ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪ್ರಬಲರ ಏಕಸ್ವಾಮ್ಯಕ್ಕೆ ಮಣೆ!

Published 7 ನವೆಂಬರ್ 2023, 23:30 IST
Last Updated 7 ನವೆಂಬರ್ 2023, 23:30 IST
ಅಕ್ಷರ ಗಾತ್ರ

ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಹಿಂದುಳಿದ ವರ್ಗಗಳ ಮೀಸಲಾತಿ ಕುರಿತಂತೆ ನ್ಯಾಯಮೂರ್ತಿ ಕೆ.ಭಕ್ತವತ್ಸಲ ಆಯೋಗ ಐದು ಶಿಫಾರಸುಗಳನ್ನು ಮಾಡಿತ್ತು. ಇವುಗಳಲ್ಲಿ ಸಿದ್ದರಾಮಯ್ಯ ನೇತೃತ್ವದ ಸಚಿವ ಸಂಪುಟವು ಮೂರನ್ನು ಮಾತ್ರ ಒಪ್ಪಿಕೊಂಡು ಎರಡನ್ನು ತಿರಸ್ಕರಿಸಿದೆ. ಅಂಗೀಕರಿಸಿದ ಶಿಫಾರಸು
ಗಳಿಗಿಂತ ತಿರಸ್ಕೃತವಾದ ಶಿಫಾರಸುಗಳೇ ಸಾಮಾಜಿಕ ನ್ಯಾಯದ ದೃಷ್ಟಿಯಿಂದ ಮಹತ್ವದವು ಎನಿಸಿವೆ.

ಗ್ರಾಮ ಪಂಚಾಯಿತಿಯಿಂದ ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆವರೆಗೆ (ಬಿಬಿಎಂಪಿ) ಹಿಂದುಳಿದ ವರ್ಗಗಳಿಗೆ ನಿಗದಿ ಮಾಡಲಾಗಿದ್ದ ಮೀಸಲಾತಿಯಲ್ಲಿ ಅಧ್ಯಯನದ ಕೊರತೆಯನ್ನು ಗುರುತಿಸಿ ಸುಪ್ರೀಂ ಕೋರ್ಟ್ ತಕರಾರು ತೆಗೆದಿತ್ತು. ಆ ಕಾರಣಕ್ಕಾಗಿಯೇ ಈ ಆಯೋಗ ರಚಿಸಲಾಗಿತ್ತು. ಆಯೋಗವು 1985
ರಿಂದ ರಾಜ್ಯದಲ್ಲಿ ನಡೆಯುತ್ತಿರುವ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಎಲ್ಲ ಮಗ್ಗುಲುಗಳನ್ನೂ ಪರಿಶೀಲಿಸಿ ಈ ಶಿಫಾರಸುಗಳನ್ನು ಮಾಡಿತ್ತು.

ಸರ್ಕಾರ ಒಪ್ಪಿರುವ ಶಿಫಾರಸುಗಳು: 1. ಹಿಂದುಳಿದ ವರ್ಗಗಳಿಗೆ ಶೇ 33ರಷ್ಟು ಮೀಸಲಾತಿ ನೀಡಿದರೂ ಒಟ್ಟಾರೆ ಮೀಸಲಾತಿ ಶೇ 50 ಮೀರದಂತೆ ಈ ವರ್ಗಗಳ ರಾಜಕೀಯ ಮೀಸಲಾತಿ ಮುಂದುವರಿಸಿಕೊಂಡು ಹೋಗಬೇಕು. 2. ಬಿಬಿಎಂಪಿಯಲ್ಲಿ ಮೇಯರ್, ಉಪಮೇಯರ್ ಸ್ಥಾನಗಳನ್ನು ಹಿಂದುಳಿದ ವರ್ಗಗಳಿಗೆ ಮೀಸಲಿಡಬೇಕು. 3. ಎಲ್ಲಾ ನಗರ ಮತ್ತು ಸ್ಥಳೀಯ ಸಂಸ್ಥೆಗಳ ಚುನಾವಣಾ ಶಾಖೆಗಳನ್ನು ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆಯ ಅಧೀನಕ್ಕೆ ಒಳಪಡಿಸಬೇಕು.

ತಿರಸ್ಕೃತಗೊಂಡಿರುವ ಶಿಫಾರಸುಗಳು: 1. ಸ್ಥಳೀಯ ಸಂಸ್ಥೆಗಳ ಮೀಸಲಾತಿಯಲ್ಲಿ ಈಗಿರುವ ಹಿಂದುಳಿದ ವರ್ಗ ‘ಅ’ ಮತ್ತು ‘ಬ’ ಎಂಬ ಎರಡು ಗುಂಪುಗಳ ಬದಲಾಗಿ ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು. 2. ಬಿಬಿಎಂಪಿಯ ಮೇಯರ್, ಉಪಮೇಯರ್‌ಗೆ ಇರುವ 30 ತಿಂಗಳ ಅಧಿಕಾರ ಅವಧಿಯ ಮಾದರಿಯನ್ನು ನಗರಪಾಲಿಕೆಗಳಿಗೂ ವಿಸ್ತರಿಸಬೇಕು.

ಸಚಿವ ಸಂಪುಟವು ‘ಒಳವರ್ಗೀಕರಣ’ ಆಶಯದ ಶಿಫಾರಸನ್ನೇ ತಿರಸ್ಕರಿಸಿರುವುದು ಗಂಭೀರ ಚರ್ಚೆಗೆ ಕಾರಣವಾಗಬೇಕಿದೆ. ಹಾಗೆ ನೋಡಿದರೆ, ಹಿಂದುಳಿದ ವರ್ಗಗಳ ಮೂಲ ಮೀಸಲಾತಿಯಲ್ಲಿ ಪ್ರವರ್ಗ 1, 2ಎ, 2ಬಿ, 3ಎ, 3ಬಿ ಹೀಗೆ ಐದು ಗುಂಪುಗಳ ವರ್ಗೀಕರಣ ಇದೆ. ಆದರೆ ಇದನ್ನು ಸ್ಥಳೀಯ ಸಂಸ್ಥೆಗಳಲ್ಲಿ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಜಾರಿ ಮಾಡುವಾಗ ಹಿಂದುಳಿದ ವರ್ಗ ‘ಅ’ ಮತ್ತು ‘ಬ’ ಎಂದು ಎರಡು ಗುಂಪುಗಳನ್ನಾಗಿ ಮಾತ್ರ ವಿಂಗಡಿಸಲಾಗಿತ್ತು. ಪ್ರವರ್ಗ 1, 2ಎ ಮತ್ತು 2ಬಿಯನ್ನು ಒಳಗೊಂಡ ‘ಹಿಂದುಳಿದ ವರ್ಗ ಅ’ ಗುಂಪಿಗೆ ಶೇ 26.4 ಮೀಸಲಾತಿ ನಿಗದಿಪಡಿಸಲಾಗಿತ್ತು. ಪ್ರಬಲ ಭೂಒಡೆತನದ ಜಾತಿಗಳಿರುವ 3ಎ ಮತ್ತು 3ಬಿಯನ್ನು ‘ಹಿಂದುಳಿದ ವರ್ಗ ಬ’ ಎಂದು ಗುರುತಿಸಿ ಶೇ 6.6ರಷ್ಟು ಮೀಸಲಾತಿಯನ್ನು ನಿಗದಿಪಡಿಸಲಾಗಿತ್ತು.

ಈ ಸೂತ್ರ ರೂಪಿಸಿದ್ದು ಜೆ.ಎಚ್‌.ಪಟೇಲ್‌ ಅವರು ಮುಖ್ಯಮಂತ್ರಿಯಾಗಿದ್ದಾಗ ನೇಮಿಸಿದ್ದ ಸಿದ್ದರಾಮಯ್ಯ ನೇತೃತ್ವದ ಸಮಿತಿ. ಆದರೆ ಈ ಸೂತ್ರ ಹಿಂದುಳಿದ ವರ್ಗಗಳೊಳಗೆ ಅಧಿಕಾರ ಹಂಚಿಕೆಯ ಸಾಮಾಜಿಕ ನ್ಯಾಯ ಒದಗಿಸುವಲ್ಲಿ ಸಫಲವಾಗಿಲ್ಲ ಎಂಬ ಅಂಶವನ್ನು ಭಕ್ತವತ್ಸಲ ಆಯೋಗ ಗುರುತಿಸಿದೆ. ಒಟ್ಟಾರೆ, ಹಿಂದುಳಿದ ವರ್ಗಗಳಲ್ಲಿ 802 ಜಾತಿ, ಉಪಜಾತಿಗಳಿವೆ. ಆದರೆ ಗ್ರಾಮ ಪಂಚಾಯಿತಿಯ ಸದಸ್ಯತ್ವದ ಕನಿಷ್ಠ ರಾಜಕೀಯ ಪ್ರಾತಿನಿಧ್ಯ ಸಿಕ್ಕಿರುವುದು 156 ಜಾತಿ, ಉಪಜಾತಿಗಳಿಗೆ ಮಾತ್ರ. ಅಂದರೆ ಹಿಂದುಳಿದ ವರ್ಗಗಳಲ್ಲಿ ಶೇ 80ರಷ್ಟು ಜಾತಿ, ಉಪಜಾತಿಗಳು ರಾಜಕೀಯ ಪ್ರಾತಿನಿಧ್ಯದಿಂದ ದೂರವೇ ಉಳಿದಿವೆ. ಇವರಲ್ಲಿ ನೂರಾರು ಅಲೆಮಾರಿ, ಅರೆ ಅಲೆಮಾರಿ ಜಾತಿಗಳು, ಸಣ್ಣಪುಟ್ಟ ಕಾಯಕದ ಅನೇಕ ಸಮುದಾಯಗಳಿವೆ. ಈ ವಂಚಿತ ಸಮುದಾಯಗಳಿಗೆ ಕನಿಷ್ಠ ರಾಜಕೀಯ ಪ್ರಾತಿನಿಧ್ಯದ ನ್ಯಾಯ ಸಿಗಬೇಕಾದರೆ ಈಗಿರುವ ಎರಡು ಗುಂಪುಗಳ ಬದಲು ನಾಲ್ಕು ಗುಂಪುಗಳನ್ನಾಗಿ ವಿಂಗಡಿಸಬೇಕು ಎನ್ನುವುದು ಆಯೋಗದ ಶಿಫಾರಸು.

ಪ್ರವರ್ಗ 1 ಮತ್ತು 2ಎ ಈ ಎರಡನ್ನೂ ಪ್ರತ್ಯೇಕ ಗುಂಪುಗಳನ್ನಾಗಿ ಪರಿಗಣಿಸಿ ತಲಾ ಶೇ 9.9ರ ಮೀಸಲಾತಿ ಕೊಡಬೇಕು. ಉಳಿದಂತೆ 2ಬಿ, 3ಎ, 3ಬಿಯನ್ನು ಎರಡು ಗುಂಪುಗಳನ್ನಾಗಿ ವರ್ಗೀಕರಿಸಿ ತಲಾ ಶೇ 6.6ರ ಮೀಸಲಾತಿ ನಿಗದಿಪಡಿಸಬೇಕೆಂದು ಆಯೋಗ ಹೇಳಿತ್ತು. ಆದರೆ ಈ ಶಿಫಾರಸನ್ನು ಸರ್ಕಾರ ಸಾರಾಸಗಟಾಗಿ ತಿರಸ್ಕರಿಸಿರುವುದು ಸಾಮಾಜಿಕ ನ್ಯಾಯ ಕುರಿತಾದ ಬದ್ಧತೆಯ ಕೊರತೆಯನ್ನು
ಎತ್ತಿತೋರಿಸುತ್ತದೆ.

ಹಾಗೆ ನೋಡಿದರೆ, ರಾಜ್ಯ ಸರ್ಕಾರ ಒಂದು ಹೆಜ್ಜೆ ಮುಂದೆ ಹೋಗಿ, 2ಎನಲ್ಲಿರುವ ಮಡಿವಾಳ, ಸವಿತಾ, ಕುಂಬಾರ, ವಿಶ್ವಕರ್ಮ, ದರ್ಜಿಯಂತಹ ಕಾಯಕ ಸಮುದಾಯಗಳನ್ನು ಪ್ರತ್ಯೇಕಿಸಿ ಮತ್ತೊಂದು ಗುಂಪು ರಚಿಸಿದ್ದರೆ ಸಾಮಾಜಿಕ ನ್ಯಾಯವು ಅಂಚಿನ ಜನರವರೆಗೆ ಹೋಗುವ ಅವಕಾಶವಿತ್ತು. ಆದರೆ ಸರ್ಕಾರದ ಈಗಿನ ನಿರ್ಧಾರ ಹಿಂದುಳಿದ ವರ್ಗಗಳ ಒಳಗೆ ಕೆಲವೇ ಪ್ರಬಲ ಜಾತಿಗಳ ಏಕಸ್ವಾಮ್ಯವನ್ನು ಪೋಷಿಸಿ
ಕೊಂಡು ಹೋಗಲು ಬದ್ಧವಾದಂತಿದೆ. ಸುಪ್ರೀಂ ಕೋರ್ಟ್‌ ಎತ್ತಿದ ತಕರಾರಿಗೆ ಸಂಬಂಧಿಸಿದ ಶಿಫಾರಸನ್ನೇ ಸರ್ಕಾರ ಕೈಬಿಟ್ಟಿರುವುದು ಗಂಭೀರ ಲೋಪವಾಗಿದೆ. ಇತ್ತ ಒಳಮೀಸಲಾತಿ ಬೇಕೆನ್ನುವ ಪರಿಶಿಷ್ಟ ಜಾತಿಗಳವರೂ ಸರ್ಕಾರದ ಈ ನಿರ್ಧಾರದಲ್ಲಿನ ಒಳಸಂದೇಶವನ್ನು ಅರ್ಥಮಾಡಿಕೊಳ್ಳಬಹುದು.

ಲೇಖಕ: ಆರ್‌ಎಸ್‌ಎಸ್‌ ಕಾರ್ಯಕರ್ತ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT