ಮಂಗಳವಾರ, ಏಪ್ರಿಲ್ 7, 2020
19 °C

ಒಳನೋಟ | ಭೂತಳ ಸೇರದ ಮಳೆ ನೀರು

ಪ್ರವೀಣ ಕುಮಾರ್ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ವರ್ಷದಲ್ಲಿ ಸರಾಸರಿ 1,779 ಮಿ.ಮೀ. ಮಳೆಯಾಗುವ ರಾಜ್ಯ ನಮ್ಮದು. ನಮ್ಮಲ್ಲಿ ವರ್ಷಕ್ಕೆ ಸರಾಸರಿ 408 ಮಿ.ಮೀ.ನಿಂದ 5,051 ಮಿ.ಮೀ ಮಳೆಯಾಗುವ ಪ್ರದೇಶಗಳಿವೆ. ಆದರೂ ರಾಜ್ಯದ ಸ್ಥಿರ ಜಲ ಮಟ್ಟದ ಸರಾಸರಿ ವರ್ಷದಿಂದ ವರ್ಷಕ್ಕೆ ಕುಸಿಯುತ್ತಲೇ ಸಾಗಿದೆ. 176 ತಾಲ್ಲೂಕುಗಳಲ್ಲಿ 158ರಲ್ಲಿ ಅಂತರ್ಜಲ ಮಟ್ಟ ಕುಸಿತ ಕಂಡಿದೆ.

ಜಲನೀತಿಯನ್ನು ರೂಪಿಸುವ ಮೂಲಕ ಮಳೆ ನೀರು ಇಂಗಿಸುವುದಕ್ಕೆ 2002ರಲ್ಲೇ ಕ್ರಮ ಕೈಗೊಂಡ ರಾಜ್ಯ ನಮ್ಮದು. 2009ರಲ್ಲೇ ಕಟ್ಟಡಗಳಲ್ಲಿ ಮಳೆನೀರು ಸಂಗ್ರಹ ಅಥವಾ ಇಂಗಿಸುವುದನ್ನು ಕಡ್ಡಾಯಗೊಳಿಸುವ ಕಾಯ್ದೆಯನ್ನು ರೂಪಿಸಿದ ಕೀರ್ತಿಯ ಹೊರತಾಗಿಯೂ ಅನೇಕ ತಾಲ್ಲೂಕುಗಳಲ್ಲಿ ಸ್ಥಿರ ಜಲ ಮಟ್ಟ ಈ ಹತ್ತು ವರ್ಷಗಳಲ್ಲಿ ಸರಾಸರಿ 40 ಮೀಟರ್‌ಗಳಿಗಿಂತಲೂ ಆಳಕ್ಕೆ ಇಳಿದಿದೆ. ಇದಕ್ಕೆ ಬರಗಾಲದತ್ತ ಬೊಟ್ಟು ಮಾಡಲಾಗುತ್ತದೆ. ಆದರೆ, ವಾರ್ಷಿಕ ಸರಾಸರಿ ಮಳೆಯ ಪ್ರಮಾಣ ಕಡಿಮೆಯಾಗದ ತಾಲ್ಲೂಕುಗಳಲ್ಲೂ ಅಂತರ್ಜಲ ಮಟ್ಟ ಪಾತಾಳಕ್ಕೆ ಇಳಿದಿರುವುದೇಕೆ ಎಂಬುದು ಒಗಟಾಗಿಯೇ ಉಳಿದಿದೆ.

ಬೆಂಗಳೂರಿನಲ್ಲಿ ವಾರ್ಷಿಕ ಸರಾಸರಿ 770 ಮಿ.ಮೀ ಗಳಷ್ಟು ಮಳೆಯಾಗುತ್ತದೆ. ಇದರಿಂದ ಸರಿಸುಮಾರು 14.80 ಟಿಎಂಸಿ ಅಡಿಗಳಷ್ಟು ನೀರು ಲಭಿಸುತ್ತದೆ. ಆದರೂ ನಗರದ ನಿವಾಸಿಗಳ ದಾಹ ತೀರಿಸಲು ಜಲಮಂಡಳಿ ಕೆಆರ್‌ಎಸ್‌ ಜಲಾಶಯದಿಂದ ನಿತ್ಯ 144.50 ಕೋಟಿ ಲೀಟರ್‌ (ವರ್ಷಕ್ಕೆ 19 ಟಿಎಂಸಿ ಅಡಿ) ನೀರನ್ನು ತರಿಸಿಕೊಳ್ಳುತ್ತಿದೆ.

2009ರ ಆ.19ರಿಂದ ಬಳಿಕ ನಿರ್ಮಾಣವಾದ 1200 ಚದರ ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣದ ಕಟ್ಟಡಗಳಲ್ಲಿ ಹಾಗೂ 2400 ಚ.ಅಡಿಗಳಿಗಿಂತ ಹೆಚ್ಚು ವಿಸ್ತೀರ್ಣದ ಎಲ್ಲ ಕಟ್ಟಡಗಳಲ್ಲಿ (ಹಳೆಯವು ಸೇರಿ) ಮಳೆ ನೀರು ಸಂಗ್ರಹಿಸುವುದು ಅಥವಾ ಇಂಗಿಸುವುದು ಕಡ್ಡಾಯ. ಇದಕ್ಕೆ ಮೂರು ತಿಂಗಳು ಕಾಲಾವಕಾಶ ನೀಡಲಾಗುತ್ತದೆ. ನಂತರವೂ ಅಳವಡಿಸಿಕೊಳ್ಳದಿದ್ದರೆ ಪ್ರತಿ ತಿಂಗಳ ನೀರಿನ ಶುಲ್ಕದ ಶೇ 25ರಷ್ಟು, ಆರು ತಿಂಗಳ ಬಳಿಕವೂ ಅಳವಡಿಸದಿದ್ದರೆ ಶೇ 50ರಷ್ಟು ದಂಡ ವಿಧಿಸಲಾಗುತ್ತದೆ.

ಜಲಮಂಡಳಿಯಿಂದ 9. 80 ಲಕ್ಷ ಕಟ್ಟಡಗಳಿಗೆ ನೀರಿನ ಸಂಪರ್ಕ ಒದಗಿಸಲಾಗಿದೆ. ಅವುಗಳಲ್ಲಿ 1.28 ಲಕ್ಷ ಕಟ್ಟಡಗಳಲ್ಲಿ ಮಳೆ ನೀರು ಸಂಗ್ರಹ ವ್ಯವಸ್ಥೆ ಅಳವಡಿಸಲಾಗಿದೆ. 57,712 ಕಟ್ಟಡಗಳ ಮಾಲೀಕರಿಗೆ ಮಳೆ ನೀರು ಇಂಗಿಸುವುದಕ್ಕಿಂತ ದಂಡ ಕಟ್ಟುವುದರ ಮೇಲೆಯೇ ಒಲವು ಜಾಸ್ತಿ! ಇನ್ನು ಕೆಲವರು ಕಣ್ಕಟ್ಟಿಗಷ್ಟೇ ಈ ವ್ಯವಸ್ಥೆಯನ್ನು ಅಳವಡಿಸುತ್ತಾರೆ. ನೀರಿನ ಸಂಪರ್ಕ ಪಡೆದ ಬಳಿಕ ಇವುಗಳ ನಿರ್ವಹಣೆ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳುವುದಿಲ್ಲ. ಮತ್ತೊಂದೆಡೆ ಅಧಿಕಾರಿಗಳು ಇವುಗಳನ್ನು ಪರಿಶೀಲಿಸುವ ಗೋಜಿಗೂ ಹೋಗುವುದಿಲ್ಲ. ರಾಜ್ಯದ ಇತರ ನಗರಗಳಲ್ಲಂತೂ ಈ ನಿಯಮ ಕಡತಗಳಿಗೆ ಸೀಮಿತ. 

ಬೆಂಗಳೂರಿನಲ್ಲಿ ಕುಡಿಯುವ ನೀರಿನ ನಿರ್ವಹಣೆ ಬಗ್ಗೆ ಅಧ್ಯಯನ ನಡೆಸಿದ್ದ ಭಾರತೀಯ ವಿಜ್ಞಾನ ಸಂಸ್ಥೆಯ ಪರಿಸರ ವಿಜ್ಞಾನ ಕೇಂದ್ರ ಕೆಲವೊಂದು ಶಿಫಾರಸುಗಳನ್ನು ಮಾಡಿತ್ತು. ನಗರದಲ್ಲಿ ಉಳಿದುಕೊಂಡಿರುವ 210 ಕೆರೆಗಳ ಹೂಳೆತ್ತಿ, ಅವುಗಳ ಒಡಲಿಗೆ ಮಳೆ ನೀರು ಮಾತ್ರ ಸೇರುವಂತೆ ಮಾಡಬೇಕು. ಮಳೆ ನೀರು ಸಂಗ್ರಹಕ್ಕೆ/ಇಂಗಿಸುವುದಕ್ಕೆ ಉತ್ತೇಜನ ನೀಡಬೇಕು. ನಗರದಲ್ಲಿ ನಿತ್ಯ ಉತ್ಪಾದನೆಯಾಗುವ 157.3 ಕೋಟಿ ಲೀಟರ್‌ ತ್ಯಾಜ್ಯ ನೀರನ್ನು ಶುದ್ಧೀಕರಿಸಿ ಮರುಬಳಕೆ ಮಾಡಬೇಕು. ಆಗ ನಗರಕ್ಕೆ ಹೊರಗಿನಿಂದ ನೀರು ತರಬೇಕಾಗಿಲ್ಲ ಎಂದು ಸಲಹೆ ನೀಡಿತ್ತು.

ನೀರಿನ ಸ್ವಾವಲಂಬನೆ ಸಾಧಿಸುವಂತಹ ಇಂತಹ ಸುಲಭೋಪಾಯಗಳು ಸರ್ಕಾರಕ್ಕೆ ಪಥ್ಯವಾಗುವುದಿಲ್ಲ. ಜನಸಂಖ್ಯೆ ಹೆಚ್ಚಾದಂತೆ ನಗರದ ನೀರಿನ ಬೇಡಿಕೆ ಪೂರೈಸಲು ಸರ್ಕಾರ ಶರಾವತಿ ನದಿಯ ನೀರು ತರಲು 12 ಸಾವಿರ ಕೋಟಿ ಖರ್ಚು ಮಾಡಲು ಪ್ರಸ್ತಾವ ಸಿದ್ಧಪಡಿಸಿದೆ. ಅಧಿಕಾರಿಗಳಿಗೆ ಹಾಗೂ ರಾಜಕಾರಣಿಗಳಿಗೆ ಇಲ್ಲೇ ಧರೆಗಿಳಿದು ಹರಿಯುವ ಮಳೆನೀರನ್ನು ತಡೆದು ಜತನದಿಂದ ಬಳಸುವುದಕ್ಕಿಂತ ನೂರಾರು ಕಿ.ಮೀ. ದೂರದ ಊರುಗಳಿಂದ ನೀರು ಹರಿಸುವ ಬಗ್ಗೆಯೇ ಹೆಚ್ಚು ಪ್ರೀತಿ!

ರಾಜ್ಯದಲ್ಲಿ ಪ್ರತಿ ವರ್ಷ ಬೇಸಿಗೆಯಲ್ಲಿ ಕುಡಿಯುವ ನೀರಿನ ತೀವ್ರ ಕೊರತೆ ಎದುರಾಗುತಿದ್ದರೂ ನೀರನ್ನು ಜತನವಾಗಿ ಬಳಸುವ ಗಂಭೀರ ಪ್ರಯತ್ನಗಳು ಇನ್ನೂ ಚುರುಕುಪಡೆದಿಲ್ಲ. ಅದರ ಬದಲು ಕೊಳವೆಬಾವಿ ಕೊರೆಯುವ ಮೂಲಕ ಅಂತರ್ಜಲ ಮೂಲಕ್ಕೆ ಮನಸೋ ಇಚ್ಛೆ ಕನ್ನಹಾಕಲಾಗುತ್ತಿದೆ. ಕೊಳವೆಬಾರಿ ಕೊರೆಯಲು ಅಂತರ್ಜಲ ಪ್ರಾಧಿಕಾರದ ಅನುಮತಿ ಕಡ್ಡಾಯ. ಆದರೆ, ಅಕ್ರಮವಾಗಿ ಕೊಳವೆಬಾವಿ ಕೊರೆಯುವುದರ ಮೇಲೆ ನಿಗಾ ಇಡುವ ಯಾವ ವ್ಯವಸ್ಥೆಯೂ ಇಲ್ಲ ಎಂಬುದನ್ನು ಸ್ವತಃ ಅಂತರ್ಜಲ ನಿರ್ದೇಶನಾಲಯದ ಅಧಿಕಾರಿಗಳೇ ಒಪ್ಪಿಕೊಳ್ಳುತ್ತಾರೆ.

ಮಳೆಗಾಲದಲ್ಲಿ ಕಣ್ಣೆದುರೇ ನೀರು ಹರಿದು ಹೋಗುತ್ತಿದ್ದರು ಅವುಗಳನ್ನು ತಡೆದು ನಿಲ್ಲಿಸಿ ಬಳಸುವ ಬಗ್ಗೆ ತಲೆಯನ್ನೇ ಕೆಡಿಸಿಕೊಳ್ಳದ ಪಂಚಾಯತ್‌ರಾಜ್‌ ಇಲಾಖೆ, ಬೇಸಿಗೆಯಲ್ಲಿ ನೀರಿನ ಬವಣೆ ಕಾಣಿಸಿಕೊಳ್ಳುತ್ತಿದ್ದಂತೆಯೇ ಎಲ್ಲೆಂದರಲ್ಲಿ ಕೊಳವೆಬಾವಿ ಕೊರೆಸುವ ಕಾರ್ಯವನ್ನು ಸಮರೋಪಾದಿಯಲ್ಲಿ  ನಿರ್ವಹಿಸುತ್ತದೆ. ಈ ಇಲಾಖೆ ನಾಲ್ಕು ವರ್ಷಗಳಲ್ಲಿ 63 ಸಾವಿರಕ್ಕೂ ಅಧಿಕ ಬೋರ್‌ವೆಲ್‌ಗಳನ್ನು ಕೊರೆಯಿಸಿದೆ. ಅವುಗಳು ಬರಿದಾದ ಬಳಿಕ ಮಳೆ ನೀರು ಮರುಪೂರಣದ ಮೂಲಕ ಅವುಗಳನ್ನು ಪುನಶ್ಚೇತನಗೊಳಿಸುವ ಪ್ರಯತ್ನಗಳೂ ನಿರೀಕ್ಷಿತ ಪ್ರಮಾಣದಲ್ಲಿ ನಡೆಯುತ್ತಿಲ್ಲ.

ಜಲ ಸ್ಥಿರ ಮಟ್ಟ ಅಪಾಯದ ಹಂತ ಮೀರಿ ಕೆಳಕ್ಕಿಳಿದ ಕಡೆಗಳಲ್ಲಿ ಕೊಳವೆಬಾವಿ ಕೊರೆಯಿಸುವುದಕ್ಕೆ ಅವಕಾಶವನ್ನೇ ನೀಡಬಾರದು. ಈ ವಿಚಾರದಲ್ಲಿ ಅಧಿಕಾರಿಗಳು ಕಟ್ಟುನಿಟ್ಟಿನ ಕ್ರಮ ಕೈಗೊಂಡರೂ ರಾಜಕೀಯ ಒತ್ತಡ ತಂದು ಅವುಗಳನ್ನು ನಿಷ್ಫಲಗೊಳಿಸುವ ಪ್ರಯತ್ನಗಳೂ ನಡೆಯುತ್ತಿವೆ.

‘ರಾಜ್ಯದಲ್ಲಿ ಮಳೆನೀರು ನೀರಿಂಗಿಸುವ ಪ್ರಯತ್ನಗಳು ನಡೆದೇ ಇಲ್ಲವೆಂದೇನಿಲ್ಲ. ಕೃಷಿ ಹೊಂಡ, ಕಿಂಡಿ ಅಣೆ ಕಟ್ಟು, ಕೊಳವೆಬಾವಿ ಮರುಪೂರಣದ ವಿಚಾರದಲ್ಲಿ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕದ ‍ಪರಿಸ್ಥಿತಿ ತುಸು ವಾಸಿ. ಆದರೆ ಅಷ್ಟೇ ಸಾಲದು. ವರ್ಷಕ್ಕೆ ಸರಾಸರಿ 330 ಮಿ.ಮೀ ಮಳೆಯಾಗುವ ಇಸ್ರೇಲ್‌ ಕುಡಿಯುವ ನೀರನ್ನು ರಫ್ತು ಮಾಡುತ್ತದೆ. ಅದರ ಮೂರು ಪಟ್ಟು ಹೆಚ್ಚು ಮಳೆಯದರೂ ನಮಗೆ ನೀರು ಸಾಲದು. ಈ ಪರಿಸ್ಥಿತಿಯನ್ನು ಬದಲಾಯಿಸುವತ್ತ ನಾವು ಹೆಜ್ಜೆ ಹಾಕಬೇಕು’ ಎನ್ನುತ್ತಾರೆ ಕೇಂದ್ರ ಸರ್ಕಾರದ ಅಂತರ್ಜಲ ಮಂಡಳಿಯ ನಿವೃತ್ತ ವಿಜ್ಞಾನಿ ಟಿ.ರಾಜೇಂದಿರನ್‌.

 

ಅಂಕಿ ಅಂಶ

ಸ್ಥಿರ ಜಲಮಟ್ಟ ಅತ್ಯಂತ ಹೆಚ್ಚು ಕುಸಿತ ಕಂಡ ತಾಲ್ಲೂಕುಗಳು (ಮೀ)

ಜಿಲ್ಲೆ:  ತಾಲ್ಲೂಕು:  ಈಗಿನ ಮಟ್ಟ:  10 ವರ್ಷಗಳಲ್ಲಿ ಕುಸಿತ

ಕೋಲಾರ:  ಮಾಲೂರು: 86.98:  60.93

ಚಿಕ್ಕಬಳ್ಳಾಪುರ:  ಬಾಗೇಪಲ್ಲಿ:  69.00:  58.62

ಕೋಲಾರ:  ಮುಳಬಾಗಿಲು:  68.92:  57.94

ಚಿಕ್ಕಬಳ್ಳಾಪುರ:  ಗೌರಿಬಿದನೂರು:  69.96:  56.78

ಕೋಲಾರ:  ಕೋಲಾರ:  85.67:  55.90

ಕೋಲಾರ:  ಶ್ರೀನಿವಾಸಪುರ:  74.48:  53.60

ಚಿತ್ರದುರ್ಗ:  ಮೊಳಕಾಲ್ಮುರು; 67.90:  53.04

ಕೋಲಾರ:  ಬಂಗಾರಪೇಟೆ:  71.48:  46.30

ಚಿಕ್ಕಬಳ್ಳಾಪುರ; ಶಿಡ್ಲಘಟ್ಟ; 60.30; 43.97

ಚಿಕ್ಕಬಳ್ಳಾಪುರ; ಚಿಂತಾಮಣಿ; 56.88; 40.80

 

1593 ಕೋಟಿ ಕ್ಯುಬಿಕ್‌ ಮೀಟರ್ (ವರ್ಷದಲ್ಲಿ)

ರಾಜ್ಯದಲ್ಲಿ ಮರುಪೂರಣಗೊಳಿಸ ಬಲ್ಲ ಅಂತರ್ಜಲ ಮೂಲಗಳ ಸಾಮರ್ಥ್ಯ

1530 ಕೋಟಿ ಕ್ಯುಬಿಕ್‌ ಮೀಟರ್

ಬಳಕೆಗೆ ಸಿಗುವ ಅಂತರ್ಜಲದ ನಿವ್ವಳ ಪ್ರಮಾಣ

1071 ಕೋಟಿ ಕ್ಯುಬಿಕ್‌ ಮೀಟರ್

ಬಳಸುತ್ತಿರುವ ಅಂತರ್ಜಲ

(ಆಕರ: ಕೇಂದ್ರ ಅಂತರ್ಜಲ ಮಂಡಳಿ ವೆಬ್‌ಸೈಟ್‌)

14.80 ಟಿಎಂಸಿ ಅಡಿ

ಬೆಂಗಳೂರಿನಲ್ಲಿ ಲಭ್ಯ ಇರುವ ಮಳೆ ನೀರು (ವರ್ಷದ ಸರಾಸರಿ)

16.04 ಟಿಎಂಸಿ ಅಡಿ

ಉತ್ಪಾದನೆಯಾಗುವ ತ್ಯಾಜ್ಯ ನೀರು (ವರ್ಷದ ಸರಾಸರಿ)

20.05 ಟಿಎಂಸಿ ಅಡಿ

ಗೃಹಬಳಕೆಗೆ ಅಗತ್ಯವಿರುವ ನೀರು (ವ್ಯಕ್ತಿಗೆ ದಿನಕ್ಕೆ 150 ಲೀ ನೀರು ಪೂರೈಕೆ ಅಂದಾಜಿನ ಪ್ರಕಾರ)

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)

ಈ ವಿಭಾಗದಿಂದ ಇನ್ನಷ್ಟು