲಿ ಈ ಯೋಜನೆಯಡಿ ನಿಯಂತ್ರಿತ ಜಲಾಶಯಗಳ ರೂಪದಲ್ಲಿ ನಿರ್ಮಿಸಿ ರುವ ಕೆರೆಗಳಲ್ಲಿ ನೀರೇ ನಿಲ್ಲುತ್ತಿಲ್ಲ. ಇದಕ್ಕೆ ಯೋಜನೆ ರೂಪುರೇಷೆಯಲ್ಲಿದ್ದ ದೋಷದ ಜೊತೆಗೆ ಕಳಪೆ ಕಾಮಗಾರಿಯೂ ಕಾರಣ ಎಂಬುದು ಮೇಲ್ನೋಟಕ್ಕೆ ಸಾಬೀತಾಗಿದ್ದರಿಂದ ಇದರ ಅನುಷ್ಠಾನದ ಹೊಣೆ ಹೊತ್ತಿದ್ದ ಎಂಜಿನಿಯರ್‌ಗಳ ವಿರುದ್ಧ ಇಲಾಖಾ ವಿಚಾರಣೆ ನಡೆದಿದೆ. ಈ ಜಿಲ್ಲೆಯ ಮುಂಡರಗಿ ಹಂತ–1 ಮತ್ತು ಹಂತ–2ರಲ್ಲಿ ಅಳವಡಿಸಿದ್ದ ಕೊಳವೆಗಳೇ ಕಿತ್ತುಹೋಗಿವೆ. ಬಾಗಲಕೋಟೆ ಜಿಲ್ಲೆ ಯಲ್ಲೂ ಈ ಯೋಜನೆಯಡಿ ನಿರ್ಮಿ ಸಿದ ಕೆರೆಗಳಲ್ಲಿ ನೀರು ನಿಂತಿಲ್ಲ.

‘ಎಲ್ಲೆಲ್ಲ ಯೋಜನೆ ವಿಫಲವಾ ಗಿವೆಯೋ ಅವುಗಳಿಗೆ ಕಾರಣ ಪತ್ತೆ ಹಚ್ಚಲು ಇಲಾಖೆ ತನಿಖೆ ನಡೆಸಲಾಗಿದೆ. ಇದುವರೆಗೆ 15ಕ್ಕೂ ಅಧಿಕ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಗುತ್ತಿಗೆದಾರರಿಂದ ನಷ್ಟ ವಸೂಲಿಗೂ ಕ್ರಮ ಕೈಗೊಳ್ಳಲಾಗಿದೆ’ ಎನ್ನುತ್ತಾರೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ರಾಜ್‌ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎಲ್‌.ಕೆ. ಅತೀಕ್‌.

ಈ ಯೋಜನೆಯ ಆರಂಭದ ವರ್ಷಗಳಲ್ಲಿ ನೀರು ಪೂರೈಸಲು ಗ್ಲಾಸ್‌ ರಿಇನ್‌ಫೋರ್ಸ್‌ಡ್‌ ಪೈಪ್‌ಗಳನ್ನು (ಜಿಆರ್‌ಪಿ) ಬಳಸಲಾಗುತ್ತಿತ್ತು. ಈ ಪೈಪ್‌ ಬಳಸಿರುವಲ್ಲೆಲ್ಲಾ ಸಮಸ್ಯೆಗಳು ಕಾಣಿಸಿಕೊಂಡಿದ್ದು ಜಾಸ್ತಿ. ಈ ಕೊಳವೆಗಳ ಗುಣಮಟ್ಟ ಕಳಪೆಯಾಗಿತ್ತು. ಈಗ ಇಂತಹ ಪೈಪ್‌ಗಳ ಬಳಕೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ ಸ್ಥಗಿತಗೊಳಿಸಿದೆ.

‌ಎಲ್ಲಿ ಬೇಕೊ ಅಲ್ಲಿ ಇಲ್ಲ: ಈ ಯೋಜನೆ ಅನುಷ್ಠಾನದ ಬಗ್ಗೆ ಕೇಳಿ ಬರುವ ಇನ್ನೊಂದು ಪ್ರಮುಖ ಆರೋಪ, ನಿಜಕ್ಕೂ ಎಲ್ಲಿಗೆ ಅಗತ್ಯ ಇದೆಯೋ ಅಲ್ಲಿ ಇದನ್ನು ಜಾರಿಗೊಳಿಸುತ್ತಿಲ್ಲ ಎಂಬುದು. ಈ ಯೋಜನೆಯ ಜಾರಿಯ ಕುರಿತು ತೀರ್ಮಾನ ಕೈಗೊ ಳ್ಳುವಾಗ ಕುಡಿಯುವ ನೀರಿನ ಅಗತ್ಯದ ಮಾನದಂಡಕ್ಕಿಂತಲೂ ರಾಜ ಕೀಯ ಹಿತಾಸಕ್ತಿಗಳೇ ಮೇಲುಗೈ ಸಾಧಿಸುತ್ತಿವೆ.

‘ಈ ಯೋಜನೆ ಅನುಷ್ಠಾನಗೊಳಿಸಲು ಕೆಲವು ಮಾನದಂಡಗಳನ್ನು ಅನುಸರಿಸುತ್ತಿದ್ದೇವೆ. ಪ್ರಮುಖವಾಗಿ, ವರ್ಷಪೂರ್ತಿ ಅಥವಾ ಕನಿಷ್ಠ, ವರ್ಷದ ಏಳೆಂಟು ತಿಂಗಳು ನೀರು ಒದಗಿಸಬಲ್ಲ ಸುಸ್ಥಿರ ಜಲಮೂಲಗಳು ಇರಬೇಕು. ಯೋಜನೆಯ ಜಾರಿ ಆರ್ಥಿಕವಾಗಿಯೂ ಸುಸ್ಥಿರವಾಗಿರಬೇಕು. ನಿರ್ದಿಷ್ಟ ಪ್ರದೇಶದ ಜನಸಂಖ್ಯೆ ಆಧರಿಸಿ ಪ್ರತಿ ಮನೆಗೆ ನೀರು ತಲುಪಿಸಲು ಎಷ್ಟು ವೆಚ್ಚವಾಗುತ್ತದೆ ಎಂಬುದನ್ನು ಲೆಕ್ಕ ಹಾಕಲಾಗುತ್ತದೆ. ತಲಾ ವೆಚ್ಚ ₹17ಸಾವಿರ ಮೀರದಿದ್ದರೆ ಮಾತ್ರ ಯೋಜನೆ ಕೈಗೆತ್ತಿಕೊಳ್ಳುವ ಬಗ್ಗೆ ಪರಿಶೀಲಿಸುತ್ತೇವೆ. ತಲಾ ವೆಚ್ಚ ₹ 20ಸಾವಿರಕ್ಕೂ ಹೆಚ್ಚು ಇದ್ದರೆ ಅಂತಹ ಕಡೆ ಯೋಜನೆ ಜಾರಿಗೊಳಿಸುವುದಿಲ್ಲ’ ಎಂದು ಇಲಾಖೆಯ ಅಧಿಕಾರಿಗಳು ಸಮಜಾಯಿಷಿ ನೀಡುತ್ತಾರೆ.

ನೀರಿನ ಲಭ್ಯತೆ ಕಡಿಮೆ ಇರುವ ಕಡೆ ಸಣ್ಣ ಪ್ರಮಾಣದ ಯೋಜನೆಗಳನ್ನು ಅಳವಡಿಸಿಕೊಂಡಿದ್ದೂ ಈ ಯೋಜ ನೆಯ ವೈಫಲ್ಯಕ್ಕೆ ಇನ್ನೊಂದು ಕಾರಣ ಎನ್ನುತ್ತಾರೆ ಅಧಿಕಾರಿಗಳು.

‘ಪ್ರತಿ ವ್ಯಕ್ತಿಗೆ ನಿತ್ಯ ಪೂರೈಸುವ ನೀರಿನ ಪ್ರಮಾಣ 40 ಲೀಟರ್‌ಗಳಿಗಿಂತಲೂ ಕಡಿಮೆ ಇದ್ದ ಕಡೆಯೂ ಯೋಜನೆ ಅನುಷ್ಠಾನಗೊಳಿಸಲಾಯಿತು. ಕ್ರಮೇಣ ನೀರಿನ ಮೂಲಗಳನ್ನು ಕಳೆದುಕೊಂಡಿದ್ದರಿಂದ ಹಾಗೂ ಬೇಡಿಕೆ ಹೆಚ್ಚಳವಾಗಿದ್ದರಿಂದ ಯೋಜನೆ ವ್ಯಾಪ್ತಿಯ ಎಲ್ಲ ಗ್ರಾಮಗಳಿಗೆ ನೀರು ಪೂರೈಸಲು ಸಾಧ್ಯವಾಗಲಿಲ್ಲ. ಈ ಹಿಂದೆ ಕಾಲುವೆಗಳ ನೀರನ್ನು ನೆಚ್ಚಿಕೊಂಡು ಜಾರಿಗೊಳಿಸಿದ್ದ ಅನೇಕ ಯೋಜನೆಗಳು ವಿಫಲವಾಗಿವೆ. ಹಾಗಾಗಿ ನೀರು ಪೂರೈಸುವುದಕ್ಕೆ ನದಿಮೂಲಗಳಿರುವ ಕಡೆ ಮಾತ್ರ ಈ ಯೋಜನೆ ಅನುಷ್ಠಾನಗೊಳಿಸಲಾಗುತ್ತಿದೆ’ ಎಂದು ಅತೀಕ್‌ ವಿವರಿಸಿದರು. ಭಾರಿ ಯೋಜನೆಗಳನ್ನಷ್ಟೇ ಇಲಾಖೆ ಕೈಗೊಳ್ಳಲು ಮುಂದಾ ಗಿದೆ. ಪಾವಗಡದಲ್ಲಿ ₹ 2,500 ಕೋಟಿ ವೆಚ್ಚದಲ್ಲಿ ಜಾರಿಗೊಳಿಸುತ್ತಿ ರುವ ಯೋಜನೆಯಿಂದ ಮೂರು ಜಿಲ್ಲೆಗಳಿಗೆ ಅನುಕೂಲವಾಗುತ್ತಿದೆ. ಈ ಯೋಜನೆಯಿಂದ ಪಾವಗಡ ತಾಲ್ಲೂಕಿಗೆ, ಬಳ್ಳಾರಿ ಜಿಲ್ಲೆಯ ಬಳ್ಳಾರಿ ಮತ್ತು ಕೂಡ್ಲಿಗಿ ತಾಲ್ಲೂಕುಗಳಿಗೆ, ಚಿತ್ರದುರ್ಗ ಜಿಲ್ಲೆಯ ಚಿತ್ರದುರ್ಗ ತಾಲ್ಲೂಕಿನ ಅರ್ಧಭಾಗ, ಮೊಳಕಾಲ್ಮುರು ಮತ್ತು ಚಳ್ಳಕೆರೆ ತಾಲ್ಲೂಕುಗಳಿಗೆ ಪ್ರಯೋಜನವಾಗಲಿದೆ.

ವಿಜಯಪುರ, ರಾಯಚೂರು, ಧಾರವಾಡ ಜಿಲ್ಲೆಗಳಿಗೆ ಹಾಗೂ ಮಂಡ್ಯ ಜಿಲ್ಲೆಯ ಪಾಂಡವಪುರ, ಕೆ.ಆರ್‌.ಪೇಟೆ ಹಾಗೂ ನಾಗಮಂಗಲ ತಾಲ್ಲೂಕುಗಳಿಗೆ ಕುಡಿಯುವ ನೀರು ಪೂರೈಸುವ ಯೋಜ ನೆಯ ರೂಪುರೇಷೆಗಳನ್ನು ಸರ್ಕಾರ ಸಿದ್ಧಪಡಿಸುತ್ತಿದೆ. ಇದರ ಅಂದಾಜು ವೆಚ್ಚ ₹ 7 ಸಾವಿರ ಕೋಟಿ.

ಬಹುಗ್ರಾಮ ಕುಡಿಯುವ ನೀರು ಯೋಜನೆಗಳ ಶೇ 50ರಷ್ಟು ವೆಚ್ಚವನ್ನು ಕೇಂದ್ರ ಸರ್ಕಾರದ ಜಲಜೀವನ ಮಿಷನ್‌ ನಿಂದ ಭರಿಸಿದರೆ, ಇನ್ನುಳಿದ ಶೇ 50ರಷ್ಟನ್ನು ರಾಜ್ಯ ಸರ್ಕಾರ ಭರಿಸುತ್ತಿದೆ. ಇದಕ್ಕೆ ನಬಾರ್ಡ್‌ನಿಂದಲೂ ಸಾಲ ಪಡೆಯುತ್ತಿದೆ. ಕೃಷ್ಣಾ, ಕಾವೇರಿ, ಕಬಿನಿ, ಹೇಮಾವತಿ ತುಂಗಭದ್ರಾ ಹಾಗೂ ನೇತ್ರಾವತಿಯಂತಹ ದೊಡ್ಡ ನದಿಗಳ ನೀರಿನ ಮೂಲಗಳನ್ನೇ ನೆಚ್ಚಿಕೊಂಡು ಯೋಜನೆ ರೂಪಿಸಲು ಇಲಾಖೆ ನಿರ್ಧರಿಸಿದೆ.

‘ಬಹುತೇಕ ಕಡೆ ಈ ಯೋಜನೆ ಯಶಸ್ವಿಯಾಗಿದೆ. ಗದಗ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾದ ಎರಡು ಯೋಜನೆಗಳಿಂದ ಇಡೀ ಜಿಲ್ಲೆಯ 343 ಗ್ರಾಮಗಳಿಗೂ ಕುಡಿಯುವ ನೀರು ಪೂರೈಸಲಾಗುತ್ತಿದೆ. ಎಲ್ಲೆಲ್ಲಿ ಯೋಜನೆ ವಿಫಲ ಗೊಂಡಿದೆಯೋ, ಅವುಗಳನ್ನೂ ಪುನಃಶ್ಚೇತನಗೊಳಿಸುವ ಬಗ್ಗೆಯೂ ಕಾರ್ಯಕ್ರಮ ರೂಪಿಸಿದ್ದೇವೆ’ ಎನ್ನುತ್ತಾರೆ ಅತೀಕ್‌.

*
ಯೋಜನೆಯ ವೈಫಲ್ಯಕ್ಕೆ ಕಾರಣರಾದ ಅಧಿಕಾರಿಗಳನ್ನು ಶಿಕ್ಷೆಗೆ ಗುರಿಪಡಿಸುತ್ತಿದ್ದೇವೆ. ಭ್ರಷ್ಟಾಚಾರಕ್ಕೆ ಅವಕಾಶ ಆಗದಂತೆ ಕಠಿಣ ಕ್ರಮ ಕೈಗೊಂಡಿದ್ದೇವೆ.
-ಎಲ್‌.ಕೆ.ಅತೀಕ್‌, ಪ್ರಧಾನ ಕಾರ್ಯದರ್ಶಿ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‌ ರಾಜ್‌ ಇಲಾಖೆ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT