ಬುಧವಾರ, 8 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ | ಆರ್ಥಿಕ ಹೊರೆ: ಬದಲಾಗಲಿ ಮಾರ್ಗೋಪಾಯ

ಅಕ್ಷರ ಗಾತ್ರ

ಆರ್ಥಿಕ ಸಂಕಷ್ಟಕ್ಕೆ ಒಳಗಾಗಿರುವ ರಾಜ್ಯ ಸರ್ಕಾರ, ಆರ್ಥಿಕ ಹೊರೆಯನ್ನು ಇಳಿಸಿಕೊಳ್ಳಲು ಹಲವು ಮಾರ್ಗೋಪಾಯಗಳನ್ನು ಹುಡುಕುತ್ತಿದೆ. ಅದರಲ್ಲಿ, ಅನಗತ್ಯ ಸರ್ಕಾರಿ ಹುದ್ದೆಗಳನ್ನು ರದ್ದುಪಡಿಸುವುದು ಹಾಗೂ ವಿವಿಧ ಇಲಾಖೆಗಳ ಸಿಬ್ಬಂದಿಯನ್ನು ವಿಲೀನಗೊಳಿಸುವ ಮೂಲಕ ವಾರ್ಷಿಕ ₹2,000 ಕೋಟಿ ಆರ್ಥಿಕ ಹೊರೆಯನ್ನು ತಪ್ಪಿಸುವುದು ಒಂದು ಮಾರ್ಗೋಪಾಯವಾಗಿದೆ. ಇದರ ರೂಪುರೇಷೆಯನ್ನು ಸಿದ್ಧಪಡಿಸಿ ಅನುಷ್ಠಾನಗೊಳಿಸಲು ಸಚಿವ ಸಂಪುಟದ ಉಪಸಮಿತಿಯನ್ನೂ ರಚಿಸಲಾಗಿದೆ.

ಪ್ರತಿವರ್ಷ ರಾಜ್ಯ ಸರ್ಕಾರ ಹಾಗೂ ಕೇಂದ್ರ ಸರ್ಕಾರವು ಮಂಡಿಸುವ ಬಜೆಟ್ಟಿನಲ್ಲಿ ಬಜೆಟ್ ಗಾತ್ರದ ಶೇ 60ಕ್ಕೂ ಹೆಚ್ಚು ಹಣವು ಯೋಜನೇತರ ವೆಚ್ಚ ಹಾಗೂ ಶೇ 40ಕ್ಕಿಂತ ಕಡಿಮೆ ಹಣವು ಯೋಜನಾ ವೆಚ್ಚಕ್ಕೆ ವಿನಿಯೋಗವಾಗುತ್ತಿದೆ. ಸರ್ಕಾರಿ ಸಿಬ್ಬಂದಿಯ ವೇತನ- ಭತ್ಯೆ, ಪಿಂಚಣಿ, ವಾಹನಗಳ ಖರೀದಿ, ಇಂಧನ ವೆಚ್ಚ, ವಿದ್ಯುತ್ ಹಾಗೂ ದೂರವಾಣಿ ಶುಲ್ಕ... ಇಂಥವು ಯೋಜನೇತರ ಖರ್ಚಿನ ವ್ಯಾಪ್ತಿಯಲ್ಲಿ ಬರುತ್ತವೆ. ಅದರಲ್ಲೂ ಸಿಬ್ಬಂದಿ ವೇತನ ಹಾಗೂ ಪಿಂಚಣಿಯು ಸರ್ಕಾರದ ಬೊಕ್ಕಸಕ್ಕೆ ಹೊರೆಯಾಗಿದೆ ಎಂಬುದು ಸರ್ಕಾರದ ಹೇಳಿಕೆ.

ಇಂತಹ ಹೊರೆಯನ್ನು ತಗ್ಗಿಸುವ ಪ್ರಸ್ತಾವ ಜೀವತಳೆದು ಕಾರ್ಯಾನುಷ್ಠಾನ ಆರಂಭವಾಗಿದ್ದು ಎಸ್.ಎಂ.ಕೃಷ್ಣ ನೇತೃತ್ವದ ಸರ್ಕಾರದಲ್ಲಿ. ಆಗ ರಚಿಸಿದ್ದ ಹಾರನಹಳ್ಳಿ ರಾಮಸ್ವಾಮಿ ನೇತೃತ್ವದ ಆಡಳಿತ ಸುಧಾರಣಾ ಆಯೋಗವು ಅನಗತ್ಯ ಸರ್ಕಾರಿ ಹುದ್ದೆಗಳ ರದ್ದತಿ, ವಿವಿಧ ಇಲಾಖೆಗಳ ವಿಲೀನದ ಬಗ್ಗೆ ವರದಿಯಲ್ಲಿ ಪ್ರಸ್ತಾಪಿಸಿತ್ತು. ಹಾಗೆಯೇ ಆಗಿನ ಸರ್ಕಾರವು ನೇಮಕಾತಿ ಪ್ರಕ್ರಿಯೆಗಳ ಮೇಲೆ ನಿಷೇಧವನ್ನೂ ಹೇರಿತು. ಆದರೆ ಡಾ. ರಾಜಾರಾಮಣ್ಣ ನೇತೃತ್ವದ ಶಿಕ್ಷಣ ಕಾರ್ಯಪಡೆ ಹಾಗೂ ಡಾ. ಸುದರ್ಶನ್ ನೇತೃತ್ವದ ಆರೋಗ್ಯ ಕಾರ್ಯಪಡೆಗಳ ಶಿಫಾರಸಿನಂತೆ ಶಿಕ್ಷಣ, ಆರೋಗ್ಯ ಹಾಗೂ ಪೊಲೀಸ್ ಇಲಾಖೆಗಳ ನೇಮಕಾತಿ ಮೇಲಿನ ನಿರ್ಬಂಧವನ್ನು ತೆಗೆದುಹಾಕಲಾಯಿತು. ಇತರ ಇಲಾಖೆಗಳ ಮೇಲಿನ ನೇಮಕಾತಿ ನಿರ್ಬಂಧ ಮುಂದುವರಿಯಿತು.

ತದನಂತರದಲ್ಲಿ ಬೇರೆ ಇಲಾಖೆಗಳಲ್ಲೂ ನೇಮಕಾತಿ ಪರ್ವ ಆರಂಭವಾಯಿತು. ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಅವಧಿಯಲ್ಲಿ ವಿವಿಧ ಇಲಾಖೆಗಳಲ್ಲಿ ಭರಪೂರ ನೇಮಕಾತಿ ನಡೆದು, ಸಾವಿರಾರು ಆಕಾಂಕ್ಷಿಗಳು ಸೇವೆಗೆ ಸೇರಿದರು. ಈ ಮೊದಲು ಆಕಾಂಕ್ಷಿಗಳು ನೇಮಕಾತಿ ಪರೀಕ್ಷೆಗೆ ಬೆಂಗಳೂರು, ಧಾರವಾಡ, ಮೈಸೂರು ಹಾಗೂ ವಿಜಯಪುರದಲ್ಲಿರುವ ಕೋಚಿಂಗ್ ಸೆಂಟರ್‌ಗಳಲ್ಲಿ ತರಬೇತಿ ಪಡೆಯುತ್ತಿದ್ದರು. ಆದರೆ 2010ರ ನಂತರದಲ್ಲಿ ಜಿಲ್ಲಾ ಕೇಂದ್ರಗಳಲ್ಲೂ, ಈಗೀಗ ಉತ್ತರ ಕರ್ನಾಟಕದ ಸಿಂಧನೂರು, ಹೊಸಪೇಟೆಯಂತಹ ತಾಲ್ಲೂಕು ಕೇಂದ್ರಗಳಲ್ಲೂ ಕೋಚಿಂಗ್ ಸೆಂಟರ್‌ಗಳಿವೆ.

ಸಮಾಜ ಕಲ್ಯಾಣ ಇಲಾಖೆ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಗಳೂ ಆಸಕ್ತ ಅಭ್ಯರ್ಥಿಗಳಿಗೆ ಉಚಿತ ತರಬೇತಿಗೆ ಪ್ರಾಯೋಜಿತ ಅನುದಾನ ನೀಡುತ್ತಿವೆ. ಆದರೆ ವಿಪರ್ಯಾಸವೆಂಬಂತೆ, ತರಬೇತಿ ಹೊಂದಿದ ಆಕಾಂಕ್ಷಿಗಳು ಸರ್ಕಾರಿ ಸೇವೆಗೆ ಸೇರಲು ಅಗತ್ಯ ಸಂಖ್ಯೆಯ ನೇಮಕಾತಿ ಪ್ರಕ್ರಿಯೆಗಳು ನಡೆಯುವುದು ಸದ್ಯದ ತೀರ್ಮಾನದಿಂದ ದುಸ್ತರವಾಗುತ್ತದೆ. ನಾಗರಿಕ ಸೇವಾ ಹುದ್ದೆಗಳು ಹಾಗೂ ಇತರ ಸರ್ಕಾರಿ ಹುದ್ದೆಗಳ ಕುರಿತು ವಿದ್ಯಾರ್ಥಿಗಳನ್ನು ಹುರಿದುಂಬಿಸುವ ಮಾತನಾಡಿ ಕನಸುಗಳನ್ನು ಬಿತ್ತುವ ನಾವು, ಅವರಿಂದ ಇಂತಹ ಸಂದಿಗ್ಧದ ಸ್ಥಿತಿಯಲ್ಲಿ ಫಸಲನ್ನು ನಿರೀಕ್ಷಿಸುವುದಾದರೂಹೇಗೆ? ತಾಂತ್ರಿಕ, ವೈದ್ಯಕೀಯ, ಅರೆವೈದ್ಯಕೀಯ ಹಾಗೂ ವಾಣಿಜ್ಯ- ವ್ಯವಹಾರ ಶಾಸ್ತ್ರಗಳನ್ನು ಓದಿದ ವಿದ್ಯಾರ್ಥಿಗಳು ಖಾಸಗಿ ಕಂಪನಿ, ಸ್ಟಾರ್ಟ್‌ಅಪ್‍ಗಳು ಹಾಗೂ ಸ್ವಯಂ ಉದ್ಯೋಗದಲ್ಲಿ ನೆಲೆಯನ್ನು ಕಂಡುಕೊಳ್ಳುತ್ತಾರೆ. ಆದರೆ ಕಲಾನಿಕಾಯದ ವಿದ್ಯಾರ್ಥಿಗಳು ಗ್ರಾಮೀಣ ಹಾಗೂ ಬಡ, ಮಧ್ಯಮ ವರ್ಗದ ಕುಟುಂಬಗಳ ಹಿನ್ನೆಲೆ ಹೊಂದಿದ್ದು, ಅವರು ಹೆಚ್ಚಾಗಿ ನೆಚ್ಚಿಕೊಳ್ಳುವುದು ಆಡಳಿತ ಸೇವಾ ಹುದ್ದೆಗಳು, ಪೊಲೀಸ್, ಶಿಕ್ಷಕ, ಉಪನ್ಯಾಸಕ ಹಾಗೂ ಗುಮಾಸ್ತ ದರ್ಜೆಯ ಸರ್ಕಾರಿ ಹುದ್ದೆಗಳನ್ನು.

ಶಿಕ್ಷಣ ನೀಡುವುದು ಉತ್ತಮ ನಾಗರಿಕರಾಗಲು, ಜೀವನ ನಿರ್ವಹಣೆಗೆ ಸಶಕ್ತಗೊಳಿಸಲು ಎಂದು ಹೇಳಿ ಸರ್ಕಾರ ಕೈತೊಳೆದುಕೊಳ್ಳಲಾಗದು. ಇಂತಹ ಹೇಳಿಕೆಯು, ಬಿಸಿಲಿನಲ್ಲಿ ಕೆಲಸ ಮಾಡುವುದು ಆರೋಗ್ಯಕ್ಕೆ ಉತ್ತಮ ಎಂದು ನೆರಳಲ್ಲಿ ಕುಳಿತವರು ಆಭಾಸಕಾರಿ ಸಲಹೆ ನೀಡಿದಂತೆ ಆಗುತ್ತದೆ.

ಆರ್ಥಿಕ ಸಂಪನ್ಮೂಲ ಕ್ರೋಡೀಕರಣದ ಸಂಕಷ್ಟದ ಪರಿಣಾಮವು ಉದ್ಯೋಗಾಕಾಂಕ್ಷಿಗಳ ಮೇಲೆ ಆಗದಿರಲು ಸರ್ಕಾರ ಪರ್ಯಾಯ ಮಾರ್ಗಗಳನ್ನು ಹುಡುಕಬಹುದು. ನಿಗಮ, ಮಂಡಳಿಗಳು ಎಂದಿಗೂ ಸರ್ಕಾರದ ಪಾಲಿಗೆ ಬಿಳಿಯಾನೆಗಳೇ. ಅವುಗಳನ್ನು ಸಚಿವಗಿರಿ ವಂಚಿತರಿಗೆ, ರಾಜಕೀಯ ನಾಯಕರಿಗೆ ನಿರಾಶ್ರಿತರ ಶಿಬಿರಗಳಂತೆ ಇಡುವ ಬದಲು ನಿರ್ದಾಕ್ಷಿಣ್ಯವಾಗಿ ರದ್ದುಪಡಿಸಲಿ. ಅದಕ್ಷ ಸಿಬ್ಬಂದಿಗೆ ಕಡ್ಡಾಯ ನಿವೃತ್ತಿ ನೀಡಿ, ತರುಣರಿಗೆ ಉದ್ಯೋಗಾವಕಾಶ ನೀಡಲಿ. ಕೃಷಿ ಹಾಗೂ ತೋಟಗಾರಿಕೆಯಂತಹ ಒಂದೇ ಕಾರ್ಯಶೈಲಿಯಿರುವ ಇಲಾಖೆಗಳ ವಿಲೀನವಾಗಲಿ. ಖಾಲಿ ಇರುವ ಹಾಗೂ ನಿರುಪಯುಕ್ತವೆನಿಸಿರುವ ಸಾವಿರಾರು ಶಾಲಾ ಕಾಲೇಜು ಕಟ್ಟಡಗಳನ್ನು ಬಾಡಿಗೆಗೆ ನೀಡಬಹುದು ಅಥವಾ ಮಾರಾಟ ಮಾಡಬಹುದು. ಈ ಬಗೆಯ ಉಪಕ್ರಮಗಳಿಂದ ಉದ್ಯೋಗ ರದ್ದತಿಯಂತಹ ಕ್ರಮವನ್ನು ಕೈಬಿಟ್ಟು, ನಾಡಿನ ತರುಣ ಪೀಳಿಗೆಯಲ್ಲಿ ಆಶಾಭಾವ ಮೂಡಿಸಲಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT