ಗುರುವಾರ , ಸೆಪ್ಟೆಂಬರ್ 23, 2021
23 °C
ಸಿನಿಮಾದಲ್ಲಿ ಹೇಳಬಯಸಿದ ಮೌಲ್ಯಗಳನ್ನು ತಮ್ಮ ಬದುಕಿನಲ್ಲಿಯೂ ರೂಢಿಸಿಕೊಳ್ಳಲು ಪ್ರಯತ್ನಿಸಿದ ಡಾ. ರಾಜ್‌ಕುಮಾರ್‌ ಅವರಿಂದ ಇಂದಿನ ಸೆಲೆಬ್ರಿಟಿಗಳು ಕಲಿಯುವುದು ಬಹಳಷ್ಟಿದೆ

ಸಂಗತ| ಚಿತ್ರರಂಗದ ಘನ ವ್ಯಕ್ತಿತ್ವದ ಮಾದರಿ

ಡಾ. ಸರ್ಫ್ರಾಜ್ ಚಂದ್ರಗುತ್ತಿ Updated:

ಅಕ್ಷರ ಗಾತ್ರ : | |

Prajavani

‘ಸಿನಿಮಾದ ಹೀರೊ ಆಗಿ ಮಾತ್ರ ಉಳಿಯಬೇಡಿ, ನಿಜ ಜೀವನದಲ್ಲಿಯೂ ಹೀರೊ ತರಹ ವರ್ತಿಸಿ’ ಎಂದು ತಮಿಳು ಚಿತ್ರರಂಗದ ಜನಪ್ರಿಯ ನಟ ವಿಜಯ್ ಅವರನ್ನು ಮದ್ರಾಸ್ ಹೈಕೋರ್ಟ್ ಇತ್ತೀಚೆಗೆ ತರಾಟೆಗೆ ತೆಗೆದುಕೊಂಡಿದೆ (ಪ್ರ.ವಾ., ಜುಲೈ 14). ವಿಜಯ್ ಬ್ರಿಟನ್‍ನಿಂದ ಕೊಂಡುತಂದ ಐಷಾರಾಮಿ ಕಾರಿಗೆ ತಮಿಳುನಾಡು ಸರ್ಕಾರ ಪ್ರವೇಶ ತೆರಿಗೆ ವಿಧಿಸುವು ದರಿಂದ ವಿನಾಯಿತಿ ನೀಡುವಂತೆ ಕೋರಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ಸಂದರ್ಭದಲ್ಲಿ ನ್ಯಾಯಮೂರ್ತಿಗಳು ಮೇಲಿನಂತೆ ಹೇಳಿದ್ದಾರೆ. ‘ಲಕ್ಷಾಂತರ ಅಭಿಮಾನಿ ಗಳನ್ನು ಹೊಂದಿರುವ ನಟ ತೆರಿಗೆಯನ್ನು ಪಾವತಿಸದೆ ಅಭಿಮಾನಿಗಳಿಗೆ ಅಗೌರವ ತೋರಿದ್ದಾರೆ. ಇಂಥ ವರ್ತನೆ ಮತ್ತು ಮನೋಭಾವ ಅಸಾಂವಿಧಾನಿಕ’ ಎಂದಿ ರುವುದಲ್ಲದೆ, ಕಾಲಮಿತಿಯಲ್ಲಿ ತೆರಿಗೆ ಪಾವತಿಸುವಂತೆ ಸೂಚಿಸಿದ್ದಾರೆ.

ಕ್ರಿಕೆಟ್ ಜಗತ್ತಿನ ದೇವರು ಎಂಬ ಹೊಗಳಿಕೆಗೆ ಪಾತ್ರರಾಗಿರುವ ಸಚಿನ್ ತೆಂಡೂಲ್ಕರ್ ಈ ಹಿಂದೆ ವಿದೇಶದಿಂದ ತಂದ ಒಂದು ಕಾರಿಗೆ ತೆರಿಗೆ ವಿನಾ ಯಿತಿ ಕೋರಿದ್ದು ಕೂಡ ವಿವಾದಕ್ಕೆ ಒಳಗಾಗಿತ್ತು. ಅಕ್ರಮವಾಗಿ ರೈಫಲ್ ಹೊಂದಿದ್ದ ಆರೋಪದ ಮೇಲೆ ಹಿಂದಿಯ ಸೂಪರ್‌ಸ್ಟಾರ್ ಒಬ್ಬರು ಜೈಲುಪಾಲಾ ಗಿದ್ದರು. ಕೃಷ್ಣಮೃಗವನ್ನು ಬೇಟೆಯಾಡಿದ ಆರೋಪ ಹೊತ್ತು ಮತ್ತೊಬ್ಬ ನಟ ವರ್ಷಾನುಗಟ್ಟಲೆ ಕೋರ್ಟ್‌ಗೆ ಅಲೆದಾಡಿ ನಂತರ ಖುಲಾಸೆಗೊಂಡರು. ಇತ್ತೀಚೆಗೆ ಹೋಟೆಲೊಂದರಲ್ಲಿ ಕಾರ್ಮಿಕನೊಬ್ಬನ ಮೇಲೆ ಕನ್ನಡದ ಒಬ್ಬ ನಾಯಕನಟ ಹಲ್ಲೆ ಮಾಡಿದ್ದಾರೆ ಎನ್ನಲಾದ ಸುದ್ದಿ ವಿವಾದಕ್ಕೆ ಗುರಿಯಾಗಿದೆ.

ಇಂತಹ ಸಂದರ್ಭಗಳಲ್ಲೆಲ್ಲ ಕನ್ನಡದ ವರನಟ ಡಾ. ರಾಜ್‌ಕುಮಾರ್ ನೆನಪಾಗುತ್ತಾರೆ. ಜನಪ್ರಿಯತೆಯ ಉತ್ತುಂಗದಲ್ಲಿರುವ ವ್ಯಕ್ತಿಗಳು ಸಾರ್ವಜನಿಕ ಬದುಕಿ ನಲ್ಲಿ ಹೇಗೆ ನಡೆದುಕೊಳ್ಳಬೇಕು ಎಂಬುದಕ್ಕೆ ರಾಜ್‌ಕುಮಾರ್‌ ಮಾದರಿಯಾಗಿದ್ದಾರೆ. ಜನಪ್ರಿಯ ನಟನಟಿಯರ ಮಾತಂತಿರಲಿ, ಒಂದೆರಡು ಧಾರಾವಾಹಿಗಳಲ್ಲಿ ಅಭಿನಯಿಸಿದ ಕಾರಣಕ್ಕೇ ಅವರನ್ನು ಆರಾಧಿಸುವ, ಸೆಲೆಬ್ರೆಟಿಗಳನ್ನಾಗಿಸಿ ಹೊತ್ತು ಮೆರೆಸುವ ಈ ದಿನ ಮಾನಗಳಲ್ಲಿ, ಸಾರ್ವಜನಿಕವಾಗಿ ಪ್ರಖ್ಯಾತಿ ಪಡೆದವರು ಅತ್ಯಂತ ಜವಾಬ್ದಾರಿಯಿಂದ ನಡೆದುಕೊಳ್ಳಬೇಕಾಗುತ್ತದೆ.

ನಮ್ಮ ಸುತ್ತ ನೂರಾರು ನಟನಟಿಯರಿದ್ದಾರೆ. ಆದರೆ ಕಲಾವಿದರ ಸಂಖ್ಯೆ ಅಪರೂಪ. ಕಲಾವಿದರಾಗಲು ಘನವಾದ ವ್ಯಕ್ತಿತ್ವವಿರಬೇಕು. ರಾಜ್ ತಮ್ಮ ಪಾತ್ರಗಳ ಆಯ್ಕೆಯಂತೆಯೆ ಬದುಕಿನಲ್ಲಿಯೂ ಅತ್ಯಂತ ಎಚ್ಚರ ವಹಿಸುತ್ತಿದ್ದರು. ‘ಸಮಾಜದಲ್ಲಿ ಏನಿದೆಯೋ ಅದನ್ನು ತೋರಿಸ್ತೀವಿ ಅನ್ನುವ ಧೋರಣೆ ಸರಿಯಲ್ಲ. ಸಮಾಜ ಹೇಗಿರಬೇಕು ಎನ್ನುವ ಹೊಣೆಗಾರಿಕೆ ಕೂಡಾ ನಮ ಗಿದೆ. ಅದಿಲ್ಲದಿದ್ದರೆ ಚಲನಚಿತ್ರ ಕಲೆಯಾಗುವುದಿಲ್ಲ, ವ್ಯಾಪಾರವಾಗುತ್ತದೆ’ ಎಂದಿದ್ದರು ರಾಜ್‌ಕುಮಾರ್.

ಮಹಾಕವಿ ಕುವೆಂಪು ಅವರಂತೆಯೆ ಘನವಾದ ಬದುಕನ್ನು ಬದುಕಿದವರು ಅವರು. ಇವರಿಬ್ಬರ ನಡುವೆ ಕೆಲವು ಸಾಮ್ಯತೆಗಳಿವೆ. ಕುವೆಂಪು ಬೀದಿಗಿಳಿಯದೆ ತಮ್ಮ ಸಾಹಿತ್ಯ ರಚನೆಯ ಮೂಲಕ ಹತ್ತು ಹಲವು ಜನಪರ ಹೋರಾಟಗಳಿಗೆ ಪ್ರೇರಣೆ ನೀಡಿರುವಂತೆಯೆ, ತಮ್ಮ ಸಾಮಾಜಿಕ ಕಾಳಜಿಯ ಚಲನಚಿತ್ರಗಳ ಮೂಲಕ ಜನಪರ ಹೋರಾಟಗಳಿಗೆ ಸ್ಫೂರ್ತಿಯಾದವರು ರಾಜ್. ಇಬ್ಬರೂ ಜಾತಿ-ಮತಗಳನ್ನು ಮೀರಿ ವಿಶ್ವಮಾನವ ರಾಗಿ ತಮ್ಮನ್ನು ಭಾವಿಸಿದವರು. ಮೊದಲು ‘ಕರ್ನಾಟಕ ರತ್ನ’ ಗೌರವ ಕುವೆಂಪು ಅವರಿಗೆ ಸಲ್ಲಬೇಕು ಎಂದು ರಾಜ್ ಹೇಳಿದರೆ, ನನ್ನ ‘ವಿಶ್ವಮಾನವ ತತ್ವ’ವನ್ನು ಕರ್ನಾಟಕದ ಮೂಲೆ ಮೂಲೆಗಳಿಗೆ ತಲುಪಿಸಬಲ್ಲ ಏಕೈಕ ವ್ಯಕ್ತಿ ರಾಜ್‌ಕುಮಾರ್ ಎಂದಿದ್ದರು ಕುವೆಂಪು.

ಪ್ರೊ. ನಂಜುಂಡಸ್ವಾಮಿಯವರು ತೇಜಸ್ವಿಯವರಿಗೆ ಹೇಳಿದ್ದರೆನ್ನಲಾದ ಈ ಮಾತುಗಳು ಗಮನಾರ್ಹ– ‘ಮೇಲ್ವರ್ಗದ ರಾಜಕಾರಣಾನ ಅವರೊಬ್ಬರೆ ಕಣಯ್ಯ ಡೈರೆಕ್ಟಾಗಿ ಕೌಂಟರ್ ಮಾಡಿ ಸಕ್ಸಸ್ ಆದೋರು. ನಾವ್ ಸೋತ್ವಿ... ರಾಜ್‌ಕುಮಾರ್ ಯಶಸ್ಸಿನ ಬಗ್ಗೆ ನಮಗೆಲ್ಲ ಬೆರಗಿತ್ತು. ಯಾಕೆಂದರೆ ಸ್ವಾತಂತ್ರ್ಯಾ ನಂತರದ ಕರ್ನಾಟಕದಲ್ಲಿ ರೈತ ಚಳವಳಿ, ದಲಿತ ಚಳವಳಿಗಿಂತ ದೊಡ್ಡ ಹೋರಾಟ ನಡೆಸಿದೋರು ರಾಜ್‌ಕುಮಾರ್. ಅದನ್ನ ನಾವ್ ಅರ್ಥ ಮಾಡ್ಕೊಳ್ಳಲಿಲ್ಲ ಅಷ್ಟೆ!’

ಗೋಕಾಕ್ ಚಳವಳಿಯ ಯಶಸ್ಸಿನ ನಂತರ ಮುಖ್ಯಮಂತ್ರಿಯಾಗುವ ಅವಕಾಶ ತಾನಾಗಿಯೇ ಒಲಿದು ಬಂದಿದ್ದರೂ ಅದನ್ನು ತಿರಸ್ಕರಿಸಿ ತಮ್ಮತನ ವನ್ನು ಮೆರೆದರು. ಇಂದು ಚಲನಚಿತ್ರಗಳಲ್ಲಿ ಹೆಸರು ಮಾಡಿದವರಲ್ಲಿ ಕೆಲವರು ಶಾಸಕ, ಮಂತ್ರಿಯಾಗಲು ಹೇಗೆಲ್ಲಾ ಹಪಹಪಿಸುತ್ತಿದ್ದಾರೆ ಎಂಬುದನ್ನು ನೋಡಿ ದಾಗ ರಾಜ್ ನಿಲುವಿನ ಮಹತ್ವದ ಅರಿವಾಗುತ್ತದೆ.

ತಮ್ಮನ್ನು ಅನುಸರಿಸುವ ‘ಅಭಿಮಾನಿ ದೇವರು’ ಗಳಿಗೆ ಅವರು ತಪ್ಪು ಸಂದೇಶಗಳನ್ನು ನೀಡಲಿಲ್ಲ. ತಮ್ಮೊಳಗೆ ಅಹಂ ಬಿಟ್ಟುಕೊಳ್ಳಲಿಲ್ಲ. ತಮ್ಮ ಎತ್ತರಕ್ಕೆ ಬಂಗಾರ ಸುರಿಯುವ ಆಮಿಷ ಒಡ್ಡಿದರೂ ಜಾಹೀರಾತು ಕಂಪನಿಗಳಿಗೆ ತಮ್ಮನ್ನು ಮಾರಿಕೊಳ್ಳಲಿಲ್ಲ. ಶೂಟಿಂಗ್ ವೇಳೆ ಸಹಪಂಕ್ತಿ ಭೋಜನ, ಕಷ್ಟದಲ್ಲಿದ್ದ ಕಲಾವಿದರಿಗೆ ತೆರೆಮರೆಯಲ್ಲಿ ನೆರವು- ಹೀಗೆ ಅವರು ಬದುಕಿದ ರೀತಿ ಅಪರೂಪದ್ದು.

ಹಿಂದೊಮ್ಮೆ ಕರ್ನಾಟಕದಲ್ಲಿ ನಟರೊಬ್ಬರ ಹುಚ್ಚಾಟವನ್ನು ಕಂಡ ಹೈಕೋರ್ಟ್‌ ನ್ಯಾಯಮೂರ್ತಿಯೊಬ್ಬರು ‘ಸಮಾಜ ಹಾಗೂ ಸಂಸ್ಕೃತಿಯನ್ನು ರಕ್ಷಿಸುವ ದೃಷ್ಟಿಕೋನದಲ್ಲಿ ಡಾ. ರಾಜ್‌ಕುಮಾರ್‌ ನಂತರ ಒಳ್ಳೆಯ ಸಿನಿಮಾಗಳು ಬರುತ್ತಿಲ್ಲ’ ಎಂದಿದ್ದರು.

ರಾಜ್‌ಕುಮಾರ್ ಅಭಿನಯದ ಹಲವು ಕಲಾಕೃತಿಗಳನ್ನು ಸಾಹಿತ್ಯ ಕೃತಿಯಾಗಿ ನೋಡಲು ಅವಕಾಶವಿದೆ. ಅವರ ಕುರಿತಾಗಿ ನೂರಾರು ಗ್ರಂಥಗಳು ರಚನೆಯಾಗಿವೆ. ಸಾಕ್ಷ್ಯಚಿತ್ರಗಳನ್ನು ಸಂಗ್ರಹಿಸಲಾಗಿದೆ. ಅಧ್ಯಯನ ಕೇಂದ್ರಗಳು ಸ್ಥಾಪನೆಗೊಂಡಿವೆ. ನಿಜಜೀವನದಲ್ಲಿಯೂ ಹೀರೊ ತರಹ ವರ್ತಿಸಿ ಎಂದ ಮದ್ರಾಸ್‌ ಹೈಕೋರ್ಟ್‌ ನ್ಯಾಯಮೂರ್ತಿಗಳ ಮಾತಿಗೆ ಉತ್ತರ ಎಂಬಂತೆ ರಾಜ್ ಬದುಕಿದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು