ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪ್ರವಾಸಿ ಕಾರ್ಯನೀತಿ: ಬೇಕು ಇಚ್ಛಾಶಕ್ತಿ

ಸಾಂಸ್ಕೃತಿಕ ನೆಲೆಗಟ್ಟಿನ ನಾಡಿನಲ್ಲಿ ವಿಶಿಷ್ಟವಾದ ಪ್ರವಾಸೋದ್ಯಮ ತಾಣಗಳನ್ನು ರೂಪಿಸುವುದು ಹೊಸ ಪ್ರವಾಸೋದ್ಯಮ ನೀತಿಯ ಗುರಿಯಾಗಲಿ
Last Updated 4 ಅಕ್ಟೋಬರ್ 2020, 19:31 IST
ಅಕ್ಷರ ಗಾತ್ರ

ಕೋವಿಡ್-19ರ ಸಂದಿಗ್ಧ ಪರಿಸ್ಥಿತಿಯಲ್ಲಿ, ವಿಶ್ವ ಪ್ರವಾಸೋದ್ಯಮ ದಿನದಂದು ರಾಜ್ಯ ಸರ್ಕಾರವು ಹೊಸ ಪ್ರವಾಸೋದ್ಯಮ ನೀತಿಯನ್ನು ಘೋಷಿಸಿ, ಈ ಉದ್ಯಮಕ್ಕೆ ಭದ್ರವಾದ ಬುನಾದಿ ಕಲ್ಪಿಸಲು ನಿರ್ಧರಿಸಿದೆ. ಐದು ವರ್ಷಗಳೊಳಗೆ ಹೆಚ್ಚು ಉದ್ಯೋಗಗಳನ್ನು ಸೃಷ್ಟಿಸುವುದು ಈ ನೀತಿಯ ಪ್ರಧಾನ ಗುರಿಗಳಲ್ಲಿ ಒಂದು. ಈ ಅವಧಿಯಲ್ಲಿ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಸುಮಾರು 10 ಲಕ್ಷ ಉದ್ಯೋಗ ಸೃಷ್ಟಿಯಾಗುವುದೆಂದು ಸರ್ಕಾರ ನಿರೀಕ್ಷಿಸಿದೆ.

ಸದೃಢ ಸಾಂಸ್ಕೃತಿಕ ನೆಲೆಗಟ್ಟು ಹೊಂದಿರುವ ರಾಜ್ಯವು ಮುಂಬರುವ ವರ್ಷಗಳಲ್ಲಿ ಹೆಚ್ಚು ಪ್ರವಾಸಿಗರನ್ನು ಆಕರ್ಷಿಸಲು ಅಗತ್ಯವಿರುವ ಸೌಲಭ್ಯಗಳನ್ನು ಒದಗಿಸಿಕೊಡಲು ಸರ್ಕಾರ ತನ್ನ ನೀತಿಯಲ್ಲಿ ಮಾರ್ಗದರ್ಶಿ ಸೂತ್ರಗಳನ್ನು ಸ್ಪಷ್ಟಪಡಿಸಿದೆ. ಪ್ರವಾಸೋದ್ಯಮ ಕ್ಷೇತ್ರವನ್ನು ಮತ್ತಷ್ಟು ಔದ್ಯಮೀಕರಣಗೊಳಿಸುವ ಪ್ರಯತ್ನ ನಡೆಸುವುದು, ಕೃಷಿ ಸಂಬಂಧಿ ಪ್ರವಾಸಿ ಚಟುವಟಿಕೆಗಳನ್ನು ಪ್ರಾರಂಭಿಸುವುದು ಸರ್ಕಾರದ ಆಶಯವಾಗಿದೆ.

ಹೊಸ ನೀತಿಯಲ್ಲಿ ಸ್ಥಳೀಯ ಆಚಾರ-ವಿಚಾರ, ಆಹಾರ ವೈವಿಧ್ಯಕ್ಕೆ ಆದ್ಯತೆ ದೊರೆತಿರುವುದು ಸ್ವಾಗತಾರ್ಹ. ಇದಕ್ಕೆ ಪೂರಕವಾದ ಸಾಹಿತ್ಯವನ್ನು ಬಹುವರ್ಣಗಳಲ್ಲಿ ಮುದ್ರಿಸಿ, ಪ್ರವಾಸಿಗರಿಗೆ ನೀಡುವ ವ್ಯವಸ್ಥೆಯನ್ನು ಪ್ರವಾಸೋದ್ಯಮ ಇಲಾಖೆ ಮಾಡಿದರೆ ಒಳಿತು. ಸಂಸ್ಕೃತಿ- ಕರಕುಶಲ- ತಿನಿಸು- ಇವುಗಳನ್ನು ಪ್ರವಾಸಿಗರಿಗೆ ಪರಿಚಯಿಸುವುದು ಅಗತ್ಯ ಎಂದು ನೀತಿಯು ನಿರೂಪಿಸಿದೆ. ಇದಲ್ಲದೆ ಬುಡಕಟ್ಟು ಸಂಪ್ರದಾಯಗಳನ್ನು ಪ್ರವಾಸಿಗರಿಗೆ ತಿಳಿಸುವುದಾಗಿ ಹೇಳಿದೆ. ಮಳೆಗಾಲ ಸೇರಿದಂತೆ ಸರ್ವ ಋತುಗಳಲ್ಲೂ ಪ್ರವಾಸಿಗರು ಪ್ರವಾಸಿ ತಾಣಗಳಿಗೆ ಭೇಟಿ ನೀಡುವಂತೆ ಸಂಪರ್ಕ ರಸ್ತೆಗಳನ್ನು ಅಭಿವೃದ್ಧಿಪಡಿಸುವುದು ಇಲಾಖೆಯ ಗುರಿಯಾಗಲಿ.

ಪ್ರವಾಸೋದ್ಯಮ ಕ್ಷೇತ್ರಕ್ಕೆ ಹೆಚ್ಚಿನ ಅನುದಾನ ನೀಡುವಿಕೆ, ಸಬ್ಸಿಡಿ ಘೋಷಣೆ, ಆ ಕ್ಷೇತ್ರದಲ್ಲಿನ ಸಂಘ-ಸಂಸ್ಥೆಗಳು ಮತ್ತು ವ್ಯಕ್ತಿಗಳಿಗೆ ಧನಸಹಾಯ ನೀಡುವುದು ಮಾತ್ರ ತನ್ನ ಜವಾಬ್ದಾರಿ ಎಂದು ಸರ್ಕಾರ ತಿಳಿಯದೆ, ಆ ಕ್ಷೇತ್ರವನ್ನು ಗಟ್ಟಿಗೊಳಿಸುವ ನಿಟ್ಟಿನಲ್ಲಿ ಇಚ್ಛಾಶಕ್ತಿಯಿಂದ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುವುದು ಉದ್ಯೋಗ ಸೃಷ್ಟಿ ಮತ್ತು ವರಮಾನ ಕ್ರೋಡೀಕರಣದ ಕಾರಣಕ್ಕೆ ಮುಖ್ಯವಾದುದು. ಖಾಸಗಿ ಸಹಭಾಗಿತ್ವದ ಪ್ರಮಾಣ ಏರಿಕೆಯಾದಲ್ಲಿ ಪ್ರವಾಸೋದ್ಯಮ ಕ್ಷೇತ್ರಕ್ಕೆ ಒಂದು ಹೊಸ ಸ್ಪರ್ಶ ದೊರೆಯುತ್ತದೆ ಎಂಬುದನ್ನು ಸರ್ಕಾರಿ-ಖಾಸಗಿ ಸಹಭಾಗಿತ್ವದ ಕೆಲವು ಪ್ರಯೋಗಗಳು ನಿರೂಪಿಸಿವೆ.

ಧಾರ್ಮಿಕ ಕ್ಷೇತ್ರಗಳಿಗೆ ಯಾತ್ರೆ ಹೋಗುವುದು ನಮ್ಮ ಪರಂಪರೆಯ ಭಾಗ. ಜಾಗತಿಕ ವಲಯದಲ್ಲಿನ ಬೆಳವಣಿಗೆಗಳು ವಿದೇಶ ಮತ್ತು ಆಂತರಿಕ ಪ್ರವಾಸಗಳ ಮಹತ್ವವನ್ನು ವಿಸ್ತರಿಸಿವೆ. ಪಾರಂಪರಿಕ ತಾಣಗಳ ಕುರಿತಾದ ಮಾಹಿತಿ, ಕೈಪಿಡಿಗಳನ್ನು ಸುಲಭ ದರದಲ್ಲಿ ಅಥವಾ ಉಚಿತವಾಗಿ ಒದಗಿಸಿಕೊಡುವುದು ಸರ್ಕಾರದ ಹೊಣೆ. ಈ ದಿಸೆಯಲ್ಲಿ ಜಾಗತಿಕ ಪ್ರವಾಸೋದ್ಯಮ ಹೂಡಿಕೆದಾರರ ಸಭೆ ಕರೆದು ಅದರ ಅನುಪಾಲನಾ ವರದಿ ಅನುಷ್ಠಾನಗೊಳಿಸುವುದರತ್ತ
ಕಾರ್ಯತತ್ಪರವಾಗಬೇಕು.‌ ನೀತಿಯಲ್ಲಿ ಘೋಷಣೆಯಾಗಿರುವ ಕಾರ್ಯಕ್ರಮಗಳು ಕೆಲವು ಯೋಜನೆಗಳಂತೆ ಕಾಗದದಲ್ಲಿ ಮಾತ್ರ ಉಳಿಯಬಾರದು.

ರಾಜ್ಯದಾದ್ಯಂತ ವಿಭಿನ್ನ ಮಾದರಿ ಮತ್ತು ಪ್ರಕಾರಗಳ ಪ್ರವಾಸಿ ತಾಣಗಳಿವೆ. ದೇವರನಾಡೆಂದು ಹೆಸರಾಗಿರುವ ನೆರೆಯ ಕೇರಳದ ತಾಣಗಳ ಸೊಬಗನ್ನು ಮೀರಿಸುವಂತಹ ಕೆಲವು ಪ್ರವಾಸಿ ತಾಣಗಳು ನಮ್ಮ ರಾಜ್ಯದಲ್ಲಿವೆ ಎಂಬುದು ಹೆಮ್ಮೆಯ ವಿಷಯ. ನೆರೆಯ ರಾಜ್ಯಗಳಲ್ಲಿರುವ ಕೆಲವು ಯಶಸ್ವಿ ಪ್ರವಾಸಿ ಮಾದರಿಗಳನ್ನು ನಮ್ಮ ಸರ್ಕಾರವೂ ಸ್ವೀಕರಿಸಿ, ಅನುಷ್ಠಾನಗೊಳಿಸಬೇಕು. ‌

ಉತ್ತರದ ಬೀದರ್‌ನಿಂದ, ಸಾಂಸ್ಕೃತಿಕವಾಗಿ ವೈವಿಧ್ಯಮಯವಾದ ಮತ್ತು ಪಾರಂಪರಿಕ ತಾಣಗಳನ್ನು ಹೊಂದಿರುವ ಜಿಲ್ಲೆ ಎಂದು ಹೆಸರಾಗಿರುವ ಚಾಮರಾಜನಗರದವರೆಗೆ, ಪಶ್ಚಿಮದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯಿಂದ ಪೂರ್ವದ ಚಿಕ್ಕಬಳ್ಳಾಪುರ ಜಿಲ್ಲೆಯವರೆಗಿನ ವಿಸ್ತಾರವಾದ ಭೂಪ್ರದೇಶದಲ್ಲಿ ಪ್ರಮುಖ ಭೌಗೋಳಿಕ ಪ್ರದೇಶಗಳನ್ನು ಗುರುತಿಸಿ, ಅವುಗಳನ್ನು ಉತ್ಕೃಷ್ಟವಾದ ಪ್ರವಾಸಿ ತಾಣಗಳನ್ನಾಗಿ ಪರಿವರ್ತಿಸುವುದನ್ನು ಸರ್ಕಾರ ತನ್ನ ಗುರಿಯನ್ನಾಗಿಸಿಕೊಂಡಿದೆ. ಈ ಕಾರ್ಯಕ್ಕಾಗಿ ಸಮಿತಿಗಳು ಮತ್ತು ಉಪಸಮಿತಿಗಳನ್ನು ರಚಿಸಿ, ತಜ್ಞರ ಸಲಹೆಯನ್ವಯ ಯೋಜನೆಗಳಿಗೆ ಸ್ಪಷ್ಟ ರೂಪ ನೀಡುವುದು ಒಳ್ಳೆಯದು.

ಕೆಲವು ಪಾಶ್ಚಾತ್ಯ ರಾಷ್ಟ್ರಗಳಂತೆ ಸಾಗರ ಮತ್ತು ಗಣಿ ಪ್ರದೇಶಗಳ ಸುತ್ತಲೂ ಪ್ರವಾಸೋದ್ಯಮವನ್ನು ಉತ್ತೇಜಿ
ಸುವುದನ್ನು ನೀತಿಯು ಪ್ರತಿಪಾದಿಸಿದೆ. ಇದೇ ರೀತಿ ರಾಜ್ಯದಾದ್ಯಂತ ಶರಣರು, ಸೂಫಿ ಸಂತರು, ಭಾವೈಕ್ಯದ ಮಂತ್ರ ಬೋಧಿಸಿದ ಮಹನೀಯರು ಜನಿಸಿದ ಸ್ಥಳ ಮತ್ತು ಪ್ರದೇಶಗಳನ್ನು ವಿಶಿಷ್ಟವಾದ ಪ್ರವಾಸೋದ್ಯಮ ತಾಣಗಳನ್ನಾಗಿ ಬೆಳೆಸುವುದು ಸೂಕ್ತವೆನಿಸುತ್ತದೆ. ಈ ದಿಸೆಯಲ್ಲಿ ಸರ್ಕಾರ ಸಲಹೆಗಳನ್ನು ಆಹ್ವಾನಿಸಿ ಅವುಗಳಿಗೆ ಮಾನ್ಯತೆ ನೀಡುವುದು ಒಳ್ಳೆಯದು.

ಕೆಲವು ವರ್ಷಗಳ ಹಿಂದೆ ರಾಜ್ಯದ ವಿಶ್ವವಿದ್ಯಾಲಯಗಳ ಕೆಲವು ವಿಭಾಗಗಳಲ್ಲಿ ಭೌಗೋಳಿಕ ಹಾಗೂ ಐತಿಹಾಸಿಕ ಮಹತ್ವದ ಸ್ಥಳಗಳ ಅಧ್ಯಯನ ಪ್ರವಾಸಕ್ಕೆ ಪ್ರಾಮುಖ್ಯ ಇತ್ತು. ಈಗ ಪರಿಸ್ಥಿತಿ ಬದಲಾಗಿದೆ. ರಾಜ್ಯದ ವಿಶ್ವವಿದ್ಯಾಲಯಗಳಲ್ಲಿ ಇದು ಮತ್ತೊಮ್ಮೆ ಅಳವಡಿಕೆಯಾಗಲು ಸರ್ಕಾರ ಮನಸ್ಸು ಮಾಡಬೇಕು. ‍ವಿದ್ಯಾರ್ಥಿಗಳು ಭೂಪಟದಲ್ಲಿ ಮಾತ್ರ ಪ್ರವಾಸಿ ತಾಣಗಳನ್ನು ಗುರುತಿಸುವಂತಾಗದೆ, ಅಲ್ಲಿಗೆ ಅವರು ಖುದ್ದಾಗಿ ಭೇಟಿ ನೀಡುವಂತಾಗಬೇಕು. ‘ಕೋಶ ಓದು ದೇಶ ಸುತ್ತು’ ಎಂಬ ಗಾದೆಯ ಹಿನ್ನೆಲೆಯಿರುವ ನಮಗೆ ಹೊಸ ನೀತಿ ಆಶಾದಾಯಕವಾಗಿರಲಿ.

ಲೇಖಕ: ಮುಖ್ಯಸ್ಥ, ಇತಿಹಾಸ ವಿಭಾಗ, ಜೆಎಸ್‍ಎಸ್ ಮಹಿಳಾ ಕಾಲೇಜು, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT