ಬುಧವಾರ, ಜೂನ್ 29, 2022
27 °C
ಮಕ್ಕಳು ಪರೀಕ್ಷೆಗಳಲ್ಲಿ ಅತಿ ಹೆಚ್ಚಿನ ಅಂಕಗಳನ್ನು ಪಡೆಯುತ್ತಿದ್ದರೂ ಅಷ್ಟೇ ಪ್ರಮಾಣದಲ್ಲಿ ಸೃಜನಶೀಲ ವ್ಯಕ್ತಿತ್ವಗಳು ಸೃಷ್ಟಿಯಾಗುತ್ತಿಲ್ಲವೇಕೆ?

ಸಂಗತ: ಭರ್ತಿ ಅಂಕದಿಂದ ಸಿಕ್ಕಿದ್ದೇನು?!

ಸದಾಶಿವ್ ಸೊರಟೂರು Updated:

ಅಕ್ಷರ ಗಾತ್ರ : | |

Prajavani

ಎಸ್‌ಎಸ್‌ಎಲ್‌ಸಿ ಫಲಿತಾಂಶ ಹೊರಬಿದ್ದಿದೆ. ಮಳೆಯೋಪಾದಿಯಲ್ಲಿ ಅಂಕಗಳು ಸುರಿದಿವೆ. ಸಾಮಾಜಿಕ ಜಾಲತಾಣಗಳಲ್ಲಿ ಅಂಕಗಳ ಅತಿವೃಷ್ಟಿ ಕಾಡಿದೆ. ಕಣ್ಣುಗಳಿಗೆ ಕಂಡಿದ್ದು ತೊಂಬತ್ತು, ನೂರು ಅಂಕಗಳೆ. ಈ ಪೀಳಿಗೆಯವರು ಎಷ್ಟೊಂದು ಬುದ್ಧಿವಂತರಾಗಿಬಿಟ್ಟರಲ್ಲ ಅಂತ ಅನಿಸದೇ ಇರದು. ಇತ್ತೀಚಿನ ದಶಕಗಳಲ್ಲಿ ಮಕ್ಕಳು ತೆಗೆಯಲು‌ ಇನ್ನೇನೂ ಉಳಿದಿಲ್ಲ ಅನ್ನುವಂತೆ ಅಂಕಗಳನ್ನು ಬಾಚುತ್ತಿದ್ದಾರೆ. ಪಿಯುಸಿಯದು ಕೂಡ ಇದಕ್ಕಿಂದ ತೀರಾ ಭಿನ್ನವೇನಲ್ಲ. ಅಂಕಗಳು ಹೇಗೆ ಬಂದವು ಅನ್ನುವುದಕ್ಕಿಂತ, ಅಷ್ಟು ಅಂಕ ಪಡೆದ ಅವರ ಬುದ್ಧಿವಂತಿಕೆ ಏನಾಯಿತು ಎಂಬುದು ಪ್ರಶ್ನಾರ್ಹ.

ಕಳೆದ ಬಾರಿ ಹತ್ತು ಸಾವಿರ ಶಿಕ್ಷಕರನ್ನು ನೇಮಿಸಿಕೊಳ್ಳಲು ಅರ್ಜಿಗಳನ್ನು ಆಹ್ವಾನಿಸಲಾಗಿತ್ತು. ಆದರೆ ಅರ್ಹ ಅಭ್ಯರ್ಥಿಗಳು ಸಿಗದೇ ಸೀಟುಗಳು ಖಾಲಿ ಉಳಿದವು. ಈ ಬಾರಿ ಮತ್ತೆ ಹದಿನೈದು ಸಾವಿರ ಶಿಕ್ಷಕರ ಹುದ್ದೆಗೆ ಅರ್ಜಿ ಕರೆಯಲಾಗಿದೆ. ಆದರೆ ಸೂಕ್ತ ಅಭ್ಯರ್ಥಿಗಳು ಸಿಗುವ ಬಗ್ಗೆ ಅನುಮಾನ ವ್ಯಕ್ತಪಡಿಸಿದ ಇಲಾಖೆ, ಮಾನದಂಡದ ಅಂಕ ಇಳಿಸಿದೆ. ಇಂದಿಗೂ ಹಳ್ಳಿಯ ಸರ್ಕಾರಿ ಆಸ್ಪತ್ರೆಗಳಲ್ಲಿ ವೈದ್ಯರ ಅಭಾವ ಕಂಡುಬರುತ್ತಿದೆ. ಜಾಗತಿಕ ಮಟ್ಟದಲ್ಲಿ ಸವಾಲೆನಿಸುವ ಎಂಜಿನಿಯರ್‌ಗಳ ಕೊರತೆ ನಮ್ಮಲ್ಲಿದೆ. ಇಡೀ ತಲೆಮಾರು ಇಂಗ್ಲಿಷ್... ಇಂಗ್ಲಿಷ್‌... ಎಂದು ಅದರ ಹಿಂದೆ ಓಡುತ್ತಿದೆ. ಆದರೆ ಒಬ್ಬನೇ ಒಬ್ಬ ವರ್ಡ್ಸ್‌ವರ್ಥ್‌, ಶೇಕ್ಸ್‌ಪಿಯರ್ ಹುಟ್ಟಲಿಲ್ಲ. ಸೈನ್ಸ್... ಸೈನ್ಸ್... ಎಂದು ಪೋಷಕರು ಮಕ್ಕಳಿಗೆ ಕಾಟ ಕೊಡುತ್ತಿದ್ದಾರೆ. ಆದರೆ ಒಬ್ಬ ಐನ್‍ಸ್ಟೀನ್ ಹುಟ್ಟಲಿಲ್ಲ. ಇದೇ ನೆಲದ ಮತ್ತೊಬ್ಬ ಕುವೆಂಪು ಕಾಣಿಸಲಿಲ್ಲ. ಹೌದು, ಅಷ್ಟೊಂದು ಅಂಕ ಪಡೆದವರೆಲ್ಲ ಎಲ್ಲಿ ಹೋಗುತ್ತಿದ್ದಾರೆ?

ಕಳೆದ ವಾರವಷ್ಟೇ ಕೆಲಸದ ನಿಮಿತ್ತ ಒಂದು ಕೋರ್ಟಿಗೆ ಹೋಗಿದ್ದೆ. ಅಲ್ಲಿ ದ್ವಿತೀಯ ದರ್ಜೆ ಸಹಾಯಕಿಯೊಬ್ಬಳು ಅದೆಷ್ಟು ಚುರುಕಾಗಿ ಕೆಲಸ ಮಾಡುತ್ತಿದ್ದಳು ಗೊತ್ತೇ? ಚಿಕ್ಕ ವಯಸ್ಸು. ಓದು, ಊರು ಕೇರಿಯ ಬಗ್ಗೆ ಮಾತಾಡಿಸಿದೆ. ಅವಳು ಎಸ್‌ಎಸ್‌ಎಲ್‌ಸಿ ಶೇ 95, ಪಿಯುಸಿ ವಿಜ್ಞಾನದಲ್ಲಿ ಶೇ 90ರಷ್ಟು ಅಂಕ ಪಡೆದು ಈಗ ಅಲ್ಲಿ ಕೆಲಸದಲ್ಲಿದ್ದಾಳೆ. ‘ಮುಂದೆ ಓದಬಹುದಿತ್ತಲ್ಲಮ್ಮ, ಬಂಗಾರದಂಥ ಬಾಳಿತ್ತು!’ ಅಂದಾಗ (ಹಾಗಂತ ಅವಳ ಆ ಕೆಲಸ ಕಡಿಮೆಯದು ಅಂತಲ್ಲ, ಅವಳ ಪ್ರತಿಭೆಗೆ ಅದಲ್ಲ ಎಂಬುದು ನನ್ನ ವಾದ), ‘ಬಡತನವಿತ್ತು ಸರ್, ತುರ್ತಿಗೆ ನನಗೊಂದು ನೌಕರಿ ಬೇಕಿತ್ತು. ಇಲ್ಲಿ ಸಿಕ್ತು, ಇಲ್ಲಿಯೇ ಉಳಿದುಬಿಟ್ಟೆ’ ಅಂದಳು.

ತುಂಬಾ ಮಾರ್ಕ್ಸ್‌ ತೆಗೆದುಕೊಂಡ ಹೆಚ್ಚಿನ ಮಕ್ಕಳು ಎಲ್ಲಿ ಹೋಗುತ್ತಾರೆ ಅನ್ನುವ ಬಹುದಿನದ ಪ್ರಶ್ನೆಗೆ ಉತ್ತರ ಸಿಕ್ಕಿತ್ತು. ಅಂತಹ ಮಕ್ಕಳು ಹೀಗೆ ಎಲ್ಲೆಲ್ಲಿ ಉಳಿದು ಹೋಗಿದ್ದಾರೊ!

ನೆಹರೂ ಅವರು ಈ ದೇಶವನ್ನು ಕರಗಿಸುವ ಮೂಸೆ (melting pot) ಅಂದಿದ್ದರು. ಎಲ್ಲಾ ಜಾತಿ, ಧರ್ಮ, ಭಾಷೆ, ಸಂಸ್ಕೃತಿಗಳನ್ನು ಈ ದೇಶ ತನ್ನೊಳಗೆ ಕರೆಸಿಕೊಂಡು ತಾನು ಭಾರತವಾಗಿದೆ. ಅದೇ ರೀತಿ ಈ ದೇಶ ನನಗೆ ಇನ್ನೊಂದು ತರಹದಲ್ಲಿ ಕರಗಿಸುವ ಮೂಸೆ ಎಂಬಂತೆ ಅರ್ಥವಾಗುತ್ತಿದೆ. ಎಂತಹ ಪ್ರತಿಭೆಗಳಿದ್ದರೂ ಅವು ಈ ದೇಶದ ಒಡಲಲ್ಲಿ ಉಳಿದು ಹೋಗಿರುವ ಬಡತನ, ಅನಕ್ಷರತೆ, ನಿರುದ್ಯೋಗದೊಳಗೆ ಕರಗಿ ಹೋಗಿಬಿಡುತ್ತವೆ. ಮಗುವನ್ನು ಎಲ್ಲಿ ತೊಡಗಿಸಬೇಕು, ಅದನ್ನು ಹೇಗೆ ದೇಶದ, ಸಮಾಜದ ಆಸ್ತಿಯನ್ನಾಗಿ ಮಾಡಬೇಕು ಎಂಬುದು ಎಷ್ಟೋ ಪೋಷಕರಿಗೂ ಗೊತ್ತಿಲ್ಲ.

ಇವುಗಳಲ್ಲದೆ ಇನ್ನೊಂದು ವರ್ಗವಿದೆ. ಅವರು ಕೋರ್ಸ್ ಸೇರುವ ಮುನ್ನವೇ ಆ ಕೋರ್ಸಿಗೆ ಬೇರೆ ದೇಶಗಳಲ್ಲಿ ಎಷ್ಟು ಅವಕಾಶಗಳಿವೆ ಅನ್ನುವುದನ್ನು ನೋಡಿಕೊಳ್ಳುತ್ತಾರೆ. ಅದರಂತೆ ಓದಿ ದೇಶ ಬಿಟ್ಟು ಹೊರಟು ಬಿಡುತ್ತಾರೆ.

ಪ್ರತಿವರ್ಷ ಹೊಸ ವೈದ್ಯರು ನದಿಯಂತೆ ಹರಿದು ಬರುತ್ತಿದ್ದರೂ ಹಳ್ಳಿಗಾಡಿನಲ್ಲಿ ವೈದ್ಯರ ಅಭಾವವಿದೆ. ಅವರೆಲ್ಲ ಹಣಕ್ಕಾಗಿ ಬದುಕಿದವರು, ಸೇವೆಗಾಗಿ ಅಲ್ಲ. ಒಬ್ಬ ವಿದ್ಯಾರ್ಥಿಯನ್ನು ಡಾಕ್ಟರ್ ಮಾಡಲು ಸರ್ಕಾರ ಮಾಡುವ ವೆಚ್ಚದ ಅನುಕೂಲ ಜನಸಾಮಾನ್ಯರಿಗೆ ತಲುಪದೇ ಹೋಗುತ್ತದೆ. ಅವರ ಪ್ರತಿಭೆ ಅವರು ಮಾಡಿಕೊಳ್ಳುವ ಹಣಕ್ಕಷ್ಟೇ ಸೀಮಿತವಾಗುತ್ತದೆ. ನಾವೆಲ್ಲ ಸನ್ನಿ ಹಿಡಿದವರಂತೆ ಇಂಗ್ಲಿಷ್‌ನ ಬಾಲ ಹಿಡಿದು ಓಡುತ್ತಿದ್ದೇವೆ. ಇತ್ತ ತಾಯಿ ಭಾಷೆಯಲ್ಲೂ ಉಳಿಯದೆ ಅತ್ತ ಇಂಗ್ಲಿಷು ಕೂಡ ರಕ್ತಗತವಾಗದೆ ವ್ಯಕ್ತಿತ್ವವೊಂದು ಎಡಬಿಡಂಗಿ ಆಗಿಬಿಡುತ್ತದೆ. ಇಂಥವರಿಂದ ಎಂಥ ಸೃಜನಾತ್ಮಕತೆ ಹುಟ್ಟಲು ಸಾಧ್ಯ? ನಾವು ಇಂಗ್ಲಿಷ್ ಅನ್ನು ಈ ಪರಿ ಪ್ರೀತಿಸಿದರೂ ಯಾಕೆ ಇಂಗ್ಲಿಷ್ ಭಾಷೆಯಲ್ಲಿ ಅಂತಹ ಸೃಜನಾತ್ಮಕತೆ ಸಾಧ್ಯವಾಗುತ್ತಿಲ್ಲ?

ಎಂಜಿನಿಯರಿಂಗ್ ಪದವಿ ಇಲ್ಲವೇ ಮೆಡಿಕಲ್ ಓದಿಗೆ ಮುಗಿಯುತ್ತದೆ ಸೈನ್ಸ್‌ ಹುಚ್ಚು ಹತ್ತಿಸಿಕೊಂಡವರ ಅಭಿಮಾನ. ಮಾತೃಭಾಷೆಯಲ್ಲಿ ಕರತಲಾಮಲಕ ಅಂದವರು ಕೂಡ ಅಂತಹ ಹೇಳಿಕೊಳ್ಳು ವಂಥ ಭಾಷಾ ಸಾಧನೆ ಮಾಡಿದ್ದಾದರೂ ಎಲ್ಲಿ? ಇವುಗಳಿಗೆಲ್ಲ ಉತ್ತರಗಳು ನಾವು ಕಲಿಸುತ್ತಿರುವ ವ್ಯವಸ್ಥೆಯಲ್ಲಿ, ಜನರು ಬೆಳೆಸಿಕೊಂಡಿರುವ ಮನಃಸ್ಥಿತಿಯಲ್ಲಿ, ದೇಶವನ್ನು ಕಾಡುತ್ತಿರುವ ಸಮಸ್ಯೆಗಳಲ್ಲಿದೆ. ನಾವು ನೋಡಿಕೊಳ್ಳಬೇಕು ಅಷ್ಟೇ!

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು