ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಅನಿರೀಕ್ಷಿತ ಅತಿಥಿ ಈ ಧೂಮಕೇತು

Last Updated 15 ಜುಲೈ 2020, 19:30 IST
ಅಕ್ಷರ ಗಾತ್ರ

ಮಾರ್ಚ್ ತಿಂಗಳ ಕೊನೆಯಲ್ಲಿ ನಿಯೋವೈಸ್ ಎಂಬ ಉಪಗ್ರಹವು ಭೂಮಿಯಿಂದ 300 ಕಿ.ಮೀ ಎತ್ತರದಲ್ಲಿ ಸುತ್ತುತ್ತಿರುವ ಒಂದು ಹೊಸ ಚುಕ್ಕೆಯನ್ನು ಪತ್ತೆ ಹಚ್ಚಿದಾಗ, ಅದು ಒಂದು ಸಾಧಾರಣ ಧೂಮಕೇತು ಎಂದು ವರದಿಯಾಯಿತು. ಸಾಕಷ್ಟು ದೂರದಲ್ಲಿದ್ದ ಅದು ಸಾಮಾನ್ಯವಾದ (‘ತೋಳ ಬಂತು ತೋಳ’ ಎಂಬಂತೆ ಸುದ್ದಿ ಮಾಡಿ ಮಾಯವಾಗಿ ಬಿಡುವ), ಆದರೆ ಮೊದಲ ಬಾರಿ ಬರುತ್ತಿರುವ ಕಾಯ.

ದೂರದರ್ಶಕಗಳಿಗೆ ಮಾತ್ರ ನಿಲುಕುವಂತಿದ್ದ ಅದರ ಕಕ್ಷೆಯನ್ನು ಲೆಕ್ಕ ಹಾಕಿದಾಗ, ಸುಮಾರು 7,000 ವರ್ಷಗಳ ಅವಧಿಯದ್ದಾಗಿದ್ದು, ಜುಲೈನಲ್ಲಿ ಅದು ಪುರರವಿಯನ್ನು (ಅಂದರೆ ಕಕ್ಷೆಯಲ್ಲಿ ಸೂರ್ಯನಿಗೆ ಅತಿ ಸಮೀಪದ ಬಿಂದು) ಹಾದು ಹೋಗುವುದು ಎಂದು ತಿಳಿಯಿತು.

ಅದರ ಕಕ್ಷಾವಧಿ ನಿಖರವಾಗಿ ಗೊತ್ತಿಲ್ಲದ ಕಾರಣ ಅದಕ್ಕೆ ‘ಸಿ’ ಎಂಬ ವರ್ಗ (ಗೊತ್ತಿದ್ದರೆ ಪಿ) ಮತ್ತು ಮಾರ್ಚ್‌ನ ದ್ವಿತೀಯಾರ್ಧದಲ್ಲಿ ಪತ್ತೆಯಾದ ಕಾರಣ ಎಫ್ (ಜನವರಿ ಮೊದಲರ್ಧಕ್ಕೆ ಎ, ದ್ವಿತೀಯಾರ್ಧಕ್ಕೆ ಬಿ... ಹೀಗೆ), ಆ ಅವಧಿಯಲ್ಲಿ ಪತ್ತೆಯಾದ 3ನೇ ಧೂಮಕೇತು. ಆದ್ದರಿಂದ ಇದರ ಸಾಂಪ್ರದಾಯಿಕ ಹೆಸರು ಸಿ/2020ಎಫ್3. ಇದನ್ನು ಕಂಡುಹಿಡಿದ ಗಗನ ವೀಕ್ಷಣಾಲಯದ ಉಪಕರಣ ವೈಡ್ ಫೀಲ್ಡ್ ಇನ್‍ಫ್ರಾರೆಡ್ ಸರ್ವೆ ಎಕ್ಸ್‌ಪ್ಲೋರರ್ ಟೆಲಿಸ್ಕೋಪ್; ಇದು ನಿಯರ್ ಅರ್ಥ್‌ ಆರ್ಬೈಟರ್‌ನ ಒಂದು ಉಪಕರಣ. ಇದೇ ನಿಯೋವೈಸ್ ಎಂಬ ಹೆಸರಿನ ಮೂಲ.

ಜೂನ್ ಕೊನೆಯ ವಾರದವರೆಗೂ ಕ್ಷೀಣವಾಗಿದ್ದ ಅದು, ಹೆಚ್ಚೆಂದರೆ ದುರ್ಬೀನುಗಳಿಗೆ ನಿಲುಕಬಹುದು ಎಂಬ ಲೆಕ್ಕಾಚಾರವಿತ್ತು. ಆದರೆ ಎರಡೇ ದಿನಗಳಲ್ಲಿ ಅದು ತನ್ನ ಪ್ರಕಾಶವನ್ನು ಹೆಚ್ಚಿಸಿಕೊಂಡು ಲೆಕ್ಕವನ್ನೆಲ್ಲಾ ತಲೆಕೆಳಗು ಮಾಡಿತು. ಬರಿಗಣ್ಣಿಗೆ ಕಾಣುವಷ್ಟು ಪ್ರಕಾಶವನ್ನು ಪಡೆದು ಹವ್ಯಾಸಿಗಳನ್ನು ಆಕರ್ಷಿಸಿತು. ಇದು ವೃತ್ತಿಪರರಿಗೆ ನಿಧಿ ಸಿಕ್ಕಂತೆಯೇ ಎನ್ನಬಹುದು. ಏಕೆಂದರೆ, ಧೂಮಕೇತು ಅನೇಕ ವೈಶಿಷ್ಟ್ಯಪೂರ್ಣ ಅನಿಲಗಳ ಖಜಾನೆ. ಮುಖ್ಯವಾಗಿ, ಕಾರ್ಬನ್ ಅಣುಗಳು ಇದ್ದರೂ ಸೈಯನೊಜನ್ ಮತ್ತು ಇತರ ಅನೇಕ ಕಾರ್ಬನ್ ಸಂಯುಕ್ತ ಅಣುಗಳನ್ನು ಅದು ಉತ್ಪಾದಿಸುತ್ತದೆ. ಬಾಲಗಳಿಗೆ ಮೂಲವಾದ ವಸ್ತುವಿನ ಸಂಗ್ರಹ ಎಷ್ಟಿರಬಹುದು, ಯಾವ ವೇಗದಲ್ಲಿ ಆ ಅನಿಲಗಳು ಆವಿಯಾಗುತ್ತಿರಬಹುದು, ಯಾವ ರೀತಿಯಲ್ಲಿ ಹೊಸ ಅನಿಲಗಳನ್ನು ಸೃಷ್ಟಿಸುತ್ತಿರಬಹುದು ಎಂಬಂತಹ ಪ್ರಶ್ನೆಗಳಿಗೆ ಉತ್ತರ ಒದಗಿಸಬಲ್ಲ ಪ್ರಯೋಗಶಾಲೆ ಹೀಗೆ ಅನಿರೀಕ್ಷಿತವಾಗಿ ದೊರಕಿದೆ.

ಐದು ವರ್ಷಗಳ ಹಿಂದೆ ಐಸನ್ ಎಂಬ ಧೂಮಕೇತು ಹೀಗೆ ಆಸೆ ಹುಟ್ಟಿಸಿ ಅನೇಕರ ನಿದ್ದೆಗೆಡಿಸಿತ್ತು. ಕೊನೆಗೆ ಪುರರವಿ ಬಿಂದುವನ್ನು ಮುಟ್ಟುತ್ತಿದ್ದಂತೆ ಅಕ್ಷರಶಃ ಹೆಸರಿಲ್ಲದಂತೆ ಮಾಯವಾಗಿಬಿಟ್ಟಿತ್ತು. ಆದ್ದರಿಂದ ಈ ಧೂಮಕೇತು ಪುರರವಿ ಬಿಂದುವಿನ ಆಘಾತದಿಂದ ಪಾರಾಗುವುದೇ ಎಂಬ ಅನುಮಾನ ಕಾಡುತ್ತಿತ್ತು. ಜುಲೈ 3ರಂದು ಉದ್ದನೆಯ ಬಾಲ ಕಂಗೊಳಿಸಿತು. ಅದರ ಎರಡು ಶಾಖೆಗಳೂ ಸುಂದರವಾಗಿ ಕಂಡವು. ಜುಲೈ 5ರಂದು ಅದರ ಚಿತ್ರಗಳನ್ನು ಬಾಹ್ಯಾಕಾಶ ನೌಕೆಗಳು ಒದಗಿಸಿದಾಗ, ಅದು ಈ ಪರೀಕ್ಷೆಯಲ್ಲಿ ‘ಗೆದ್ದಿತು’ ಎಂಬುದು ಖಚಿತವಾಯಿತು. ಎಲ್ಲ ಕ್ಯಾಮೆರಾಗಳು ಅದರ ಬೆನ್ನು ಹತ್ತಿದವು. ಸೋಹೋ ಎಂಬ ಗಗನ ವೀಕ್ಷಣಾಲಯ ಅದರ ಚಿತ್ರಗಳನ್ನು ಒದಗಿಸಿತು.

ಧೂಮಕೇತುಗಳದ್ದೊಂದು ದೊಡ್ಡ ವಿರೋಧಾಭಾಸವಿದೆ. ಅವು ಅತಿ ಉದ್ದದ ಬಾಲ ಬೆಳೆಸಿಕೊಂಡು ಮನೋಹರವಾಗಿ ಕಾಣುವುದು ಸೂರ್ಯನನ್ನು ಸಮೀಪಿಸಿದಾಗ. ಆದರೆ ಅದೇ ಸಾಮೀಪ್ಯದ ಕಾರಣ ಅವನ್ನು ನೋಡುವುದೇ ಕಷ್ಟ. ಅರುಣೋದಯ ಅಥವಾ ಸಂಜೆಯ ಹೊಂಬಣ್ಣದಲ್ಲಿ ಕರಗಿಹೋಗುತ್ತವೆ. ಆದರೆ ಈ ಅಡಚಣೆಯನ್ನು ಮೆಟ್ಟಿ ನಿಲ್ಲಬಲ್ಲ ಬೆರಳೆಣಿಕೆಯ ಧೂಮಕೇತುಗಳ ವರ್ಗಕ್ಕೆ ನಿಯೋವೈಸ್ ಸೇರಿಕೊಂಡಿದೆ. ಹಾಗಾಗಿ ಇನ್ನೂ ಒಂದೆರಡು ವಾರ ಅದು ಬರಿಗಣ್ಣಿಗೆ ಕಾಣುವ ಸಾಧ್ಯತೆ ಇದೆ.

ಈ ಅಪರೂಪದ ಅತಿಥಿಯನ್ನು ನೋಡಲು ನಮಗೆ ಮೋಡ, ಮಳೆ ಮುಖ್ಯ ಅಡಚಣೆ. ಅಮೆರಿಕ ಮತ್ತು ಯುರೋಪ್‍ನಿಂದ ಚಿತ್ರಗಳು ಇಂಟರ್ನೆಟ್‍ನಲ್ಲಿ ವಿನಿಮಯವಾಗುತ್ತಿವೆ. ಅವರಿಗೆ ಶುಭ್ರ ಆಕಾಶದ ಜೊತೆಗೆ ಇನ್ನೂ ಒಂದು ಅನುಕೂಲವೂ ಒದಗಿಬಂದಿದೆ. ನಿಯೋವೈಸ್‍ನ ಕಕ್ಷೆಯ ಓರೆಕೋನದ ಕಾರಣ ಅದೀಗ ಉತ್ತರ ಭಾಗದ ಆಕಾಶದಲ್ಲಿದೆ. ಹಾಗಾಗಿ ಅದು ಯುರೋಪಿನ ಅಕ್ಷಾಂಶಗಳಿಗೆ ಮುಂಜಾವಿನಲ್ಲಿ ಮತ್ತು ಸಂಜೆಯಲ್ಲಿ ಕಾಣುತ್ತಿದೆ.

ನಾಳೆಯಿಂದ (17) ಮುಂದೆ ಅದು ನಮ್ಮ ಆಕಾಶದಲ್ಲಿ ಸಂಜೆ ಕಾಣಲಿದೆ. ಸೂರ್ಯಾಸ್ತವಾದ ಕೂಡಲೇ ವಾಯವ್ಯ ದಿಕ್ಕಿನ ದಿಗಂತದ ಅಂಚಿನತ್ತ ಕಣ್ಣು ಹಾಯಿಸಿ. ಆಕಾಶ ಶುಭ್ರವಾಗಿದ್ದರೆ ಸುಮಾರು ಅರ್ಧ– ಮುಕ್ಕಾಲು ಗಂಟೆ ಕಾಣಬಹುದು. ಅದು ಈಗ ಗಳಿಸಿಕೊಂಡಿರುವ ಪ್ರಕಾಶದ ಪ್ರಕಾರ, ಅದನ್ನು ಹುಡುಕಲು ಶ್ರಮ ಪಡಬೇಕಾಗಿಲ್ಲ. ದುರ್ಬೀನು ಅಥವಾ ಸಣ್ಣ ದೂರದರ್ಶಕದ ಮೂಲಕ ಬಾಲ ಸ್ಫುಟವಾಗಿ ಕಾಣಬಹುದು. ದೊಡ್ಡ ದೂರದರ್ಶಕಗಳಿಂದ ಪ್ರಯೋಜನವಿಲ್ಲ.

ಸಂಜೆ ಒಂದರ್ಧ ಗಂಟೆಯ ಈ ವೀಕ್ಷಣೆಗಾಗಿ ನೀವೇನೂ ಕಷ್ಟಪಡಬೇಕಾಗಿಲ್ಲ. ನಿಮ್ಮ ತಾರಸಿಗೆ ವಾಯವ್ಯ ದಿಕ್ಕಿನ ದಿಗಂತ ಕಾಣುತ್ತದೆಯೇ? ಇಲ್ಲದಿದ್ದರೆ ದಿಗಂತ ಕಾಣುವ ತಾಣದಲ್ಲಿ ದೃಷ್ಟಿಹರಿಸಿ; ಈ ಅಪೂರ್ವ ನೋಟವನ್ನು ನಿಮ್ಮದಾಗಿಸಿಕೊಳ್ಳಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT