ಮಂಗಳವಾರ, ಅಕ್ಟೋಬರ್ 27, 2020
25 °C
ನೆಡುತೋಪುಗಳ ವಿರೋಧಿ ದನಿಯೊಂದು ಮಲೆನಾಡ ಕಾಡಿನಿಂದ ಕೇಳಿಬರುತ್ತಿದೆ

ಸಂಗತ: ಕಾಡಿನ ಕೂಗಿಗೊಮ್ಮೆ ಕಿವಿಗೊಡಿ

ಸತೀಶ್.ಜಿ.ಕೆ.ತೀರ್ಥಹಳ್ಳಿ Updated:

ಅಕ್ಷರ ಗಾತ್ರ : | |

ಈ ಬಾರಿಯ ವಿಶ್ವ ಪರಿಸರ ದಿನಾಚರಣೆಯ ಆಶಯದಂತೆ ‘ಜೀವವೈವಿಧ್ಯ ಸಂರಕ್ಷಣೆ’ ಕುರಿತಾದ ಯೋಜನೆಗಳು ಮುನ್ನೆಲೆಗೆ ಬರುತ್ತಿರುವ ಹೊತ್ತಿನಲ್ಲಿಯೇ, ಜೀವವೈವಿಧ್ಯದ ತೊಟ್ಟಿಲಂತಿರುವ ಮಲೆನಾಡಿನಲ್ಲಿ ಸಣ್ಣ ಸಂಚಲನವೊಂದು ಶುರುವಾಗಿದೆ. ಮೂರ್ನಾಲ್ಕು ದಶಕಗಳಿಂದ ಬೇರೆಬೇರೆ ಕಾರಣಗಳಿಂದಾಗಿ ಪಶ್ಚಿಮಘಟ್ಟದ ಅಮೂಲ್ಯ ವನ್ಯಸಂಪತ್ತು ತೀವ್ರಗತಿಯಲ್ಲಿ ಕ್ಷೀಣಿಸುತ್ತಿದ್ದು, ಜೀವವೈವಿಧ್ಯಕ್ಕೆ ಬಲವಾದ ಪೆಟ್ಟುಬಿದ್ದಿದೆ.

ಪ್ರಮುಖವಾಗಿ, ಕಾಡನ್ನು ಕಾಯಬೇಕಾದ ಇಲಾಖೆಗಳೇ ಲಾಭದಾಸೆಗೆ ಸ್ವಾಭಾವಿಕ ಸಮೃದ್ಧಿಯ ದಟ್ಟ ಕಾನನ್ನು ಧ್ವಂಸ ಮಾಡಿ ಅಕೇಶಿಯಾ, ನೆಡುತೋಪುಗಳನ್ನು ನಿರ್ಮಿಸಿಬಿಟ್ಟವು ಎಂಬುದು ಮಲೆನಾಡಿಗರ ಅಳಲು. ಸ್ಥಳೀಯರ ಬೇಕು-ಬೇಡಗಳನ್ನೂ ಕಡೆಗಣಿಸಿ, ಬೇಡದ ಸಸ್ಯಗಳನ್ನು ಇಲ್ಲಿ ಬೆಳೆಯಹೊರಟಿದ್ದು ಜನರಿಗಾದ ಅನ್ಯಾಯ ಮತ್ತು ಪರಿಸರಕ್ಕೆ ಉಂಟುಮಾಡಿದ ದೊಡ್ಡ ಗಾಯ. ಕಾಡು ಬೆಳೆಸುವ ನೆಪದಲ್ಲಿ ಇತ್ತೀಚೆಗೆ ಯಥೇಚ್ಛವಾಗಿ ಹಣಕಾಸಿನ ನೆರವು ಹರಿಯಿತಾದರೂ ಅದು ಈ ಭಾಗದ ಕಾಡಿಗೆ ಕಿಂಚಿತ್ತೂ ನೆರವಾಗದೆ, ಭ್ರಷ್ಟಾಚಾರಕ್ಕಷ್ಟೇ ವರವಾಯಿತು ಎಂಬುದು ಸ್ಥಳೀಯರ ಆಕ್ರೋಶ.

1976ರಲ್ಲಿ ಭದ್ರಾವತಿಯ ಕಾಗದ ಕಾರ್ಖಾನೆ ತನ್ನ ಉತ್ಪಾದನಾ ಅಗತ್ಯಕ್ಕೆ ಇಲ್ಲಿನ ಸಮೃದ್ಧ ನೆಲವನ್ನು ಸರ್ಕಾರದಿಂದ ಗುತ್ತಿಗೆ ಪಡೆದಿತ್ತು. ಕಾಲಾಂತರದಿಂದ ಬೆಳೆದು ಬಂದಿದ್ದ ವೈವಿಧ್ಯಮಯ ಸಸ್ಯರಾಶಿಯನ್ನು ಧ್ವಂಸಗೊಳಿಸಿ ಕಾರ್ಖಾನೆಯು ಅಕೇಶಿಯಾ, ಮ್ಯಾಂಜಿಮ, ನೀಲಗಿರಿ ಸಸ್ಯಗಳನ್ನು ಅವೈಜ್ಞಾನಿಕವಾಗಿ ಬೆಳೆಯುತ್ತಾ ಫಲಯುತ ಮಣ್ಣಿನ ಗುಣ ಕೆಡಿಸಿದ್ದಲ್ಲದೆ, ಅಂತರ್ಜಲ ಕುಸಿತ ಹಾಗೂ ಜೀವವೈವಿಧ್ಯ ನಾಶಕ್ಕೆ ಕಾರಣವಾಗಿ ತೀವ್ರತರದ ಪ್ರಾಕೃತಿಕ ಅಸಮತೋಲನಕ್ಕೆ ನಾಂದಿ ಹಾಡಿತು. ಕಾಡಿನ ಸಹಜ ಗುಣವನ್ನು ಕಾಣಲಾರದ ‘ಏಕಬೆಳೆ’ಯ ನೆಡುತೋಪುಗಳನ್ನು ‘ಕಾಡು’ ಎಂದು ಒಪ್ಪಿಕೊಳ್ಳಬೇಕಾದ ಅನಿವಾರ್ಯವನ್ನು ಹೇರಲಾಯಿತು! ಅರಣ್ಯ ಒತ್ತುವರಿಯೂ ಮಿತಿಮೀರಿತು. ಪರಿಣಾಮವಾಗಿ ಆಹಾರ ವೈವಿಧ್ಯವು ನಾಶವಾಗಿ ಅಮೂಲ್ಯ ವನ್ಯಜೀವಿಗಳು, ಔಷಧಿ ಸಸ್ಯಗಳು ಅಳಿಯಲಾರಂಭಿಸಿದವು. ಹಕ್ಕಿಗಳು ಗೂಡು ತೊರೆದು ಗುಳೆ ಹೊರಟವು. ನೂರಾರು ನದಿಗಳ ಮೂಲವಾದ ಪಶ್ಚಿಮಘಟ್ಟದ ಮೇಲಿನ ಇಂತಹ ಅವಿವೇಕದ ಆಕ್ರಮಣಗಳಲ್ಲಿ ಕಾಡಿನ ದಟ್ಟಣೆಯು ಕರಗಿತಲ್ಲದೆ ಜಲದ ಕಣ್ಣುಗಳು ಮುಚ್ಚುತ್ತಲೇ ಹೋದವು!

ಕಾರ್ಖಾನೆಗೆ ಹಸ್ತಾಂತರಿಸಲಾಗಿದ್ದ ಇಲ್ಲಿಯ 82,000 ಎಕರೆ ಅರಣ್ಯಭೂಮಿಯ ವಾಯಿದೆ ಇದೇ ಆಗಸ್ಟ್ 12ಕ್ಕೆ ಮುಗಿದ ಕಾರಣ, ಆ ಜಾಗವನ್ನು ಮರಳಿ ಪಡೆದುಕೊಂಡು ಅಲ್ಲಿ ನೈಸರ್ಗಿಕ ಅರಣ್ಯವನ್ನು ಬೆಳೆಸಿಕೊಳ್ಳುತ್ತಾ ಅಳಿದುಹೋಗುತ್ತಿರುವ ಜೀವವೈವಿಧ್ಯದ ವೈಭವವನ್ನು ಮರುಸ್ಥಾಪಿಸುವ ತವಕ ಮಲೆನಾಡಿಗರದ್ದು. ಮಳೆಕಾಡುಗಳು ಎಂದಿಗೂ ಇಲಾಖೆಗಳ ಅಥವಾ ಬಲಿಷ್ಠರ ಲಾಭಕೋರ, ದಂಧೆಯ ಉದ್ಯಮವಾಗಬಾರದು. ಏರುಗತಿಯ ಜನಸಂಖ್ಯೆಯ ಅವಶ್ಯಕತೆ ನೀಗಲು ಮತ್ತು ಅಭಿವೃದ್ಧಿ ಹೆಸರಲ್ಲಿ ಕಣ್ಮರೆಯಾದ ಕಾಡಿನ ಪ್ರದೇಶವನ್ನು ಸರಿದೂಗಿಸಲು ಇದು ಸಕಾಲವೆಂಬುದು ಮಲೆನಾಡಿಗರ ಭಾವನೆ. ಅದೇ ಬೆಳಕಲ್ಲಿ ‘ಹೋರಾಟ ಒಕ್ಕೂಟ’ವಾಗಿ ನೆಡುತೋಪುಗಳ ವಿರೋಧಿ ದನಿಯೊಂದು ಮಲೆನಾಡ ಕಾಡಿನಿಂದ ಇದೀಗ ಕೇಳಿಬರುತ್ತಿದೆ.

‘ನೆಡುತೋಪಿಗಾಗಿ ನೀಡಿದ್ದ ಭೂಮಿಯಲ್ಲಿ ಸ್ವಾಭಾವಿಕ ಅರಣ್ಯ ಬೆಳೆಸಲು ಅರಣ್ಯ ಇಲಾಖೆ ತಕ್ಷಣ ಮುಂದಾಗಬೇಕು. ಅಲ್ಲಿ ಕಾಡುಸಸಿಗಳನ್ನು ನೆಡಲೇಬೇಕು ಅಂತೇನಿಲ್ಲ, ಮರ ಕಡಿಯದಂತೆ, ದನಕರು ಮೇಯದಂತೆ ನೋಡಿಕೊಂಡರೂ ಸಾಕು. ನಾಲ್ಕೈದು ವರ್ಷಗಳಲ್ಲಿ ಸಹಜಕಾಡು ತಾನಾಗಿಯೇ ಬೆಳೆಯುತ್ತದೆ. ಇಲಾಖೆಗೆ ಬೆಳೆಸಲು ಸಾಧ್ಯವಿಲ್ಲದ ಕಡೆ ಅರಣ್ಯ ಬೆಳೆಸಲು ಭೂರಹಿತರಿಗೆ ಆ ಜಾಗ ನೀಡಬೇಕು ಮತ್ತು ಅಲ್ಲಿಯ ಉತ್ಪನ್ನಗಳ ಲಾಭವನ್ನು ಆ ರೈತರಿಗೇ ನೀಡಬೇಕು. ವಿವಿಧ ಹಂತಗಳಲ್ಲಿ ನೆಡುತೋಪುಗಳಿಗೆ ನೀಡಿರುವ ಗುತ್ತಿಗೆಯನ್ನು ಕೈಬಿಡಬೇಕು’ ಎಂಬ ಆಗ್ರಹ ಒಕ್ಕೂಟದ್ದು.

ಗೇರು ನೆಡುತೋಪಿನದ್ದು ಇನ್ನೊಂದು ಆತಂಕ. ಗೇರು ಅಭಿವೃದ್ಧಿ ನಿಗಮವು ಎರಡು ದಶಕಗಳ ಹಿಂದೆ, ರಾಜ್ಯದಾದ್ಯಂತ ಪಾಳುಬಿದ್ದ ಸಾವಿರಾರು ಎಕರೆ ಪ್ರದೇಶದಲ್ಲಿ ಗೇರು ಬೆಳೆಯಲು ಭೂಮಿ ಪಡೆದುಕೊಂಡಿತ್ತು. ಮಲೆನಾಡಿನ ಕಾಡು-ಕಣಿವೆ, ಇಳಿಜಾರು ಪ್ರದೇಶಗಳಲ್ಲಿ ಗೇರು ಸಸಿ ನೆಟ್ಟು ಪೋಷಿಸಲಾಗುತ್ತಿದೆ. ಹಾಗೆ, ತೀರ್ಥಹಳ್ಳಿಯ ಸುಮಾರು 380 ಎಕರೆ ಜಾಗದಲ್ಲಿ ಇತ್ತೀಚೆಗೆ ಗೇರು ನೆಡುತೋಪು ವಿಸ್ತರಿಸುವ ಸಲುವಾಗಿ ಬೃಹತ್‍ ಯಂತ್ರಗಳನ್ನು ತಂದು ನಿಲ್ಲಿಸುತ್ತಿದ್ದಾಗ ಸ್ಥಳೀಯರಿಂದ ಗಟ್ಟಿಧ್ವನಿಯ ವಿರೋಧ ವ್ಯಕ್ತವಾಗಿದೆ. ಅದಾಗಲೇ 150 ಪ್ರಭೇದದ ಲಕ್ಷಾಂತರ ಗಿಡಮರಗಳು ಅಲ್ಲಿ ಬೆಳೆದು ನಿಂತಿವೆ.

ಪಶ್ಚಿಮಘಟ್ಟದ ಸೂಕ್ಷ್ಮಪರಿಸರದಲ್ಲಿ ಭೂಕುಸಿತದ ಭೀಕರ ಪರಿಣಾಮಗಳನ್ನು ಎದುರಿಸುತ್ತಿರುವ ಹೊತ್ತಿನಲ್ಲಿ ಮಲೆನಾಡು ಆ ಬಗ್ಗೆ ಎಚ್ಚೆತ್ತುಕೊಳ್ಳುತ್ತಿದೆ. ತನ್ನದೇ ಅತಿರೇಕಗಳ ಫಲಶ್ರುತಿಯಂತಿರುವ ಜಾಗತಿಕ ಬಿಕ್ಕಟ್ಟಿನ ಪ್ರಸ್ತುತ ಸಂದರ್ಭದಲ್ಲಿ, ಪರಿಸರದೊಂದಿಗಿನ ತನ್ನ ಅನನ್ಯ ಸಂಬಂಧವನ್ನು ಕಾಪಿಟ್ಟುಕೊಳ್ಳುತ್ತಾ ಸುಸ್ಥಿರ ಅಭಿವೃದ್ಧಿಗೆ ಆದ್ಯತೆ ನೀಡಿ, ಮನುಷ್ಯಕೇಂದ್ರಿತ ಯೋಜನೆಗಳನ್ನು ಜೀವಕೇಂದ್ರಿತ ಯೋಚನೆಗಳನ್ನಾಗಿ ಬದಲಾಯಿಸಿಕೊಳ್ಳುವುದು ಅನಿವಾರ್ಯ. ಮುಂದೆ ಭೂಮಿ ನಮಗೆ ಬದುಕಲು ಯೋಗ್ಯ ಜಾಗವಾಗಿ ಉಳಿಯಬೇಕಿದ್ದರೆ, ಭೂಮಿಯ ಹಸಿರು ಹೊದಿಕೆಯ ವಿಸ್ತರಣೆಯನ್ನು ಹೆಚ್ಚು ಮಾಡುವುದೊಂದೇ ಸಾಧ್ಯ ಮಾರ್ಗ. ಅಮೂಲ್ಯ ಜೀವವೈವಿಧ್ಯದ ಬೆಲೆಯನ್ನರಿತು, ಒಳಗೊಳ್ಳುವಿಕೆಯಲ್ಲಿ ಬೆಳೆಯುತ್ತಾ ಸಾಗುವುದು ನಮ್ಮೆದುರಿನ ಏಕೈಕ ದಾರಿ ಮತ್ತು ಜವಾಬ್ದಾರಿ.

    ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

    ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

    ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.