ಶುಕ್ರವಾರ, 8 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಒಳನೋಟ ಪ್ರತಿಕ್ರಿಯೆಗಳು- ‘ರಸಗೊಬ್ಬರ: ತಪ್ಪದ ಪರದಾಟ’

Last Updated 1 ಜನವರಿ 2023, 13:22 IST
ಅಕ್ಷರ ಗಾತ್ರ

‘ರಸಗೊಬ್ಬರ: ತಪ್ಪದ ಪರದಾಟ’ ಎಂಬ ಶೀರ್ಷಿಕೆಯಡಿ ‘ಪ್ರಜಾವಾಣಿ’ಯಲ್ಲಿ ಭಾನುವಾರ(ಜನವರಿ 1) ಪ್ರಕಟವಾದ ‘ಒಳನೋಟ’ ವರದಿಗೆ ರಾಜ್ಯದಾದ್ಯಂತ ಓದುಗರ ಪ್ರತಿಕ್ರಿಯಿಸಿದ್ದಾರೆ. ಆಯ್ದ ಕೆಲ ಪ್ರತಿಕ್ರಿಯೆಗಳು ಇಲ್ಲಿವೆ.

‘ರಸಗೊಬ್ಬರ ನೀತಿಯ ಸ್ಪಷ್ಟತೆ ಇಲ್ಲ’

ರಸಗೊಬ್ಬರ ವಿತರಣೆ ಇತ್ತೀಚಿನ ಸಮಸ್ಯೆ ಅಲ್ಲ. ಇದು ಬಹುಕಾಲದ ಸಮಸ್ಯೆ. ಇಲ್ಲಿರುವ ಮೂಲ ಸಮಸ್ಯೆ ರಾಸಾಯನಿಕ ರಸಗೊಬ್ಬರ ನೀತಿಯಲ್ಲಿ ಸ್ಪಷ್ಟತೆ ಇಲ್ಲದಿರುವುದು. ರಸಗೊಬ್ಬರದ ಕೃತಕ ಅಭಾವ ಸೃಷ್ಟಿಸುವುದು ಮತ್ತೊಂದು ಸಮಸ್ಯೆಯಾಗಿದೆ. ಖಾಸಗಿ ಉದ್ಯಮಿಗಳು ಕಾಳಸಂತೆಯಲ್ಲಿ ಅಧಿಕ ಬೆಲೆಗೆ ಮಾರಾಟ ಮಾಡಿ ಅಧಿಕ ಲಾಭ ಪಡೆಯುತ್ತಿದ್ದಾರೆ. ಸರ್ಕಾರ ಸಹ ಉದ್ಯಮಿಗಳ ತಾಳಕ್ಕೆ ಕುಣಿಯುತ್ತಿದೆ. ರಸಗೊಬ್ಬರ ವಿತರಣೆ ಮಾಡುವ ಸೊಸೈಟಿಗಳು ಕ್ರಿಯಾಶೀಲವಾಗಿಲ್ಲ. ವಾರ್ಷಿಕವಾಗಿ ಎರಡು ಅಥವಾ ಮೂರು ಬೆಳೆಗೆ ಸಕಾಗುವಷ್ಟು ರಸಗೊಬ್ಬರ ಸಿದ್ಧತೆಗಳನ್ನು ಸರ್ಕಾರ ಮಾಡಿಕೊಳ್ಳಬೇಕು. ಇದರಿಂದ ದೇಶಕ್ಕೆ ಬೇಕಾಗುವ ಆಹಾರದ ಕೊರತೆ ನೀಗಿಸಬಹುದು.

–ನಾಗರಾಜ್ ಗುಜ್ಜಲ್ ಪೋತ್ನಾಳ

‘ಕೃತಕ ರಸಗೊಬ್ಬರದ ಅಭಾವ ಸೃಷ್ಟಿ’

ಕೃತಕವಾಗಿ ರಸಗೊಬ್ಬರದ ಅಭಾವವನ್ನು ಸೃಷ್ಟಿಸಿ ರೈತರನ್ನು ಆಥಿ೯ಕವಾಗಿ ಶೋಷಣೆ ಮಾಡಲಾಗುತ್ತಿದೆ. ಸರ್ಕಾರವು ರೈತರಿಗೆ ಅಗತ್ಯವಿರುವ ರಸಗೊಬ್ಬರವನ್ನು ಸಹಕಾರಿ ಸಂಘಗಳ ಮೂಲಕವೇ ಪೂರೈಕೆ ಮಾಡುವುದನ್ನು ಕಡ್ಡಾಯ ಮಾಡಬೇಕು. ಸಹಕಾರಿ ಸಂಘಗಳು ಇಲ್ಲದ ಕಡೆ ಸಂಘಗಳ ಸ್ಥಾಪನೆಗೆ ಮುಂದಾಗಬೇಕು ಮತ್ತು ಆರ್ಥಿಕವಾಗಿ ಸಮಸ್ಯೆ ಎದುರಿಸುತ್ತಿರುವ ಸಹಕಾರಿ ಸಂಘಗಳಿಗೆ ಅಗತ್ಯ ನೆರವು ನೀಡಿ ಅವುಗಳನ್ನು ಪುನಶ್ಚೇತನಗೊಳಿಸಬೇಕು. ಸಹಕಾರಿ ಸಂಘಗಳು ಕೃಷಿ ಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುವ ಕಾರಣ ಅವುಗಳನ್ನು ಬಲಪಡಿಸಿದರೆ ಈ ರೀತಿಯ ಅಕ್ರಮಗಳಿಗೆ ತಡೆಯೊಡ್ಡಬಹುದು. ಅಕ್ರಮ ದಾಸ್ತಾನು ಮಾಡಿ ಕಾಳಸಂತೆಯಲ್ಲಿ ಮಾರಾಟ ಮಾಡುವವರ ವಿರುದ್ಧ ಕಟ್ಟು ನಿಟ್ಟಿನ ಕ್ರಮಕೈಗೊಂಡು ರಸಗೊಬ್ಬರ ವಿತರಣೆ, ಮಾರಾಟ, ದಾಸ್ತಾನು ಮಾಡುವುದಕ್ಕೆ ಸಂಬಂಧಿಸಿದಂತೆ ನಿಯಮ ರೂಪಿಸಬೇಕು.

ರವಿಕುಮಾರ್ ಎ., ಬೆಂಗಳೂರು

‘ರೈತ ಸಂಪರ್ಕ ಕೇಂದ್ರಗಳ ಮೂಲಕ ರಸಗೊಬ್ಬರ ಪೂರೈಸಿ’

ರೈತಸಂಪರ್ಕ ಕೇಂದ್ರಗಳ ಮೂಲಕ ರಸಗೊಬ್ಬರ ಪೂರೈಸಬೇಕು. ರಸಗೊಬ್ಬರದ ಬೆಲೆ ಏರಿಕೆಯಿಂದ ರೈತರು ಸಂಕಷ್ಟದಲ್ಲಿ ಇದ್ದಾರೆ. ಖಾಸಗಿಯವರು ಅಕ್ರಮವಾಗಿ ರಸಗೊಬ್ಬರ ಸಂಗ್ರಹಿಸಿ ನಿಗದಿತ ಬೆಲೆಗಿಂತ ಅಧಿಕ ಬೆಲೆಗೆ ಮಾರಾಟ ಮಾಡುತ್ತಿದ್ದು, ರೈತರನ್ನು ಸುಲಿಗೆ ಮಾಡುತ್ತಿದ್ದಾರೆ. ಆದ್ದರಿಂದ, ಸರ್ಕಾರ ರೈತಸಂಪರ್ಕ ಕೇಂದ್ರಗಳ ಮೂಲಕ ರಸಗೊಬ್ಬರವನ್ನು ಪೂರೈಸಿ ರೈತರ ಸಂಕಷ್ಟಗಳನ್ನು ನಿವಾರಿಸಲು ಅಗತ್ಯ ಕ್ರಮ ಕೈಗೊಳ್ಳಬೇಕು.

–ಸುರೇಶ ಚೌಗಲಾ, ಬೆಳಗಾವಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT