ಭಾನುವಾರ, ಸೆಪ್ಟೆಂಬರ್ 20, 2020
21 °C
ಕಾನೂನಿನ ಹಂಗಿಲ್ಲ l ತೆರಿಗೆ ಕಾಟವಿಲ್ಲ l ಮಾಲೀಕರ ಮರ್ಜಿಯಲ್ಲಿ ಬದುಕು

ಒಳನೋಟ | ಪಿ.ಜಿ: ಆತಿಥ್ಯವಲ್ಲ, ಶೋಷಣೆ

ರೇಶ್ಮಾ ಶೆಟ್ಟಿ Updated:

ಅಕ್ಷರ ಗಾತ್ರ : | |

Prajavani

ಪಿ.ಜಿಗಳ ಹೆಸರಿನಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಬೆಳಕಿಗೆ ಬಂದಿದೆ. ಇಷ್ಟಾದರೂ ಪಿಜಿಗಳ ಬಗ್ಗೆ ಸ್ಪಷ್ಟ ನಿಲುವು ತೆಗೆದುಕೊಳ್ಳಲು ಸರ್ಕಾರ ಮೀನಮೇಷ ಎಣಿಸುತ್ತಿರುವುದರ ಸುತ್ತ ಬೆಳಕು ಚೆಲ್ಲಿದೆ ಈ ವಾರದ ಒಳನೋಟ...

ಬೆಂಗಳೂರು : ಬೆಂಗಳೂರು ಸೇರಿದಂತೆ ರಾಜ್ಯದ ಪ್ರಮುಖ ನಗರಗಳಲ್ಲಿ ನಾಯಿ ಕೊಡೆಗಳಂತೆ ತಲೆ ಎತ್ತಿರುವ ಬಹುತೇಕ ‘ಪೇಯಿಂಗ್ ಗೆಸ್ಟ್’ (ಪಿ.ಜಿ) ಕೇಂದ್ರಗಳು ನಿರುದ್ಯೋಗಿ ಮತ್ತು ಅವಿವಾಹಿತರ ಪಾಲಿನ ನರಕದ ತಾಣಗಳಾಗಿವೆ.

ಕಾನೂನಿನ ಚೌಕಟ್ಟು ಹಾಗೂ ಸ್ಥಳೀಯ ಆಡಳಿತದ ನಿಯಂತ್ರಣಕ್ಕೆ ದಕ್ಕದೆ, ಕೇವಲ ಹಣ ಮಾಡುವ ಉದ್ದೇಶ ದಿಂದಲೇ ಬಹುತೇಕ ‘ಪಿ.ಜಿ’ಗಳು ತಲೆ ಎತ್ತಿವೆ. ಗ್ರಾಹಕರ ಅನಿವಾರ್ಯತೆ ಮತ್ತು ಅಸಹಾಯಕತೆಯನ್ನೇ ಬಂಡವಾಳವನ್ನಾಗಿ ಮಾಡಿಕೊಂಡು ಶೋಷಿಸುತ್ತಿವೆ. ಅನಧಿಕೃತವಾಗಿ ಕೋಟ್ಯಂತರ ರೂಪಾಯಿ ತೆರಿಗೆರಹಿತ ವಹಿವಾಟು ನಡೆಸುತ್ತಿರುವ ಪಿ.ಜಿ ಕೇಂದ್ರಗಳ ಮೇಲೆ ನಿಗಾ ಇರಿಸಬೇಕಿರುವ ಸರ್ಕಾರ ತನಗೂ ಅದಕ್ಕೂ ಸಂಬಂಧವಿಲ್ಲ ಎಂಬಂತಿದೆ.

ಇದನ್ನೂ ಓದಿ...

ಪಿ.ಜಿ ಜೀವನ ಎಷ್ಟು ಕ್ಷೇಮ..?

ಉದ್ಯೋಗ, ಓದು ಹೀಗೆ ನಾನಾ ಕಾರಣಗಳಿಂದ ಬೆಂಗಳೂರು ಸಹಿತ ಇತರೆ ನಗರಗಳಿಗೆ ಬರುವವರ ಪೈಕಿ ಆರ್ಥಿಕವಾಗಿ ದುಬರ್ಲರಾದವರು ಅವಲಂಬಿಸುವುದು ಈ ‘ಪೇಯಿಂಗ್ ಗೆಸ್ಟ್‌’ ಕೇಂದ್ರಗಳನ್ನು. ಬಾಡಿಗೆ ಮನೆ ಮಾಡಲು ಶಕ್ತರಲ್ಲದ ಬಹುತೇಕರು ಪಿ.ಜಿಗಳ ಮೊರೆ ಹೋಗುತ್ತಾರೆ. ಇವು ಗಳು ಸೇಫು ಎಂಬ ಭಾವನೆಯೂ ಕೆಲ ಪೋಷಕರಲ್ಲಿ ಇರುವುದು ಮತ್ತೊಂದು ಕಾರಣ. ಊಟ, ವಸತಿ ಜತೆ ಸುರಕ್ಷತೆಯ ಆಶ್ರಯ ಸಿಗುತ್ತದೆ ಎಂಬ ಕಾರಣಕ್ಕೆ ಪಿ.ಜಿ ಗಳನ್ನು ಆಯ್ಕೆ ಮಾಡಿಕೊಳ್ಳುತ್ತಾರೆ. ಆದರೆ ಮಾಲೀಕರ ನಿರ್ಲಕ್ಷ್ಯ ಧೋರಣೆ ಮತ್ತು ಪಿ.ಜಿಗಳಲ್ಲಿನ ಅವ್ಯವಸ್ಥೆಯನ್ನುಗಮನಿಸಿದಾಗ ಪೋಷಕರು ಮತ್ತು ಪಿ.ಜಿ ವಾಸಿಗಳ ನಿರೀಕ್ಷೆ ತಲೆಕೆಳಗಾಗುತ್ತಿದೆ. ಬೆರಳೆಣಿಕೆ ಪಿ.ಜಿಗಳು ಮಾತ್ರ ಇದಕ್ಕೆ ಹೊರತಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿವೆ.

ಸುರಕ್ಷತೆ, ಸ್ವಚ್ಛತೆ ಹಾಗೂ ಗುಣ ಮಟ್ಟದ ಆಹಾರದ ಕಡೆ ಧನದಾಹಿ ಮಾಲೀಕರು ಗಮನ ಹರಿಸುತ್ತಿಲ್ಲ. ಬೆಳಗ್ಗೆ ಸ್ನಾನಕ್ಕೆ ಬಿಸಿನೀರು ಗಿಟ್ಟಿಸಲು ಆರಂಭವಾಗುವ ಪಿ.ಜಿ ಬದುಕಿನ ಬವಣೆ ರಾತ್ರಿ ಮಲಗಿದ ಬಳಿಕವೂ ತಪ್ಪಿದ್ದಲ್ಲ. ನಿದ್ದೆ ಮಾಡಲು ಆಗದಂತೆ ತಿಗಣೆ ಕಾಟ. ಕಿರಿದಾದ ಕೋಣೆಯಲ್ಲಿ ನಾಲ್ಕು ಹಾಸಿಗೆ ಹಾಕಿ, ಎರಡು ಬೀರು ನಿಲ್ಲಿಸಿ ನಾಲ್ಕು ಮಂದಿಗೆ ಅನುಸರಿಸಿ ಕೊಂಡು ಹೋಗುವಂತೆ ಹೇಳುವ ಮಾಲೀಕರು ತಿಂಗಳಿಗೆ ತಲಾ ₹ 6 ರಿಂದ 7 ಸಾವಿರ ವಸೂಲಿ ಮಾಡುತ್ತಾರೆ. ಈಗಂತೂ ‘ಬಂಕ್ ಬೆಡ್’ಗಳ ಕಾಲ. ಒಂದು ಕೋಣೆಯಲ್ಲಿ ಮೂರು ಜೊತೆ ಬಂಕ್ ಬೆಡ್ ಹಾಕಿದರೆ 9 ಮಂದಿಯನ್ನು ಹಾಕಬಹುದು, ಹೆಚ್ಚು ಹಣ ಗಳಿಸ ಬಹುದು ಎಂಬ ದುರಾಸೆ. ಆದರೆ ಬಂಕ್ ಬೆಡ್ ತರುವ ಸಮಸ್ಯೆ ಒಂದೆರಡಲ್ಲ. ಕೆಳಗಿನ ಬೆಡ್‌ನಲ್ಲಿ ಮಲಗಿದರೆ ಗಾಳಿ ಬರಲ್ಲ, ಮೇಲಿನ ಬೆಡ್‌ನಲ್ಲಿ ಫ್ಯಾನ್ ಗಾಳಿಗೆ ಉಸಿರುಗಟ್ಟುವ ಅನುಭವ.

ಬೆಳಿಗ್ಗೆ ಶೌಚಕ್ಕೆ ಹೋಗೋಣ ಎಂದರೆ 2 ಶೌಚಾಲಯದ ಮುಂದೆ ಹತ್ತತ್ತು ಮಂದಿ ಕ್ಯೂ. ಸರಿ ಸ್ನಾನ ಮುಗಿಸೋಣ ಎಂದು ಬಿಸಿನೀರು ಹಿಡಿಯಲು ಬಂದರೆ ಅಲ್ಲೂ ಕ್ಯೂ. ಐವರ ಸ್ನಾನ ಮುಗಿಯುವಷ್ಟರಲ್ಲಿ ಬಿಸಿನೀರು ಖಾಲಿ ಎಂದು ಹ್ಯಾಪ್ ಮೋರೆ ಹಾಕುವ ಹುಡುಗಿಯರದ್ದು ಕೊರೆಯುವ ತಣ್ಣ ನೆಯ ನೀರಿನಲ್ಲೇ ಸ್ನಾನ ಮಾಡುವ ಕರ್ಮ. ಏಳುವುದು ತಡವಾದರೆ ಬಿಸಿನೀರು ಇಲ್ಲ, ಬಿಸಿ ಬಿಸಿ ತಿಂಡಿಯೂ ಇಲ್ಲ. ತಳ ಹಿಡಿದ ಚಿತ್ರಾನ್ನವೋ ಪುಳಿಯೋಗರೆಯೋ ಗತಿ. ಬಿಸಿ ದೋಸೆ ಮಾಡಿದರೂ ಹಿಟ್ಟು ಮಾತ್ರ 4 ದಿನದ ಹಿಂದಿನದ್ದು, ಬಾಯಿಗಿಟ್ಟರೆ ಹುಳಿ ಹುಳಿ.

ಕಡಿಮೆ ಬೆಲೆಯ ಪಾಮ್ ಆಯಿಲ್, ಕಳಪೆ ದರ್ಜೆ ಬೇಳೆ, ಅರ್ಧ ಕೊಳೆತ ತರಕಾರಿ ಬಳಸಿ ಅಡುಗೆ ಮಾಡಿ, ತಿಂದರೆ ತಿನ್ನಿ ಬಿಟ್ಟರೆ ಬಿಡಿ ಎಂಬಂತೆ ಊಟದ ಟೇಬಲ್‌ ಮೇಲೆ ಇರಿಸುತ್ತಾರೆ. ತಿನ್ನಲೇಬೇಕಾದ ಕರ್ಮ. ಸ್ವಚ್ಛತೆಯ ಬಗ್ಗೆ ಹೇಳದಿರುವುದೇ ವಾಸಿ. ರಸ್ತೆ ಬದಿ ಬಿದ್ದಿರುವ ಕಸದ ರಾಶಿಗೆ ಸೊಳ್ಳೆ, ನೊಣ ಮುತ್ತುವಂತೆ ಪಿ.ಜಿಗಳ ಶೌಚಾಲಯ, ಸ್ನಾನದ ಕೋಣೆಯ ಮೂಲೆಗಳಲ್ಲಿ ಸೊಳ್ಳೆ ನೊಣಗಳು ಹಾರಾಡುತ್ತಿರುತ್ತವೆ.

ಸುರಕ್ಷತೆಯ ದೃಷ್ಟಿಯಿಂದ ಹೆಣ್ಣು ಮಕ್ಕಳು ಪಿ.ಜಿಯಲ್ಲಿರುವುದು ಉತ್ತಮ ಎಂಬುದು ಅನೇಕರ ಅಭಿಪ್ರಾಯ. ಆದರೆ ಹೆಣ್ಣುಮಕ್ಕಳಿಗೆ ಪಿ.ಜಿ ಎಷ್ಟು ಸುರಕ್ಷಿತ ಎಂಬುದಕ್ಕೆ ಕೆಲ ಘಟನೆಗಳನ್ನು ನೆನಪಿಸಿಕೊಂಡರೆ ಆ ಮಾತು ಸುಳ್ಳು ಎನ್ನಿಸುತ್ತದೆ. ಕೆಲಸ ಮಾಡದ ಸಿಸಿಟಿವಿ, ಸುಲಭವಾಗಿ ಒಳ ಬರಲು ಸಾಧ್ಯವಿರುವ ಕಾಂಪೌಂಡ್, ಜೋರಾಗಿ ಒದ್ದರೆ ಮುರಿದು ಬೀಳುವಂತಹ ಗೇಟ್, ಗಟ್ಟಿಯಾಗಿ ನಿಲ್ಲಲೂ ಆಗದ 60 ರಿಂದ 70 ವಯಸ್ಸಿನ ವಾಚ್‌ಮನ್ ಇದು ಪಿ.ಜಿ ಯ ಅಸುರಕ್ಷತೆಯ ನೋಟ.

ಮಹಿಳಾ ಪಿ.ಜಿಗಳಲ್ಲಷ್ಟೇ ತೊಂದರೆ ಎಂದಲ್ಲ, ಪುರುಷರ ಪಿ.ಜಿಗಳ ಸ್ಥಿತಿ ಇನ್ನೂ ಅಧ್ವಾನ. ಮಹಿಳಾ ಪಿ.ಜಿ ಯಲ್ಲಿ ಸುರಕ್ಷತೆ ಇದ್ದೂ ಇಲ್ಲದಂತಿದ್ದರೆ ಗಂಡುಮಕ್ಕಳ ಪಿ.ಜಿಯಲ್ಲಿ ಸುರಕ್ಷತೆ ಎಂಬುದು ಮರೀಚಿಕೆಯೇ ಸರಿ. ಸದಾ ಕಳವಾಗುವ ವಸ್ತುಗಳು, ವಾರ್ಡನ್‌ಗಳೇ ಇಲ್ಲದಿರುವುದು, ಅರ್ಧದಷ್ಟು ಮಂದಿಗೆ ಊಟವೇ ಸಿಗದಿರುವುದು, ಹೊರಗಿನವರು ಬಂದು ಇದ್ದು ಹೋದರೂ ಕೇಳುವವರಿಲ್ಲ. ಹೀಗೆ ಅವ್ಯವಸ್ಥೆಯೇ ತಾಂಡವವಾಡುತ್ತಿರುತ್ತದೆ.

ನಗರಗಳಲ್ಲಿ ನಾಯಿಕೊಡೆಗಳಂತೆ ತಲೆ ಎತ್ತುತ್ತಿರುವ ಪಿ.ಜಿಗಳಲ್ಲಿ ದುಡ್ಡಿನ ಆಸೆಗೆ ಬಿದ್ದು ಸರಿಯಾದ ಸುರಕ್ಷತೆ ಇಲ್ಲದೆ, ಆಹಾರ ಸುರಕ್ಷತಾ ಕ್ರಮ ಪಾಲಿಸದೆ ಹಣ ಕೀಳುವ ಮಾಲೀಕರು ಇದನ್ನು ಅಕ್ಷರಶಃ ದಂಧೆಯನ್ನಾಗಿಸಿಕೊಂಡಿರುವುದಂತೂ ಸುಳ್ಳಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು