ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕೃಷಿ ತೊರೆಯುವುದೇ ಶೂನ್ಯ ಬಂಡವಾಳ!

ಪಾರಂಪರಿಕ ಜ್ಞಾನವನ್ನು ಕಾಪಿಡಲು ಹಾಗೂ ಕೃಷಿ ವಿಜ್ಞಾನದ ಪುನಶ್ಚೇತನಕ್ಕೆ ಸರ್ಕಾರಗಳು ಯಾವ ಪ್ರಯತ್ನ ಮಾಡುತ್ತಿವೆ?
Last Updated 15 ಜುಲೈ 2019, 20:00 IST
ಅಕ್ಷರ ಗಾತ್ರ

ಕೃಷಿಕತನ ಹಾಗೂ ಪರಿಸರ ಬತ್ತಿ ಬಾಡಿ ಹೋಗುತ್ತಿರುವುದನ್ನು ಗಮನಿಸದ ಸರ್ಕಾರಗಳು, ನಗರತನವನ್ನೇ ಇಡೀ ದೇಶದ ಅಭಿವೃದ್ಧಿ ಎಂದು ನಂಬಿಸುತ್ತಿವೆ. ಅದಕ್ಕೆ ಪ್ರತಿಯಾಗಿ, ಮತಗಟ್ಟೆಯನ್ನು ವ್ಯಾಪಾರ ಮಾಡಿಕೊಳ್ಳುತ್ತಿವೆ. ಗೆದ್ದ ಎತ್ತಿನ ಬಾಲ ಹಿಡಿಯುವ ರಾಜ್ಯ ರಾಜಕಾರಣ; ಗೆದ್ದೆವೆಂದು ಬೀಗುತ್ತಿರುವ ದೇಶ ರಾಜಕಾರಣವು ಭೂತಾಯಿಯ ಹಾಗೂ ಆಕೆಯ ಮಕ್ಕಳ ಹೊಟ್ಟೆ ಸಂಸ್ಕೃತಿಯನ್ನು ವ್ಯಾಪಾರಕೊಡ್ಡುತ್ತಿವೆ.

ಆಕೆಯ ಮಕ್ಕಳು ಎಂದರೆ ಜೀವಜಾಲದ ಪರಂಪರೆ. ಪರಿಸರಕ್ಕೂ ರೈತಾಪಿಗೂ ಉಗುರು– ಮಾಂಸದ ನಂಟು. ಅರ್ಧ ಶತಮಾನಕ್ಕೂ ಹೆಚ್ಚು ಅವಧಿಗೆ ಅಧಿಕಾರ ನಡೆಸಿದ ಪಕ್ಷ, ಪಾರಂಪರಿಕ ರೈತಾಪಿ ತಟ್ಟೆಯಲ್ಲಿ ರಾಸಾಯನಿಕ ಹಾಗೂ ಜೀವಜಾಲ ಕೊಲ್ಲುವ ವಿಷ ಬೆರೆಸಿ ಉಣಲಿಕ್ಕಿ, ಹಸಿರು ಕ್ರಾಂತಿ ಎಂದು ಬೀಗಿತು. ಗೃಹ ಕೈಗಾರಿಕೆ ಹಾಗೂ ಪರಂಪರೆಯ ಜ್ಞಾನಗಳನ್ನು ಅದು ನುಂಗಿ ನೀರು ಕುಡಿಯಿತು.

ಜೀವಜಲಕ್ಕೆ ಮನುಷ್ಯನ ಮಲಮೂತ್ರ, ಕೈಗಾರಿಕಾ ವಿಷ ಸೇರಿ, ನಂಜೇರಿ ಅದರೊಳು ಇದು, ಇದರೊಳು ಅದು ಹಿಂಗಿ, ದೇಶದ 21 ನಗರಗಳಲ್ಲಿ ನೀರಿಲ್ಲ ವಾಗುತ್ತಿರುವ ಸ್ಥಿತಿ ತಲುಪುವ ಅಪಾಯ ಎದುರಾಗಿದೆ. ನದಿಗಳಿಗೆ ಕಲ್ಮಷ ನೂಕದೆ, ಮರಳು ತೆಗೆಯದೆ, ಅಡವಿ ಸವರದೆ ಈಗಲೂ ಬಿಟ್ಟರೆ ಆ ದೇವಿಯರು ಪುನಃ ಹರೆಯಕ್ಕೆ ಬಂದಾರು!

ಗಂಗೆಯ ಮಲಿನ ತೊಳೆಯಲು ಹೊರಟ ಸರ್ಕಾರ, ಈಗಿನ ಆಯವ್ಯಯದಲ್ಲಿ ಅದಕ್ಕೆ ಅನುದಾನ ಖೋತಾ ಮಾಡಿದೆ. ಸಣ್ಣ ಹಾಗೂ ಮಧ್ಯಮ ರೈತಾಪಿಗೆ ಆಯವ್ಯಯದಲ್ಲಿ ಕೇವಲ ₹ 75 ಸಾವಿರ ಕೋಟಿ ಇರಿಸಿದೆ. ಪ್ರಧಾನಿ ಕಿಸಾನ್ ಯೋಜನೆಯಂತೆ, ವಿಮಾ ಸೌಕರ್ಯವಂತೆ! ಇವು ರೈತಾಪಿಗೆ ಮುಟ್ಟುವ ಯೋಜನೆಗಳಲ್ಲ. ಇಂಧನದ ಬೆಲೆ ಏರಿಕೆಯಾಗಿದೆ. ‘ಒಂದು ದೇಶದ ಅಥವಾ ನಾಗರಿಕತೆಯ ಸಾಧನೆಯನ್ನು ಅಳೆಯುವುದು ಅದರ ಉತ್ಪಾದನೆಯ ಅಂಕಿ ಅಂಶಗಳಿಂದಲ್ಲ. ಅದರ ತಾಳಿಕೆಯ ಶಕ್ತಿಯಿಂದ’ ಎಂದು, ವ್ಯಾಪಾರಿ ದೇಶವಾದ ಅಮೆರಿಕದ ಲೋಕ ಚಿಂತಕ ಗ್ರಿಸ್ಕಮ್ ಮಾರ್ಗ್ ಅವರು ಬುದ್ಧಿ ಹೇಳಿದರು. ಆದರೆ ಅಂತಹ ದೇಶಗಳಿಗೆಲ್ಲ ಭಾರತದಂತಹ ದೇಶಗಳು ಸಂತೆ ಮೈದಾನಗಳಾಗಿವೆ.

ಗಾಂಧೀಜಿ ಹೇಳುವ ‘ಹಸಿದವನಿಗೆ ಭಗವಂತನು ಕೇವಲ ರೊಟ್ಟಿ– ಬೆಣ್ಣೆಯ ರೂಪದಲ್ಲಿ ಕಾಣಿಸುತ್ತಾನೆ. ಬಡವರಿಗೆ ಆರ್ಥಿಕತೆಯೇ ಆಧ್ಯಾತ್ಮಿಕತೆ’ ಎಂಬ ಮಾತು ಲೋಕಸತ್ಯದ್ದು. ಪರಂಗಿಯವರು ಬಿಟ್ಟು ಹೊರಟಾಗ ದೇಶ ಹಸಿದ ಹೊಟ್ಟೆಯಲ್ಲಿತ್ತು. ಆದರೆ ಆಧ್ಯಾತ್ಮಿಕತೆ ನೀಗಿಕೊಂಡಿರಲಿಲ್ಲ. ಆರ್ಥಿಕ ಭರಾಟೆ ಹಬ್ಬಿಸಲಾಯಿತು. ರಾಸಾಯನಿಕ ಕಂಪನಿಗಳ ವಿಷವನ್ನು ಬಡದೇಶಗಳಲ್ಲಿ ಸುರಿಯಲಾಯಿತು.

ಈಗಂತೂ ಬಯಲಿನಲ್ಲಿ ಅಗತ್ಯಕ್ಕಿಂತ ಹೆಚ್ಚು ಗೇಯಲು ರೈತಾಪಿಯ ಕೈಕಾಲುಗಳಿಗೆ ನಿಶ್ಶಕ್ತಿ ಮೂಡಿದೆ. ಜಗಲಿ ಮೇಲಿನ ಚರಕ ಮುರಿದು, ಗೃಹ ಕೈಗಾರಿಕೆಯ ಒಪ್ಪಾರು ಮುರಿದು, ಹಗ್ಗಹುರಿಗಳಿಗೂ ಪೇಟೆ ಅಂಗಡಿ ನೋಡಲಾಗುತ್ತಿದೆ. ಮುಳುಗಿ ಹೋಗುತ್ತಿರುವ ರೈತಾಪಿಗೆ ಗಾಂಧೀಜಿ ಮಾರ್ಗದ ಕೃಷಿ ತಜ್ಞರು ಊರುಗೋಲು ನೀಡಲು ಮುಂದಾಗಿರುವುದುಂಟು. ಏನು ಮಾಡುವುದು? ಸರ್ಕಾರಗಳು ಇನ್ನೂ ವಿದೇಶಿ ವ್ಯಾಪಾರದೊಡನೆ ಕೈಚಾಚಿವೆ. ‘ಶೂನ್ಯ ಬಂಡವಾಳ ಕೃಷಿ’ಗೆ ಪ್ರೋತ್ಸಾಹವೆಂದು ಆಯವ್ಯಯದಲ್ಲಿ ಮೂಗಿಗೆ ತುಪ್ಪ ಸವರಲಾಗುತ್ತಿದೆ. ಅಂದರೆ, ‘ಕೃಷಿ ಮಾಡದೆ ಬಿಟ್ಟುಬಿಟ್ಟರೆ ಅದೇ ಶೂನ್ಯ ಬಂಡವಾಳವಲ್ಲವೇ’ ಎಂದು ರೈತರು ಹಂಗಿಸುವ ಮಟ್ಟದಲ್ಲಿದ್ದಾರೆ. ಸರ್ಕಾರಗಳು ಬೆಂಬಲ ಬೆಲೆ ನೀಡಿದರೆ, ಬೆಲೆ ಕುಸಿದಾಗ ಅವುಗಳನ್ನು ಇಡಲು ಶೈತ್ಯಾಗಾರಗಳನ್ನು ನಿರ್ಮಿಸಿದರೆ ಹಾಗೂ ನೀರು, ಗಾಳಿ, ಆಹಾರ ಕಾಪಾಡಿದರೆ ಅದೇ ಅಭಿವೃದ್ಧಿ ಅಲ್ಲವೇ!

ಸಣ್ಣವೆರಡು ಮಳೆಗೆ ಬೀಜ ಹುಟ್ಟಿ ವಡೆ ಬಂದು, ನಾಲ್ಕಾರು ಪಲ್ಲ ಕಿರುಧಾನ್ಯವಾಗಿ ವಾಡೆ ಹಗೇವು ತುಂಬುತ್ತಿದ್ದ ಕೃಷಿ ವಿಜ್ಞಾನದ ಪುನಶ್ಚೇತನಕ್ಕಾಗಿ ಸರ್ಕಾರಗಳು ಏನು ಮಾಡುತ್ತಿವೆ? ನಾಟಿ ದನಗಳ ಹಾಲಿನ ಸತ್ವದ ಪುನರ್ ಪರಿಶೀಲನೆಗೆ ಏನು ಮಾಡಲಾಗಿದೆ? ಮಡಕೆ ಹಾಗೂ ಗುಡಾಣದಲ್ಲಿರಿಸಿ ಕಾಪಿಡುತ್ತಿದ್ದ ಬೀಜುವರಿಯನ್ನು ವಿದೇಶಿ ಕಂಪನಿಗೆ ನೀಡಿ ನೀರು ಕುಡಿಯಲಾಗಿದೆ. ನಮ್ಮ ಕೃಷಿ ಪರಂಪರೆ ಉಳಿಸಲು ಅದಕ್ಕೆ ಹೇಗೆ ಪುನಃ ಪ್ರೋತ್ಸಾಹ ನೀಡಬೇಕಾಗಿದೆ? ಇವೆಲ್ಲದರ ಚಿಂತನೆಯು ಕೃಷಿ ವಿಜ್ಞಾನ ವಲಯದಲ್ಲಿ ನಡೆಯುತ್ತಿಲ್ಲವೇಕೆ?

ಶಕ್ತಿಯುತ ಆಹಾರ ಒಂದು ಹಿಡಿ ಸಾಕು, ಗಂಗಳದ ತುಂಬಾ ಭಿಕ್ಷಾನ್ನ ಬೇಕಿಲ್ಲ ಎಂಬ ಚಿಂತನೆ ಪುನಃ ಬೇಕಾಗಿದೆ. ಅದೇ ಗಾಂಧೀಜಿ ಹೇಳಿದ ಆರ್ಥಿಕತೆಯ ಆಧ್ಯಾತ್ಮಿಕತೆ. ಬಿಸಿಲು, ಮಳೆಯೊಡನೆ ಸಾಂಗತ್ಯ ಬೆಳೆಸಿ, ಸತ್ತ ಜೀವಗಳನ್ನು ಮಣ್ಣಿನೊಳಗೆ ಸೇರಿಸಿ, ಮಣ್ಣಿನ ಕೋಟ್ಯಂತರ ಜೀವಿಗಳೊಡನೆ ಒಡನಾಡುವ ಜೀವ ವೈವಿಧ್ಯವೇ ಶೂನ್ಯ ಬಂಡವಾಳ ಕೃಷಿ. ಮಳೆ ಹನಿ ಹನಿ ಸೇರಿಸಿ ಬೇರೊಳಗೆ ನೀರಿಳಿಸಿ, ಕೆರೆಕಟ್ಟೆ ಕಲ್ಯಾಣಿಗಳ ಪುನರುಜ್ಜೀವನವೇ ಕೃಷಿ ವಿಜ್ಞಾನ. ಅದೇ ಪರಿಸರ ಕಾಪಾಡುವ ಪಾರಂಪರಿಕ ವಿಜ್ಞಾನ.

2022ಕ್ಕೆ ರೈತಾಪಿ ಆದಾಯ ದ್ವಿಗುಣಗೊಳ್ಳುತ್ತದೆಂದು ಆಯವ್ಯಯ ಹೇಳುತ್ತಿದೆ. ಆದರೆ ಇದು ಹೌದೆಂದು ನಂಬುವ ಸ್ಥಿತಿಯಲ್ಲಿ ದೇಶ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT