ಶುಕ್ರವಾರ, 10 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಕಲಿಕೆ ಕಲಿಯುವ ಬಗೆ

ಕಲಿಕೆಯಲ್ಲಿನ ಸವಾಲುಗಳಿಗಿಂತ, ಅದರಿಂದಾಗುವ ಉಪಯೋಗಗಳ ಕಡೆ ಮನಸ್ಸು ನೆಡುವಂತೆ ನಮ್ಮ ಆಲೋಚನಾಕ್ರಮವನ್ನು ಬದಲಿಸಿಕೊಳ್ಳಬೇಕು
Last Updated 14 ಮಾರ್ಚ್ 2022, 20:07 IST
ಅಕ್ಷರ ಗಾತ್ರ

ವಿದ್ಯಾರ್ಥಿಗಳಿಗಿದು ಪರೀಕ್ಷಾ ಕಾಲ. ಚೆನ್ನಾಗಿ ಕಲಿತು, ಪರೀಕ್ಷೆಯನ್ನು ಉತ್ತಮವಾಗಿ ಬರೆದು, ಹೆಚ್ಚು ಅಂಕ ಗಳನ್ನು ಗಳಿಸುವ ವಿಧಾನಗಳ ಬಗ್ಗೆ ತಜ್ಞರು ನೀಡುವ ಟಿಪ್ಸ್‌ಗೆ ಈಗ ಹೆಚ್ಚಿನ ಬೇಡಿಕೆ. ಕಲಿಕೆಯ ಕುರಿತು ನೀಡುವ ತರಬೇತಿಗಳ ನಂತರವೂ ಕೆಲವು ವಿದ್ಯಾರ್ಥಿಗಳಿಗೆ ಕಲಿಕೆಯಲ್ಲಿ ತೊಡಗುವುದೇ ಬೇಸರದ ಸಂಗತಿ. ತಂದೆ, ತಾಯಿ, ಶಿಕ್ಷಕರ ಒತ್ತಾಯದಿಂದ ಬಲವಂತ ವಾಗಿ ಓದಲು ತೊಡಗುವವರ ಸಂಖ್ಯೆ ಕಡಿಮೆಯೇನಲ್ಲ.

ಪರೀಕ್ಷೆಗಾಗಿ ಓದಿ ನಂತರ ಮರೆಯುವುದನ್ನು ಎಲ್ಲರೂ ಮಾಡುತ್ತೇವೆ. ಆದರೆ ಜೀವನದ ಪಯಣದಲ್ಲಿ ನಾವೆಲ್ಲರೂ ಒಂದಲ್ಲಾ ಒಂದು ಕಲಿಕೆಯಲ್ಲಿ ತೊಡಗಲೇ ಬೇಕಿರುತ್ತದೆ. ನಮ್ಮ ಅಗತ್ಯಗಳಿಗೆ ತಕ್ಕಂತೆ ಹೊಸ ಜ್ಞಾನ, ಕೌಶಲಗಳನ್ನು ನಿರಂತರವಾಗಿ ಕರಗತ ಮಾಡಿಕೊಳ್ಳಬೇಕಾಗುತ್ತದೆ. ಕೆಲವರು ಅನಿವಾರ್ಯವಾಗಿ ಹೊಸ ಕಲಿಕೆಯಲ್ಲಿ ತೊಡಗಿದರೆ, ಹಲವರು ಹೊಸತನ್ನು ಕಲಿಯುವುದರಲ್ಲಿ ಮೋಜು, ಸಂತಸ ಅನುಭವಿಸುತ್ತಾರೆ. ಪರೀಕ್ಷೆ ಎಂಬ ಕಾರಣಕ್ಕಾಗಿ ಕಲಿಕೆಯಲ್ಲಿ ತೊಡಗುವುದಕ್ಕಿಂತ ಕಲಿಕೆಯ ಪ್ರಕ್ರಿಯೆಯನ್ನು ಆನಂದಿಸುತ್ತಾ, ಅದರ ಹಿಂದಿನ ಸೂಕ್ಷ್ಮಗಳನ್ನು ಅರ್ಥ ಮಾಡಿಕೊಂಡು ‘ಕಲಿಯುವುದು ಹೇಗೆ’ ಎಂಬುದನ್ನು ಕಲಿಯುವುದು ಅಗತ್ಯವಾದುದು.

ಬಾಲ್ಯದಲ್ಲಿ ಕಲಿಕೆ ಸಲೀಸು. ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತಾ, ಕುತೂಹಲ, ಆಸಕ್ತಿಗಳಿಂದ ಮಕ್ಕಳು ಬೇಗ ಕಲಿಯುತ್ತಾರೆ. ಎರಡು, ಮೂರು ಭಾಷೆಗಳನ್ನು ಕಲಿಯುವುದಿರಬಹುದು, ಸೈಕಲ್ ಮತ್ತು ವಾಹನ ಸವಾರಿ, ಈಜುವುದು, ಮರ ಹತ್ತುವಂತಹ ಕೆಲಸಗಳನ್ನು ಕಲಿಯುವಾಗ ಭಯ, ಆತಂಕಗಳಿಲ್ಲದೇ ಏಳುತ್ತಾ ಬೀಳುತ್ತಲೇ ಕಲಿಕೆಯಾಗಿದ್ದು ತಿಳಿಯುವುದೇ ಇಲ್ಲ. ಆದರೆ ದೊಡ್ಡವರಾದ ಮೇಲೆ ಹೊಸ ಜ್ಞಾನ ಪಡೆಯುವುದು ಮತ್ತು ಕೌಶಲಗಳನ್ನು ಕಲಿಯುವ ವೇಗ ಕುಂಠಿತವಾಗುವುದನ್ನು ಗಮನಿಸಬಹುದು.

ಅನೇಕರು ಬೆರಗು, ಕುತೂಹಲ, ಆಸಕ್ತಿಗಳನ್ನು ಬಿಡದೇ ಹೊಸ ಹೊಸ ಕಲಿಕೆಗಳಲ್ಲಿ ತೊಡಗಿ ಯಶಸ್ವಿಯಾಗುತ್ತಾರೆ. ಹೆಚ್ಚಿನವರು ವೃತ್ತಿಯಲ್ಲಿದ್ದಾಗಲೇ ನಿವೃತ್ತಿಯಾದವರಂತೆ ಇರುತ್ತಾರೆ. ಕಚೇರಿ ಕೆಲಸಗಳಲ್ಲಿ ಅಗತ್ಯವಾದ ಕಂಪ್ಯೂಟರ್ ಬಳಕೆಯ ಕೌಶಲಗಳನ್ನು ಹೊಂದುವುದು, ಅಗತ್ಯ ಮಾಹಿತಿಗಳನ್ನು ತಿಳಿದುಕೊಳ್ಳುವುದರಿಂದ ಅನೇಕರು ದೂರ ಉಳಿಯುವು ದನ್ನು ಕಾಣಬಹುದು. ಹೊಸ ಜ್ಞಾನ, ಕೌಶಲಗಳ ಕಲಿಕೆಯಲ್ಲಿ ತೊಡಗಿಸಿಕೊಂಡವರಲ್ಲಿ ಜೀವನೋತ್ಸಾಹ ಪುಟಿಯುತ್ತದೆ. ಇಂತಹವರಲ್ಲಿ ಸಂತಸ, ಸಂತೃಪ್ತಿಯ ಭಾವಗಳು ಮನೆ ಮಾಡಿರುತ್ತವೆ.

ತಮ್ಮ 89ನೇ ವಯಸ್ಸಿನಲ್ಲಿ ಮ್ಯಾರಥಾನ್ ಓಟ ಆರಂಭಿಸಿದ ಫೌಜಾಸಿಂಗ್ 101ನೇ ವಯಸ್ಸಿನಲ್ಲಿ ಲಂಡನ್ ಮ್ಯಾರಥಾನ್ ಅನ್ನು 7.49 ಗಂಟೆಯಲ್ಲಿ ಪೂರೈಸಿ, ವಿಶ್ವದ ಹಿರಿಯ ಮ್ಯಾರಥಾನ್ ಓಟಗಾರ ಎಂಬ ಹೆಗ್ಗಳಿಕೆ ಹೊಂದಿದ್ದಾರೆ. ಪಟ್ನಾದ ರಾಜ್‍ಕುಮಾರ್ ಅವರು 98ನೇ ವಯಸ್ಸಿನಲ್ಲಿ ನಳಂದ ಮುಕ್ತ ವಿಶ್ವವಿದ್ಯಾಲಯದ ಮೂಲಕ ಅರ್ಥಶಾಸ್ತ್ರದಲ್ಲಿ ಸ್ನಾತಕ ಪದವಿ ಪಡೆದರು. ಚೆನ್ನೈನ ಪ್ರೊ. ಪಾರ್ತಿಬನ್ 145 ಪದವಿಗಳನ್ನು ಪಡೆದಿದ್ದಾರೆ. ಕೇರಳದ ಚಿತ್ರನ್ ನಂಬೂದಿರಿಪಾಡ್‌ ತಮ್ಮ 100ನೇ ವರ್ಷದಲ್ಲಿ 30ನೇ ಬಾರಿಗೆ ಹಿಮಾಲಯದ ಚಾರಣ ಕೈಗೊಂಡರು. ಚಿಕ್ಕಪುಟ್ಟ ಬರವಣಿಗೆಯಲ್ಲಿ ತೊಡಗಿದ್ದ ಅಮೆರಿಕದ ಹ್ಯಾರಿ ಬರ್ನ್‌ಸ್ಟಿನ್ ತಮ್ಮ ಮೊದಲ ಪುಸ್ತಕ ‘ದಿ ಇನ್‌ವಿಸಿಬಲ್‌ ವಾಲ್‌: ಎ ಲವ್‌ ಸ್ಟೋರಿ ದಟ್‌ ಬ್ರೋಕ್‌ ಬ್ಯಾರಿಯರ್ಸ್‌’ ಅನ್ನು 96ನೇ ವಯಸ್ಸಿನಲ್ಲಿ ಪ್ರಕಟಿಸುವ ಮೂಲಕ ಯಶಸ್ವಿ ಲೇಖಕರಾಗುತ್ತಾರೆ. 92ರ ಹರೆಯದಲ್ಲಿ ಭಾನುರಾವ್ ಅವರು ಸೊಗಸಾಗಿ ಭರತನಾಟ್ಯ ಮಾಡುತ್ತಾರೆ. ಈ ಎಲ್ಲ ಉದಾಹರಣೆಗಳು ಹೊಸ ಕಲಿಕೆಯಲ್ಲಿ ತೊಡಗಿಕೊಳ್ಳಲು ನಮಗೆ ಪ್ರೇರಣೆ ದಾಯಕ.

ಕಲಿಕೆಯ ಯಶಸ್ಸಿನ ಬಗ್ಗೆ ತಲೆಕೆಡಿಸಿಕೊಳ್ಳದೆ ನಿರಂತರವಾಗಿ ತಣ್ಣಗೆ ಪ್ರಯತ್ನದಲ್ಲಿ ತೊಡಗುವುದು ಮುಖ್ಯವಾದುದು. ನಮಗೆ ದೊರೆಯಬಹುದಾದ ಹೊಸ ಕಲಿಕೆಯ ಅವಕಾಶಗಳಿಗೆ ಮುಕ್ತವಾಗಿ ತೆರೆದುಕೊಳ್ಳುತ್ತಾ, ತೊಡಗಿಸಿಕೊಂಡಲ್ಲಿ ಕಲಿಕೆ ಸಾಧ್ಯವಾಗುತ್ತದೆ. ಹೊಸ ಕಲಿಕೆಗಳನ್ನು ಜೀವನದ ಹೊಸ ಸನ್ನಿವೇಶಗಳಿಗೆ ಅನ್ವಯ ಮಾಡುತ್ತಾ ಸಾಗಿದಲ್ಲಿ ಯಶಸ್ಸು ಸಲೀಸು.

ಹೊಸ ಕಲಿಕೆಯಲ್ಲಿ ತೊಡಗಿದಾಗ ಎದುರಾಗುವ ಸವಾಲುಗಳ ಕಡೆ ಹೆಚ್ಚು ಗಮನ ನೀಡದೆ, ಅದರಿಂದ ನಮಗಾಗುವ ಲಾಭ, ಉಪಯೋಗಗಳ ಕಡೆ ಮನಸ್ಸು ನೆಡುವಂತೆ ನಮ್ಮ ಆಲೋಚನಾ ಲಹರಿಯನ್ನು ಬದಲಿಸಿ ಕೊಳ್ಳಬೇಕು. ಶಾಲೆಯಲ್ಲಿ ಅಥವಾ ಕಚೇರಿಯಲ್ಲಿ ಹೊಸ ಕಲಿಕೆಯಲ್ಲಿ ತೊಡಗಬೇಕೆಂಬ ನಿರ್ದೇಶನ ಬಂದಾಗ ‘ನನಗೆ ಇದಾಗದು’, ‘ನನಗೆ ಸಮಯ ಇಲ್ಲ’ ಎಂಬ ನೆಪಗಳನ್ನು ಹೇಳದೇ ಮುಂದಡಿ ಇಡಬೇಕು. ಇದರ ಜೊತೆ ಅನೇಕರು ‘ನಮಗೆಲ್ಲಾ ತಿಳಿದಿದೆ’ ಎಂಬ ಭಾವದಿಂದ ಅನೇಕ ಹೊಸ ಕಲಿಕೆಗಳಿಂದ ತಮ್ಮನ್ನು ತಾವೇ ವಂಚಿಸಿಕೊಳ್ಳುತ್ತಾರೆ. ಇಂತಹವರು ತಮ್ಮ ಕಾರ್ಯದ ಕುರಿತು ಇತರರ ಟೀಕೆ, ಸಲಹೆಗಳನ್ನು ಮುಕ್ತವಾಗಿ ಆಲಿಸಿ, ಕೌಶಲಗಳನ್ನು ಅಭಿವೃದ್ಧಿಪಡಿಸಿಕೊಳ್ಳಲು ಮುಂದಾಗಬೇಕು.

ಆಧುನಿಕ ಜಗತ್ತಿನ ಸ್ಪರ್ಧೆಯ ಯುಗದಲ್ಲಿ ವ್ಯಕ್ತಿಗಳಾಗಲೀ ಸಂಸ್ಥೆಗಳಾಗಲೀ ನಿರಂತರವಾಗಿ ಕಲಿಕೆಯಲ್ಲಿ ತೊಡಗುವುದು ಅನಿವಾರ್ಯ. ಪ್ರತಿಷ್ಠಿತ ಹುದ್ದೆ, ದೊಡ್ಡ ಮೊತ್ತದ ವೇತನದಿಂದ ದೊರೆಯದ ಸಂತಸವು ಹೊಸ ಜ್ಞಾನ ಮತ್ತು ಕೌಶಲಗಳ ಕಲಿಕೆಯಲ್ಲಿ ತೊಡಗಿಸಿಕೊಳ್ಳುವುದರಿಂದ ದೊರೆಯಲು ಸಾಧ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT