ಮಂಗಳವಾರ, 7 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಬೆಂಗಳೂರಿನಲ್ಲೊಂದು ಪಶ್ಚಿಮಘಟ್ಟ!

ವಿಶ್ವದ ಹದಿನೆಂಟು ‘ಜೀವಿವೈವಿಧ್ಯದ ಹಾಟ್‍ಸ್ಪಾಟ್’ಗಳಲ್ಲಿ ಒಂದು ಎಂದು ಪ್ರಸಿದ್ಧವಾಗಿರುವ ಪಶ್ಚಿಮಘಟ್ಟದ ತುಣುಕೊಂದು ಬೆಂಗಳೂರಿನ ಸಸ್ಯಕಾಶಿ ಲಾಲ್‌ಬಾಗ್‍ನಲ್ಲಿ ಇಣುಕಲಿದೆ
Published 7 ಆಗಸ್ಟ್ 2023, 23:32 IST
Last Updated 7 ಆಗಸ್ಟ್ 2023, 23:32 IST
ಅಕ್ಷರ ಗಾತ್ರ

ಗುರುರಾಜ್ ಎಸ್. ದಾವಣಗೆರೆ

ಅಚ್ಚರಿಯಾಗುತ್ತಿದೆಯೇ? ಹೌದು, ಕಾಂಕ್ರೀಟ್ ಕಾಡು ಎಂದೇ ಕರೆಸಿಕೊಳ್ಳುವ ರಾಜಧಾನಿ ಬೆಂಗಳೂರಿನ ದಕ್ಷಿಣ ಭಾಗದಲ್ಲಿ ಥೇಟ್ ಪಶ್ಚಿಮಘಟ್ಟವೇ ತಲೆ ಎತ್ತಲಿದೆ. ಕೇರಳದಿಂದ ಗುಜರಾತ್‍ವರೆಗೆ ಹಬ್ಬಿರುವ ಪಶ್ಚಿಮಘಟ್ಟ ನೆಲೆ ನಿಲ್ಲಲು ಲಕ್ಷಾಂತರ ವರ್ಷಗಳೇ ಬೇಕಾದವು. ಆದರೆ ಬೆಂಗಳೂರಿನ ಕೆಂಪುತೋಟ ಲಾಲ್‍ಬಾಗ್‌ನಲ್ಲಿ ಬರೀ ಆರೇ ವರ್ಷಗಳಲ್ಲಿ ನಿತ್ಯ ಹರಿದ್ವರ್ಣ ಪಶ್ಚಿಮಘಟ್ಟ ಆರು ಎಕರೆ ಜಾಗದಲ್ಲಿ ಜೀವಾಂಕುರಿಸಲಿದೆ. ಈ ವಿಚಾರ ಮೊಳಕೆಯೊಡೆದದ್ದು ಮೂರೂವರೆ ವರ್ಷಗಳ ಹಿಂದೆ.

ಸಸ್ಯಕಾಶಿ ಎಂದೇ ಪ್ರಸಿದ್ಧವಾಗಿರುವ ಲಾಲ್‍ಬಾಗ್ ಬೆಂಗಳೂರಿನ ಪ್ರಮುಖ ಪ್ರವಾಸಿ ತಾಣಗಳಲ್ಲೊಂದು. 240 ಎಕರೆ ಪ್ರದೇಶದ ಹಸಿರುರಾಶಿ ಬೆಂಗಳೂರು ನಗರದ ಆಮ್ಲಜನಕದ ಟ್ಯಾಂಕ್‍ನಂತೆ ಕೆಲಸ ಮಾಡುತ್ತಿದೆ. 170ಕ್ಕೂ ಹೆಚ್ಚು ಬಗೆಯ ಪಕ್ಷಿಗಳು, ಎರಡು ಸಾವಿರಕ್ಕೂ ಹೆಚ್ಚು ಪ್ರಭೇದದ ಮರಗಳಿರುವ ಲಾಲ್‍ಬಾಗ್, ಸಸ್ಯ ಸಂಶೋಧಕರು, ಸಸ್ಯಾಸಕ್ತರ ಚಿತ್ತಾಕರ್ಷಕ ಜಾಗವೂ ಹೌದು. ಈಗಾಗಲೇ 2,350 ವಿವಿಧ ಸಸ್ಯ ಪ್ರಭೇದಗಳಿರುವ ಲಾಲ್‍ಬಾಗಿಗೆ ದಿನನಿತ್ಯ ಸಾವಿರಾರು ಜನ ಭೇಟಿ ನೀಡುತ್ತಾರೆ. ಸ್ವಾತಂತ್ರ್ಯೋತ್ಸವ ಮತ್ತು ಗಣರಾಜ್ಯೋತ್ಸವದ ಅಂಗವಾಗಿ ನಡೆಯುವ ಫಲಪುಷ್ಪ ಪ್ರದರ್ಶನಕ್ಕೆ ಲಕ್ಷಾಂತರ ಜನ ಬರುತ್ತಾರೆ. ಇಲ್ಲಿರುವ ಮರಗಳಲ್ಲಿ ಹೆಚ್ಚಿನವು ವಿದೇಶಿ ಮೂಲದವಾಗಿದ್ದು, ಹೊಸದಾಗಿ ಅಂಕುರಿಸುತ್ತಿರುವ ಪಶ್ಚಿಮಘಟ್ಟದಲ್ಲಿ ದೇಸಿ ಮರಗಳೇ ಇರಲಿವೆ.

ಲಾಲ್‍ಬಾಗ್‍ನ ದಕ್ಷಿಣ ಭಾಗದ ಹತ್ತಕ್ಕೂ ಹೆಚ್ಚು ಎಕರೆ ಜಾಗವನ್ನು ಬಿದ್ದ ಹಳೆಯ ಮರಗಳ ಶೇಖರಣೆಗೆ ಮತ್ತು ಸಾವಯವ ಗೊಬ್ಬರ ತಯಾರಿಕೆಗೆ ಬಳಸಲಾಗುತ್ತಿತ್ತು. ಯಾವುದೋ ಶುಭ ಗಳಿಗೆಯಲ್ಲಿ, ಇಷ್ಟು ದೊಡ್ಡ ಜಾಗವನ್ನು ಅನುಪಯುಕ್ತವಾಗಿ ಇಟ್ಟುಕೊಳ್ಳುವ ಬದಲು ಹಸಿರಿಗೆ ಸಂಬಂಧಿಸಿದ ಕೆಲಸ ಮಾಡಲು ನಿರ್ಧರಿಸಿ ಹಿರಿಯ ಅರಣ್ಯತಜ್ಞ ಯಲ್ಲಪ್ಪ ರೆಡ್ಡಿ ಅವರನ್ನು ಸಂಪರ್ಕಿಸಿದಾಗ, ಪಶ್ಚಿಮಘಟ್ಟವನ್ನು ಹೋಲುವ ಕಿರು ಅರಣ್ಯ ಪ್ರದೇಶವನ್ನು ಸೃಷ್ಟಿಸಿ ಎಂದರಂತೆ. ಅವರ ಸಲಹೆಯಂತೆ ಲಾಲ್‍ಬಾಗಿನಲ್ಲಿ ಸಹ್ಯಾದ್ರಿಯ ಕಾಡು ಮೈದಳೆಯಲಿದೆ.

ಇದೇ ಆಗಸ್ಟ್ 1ರಂದು 132 ಪ್ರಭೇದಗಳ 240 ಸಸಿಗಳನ್ನು ನೆಡಲಾಗಿದ್ದು, ಇನ್ನೂ ಮುನ್ನೂರು ವಿವಿಧ ಪ್ರಭೇದಗಳ ಸಸಿಗಳನ್ನು ಸೇರಿಸಲಾಗುವುದು ಎಂಬ ಮಾಹಿತಿ ಇದೆ. ಇನ್ನು ಮೂರರಿಂದ ನಾಲ್ಕು ವರ್ಷಗಳ ನಂತರ ಪ್ರವಾಸಿಗರ ವೀಕ್ಷಣೆಗೆ ಮಿನಿ ಪಶ್ಚಿಮಘಟ್ಟ ಲಭ್ಯವಾಗಲಿದೆ ಎಂದಿರುವ ಅಧಿಕಾರಿಗಳು, ಕರ್ನಾಟಕದ ಏಳು ಜಿಲ್ಲೆಗಳಿಂದ ಸಸ್ಯ ಪ್ರಭೇದಗಳನ್ನು ಸಂಗ್ರಹಿಸಿದ್ದಾರೆ. ಸಸ್ಯ ಸಂಶೋಧನೆ, ಶಾಲಾ ಪ್ರವಾಸ ಮತ್ತು ಪಶ್ಚಿಮಘಟ್ಟಗಳಿಗೆ ಪ್ರವಾಸ ಹೋಗಲು ಸಾಧ್ಯವಾಗದೇ ಇರುವವರಿಗೆಲ್ಲ ಇದರಿಂದ ಬಹಳಷ್ಟು ಅನುಕೂಲವಾಗಲಿದೆ.

ಸಸ್ಯಗಳನ್ನು ಸಂಗ್ರಹಿಸಲು ರಾಜ್ಯದಾದ್ಯಂತ ಇರುವ ಸಸ್ಯತಜ್ಞರು, ಅರಣ್ಯ ಅನ್ವೇಷಕರು ಸಂಶೋಧನಾ ಕೇಂದ್ರ ಮತ್ತು ಖಾಸಗಿ ಸಸ್ಯ ಮಾರಾಟಗಾರರನ್ನು ಸಂಪರ್ಕಿಸಿದ್ದು, ಒಟ್ಟುಮಾಡಿರುವ ಪ್ರಭೇದಗಳ ಪೈಕಿ 39 ಅಳಿವಿನಂಚಿಗೆ ಸರಿದವುಗಳಾಗಿವೆ. ಹಣಿಗೆರೆ, ರಾಮಪತ್ರೆ, ಮುಳ್ಳುಸಂಪಿಗೆ, ಮುರುಗನಹುಳಿ, ಹೊಳೆಗೇರು, ಉಪ್ಪಾಗೆಮರ, ಸಾಲುಧೂಪ, ಕಿರಾಲುಭೋಗಿ ಮರಗಳು ವೀಕ್ಷಕರಿಗೆ ಪಶ್ಚಿಮಘಟ್ಟದ ಸಸ್ಯ ವೈವಿಧ್ಯವನ್ನು ಪರಿಚಯಿಸಲಿವೆ.

ಪಶ್ಚಿಮಘಟ್ಟದ ವಾತಾವರಣವೆಂದರೆ ಮಳೆ, ತೇವಾಂಶದ ಹದವಾದ ಮಿಶ್ರಣ. ಅದನ್ನು ಬೆಂಗಳೂರಿನ ಚಿಕ್ಕದೊಂದು ಭಾಗದಲ್ಲಿ ಕೃತಕವಾಗಿ ನಿರ್ಮಿಸುವುದು ಸಾಹಸದ ಕೆಲಸವೇ ಸರಿ. ಪಶ್ಚಿಮಘಟ್ಟ ಪ್ರದೇಶದ ವಾತಾವರಣದ ಸ್ಥಾಪನೆಗಾಗಿ 60 ಮಳೆ ಬಂದೂಕುಗಳನ್ನು (ರೇನ್‍ಗನ್) ಅಳವಡಿಸಲಾಗಿದೆ. ಮಳೆ ವಾತಾವರಣ ಇರುವಂತೆ ಮಾಡಲು ದಿನವಿಡೀ ಸಣ್ಣ ಸಣ್ಣ ಸಮಯಾಂತರಗಳಲ್ಲಿ ಸಸ್ಯಗಳಿಗೆ ನೀರುಣಿಸಲಾಗುತ್ತದೆ. ನಿರಂತರ ನೀರಿನ ಲಭ್ಯತೆಗಾಗಿ ಪ್ರತ್ಯೇಕ ಕೊಳವೆಬಾವಿಯನ್ನೂ ಕೊರೆಯಲಾಗಿದೆ. ಒಂದು ಪ್ರಭೇದದ ಮೂರು ಸಸಿಗಳನ್ನು ನೆಡಲಾಗಿದ್ದು, ಈಗ ಅವು 3ರಿಂದ 4 ಅಡಿ ಎತ್ತರ ಬೆಳೆದಿವೆ.

ಲಾಲ್‍ಬಾಗ್ ಸಸ್ಯ ತೋಟದಲ್ಲಿರುವ ಕೆಲವು ಮರಗಳು 200 ವರ್ಷಗಳಷ್ಟು ಹಳೆಯವು. ಅಪರೂಪದ ಸಸ್ಯಗಳನ್ನು ನೆಟ್ಟಿರುವುದಲ್ಲದೆ ಮುಂದಿನ ದಿನಗಳಲ್ಲಿ ಇವುಗಳನ್ನು ರಾಜ್ಯದ ಬೇರೆ ಬೇರೆ ಜಾಗಗಳಿಗೆ ಪ್ರಸರಣ ಮಾಡುವ ಉದ್ದೇಶವೂ ತೋಟಗಾರಿಕಾ ಅಧಿಕಾರಿಗಳಿಗೆ ಇದೆ.

ವಿಶ್ವದ ಹದಿನೆಂಟು ‘ಜೀವಿವೈವಿಧ್ಯದ ಹಾಟ್‍ಸ್ಪಾಟ್’ಗಳಲ್ಲಿ ಒಂದು ಎಂದು ಪ್ರಸಿದ್ಧವಾಗಿರುವ ಪಶ್ಚಿಮಘಟ್ಟದ ತುಣುಕೊಂದು ಬೆಂಗಳೂರು ನಗರದ ಸಸ್ಯಕಾಶಿ ಲಾಲ್‌ಬಾಗ್‍ನಲ್ಲಿ ಇಣುಕಲಿದೆ. ಬೆಂಗಳೂರಿನ ‘ಪಶ್ಚಿಮಘಟ್ಟ’ದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿ ಮಾದರಿಯ ಬೆಟ್ಟ ಗುಡ್ಡಗಳಿರುವಂತೆ ಭೂ ವಿನ್ಯಾಸ ಮಾಡಲಾಗುತ್ತದೆಯೇ ಎಂಬ ಕುರಿತು ವಿವರಗಳಿಲ್ಲ. ಪಶ್ಚಿಮಘಟ್ಟಗಳಲ್ಲಿ ಬರೀ ಸಸ್ಯ ಪ್ರಭೇದಗಳಿಲ್ಲ. ಅಲ್ಲಿನ ಶೋಲಾ, ಹುಲ್ಲುಗಾವಲು, ಕುರುಚಲು ಕಾಡಿನ ಅರಣ್ಯಗಳಲ್ಲಿ ಅಸಂಖ್ಯ ಪ್ರಾಣಿ- ಪಕ್ಷಿ– ಪಾತರಗಿತ್ತಿ, ಕಾಟಿ ಹಾವು, ಹುಲಿ, ಹೆಬ್ಬಳಿಲು, ಹಲ್ಲಿಗಳೆಲ್ಲ ನೆಲೆ ನಿಂತಿವೆ. ಜೀವನದಿಗಳು ಹುಟ್ಟಿ ಹರಿಯುತ್ತಿವೆ. ಇವೆಲ್ಲವನ್ನೂ ಪ್ರತಿಬಿಂಬಿಸುವ ಘಟ್ಟ ಪ್ರದೇಶದ ಮಾದರಿಯೊಂದು ರಾಜಧಾನಿಯಲ್ಲಿದ್ದರೆ ‘ಗಾರ್ಡನ್ ಸಿಟಿ’ ಎಂಬ ಖ್ಯಾತಿಯ ಬೆಂಗಳೂರಿಗೆ ಮತ್ತಷ್ಟು ಮೆರುಗಲ್ಲವೆ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT