ಶುಕ್ರವಾರ, ಮಾರ್ಚ್ 5, 2021
27 °C

ಪಿ.ಜಿ ಜೀವನ ಎಷ್ಟು ಕ್ಷೇಮ..?

ರೇಷ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಆಹಾರ, ವಸತಿ, ಸುರಕ್ಷತೆ ದೃಷ್ಟಿಯಿಂದ ಪಿ.ಜಿ ಗಳಲ್ಲಿರುವುದು ಕ್ಷೇಮ ಅನ್ನುವುದು ಕೆಲವರ ವಾದ. ಆದರೆ ಎಲ್ಲ ಪಿ.ಜಿ ಕಟ್ಟಡಗಳು ಸುರಕ್ಷಿತವೇ ? ಮಾರ್ಗಸೂಚಿ ಪಾಲನೆ ಮಾಡುತ್ತಿವೆಯೇ ಎಂಬ ಪ್ರಶ್ನೆಗೆ ತೃಪ್ತಿಕರ ಉತ್ತರ ಸಿಗುವುದಿಲ್ಲ. ಪಿ.ಜಿಗಳಲ್ಲಿ ಈ ಹಿಂದೆ ನಡೆದ ಅಹಿತಕರ ಘಟನೆಗಳು ಒಂದೊಂದೇ ಕಣ್ಣ ಮುಂದೆ ಬರುತ್ತವೆ. ಅದರಲ್ಲೂ ಹೆಣ್ಣುಮಕ್ಕಳ ಪಿ.ಜಿಗಳಲ್ಲಿ ನಡೆದ ಘಟನೆಗಳನ್ನು ಗಮನಿಸಿದಾಗ ಆತಂಕವಾಗುತ್ತದೆ.

ಕೊಲೆ, ಸುಲಿಗೆ, ಅತ್ಯಾಚಾರಗಳಂಥ ಘಟನೆಗಳು ಹೆಣ್ಣುಮಕ್ಕಳ ಪಿ.ಜಿಗಳಲ್ಲಿ ಘಟಿಸಿವೆ. ಸ್ವಚ್ಛತೆ, ಅಡುಗೆ ಕೆಲಸಕ್ಕೆ ಇದ್ದವರೇ ಪೈಶಾಚಿಕ ಕೃತ್ಯ ಎಸಗಿರುವ ನಿದರ್ಶನಗಳು ಬೆಚ್ಚಿಬೀಳಿಸುತ್ತವೆ. ಕೆಲ ಪ್ರಕರಣಗಳಲ್ಲಿ ಅಪರಾಧಿಗಳನ್ನು ಬಂಧಿಸಲು ಸಾಧ್ಯವೇ ಆಗಿಲ್ಲ. ಏಕೆಂದರೆ ಗುರುತು ಪರಿಚಯ ಇಲ್ಲದವರನ್ನೂ ಕೆಲಸಕ್ಕೆ ಸೇರಿಸಿಕೊಂಡಿರುವ ಪ್ರಕರಣಗಳಿವೆ. ಇನ್ನೂ ಕೆಲ ಪ್ರಕರಣಗಳಲ್ಲಿ ಮಾಲೀಕ ಮತ್ತು ಕುಟುಂಬ ಸದಸ್ಯರೇ ದುಷ್ಕೃತ್ಯ ಎಸಗಿದ್ದು, ದೂರು ಕೊಟ್ಟರೆ ಹತ್ಯೆ ಬೆದರಿಕೆ ಹಾಕಿದ್ದ ನಿದರ್ಶನಗಳೂ ಇವೆ.

ಇದನ್ನೂ ಓದಿ... 

ಪಿ.ಜಿ: ಆತಿಥ್ಯವಲ್ಲ, ಶೋಷಣೆ

ಪದೇ ಪದೇ ಅಪರಾಧ ಕೃತ್ಯ ಮರುಕಳಿಸಿದಾಗ ಎಚ್ಚೆತ್ತ ಪೊಲೀಸ್ ಇಲಾಖೆ, ಪಾಲಿಕೆ ಆಡಳಿತ ಪಿ.ಜಿಗಳಿಗೆ ಮಾರ್ಗಸೂಚಿ ನಿಗದಿಗೊಳಿಸಿವೆ. ಆದರೆ ಎಷ್ಟರ ಮಟ್ಟಿಗೆ ಅವು ಪಾಲನೆಯಾಗುತ್ತಿವೆ ಎಂದು ಪರಿಶೀಲಿಸಿದರೆ ನಿರಾಸೆಯಾಗುತ್ತದೆ. ನೋಂದಣಿ ಕಡ್ಡಾಯವಾಗಿದ್ದರೂ ಶೇಕಡಾ ಹತ್ತರಷ್ಟು ಪಿ.ಜಿಗಳು ನೋಂದಣಿ ಮಾಡಿಲ್ಲ. ಮಾಡಿದ್ದರೂ ನಂತರ ನವೀಕರಿಸಿಲ್ಲ. ಸುರಕ್ಷತಾ ಕ್ರಮಗಳಂತೂ ಮಾಲೀಕನ ಮರ್ಜಿಗೆ ಬಿಟ್ಟ ವಿಷಯ. ಇವುಗಳನ್ನು ಪರಿಶೀಲಿಸುವ, ಪ್ರಶ್ನಿಸುವ ಗೋಜಿಗೆ ಯಾರೂ ಹೋಗುತ್ತಿಲ್ಲ.

ಪಾಲಿಸಬೇಕಾದ ನಿಯಮಗಳು

* ಆಯಾ ವ್ಯಾಪ್ತಿಯ ಪೊಲೀಸ್ ಠಾಣೆಯಲ್ಲಿ ನಿರಾಕ್ಷೇಪಣಾ ಪತ್ರ (ಎನ್ಒಸಿ) ಪಡೆಯುವುದು ಕಡ್ಡಾಯ.

*  ಪಿ.ಜಿ ಗೆ ಸೇರಿದವರ ಬಗ್ಗೆ ಸೂಕ್ತ ದಾಖಲೆ ಸಂಗ್ರಹಿಸುವುದು ಮತ್ತು ಪಿ.ಜಿ ಯಲ್ಲಿ ನೌಕರಿಯಲ್ಲಿರುವ ಸಿಬ್ಬಂದಿ ಬಗ್ಗೆ ಪೊಲೀಸ್ ಠಾಣೆಗೆ ಮಾಹಿತಿ ನೀಡುವುದು ಕಡ್ಡಾಯ.

*  ಸಿಸಿ ಟಿವಿ ಕ್ಯಾಮೆರಾ ಕಡ್ಡಾಯ

*  ಭದ್ರತಾ ಸಿಬ್ಬಂದಿ ನೇಮಕ ಕಡ್ಡಾಯ

*  ಶುಚಿತ್ವ ಹಾಗೂ ಆಹಾರ ಗುಣಮಟ್ಟದ ನಿಗಾ ವಹಿಸಬೇಕು

*  ಮಹಿಳಾ ಪಿ.ಜಿ ಗಳಲ್ಲಿ ಮಹಿಳಾ ವಾರ್ಡನ್, ಅಡುಗೆ ಮತ್ತು ಸ್ವಚ್ಛತಾ ಕಾರ್ಯಕ್ಕೆ ಮಹಿಳಾ ಸಿಬ್ಬಂದಿ ಕಡ್ಡಾಯ

*  ಪ್ರವೇಶದ್ವಾರ ಹಾಗೂ ಕಂಪೌಂಡ್‌ ಸುರಕ್ಷತೆ ಕೂಡ ಮುಖ್ಯ

**
ಉದ್ಯೋಗ, ಸಂದರ್ಶನ, ಪ್ರವೇಶ ಪರೀಕ್ಷೆ ಹಾಗೂ ವೃತ್ತಿಪರ ಕೋರ್ಸ್‌ಗಳ ಪ್ರವೇಶ ಪರೀಕ್ಷೆ ಬರೆಯಲು ಬೆಂಗಳೂರಿಗೆ ಬರುವ ಹೆಣ್ಣುಮಕ್ಕಳಿಗೆ ಸುರಕ್ಷಿತ ಆಶ್ರಯ, ರಕ್ಷಣೆ ಒದಗಿಸುವ ಸಲುವಾಗಿ ನಗರದಲ್ಲಿ ಟ್ರಾನ್ಸಿಟ್ ಹಾಸ್ಟೆಲ್‌ಗಳನ್ನು ತೆರೆಯಲಾಗಿದೆ. ಕೇಂದ್ರ ಸರ್ಕಾರದ ಉದ್ಯೋಗಸ್ಥ ಮಹಿಳೆಯರ ವಸತಿಗೃಹ ನಿರ್ಮಾಣ ಯೋಜನೆಯಡಿ ನಿರ್ಮಿಸಿ ಕಾರ್ಯ ನಿರ್ವಹಿಸುತ್ತಿರುವ ಈ ಹಾಸ್ಟೆಲ್‌ಗಳಲ್ಲಿ 3 ದಿನ ಉಚಿತ ಊಟ ಹಾಗೂ ವಸತಿ ನೀಡಲಾಗುತ್ತದೆ. ಬೆಂಗಳೂರಿನಲ್ಲಿ ಒಟ್ಟು 13 ಟ್ರಾನ್ಸಿಟ್ ಹಾಸ್ಟೆಲ್‌ಗಳಿದ್ದು ಅದರಲ್ಲಿ ದಶಕಗಳಿಂದ ಯಶಸ್ವಿಯಾಗಿ ನಡೆದುಕೊಂಡು ಬಂದು, ‘ದಿ ಬೆಸ್ಟ್’ ಎಂದು ಹೆಸರು ಪಡೆದುಕೊಂಡಿರುವುದು ‘ಯೂನಿವರ್ಸಿಟಿ ವುಮೆನ್ ಯೂತ್ ಅಸೋಸಿಯೇಷನ್ ಹಾಸ್ಟೆಲ್’

ಬೆಂಗಳೂರಿನಂತಹ ನಗರದಲ್ಲಿ ಇಂಥದ್ದೊಂದು ಹಾಸ್ಟೆಲ್ ಇದೆ ಎಂದು ಬಹುಶಃ ಅನೇಕರಿಗೆ ತಿಳಿದಿರಲಿಕ್ಕಿಲ್ಲ. ಇದ್ದೂ ಅರ್ಹರಿಗೆ ಉಪಯೋಗಕ್ಕೆ ಸಿಗದ ಇಂಥ ಹಾಸ್ಟೆಲ್‌ಗಳ ಬಗ್ಗೆ ಅಗತ್ಯ ಪ್ರಚಾರ ನೀಡುವ ಕೆಲಸ ಆಗಬೇಕಿದೆ. ಬೆಂಗಳೂರು ಸೇರಿದಂತೆ ಶಿಕ್ಷಣ, ಉದ್ಯೋಗಕ್ಕೆ ಹೆಸರು ಮಾಡಿರುವ ಇತರೆ ನಗರಗಳಲ್ಲೂ ಇಂತಹ ಗುಣಮಟ್ಟದ ಹಾಸ್ಟೆಲ್‌ಗಳನ್ನು ಸ್ಥಾಪಿಸುವ ಮೂಲಕ ಮಹಿಳೆಯರು, ಯುವತಿಯರು ಹಾಗೂ ಮಕ್ಕಳ ಸುರಕ್ಷಿತ ಆಶ್ರಯಕ್ಕೆ ಒತ್ತು ನೀಡಬೇಕು.

**

ಪಿ.ಜಿ ನಡೆಸಲು ನಿಗದಿಗೊಳಿಸಿರುವ ಮಾರ್ಗಸೂಚಿ

* ಪಿ.ಜಿ ಮಾಲೀಕ ಅಥವಾ ಕುಟುಂಬ ಸದಸ್ಯರು ಪಿ.ಜಿ ಯಲ್ಲೇ ಉಳಿಯುವುದು ಕಡ್ಡಾಯ.

* ಉತ್ತಮ ನೈರ್ಮಲ್ಯ ಹಾಗೂ ಸ್ವಚ್ಛತೆ ಕಾಯ್ದುಕೊಳ್ಳಬೇಕು.

* ಒಬ್ಬರಿಗೆ ಕನಿಷ್ಟ 50 ಚದರ ಅಡಿಯಷ್ಟು ಕನಿಷ್ಠ ಜಾಗ ನೀಡಬೇಕು.

* ಆರೋಗ್ಯ ಇಲಾಖೆ ಮಾನದಂಡದ ಪ್ರಕಾರ 5 ಮಂದಿಗೆ ಒಂದು ಶೌಚಾಲಯ ಇರಬೇಕು.

* ಕಟ್ಟಡ ಮಾಲೀಕರೇ ಪಿ.ಜಿ ನಡೆಸಬೇಕು. ಬಾಡಿಗೆ ನೀಡಬಾರದು.

* ಕಟ್ಟಡದಲ್ಲಿ ಶಾಂತಿ, ಶಿಸ್ತು ಹಾಗೂ ನಿರ್ವಹಣೆ ಹೊಣೆ ಸ್ವತಃ ಮಾಲೀಕರದ್ದೇ ಆಗಿರಬೇಕು. ನೆರೆ ಹೊರೆಯಲ್ಲಿ ಸಾಮರಸ್ಯದ ವಾತಾವರಣ ಕಾಪಾಡಿಕೊಳ್ಳಬೇಕು.

* ಅನುಮೋದಿತ ಕಟ್ಟಡದ ನೀಲನಕ್ಷೆ ಮೀರಿ ಹೊಸ ಅಡುಗೆ ಕೋಣೆ ನಿರ್ಮಿಸುವಂತಿಲ್ಲ.

* ಪಿ.ಜಿ ವಾಸಿಗಳ ಹೆಸರು ವಿಳಾಸವನ್ನು ಕಟ್ಟಡದ ಆವರಣದಲ್ಲಿ ಕಡ್ಡಾಯವಾಗಿ ಇರಿಸಬೇಕು.
**

ಸರ್ಕಾರದ ಹೊಣೆ ಏನು?

ಪಿ.ಜಿ.ಗಳ ಈ ಅವ್ಯವಸ್ಥೆಗೆ ಕಾರಣ ಹುಡುಕುತ್ತಾ ಹೊರಟರೆ ಸರ್ಕಾರವೂ ಕಾರಣ ಎನ್ನಬಹುದು. ನಗರಗಳಲ್ಲಿ ಪಿ.ಜಿ ಗಳು ಅನಿವಾರ್ಯ. ಆದರೆ ಅವುಗಳ ಮೇಲೆ ನಿಗಾ ವ್ಯವಸ್ಥೆ ಇಲ್ಲ. ದೂರು ಬಂದಾಗಲಷ್ಟೇ ‘ಹೋ, ನಮ್ಮಲ್ಲೂ ಪಿ.ಜಿ ಗಳಿವೆ, ಅಲ್ಲಿ ಅಕ್ರಮಗಳು ನಡೆಯುತ್ತಿವೆ, ಅವ್ಯವಸ್ಥೆ ತಾಂಡವವಾಡುತ್ತಿದೆ’ ಎಂದು ಬೊಬ್ಬೆ ಹಾಕುತ್ತಾರೆಯೇ ಹೊರತು ಮೊದಲೇ ಪಿ.ಜಿ ಗಳ ಆಹಾರದ ಗುಣಮಟ್ಟ ಹಾಗೂ ಭದ್ರತೆ ಮೇಲೆ ನಿರಂತರ ನಿಗಾ ವ್ಯವಸ್ಥೆ ರೂಪಿಸುವ ಕಡೆ ಗಮನಹರಿಸುವುದಿಲ್ಲ.

ಮಧ್ಯಮ ವರ್ಗದ ಕುಟುಂಬದವರೇ ಹೆಚ್ಚಿನ ಸಂಖ್ಯೆಯಲ್ಲಿ ಇರುವ ಕರ್ನಾಟಕದಂತಹ ರಾಜ್ಯಕ್ಕೆ ನಿಜವಾಗಿಯೂ ಅವಶ್ಯಕತೆ ಇರುವುದು ಸರ್ಕಾರಿ ವಸತಿ ನಿಲಯಗಳು. ಸರ್ಕಾರವೇ ನಿಗಾ ವಹಿಸಿ ವಸತಿ ನಿಲಯಗಳನ್ನು ನಿರ್ಮಿಸಿ ಸೂಕ್ತ ವ್ಯವಸ್ಥೆ ಕಲ್ಪಿಸಿದರೆ ಖಾಸಗಿ ಪಿ.ಜಿ ಗಳ ಅಟ್ಟಹಾಸ, ಶೋಷಣೆಯನ್ನು ಕೊಂಚ ಮಟ್ಟಿಗೆ ಕಡಿಮೆ ಮಾಡಬಹುದು. ಖಾಸಗಿ ದರ್ಬಾರ್ ಗೆ ಅಂತ್ಯ ಹಾಡಬಹುದು.

**

ಅಪರಾಧ ಪ್ರಕರಣದ ಸ್ಯಾಂಪಲ್‌ಗಳು: 2014ರಲ್ಲಿ ಜಾರ್ಖಂಡ್ ಮೂಲದ 25 ವರ್ಷ ವಯಸ್ಸಿನ ಯುವತಿ ಪಿ.ಜಿ ಯಲ್ಲಿ ಮಲಗಿದ್ದಾಗ ತನ್ನ ಮೇಲೆ ಅತ್ಯಾಚಾರ ನಡೆಯಿತು ಎಂದು ದೂರು ನೀಡಿದ್ದರು. ಚಿನ್ನದ ಸರ ಕದಿಯಲು ಬಂದ ವ್ಯಕ್ತಿ ಅತ್ಯಾಚಾರ ಎಸಗಿದ ಎಂದು ದೂರಿನಲ್ಲಿ ತಿಳಿಸಿದ್ದರು. ಬೆಳಗಿನ ಪಾಳಿ, ಮಧ್ಯಾಹ್ನ ಮತ್ತು ರಾತ್ರಿ ಪಾಳಿಯಲ್ಲಿ ಕೆಲಸ ಮಾಡುವ ಯವತಿಯರು ಒಂದೇ ರೂಮಿನಲ್ಲಿ ಇದ್ದಾಗ ಒಬ್ಬರು ಮಲಗಿದ್ದಾಗ ಇನ್ನೊಬ್ಬರು ಎದ್ದು ಹೋಗ ಬೇಕಾಗುತ್ತದೆ. ಹೀಗೆ ಆ ಜಾರ್ಖಂಡ್‌ನ ಹುಡುಗಿ ಮಲಗಿದ್ದಾಗ ಅಪರಿಚಿತ ಆರೋಪಿ ಕಿಟಕಿ ಪಕ್ಕ ಇಟ್ಟಿದ್ದ ಕೀ ತೆಗೆದು ಕೊಠಡಿ ಪ್ರವೇಶಿಸಿ ಅತ್ಯಾಚಾರ ಎಸಗಿದ್ದ ಎಂದರೆ ಪಿ.ಜಿಗಳು ಎಷ್ಟು ಕ್ಷೇಮ ಎಂಬ ಪ್ರಶ್ನೆ ಉದ್ಭವಿಸದೆ ಇರದು. ಚಿನ್ನ ಕದಿಯಲು ಬಂದಿದ್ದ ಆತ ಪ್ರತಿರೋಧ ತೋರಿದಾಗ ಅತ್ಯಾಚಾರ ಮಾಡಿದ್ದ ಎಂಬುದು ಯುವತಿಯ ದೂರಿನಲ್ಲಿದ್ದ ಅಂಶ. ಆತ ಪಿ.ಜಿ ಕಂಪೌಂಡ್ ಹಾರಿ, ಕಟ್ಟಡದೊಳಗೆ ನುಗ್ಗಿ ರೂಮಿಗೆ ಪ್ರವೇಶಿಸುವವರೆಗೂ ಯಾರೂ ನೋಡಲಿಲ್ಲ ಎಂದರೆ ಹೆಣ್ಣುಮಕ್ಕಳ ಸುರ ಕ್ಷತೆ ಬಗ್ಗೆ ಆತಂಕ ಆಗದೆ ಇರುತ್ತದೆಯೇ? ಹಾಗೆಯೇ ಲೇಡಿಸ್ ಹಾಸ್ಟೆಲ್‌ ರೆಡ್ಡಿ ಎಂದೇ ಖ್ಯಾತನಾಗಿದ್ದ ಶಿವರಾಮ ರೆಡ್ಡಿ ಸುಲಿಗೆ ಉದ್ದೇಶದಿಂದ ಪಿ.ಜಿ ಗಳಿಗೆ ನುಗ್ಗು ತ್ತಿದ್ದ. ಅಲ್ಲಿ ಹುಡು ಗಿಯರನ್ನು ಕಂಡರೆ ಅತ್ಯಾ ಚಾರ ಎಸಗಿ ಪರಾರಿ ಆಗುತ್ತಿದ್ದ. ಇಂತಹ ವಿಕೃತರು ಸುಲುಭವಾಗಿ ಪಿ.ಜಿಗಳನ್ನು ಪ್ರವೇಶಿಸುತ್ತಾರೆ ಎಂದರೆ ಸುರಕ್ಷತೆಯ ಬಗ್ಗೆ ಯೋಚಿಸಬೇಕಲ್ಲವೆ?

**

ಕೆಲಸ ಹುಡುಕಲು ಬೆಂಗಳೂರಿಗೆ ಬಂದು 2 ತಿಂಗಳಾಯ್ತು. ನಾನು, ನನ್ನ ತಂಗಿ ಪಿ.ಜಿ ಯಲ್ಲಿ ಇದ್ದೇವೆ. ಒಬ್ಬರಿಗೆ ಪ್ರತಿ ತಿಂಗಳು ₹10,400 ತೆಗೆದುಕೊಳ್ಳುತ್ತಾರೆ. ಆದರೆ ಇಬ್ಬರಿಗೂ ಸೇರಿ ಒಂದೇ ಬೆಡ್‌. ಊಟ, ಸ್ವಚ್ಛತೆ ಎಲ್ಲವೂ ಚೆನ್ನಾಗಿದೆ. ಅವರ ಧರ್ಮಕ್ಕೆ ಸೇರಿದವರನ್ನು ನೋಡಿಕೊಂಡಂತೆ ನಮ್ಮನ್ನು ನೋಡಿಕೊಳ್ಳುವುದಿಲ್ಲ. ಭೇದಭಾವ ಮಾಡುತ್ತಾರೆ. ಬಿಸಿನೀರು ಕೊಡುವುದಿಲ್ಲ. 1ನೇ ತಾರೀಕು ಬಂದರೆ ಸಾಕು ಬಾಡಿಗೆ ನೀಡಿ ಎಂದು ಹತ್ತಾರು ಬಾರಿ ಕೇಳುತ್ತಾರೆ. ಅವರ ಕಡೆಯವರನ್ನು ಕೇಳುವುದಿಲ್ಲ.
– ಉದ್ಯೋಗಾಕಾಂಕ್ಷಿ

**
ಕೆಲಸಕ್ಕೆ ಸೇರಲು ಬೆಂಗಳೂರಿಗೆ ಬಂದಾಗ ಪಿ.ಜಿ ಯಲ್ಲಿದ್ದೆ. ಪಿ.ಜಿ ಗಳ ಕಲ್ಪನೆಯೂ ಇಲ್ಲದ ನನಗೆ ಅದು ನರಕವನ್ನೇ ತೋರಿಸಿತ್ತು. ಸೇರಿದ ತಿಂಗಳಲ್ಲೇ ಮೊಬೈಲ್, ಲ್ಯಾಪ್‌ಟಾಪ್ ಕಳೆದುಕೊಂಡಿದ್ದೆ. ಮಾಲೀಕರು, ನಿಮ್ಮ ವಸ್ತುಗಳನ್ನು ಕಾಯ್ದುಕೊಂಡು ಕೂರಲು ಆಗುವುದಿಲ್ಲ. ನಿಮಗೆ ಎಚ್ಚರ ಇರಬೇಕು ಎಂಬ ಉತ್ತರ ನೀಡಿದ್ದರು. ಸರಿಯಾಗಿ ಊಟ, ತಿಂಡಿ ನೀಡುತ್ತಿರಲಿಲ್ಲ. ಪಿ.ಜಿ ಎಂದರೆ ಭಯ.
- ನಿತಿನ್ ಕುಮಾರ್, ಐಟಿ ಉದ್ಯೋಗಿ 

**
ನಾನು ಇಂಟರ್ನ್‌ಶಿಪ್‌ಗೆ ಬಂದಾಗ ಶಿವಾಜಿನಗರದ ಬಳಿಯ ಪಿ.ಜಿ ಯಲ್ಲಿದ್ದೆ. ಅದು ಚೆನ್ನಾಗಿತ್ತು. ಓನರ್‌ ನಮ್ಮನ್ನು ಮನೆ ಮಕ್ಕಳಂತೆ ನೋಡಿಕೊಳ್ಳುತ್ತಿದ್ದರು. ಊಟ, ಸ್ವಚ್ಛತೆ, ಸೌಕರ್ಯ ಎಲ್ಲವೂ ಚೆನ್ನಾಗಿತ್ತು. ವಿದ್ಯಾರ್ಥಿಯಾಗಿದ್ದ ಕಾರಣ ತಿಂಗಳಿಗೆ ನೀಡುತ್ತಿದ್ದ ₹ 4000 ಸ್ವಲ್ಪ ಹೊರೆ ಅನ್ನಿಸಿತ್ತು.
ಶಿವಾನಂದ ಹರ್ಲಾಪುರ, ವಿದ್ಯಾರ್ಥಿ

**
ಬಿಬಿಎಂಪಿ ವತಿಯಿಂದ ಪಿ.ಜಿ ಗಳಲ್ಲಿನ ಆಹಾರ ಹಾಗೂ ಸ್ವಚ್ಛತೆ ಬಗ್ಗೆ ಗಮನ ವಹಿಸುತ್ತೇವೆ. ಪಿ.ಜಿ ವಾಸಿಗಳು ದೂರು ದಾಖಲಿಸಿದರೆ ಆ ವ್ಯಾಪ್ತಿ ಅಧಿಕಾರಿಗಳು ಪಿ.ಜಿ ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತಾರೆ. ತಪ್ಪಿದ್ದರೆ ಕ್ರಮ ನಿಶ್ಚಿತ.
- ವಿಜಯೇಂದ್ರ, ಬಿಬಿಎಂಪಿ ಆರೋಗ್ಯ ಅಧಿಕಾರಿ

**

‘ನಾನು ಯೂನಿವರ್ಸಿಟಿ ವುಮೆನ್ ಅಸೋಸಿಯೇಷನ್‌, ಉದ್ಯೋಗಸ್ಥ ಮಹಿಳೆಯರ ವಸತಿಗೃಹದಲ್ಲಿ ಕಳೆದ 27 ವರ್ಷಗಳಿಂದ ವಾರ್ಡನ್‌. ನಮ್ಮದು ಟ್ರಾನ್ಸಿಟ್‌ ಹಾಸ್ಟೆಲ್‌. ಪರೀಕ್ಷೆ ಬರೆಯಲು, ಸಂದರ್ಶನ ಎದುರಿಸಲು ಬರುವವರಿಗೆ ಮೂರು ದಿನದ ಮಟ್ಟಿಗೆ ಉಚಿತ ವಸತಿ, ಊಟದ ವ್ಯವಸ್ಥೆ ಇದೆ. ನಾನು ವಾರ್ಡನ್ ಆದ ಮೇಲೆ ಸುಮಾರು ಐವತ್ತು ಸಾವಿರಕ್ಕೂ ಹೆಚ್ಚು ಮಂದಿ ಇಲ್ಲಿ ಇದ್ದು ಹೋಗಿರಬಹುದು. ಇಂತಹ ಹಾಸ್ಟೆಲ್‌ಗಳು ಮಧ್ಯಮ ವರ್ಗದ ಹೆಣ್ಣುಮಕ್ಕಳಿಗೆ ವಸತಿ, ಊಟಕ್ಕೆ ಅವಕಾಶ ಕಲ್ಪಿಸುತ್ತವೆ. ಕಡಿಮೆ ವೆಚ್ಚದಲ್ಲಿ ಇಂತಹ ಸೌಲಭ್ಯ ಸಿಗುವ ಹಾಸ್ಟೆಲ್‌ಗಳು ಇನ್ನಷ್ಟು ಬೇಕು. ದೂರದ ಊರುಗಳಿಂದ ಬರುವ ಹೆಣ್ಣುಮಕ್ಕಳಿಗೆ ಸುರಕ್ಷತೆ ಜತೆಗೆ ಉತ್ತಮ ಸೌಲಭ್ಯವೂ ಸಿಗುತ್ತದೆ. ಹೆಣ್ಣುಮಕ್ಕಳ ಹಾಸ್ಟೆಲ್‌ಗೆ ವಾರ್ಡನ್ ಆಗುವುದು ಸುಲಭದ ಮಾತಲ್ಲ.
– ಲೀಲಾವತಿ ಮನ್ನೇರಾ,  ವಾರ್ಡನ್‌, ಯೂನಿವರ್ಸಿಟಿ ವುಮೆನ್ ಅಸೋಸಿಯೇಷನ್‌

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು