ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಜಾಲತಾಣ ಮತ್ತು ಕೊಳಕು ಮನಸ್ಸು

ಸಾಮಾಜಿಕ ಜಾಲತಾಣಗಳ ಎಗ್ಗಿಲ್ಲದ ಟ್ರೋಲ್ ಪಡೆಗಳಿಗೆ ನಿಯಂತ್ರಣ ಬೇಕಾಗಿದೆ
Published 17 ಜೂನ್ 2024, 23:30 IST
Last Updated 17 ಜೂನ್ 2024, 23:30 IST
ಅಕ್ಷರ ಗಾತ್ರ

ಸಾಮಾಜಿಕ ಜಾಲತಾಣಗಳ ಒಳಹೊಕ್ಕರೆ ಸಾಕು, ವೈಯಕ್ತಿಕ ದಾಳಿ, ಖಾಸಗಿ ವಿಷಯಗಳ ಬಗ್ಗೆ ಹಿಂದುಮುಂದಿಲ್ಲದೆ ಮಾತಾಡುವುದು, ಅವಾಚ್ಯ ಶಬ್ದಗಳಿಂದ ನಿಂದಿಸುವುದು, ತಮ್ಮ ಮೂಗಿನ ನೇರಕ್ಕೆ ಪ್ರತಿಕ್ರಿಯಿಸುವುದು, ಅಸಭ್ಯ ಸಂದೇಶಗಳು ಬಾಣಗಳಂತೆ ಒಂದಾದ ಮೇಲೊಂದರಂತೆ ಬಂದು ಎರಗುತ್ತಿರುತ್ತವೆ. ಇತ್ತೀಚೆಗಂತೂ ವಿವಿಧ ಪ್ರಕರಣಗಳಲ್ಲಿ ಸಿಲುಕಿಹಾಕಿಕೊಂಡಿರುವ ರಾಜಕೀಯ ವ್ಯಕ್ತಿಗಳು, ಸಿನಿಮಾ ತಾರೆಯರ ಚಂದದ ಚಿತ್ರ, ಪ್ರಚೋದನಕಾರಿ ಸಂದೇಶ ಹಾಕಿ, ಅತ್ಯಂತ ಕೊಳಕಾದ ಕಾಮೆಂಟ್‍ಗಳ ಮಹಾಪೂರವನ್ನೇ ಹರಿಸಲಾಗುತ್ತಿದೆ.

ನಮ್ಮ ಸಮಾಜದ ಆರೋಗ್ಯ ನಿಜಕ್ಕೂ ಇಷ್ಟೊಂದು ಹದಗೆಟ್ಟಿದೆಯೇ ಎಂದು ಆತಂಕವಾಗುತ್ತದೆ, ವಿಚಿತ್ರ ಕಿರಿಕಿರಿ ಉಂಟಾಗುತ್ತದೆ. ನಮಗೆ ಬೇಕಿಲ್ಲದಿದ್ದರೂ ಕಾಣಿಸಿಕೊಳ್ಳುವ ವಾಣಿಜ್ಯ ಜಾಹೀರಾತುಗಳ ಜೊತೆಗೇ ಬರುವ ಈ ಬಗೆಯ ಪೋಸ್ಟ್‌ಗಳ ಉದ್ದೇಶ ಜಾಸ್ತಿ ಲೈಕ್, ವ್ಯೂ ಬರುವ ಹಾಗೆ ಮಾಡುವುದರ ಮೂಲಕ ಹೆಚ್ಚು ಜನರನ್ನು ತಲುಪುವುದು, ಲಾಭ ಗಳಿಸುವುದೇ ಆಗಿದೆ ಎಂಬುದು ಎಲ್ಲರಿಗೂ ತಿಳಿದ ವಿಚಾರ. ಆದರೆ ಇಂತಹ ಲಾಭಕ್ಕಾಗಿ ಎಷ್ಟು ಕೀಳು ಮಟ್ಟಕ್ಕೆ ಬೇಕಾದರೂ ಇಳಿಯಬಹುದೇ? ನಾಗರಿಕ ಸಮಾಜವಾಗಿ ನಾವು ಇಂಥವುಗಳನ್ನು ಬೈದುಕೊಂಡು ಅಲಕ್ಷ್ಯ ಮಾಡುವುದರಾಚೆಗೆ ಇನ್ನೇನಾದರೂ ಮಾಡದೇ ಹೋದಲ್ಲಿ ಇದು ಇನ್ನೂ ಭೀಕರವಾಗಲಿದೆ.

ಯಾರ ಮೇಲಾಗಲೀ ಶೋಷಣೆ ನಡೆಯುವುದನ್ನು ವಿರೋಧಿಸಬೇಕು ನಿಜ. ಅದರಾಚೆಗೆ ಪ್ರಾಯ ಪ್ರಬುದ್ಧರ ಒಪ್ಪಿತ ಸಂಬಂಧಗಳು, ಹೊಂದಾಣಿಕೆಯಾಗದ ಕಾರಣಕ್ಕೆ ನಡೆಯುವ ವಿಚ್ಛೇದನಗಳು ಅವರವರ ವೈಯಕ್ತಿಕ ಬದುಕಿಗೆ ಸಂಬಂಧಿಸಿದವು. ಇದನ್ನು ಇನ್ನೂ ಗ್ರಹಿಸಲಾಗದಷ್ಟು ನಮ್ಮ ಸುತ್ತಲಿನ ಸಮಾಜ ಅಪ್ರಬುದ್ಧ
ವಾಗಿದೆ. ನಾವು ರೂಪಿಸಿಕೊಂಡಿರುವ ಹುಸಿ ನೈತಿಕ ನಿಲುವುಗಳು ಎಷ್ಟೋ ಬಾರಿ ಆಷಾಢಭೂತಿತನವನ್ನು ತೆರೆದು ತೋರುವಂತೆ ಇರುತ್ತವೆ.

ಹೆಣ್ಣೊಬ್ಬಳನ್ನು ಅತೀ ಕೊಳಕು ಭಾಷೆಯಿಂದ ನಿಂದಿಸುವ ಹೊತ್ತಲ್ಲೇ ಇಷ್ಟದ ನಟನ ಹಲವು ಸಂಬಂಧಗಳು, ಅವನು ನಡೆಸಿದ ದೌರ್ಜನ್ಯವು ವೀರತನದ ಹಾಗೆ ಕಾಣುತ್ತಾ ಇರುತ್ತದೆ. ಸಾಪೇಕ್ಷ ಮೌಲ್ಯಗಳು, ಜಾತಿ ಪೂರ್ವಗ್ರಹಗಳು, ಹೆಣ್ಣುಮಕ್ಕಳ ಬಗ್ಗೆ ತಾತ್ಸಾರ, ಇನ್ನೊಂದು ಧರ್ಮದವರ ಬಗೆಗಿನ ದ್ವೇಷ ಇವೇ ಇಲ್ಲಿ ಎದ್ದು ಕಾಣುತ್ತಿರುತ್ತವೆ. ಸಂಸ್ಕೃತಿ ರಕ್ಷಕರೆಂದು ಹೇಳಿಕೊಳ್ಳುವವರಿಗೆ ಮಾತೆತ್ತಿದರೆ ಹೆಣ್ಣಿನ ಲೈಂಗಿಕತೆ, ಗಂಡಿನ ಪೌರುಷದಾಚೆಗೆ ಬೇರೆ ನುಡಿಗಟ್ಟುಗಳಿಲ್ಲ.

ಯಾವುದೋ ಒಂದು ಸಂದರ್ಭದಲ್ಲಿ ವಿಶಾಲ ಆವರಣದಲ್ಲಿ ಆಡಿದ ಮಾತನ್ನು ಅದರ ಸಂದರ್ಭದಿಂದ ಕಿತ್ತುಹಾಕಿ, ವಿವಾದಾತ್ಮಕವೆಂದು ಕಾಣುವ ಒಂದು ಸಾಲನ್ನು ಎತ್ತಿ ಟಿಆರ್‌ಪಿಗಾಗಿ ದೃಶ್ಯ ಮಾಧ್ಯಮಗಳು ಪ್ರಚೋದನಾತ್ಮಕವಾಗಿ ಬಿತ್ತರಿಸುವುದು ಮಾಮೂಲಿಯಾಗಿದೆ. ಅದೇ ರೀತಿ ವ್ಯೂಸ್‌ಗಾಗಿ ಸಾಮಾಜಿಕ ಜಾಲತಾಣಗಳಲ್ಲಿ ಪ್ರಕಟಗೊಳ್ಳುತ್ತವೆ. ಗೌರಿ ಲಂಕೇಶ್ ಹತ್ಯೆಯಾಗುವ ಮೊದಲು ಅವರು ಭಾಷಣದ ಸಂದರ್ಭದಲ್ಲಿ ಆಡಿದ ಮಾತಿನ ತುಣುಕು, ಅದಕ್ಕೆ ವ್ಯಕ್ತವಾದ ಪ್ರತಿಕ್ರಿಯೆಯನ್ನು ನೆನಪಿಸಿಕೊಳ್ಳಬಹುದು. ಯು.ಆರ್.ಅನಂತಮೂರ್ತಿ, ಪ್ರೊ. ಎಂ.ಎಂ.ಕಲಬುರಗಿ ಅವರ ಮಾತುಗಳ ವಿಚಾರದಲ್ಲೂ ಹೀಗೇ ಆಗಿತ್ತು. ಮೆದುಳಿರದ ಟ್ರೋಲ್ ಪಡೆಗಳು ಪೂರ್ವಾಪರ ವಿವೇಚನೆಯಿಲ್ಲದೆ, ವೈಚಾರಿಕ ಪರಂಪರೆ, ಕನ್ನಡದ ವಿವೇಕ, ಈ ಮಹನೀಯರ ಕೊಡುಗೆ ಯಾವುದರ ಅರಿವೂ ಇಲ್ಲದೆ ಕೊಳಕು ಮಾತುಗಳಿಂದ ನಿಂದಿಸಿದ್ದವು. ಈಗ ಇದು ಇನ್ನಷ್ಟು ವಿಕೃತವಾಗಿ ಕಾಣಿಸಿಕೊಳ್ಳುತ್ತಿದೆ.

ಹೀಗೆ ಟ್ರೋಲ್ ಮಾಡುವ ಬಹುತೇಕ ಹೆಸರುಗಳು ನಿಜ ಜೀವನದಲ್ಲಿ ಅಸ್ತಿತ್ವದಲ್ಲೇ ಇರುವುದಿಲ್ಲ. ಕೆಲವೇ ವ್ಯಕ್ತಿಗಳು ಹತ್ತಾರು ಹೆಸರುಗಳಲ್ಲಿ ಫೇಕ್ ಅಕೌಂಟ್ ಸೃಷ್ಟಿಸಿಕೊಂಡು ಏಕಕಾಲದಲ್ಲಿ ದಾಳಿಯಿಡುತ್ತಾರೆ. ಪ್ರತಿಕ್ರಿಯಿಸಲು ಹೋದಷ್ಟೂ ಇದು ತೀವ್ರವಾಗುತ್ತದೆ. ವಾಣಿಜ್ಯ ಕಾರಣಕ್ಕೆ, ಐಡಿಯಾಲಜಿಯ ಕಾರಣಕ್ಕೆ ಸೃಷ್ಟಿಯಾದ ಇಂಥ ಪಡೆಗಳು ಪಿಡುಗಾಗಿ ಬೆಳೆದುಬಿಟ್ಟಿವೆ. ಇವು ಬದುಕಿದ್ದಾಗಷ್ಟೇ ಅಲ್ಲ ಸತ್ತ ಮೇಲೂ ಆ ವ್ಯಕ್ತಿಯ ಮನೆಯವರ ಮೇಲೆ, ಸಮಾಜದ ಮೇಲೆ ಇದು ಬೀರುವ ಪರಿಣಾಮ ಏನಿರಬಹುದು ಎಂಬುದನ್ನು ಲೆಕ್ಕಿಸದೇ ದಾಳಿ ಮಾಡುವ ರಣಹದ್ದುಗಳಂತೆ ಇವೆ. ಭಾರತ ಇಡೀ ವಿಶ್ವದಲ್ಲಿ ಸೈಬರ್ ಬುಲ್ಲಿಯಿಂಗ್‍ನಲ್ಲಿ ಮುಂಚೂಣಿಯಲ್ಲಿ ಇರುವುದು ಆತಂಕದ ವಿಷಯ.

ಶೋಚನೀಯ ವಿಚಾರವೆಂದರೆ, ನೇರವಾಗಿ ವಾಣಿಜ್ಯ ಉದ್ದೇಶವುಳ್ಳ ತಾಣಗಳಲ್ಲದೆ ಸಾಹಿತ್ಯ, ಸಂಸ್ಕೃತಿಗೆ ಉತ್ತೇಜನ ನೀಡುವ ಹೆಸರಿನಲ್ಲಿ ಶುರುವಾದ ತಾಣಗಳೂ ವಿವೇಚನೆ ಇಲ್ಲದಂತೆ ವರ್ತಿಸುತ್ತಿವೆ. ಯಾವುದು ಪ್ರಚೋದನಕಾರಿ ಆಗಬಹುದು ಎಂದು ತಿಳಿದೂ ಅಂಥವನ್ನೇ ಮುನ್ನೆಲೆಗೆ ಹಾಕಿ, ಆ ಮಾತುಗಳನ್ನಾಡಿದವರಿಗೆ ಎಷ್ಟೇ ಅವಹೇಳನಕಾರಿ ಕಾಮೆಂಟ್‍ಗಳು ಬಂದರೂ ಜಾಣಗುರುಡುತನ ಪ್ರದರ್ಶಿಸುತ್ತಿವೆ. ಇವರ ಉದ್ದೇಶವಾದರೂ ಏನು? ಇವರ ಈ ನಡೆಯಿಂದ ಸಾಹಿತ್ಯ, ಸಂಸ್ಕೃತಿ, ವ್ಯಕ್ತಿ ಘನತೆಗೆ ಯಾವ ಗೌರವ ಬಂದಂತಾಯಿತು? ಮಾಧ್ಯಮ ಸ್ವಾತಂತ್ರ್ಯ ಮತ್ತು ಹೊಣೆಗಾರಿಕೆಯ ಬಗ್ಗೆ ಮಾತನಾಡುವವರು ತಮ್ಮ ಮೌನ ಮುರಿದು ಮಾತನಾಡಬೇಕಾಗಿದೆ.

ಎಲ್ಲರಿಗೂ ತಮಗನಿಸಿದ್ದನ್ನು ಮುಕ್ತವಾಗಿ ಹೇಳುವ ಅವಕಾಶವಿದೆ. ಆದರೆ ವೈಯಕ್ತಿಕ ನಿಂದನೆ, ಗಡಿ ದಾಟಿ ಮಾತನಾಡಲು ಯಾರಿಗೂ ಹಕ್ಕಿಲ್ಲ. ಪ್ರಜಾಪ್ರಭುತ್ವದಲ್ಲಿ ಸಂವಿಧಾನಬದ್ಧ ಅಭಿಪ್ರಾಯ ಸ್ವಾತಂತ್ರ್ಯವಿದೆ, ಜೊತೆಗೆ ಖಾಸಗಿತನವನ್ನು ಗೌರವಿಸಬೇಕು ಮತ್ತು ಎದುರಿಗಿರುವವರನ್ನು ಅವಹೇಳನ ಮಾಡದೇ ಅವರ ಘನತೆಯನ್ನು ಮನ್ನಿಸಬೇಕು ಎಂಬುದನ್ನೂ ಅದು ಒತ್ತಿ ಹೇಳುತ್ತದೆ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕಿದೆ. ಅಲ್ಲದೆ, ಇದನ್ನು ಮೀರಿ ನಡೆದುಕೊಂಡಾಗ ಸೈಬರ್ ಬುಲ್ಲಿಯಿಂಗ್ ತಡೆಗಟ್ಟುವ ದಿಸೆಯಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ರೂಪಿಸಬೇಕಾದ ಅಗತ್ಯವಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT