ಗುರುವಾರ, 2 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪುಟ್ಟಣ್ಣ ಪ್ರಶಸ್ತಿ: ಆಶಯಗಳ ನಾಸ್ತಿ?

Last Updated 3 ಅಕ್ಟೋಬರ್ 2018, 19:45 IST
ಅಕ್ಷರ ಗಾತ್ರ

ಮನರಂಜನಾತ್ಮಕ ಸಿನಿಮಾಗಳಲ್ಲಿ ನಾಡು–ನುಡಿಯ ಸಾಂಸ್ಕೃತಿಕ ಸೊಗಡನ್ನು ಪುಟ್ಟಣ್ಣ ಕಣಗಾಲರಂತೆ ಪರಿಣಾಮಕಾರಿಯಾಗಿ ಚಿತ್ರಿಸಿದ ಮತ್ತೊಬ್ಬ ನಿರ್ದೇಶಕ ಕನ್ನಡ ಚಿತ್ರರಂಗದಲ್ಲಿಲ್ಲ. ಕಾದಂಬರಿಗಳನ್ನು ಬಳಸಿಕೊಳ್ಳುವ ಮೂಲಕ ಕನ್ನಡದ ಭಿತ್ತಿಯೊಂದನ್ನು ನೇರವಾಗಿ ತಮ್ಮ ಸಿನಿಮಾಗಳಿಗೆ ಕಲ್ಪಿಸಿಕೊಳ್ಳುತ್ತಿದ್ದುದು ಹಾಗೂ ಕವಿತೆಗಳನ್ನು ಚಿತ್ರಗೀತೆಗಳಾಗಿ ಅಳವಡಿಸಿಕೊಳ್ಳುತ್ತಿದ್ದ ಕ್ರಮವನ್ನು ನೋಡಿದರೆ, ಪುಟ್ಟಣ್ಣನವರು ಪ್ರಜ್ಞಾಪೂರ್ವಕವಾಗಿ ತಮ್ಮ ಚಿತ್ರಗಳೊಂದಿಗೆ ಕನ್ನಡತನವನ್ನು ಕಸಿ ಮಾಡಿಕೊಳ್ಳುತ್ತಿದ್ದರೆನ್ನಿಸುತ್ತದೆ.

ಪುಟ್ಟಣ್ಣನವರ ಸಿನಿಮಾಗಳ ಆಶಯಗಳ ಬಗ್ಗೆ ತಾತ್ವಿಕವಾಗಿ ಭಿನ್ನಮತ ಹೊಂದುವುದು ಸಾಧ್ಯವಿದೆ. ಆದರೆ, ಅವರ ಕನ್ನಡ ಪ್ರಜ್ಞೆಯ ಬಗ್ಗೆ, ತಮ್ಮ ಸಿನಿಮಾಗಳ ಮೂಲಕ ಅವರು ಕನ್ನಡ ಚಿತ್ರರಂಗಕ್ಕೆ ನೀಡಿದ‌ ಕೊಡುಗೆಯ ಬಗ್ಗೆ, ದೃಶ್ಯ ವ್ಯಾಕರಣದ ಅವರ ಕಸುಬುದಾರಿಕೆಯ ಬಗ್ಗೆ ತಕರಾರುಗಳನ್ನು ಎತ್ತುವುದು ಮೊಸರಿನಲ್ಲಿ ಕಲ್ಲು ಹುಡುಕಿದಂತೆ. ಹತ್ತಾರು ಉತ್ತಮ‌ ಕಲಾವಿದರನ್ನು ಚಿತ್ರೋದ್ಯಮಕ್ಕೆ‌ ಕೊಡುಗೆಯಾಗಿ ನೀಡಿದ್ದೂ ಗಮನಾರ್ಹ ಸಾಧನೆಯೇ. ಈ ಎಲ್ಲ ಕಾಣಿಕೆಗಳ ಕಾರಣದಿಂದಲೇ ಪ್ರತಿವರ್ಷ ಅವರ ಹೆಸರಿನಲ್ಲಿ ಕನ್ನಡದ‌ ಹಿರಿಯ ನಿರ್ದೇಶಕರೊಬ್ಬರಿಗೆ ಪ್ರಶಸ್ತಿ ನೀಡಿ ಗೌರವಿಸುವ ಕೆಲಸವನ್ನು ಕರ್ನಾಟಕ‌ ಸರ್ಕಾರ ಮಾಡುತ್ತಿದೆ.

ಪುಟ್ಟಣ್ಣ ಕಣಗಾಲ್ ಹೆಸರಿನ ಪ್ರಶಸ್ತಿಗೆ ಈವರೆಗೆ ಪಾತ್ರರಾಗಿರುವ ನಿರ್ದೇಶಕರೆಲ್ಲ‌ ಒಂದಲ್ಲಾ ಒಂದು ಬಗೆಯಲ್ಲಿ ಪುಟ್ಟಣ್ಣನವರ ಆಶಯಗಳ ಮುಂದುವರಿಕೆಯೇ ಅಗಿದ್ದಾರೆ. ಅವರಲ್ಲಿ ಕೆಲವರ ಸಾಧನೆಯಂತೂ ಪ್ರಶಸ್ತಿಯ ಘನತೆಯನ್ನು ಇನ್ನಷ್ಟು ಎತ್ತರಿಸುವಷ್ಟು ಉಜ್ವಲವಾಗಿದೆ. ಹುಣಸೂರು ಕೃಷ್ಣಮೂರ್ತಿ, ಜಿ.ವಿ. ಅಯ್ಯರ್, ಎಂ.ಆರ್. ವಿಠ್ಠಲ್, ಸಿದ್ಧಲಿಂಗಯ್ಯ, ಗಿರೀಶ ಕಾಸರವಳ್ಳಿ, ದೊರೈ-ಭಗವಾನ್, ಪಟ್ಟಾಭಿರಾಮರೆಡ್ಡಿ, ಬರಗೂರು ರಾಮಚಂದ್ರಪ್ಪ, ಟಿ.ಎಸ್‌. ನಾಗಾಭರಣ ಮುಂತಾದ ನಿರ್ದೇಶಕರು ತಮ್ಮ ಸಿನಿಮಾಗಳ ಮೂಲಕ ರಾಷ್ಟ್ರೀಯ ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡವನ್ನು ಪ್ರತಿನಿಧಿಸಿದ್ದಾರೆ. ಸಿನಿಮಾ ಮಾಧ್ಯಮ ಸಂಪೂರ್ಣ ವ್ಯಾಪಾರೀಕರಣವಾಗದೆ, ಕಲೆಯಾಗುವತ್ತ ನಿರಂತರ ತುಡಿಯಲಿಕ್ಕೆ‌ ಇಂತಹ ನಿರ್ದೇಶಕರೇ ಕಾರಣ. ಇಂಥವರ ಸಾಲಿನಲ್ಲಿ, ಪ್ರಸಕ್ತ ಪುಟ್ಟಣ್ಣ ಕಣಗಾಲ್ ಪ್ರಶಸ್ತಿಗೆ ಆಯ್ಕೆಯಾಗಿರುವ ಎಸ್. ನಾರಾಯಣ್ ಅವರನ್ನು ಎಲ್ಲಿ ಗುರ್ತಿಸುವುದು?

ನಾರಾಯಣ್ ಈವರೆಗೆ ಹೆಚ್ಚು ಪ್ರಸಿದ್ಧಿ ಪಡೆದಿರುವುದು ರೀಮೇಕ್ ಸಿನಿಮಾಗಳ ಮೂಲಕ. ‘ಚೈತ್ರದ ಪ್ರೇಮಾಂಜಲಿ’ಯ ನವಿರು ಪ್ರೇಮಕಥನದ ಮೂಲಕ ಚಿತ್ರರಂಗ ಪ್ರವೇಶಿಸಿದ ಅವರು ನಂತರ ನೆಚ್ಚಿದ್ದು ಸೃಜನಶೀಲತೆಗೆ ಹೆಚ್ಚೇನೂ ಆಸ್ಪದವಿಲ್ಲದ ಸಿದ್ಧಸೂತ್ರಗಳನ್ನು. ನೆರೆಯ ಭಾಷೆಗಳಲ್ಲಿ ಯಶಸ್ವಿಯಾದ ಕಥೆಗಳನ್ನು ಕನ್ನಡೀಕರಿಸಿರುವುದರಲ್ಲಿ ಅವರ ಯಶಸ್ಸಿದೆ. ಕೆಲವು ಸಿನಿಮಾಗಳಲ್ಲಂತೂ ಮೂಲದ ವೇಷಭೂಷಣಗಳನ್ನೂ ಕನ್ನಡಕ್ಕೆ ತಂದಿದ್ದಾರೆ. ನಟನಾಗಿ ಅವರು ಕಾಮಿಡಿಗೆ ಹೆಸರುವಾಸಿ. ಪೆಕರು ಪಾತ್ರಗಳು ಹಾಗೂ ದ್ವಂದ್ವಾರ್ಥದ ಸಂಭಾಷಣೆಗಳು ಅವರ ಹಾಸ್ಯದ ಬಂಡವಾಳ. ‘ಕುರಿಗಳು ಸಾರ್‌ ಕುರಿಗಳು’, ‘ಕೋತಿಗಳು ಸಾರ್‌ ಕೋತಿಗಳು’, ‘ತಿಪ್ಪಾರಳ್ಳಿ ತರ್ಲೆಗಳು’ ಶೀರ್ಷಿಕೆಗಳೇ ಅವರ ನಟನಾ ನಮೂನೆಯ ಉದಾಹರಣೆಗಳಿಂತಿವೆ. ಇಂಥ ನಟ–ನಿರ್ದೇಶಕರನ್ನು ಪುಟ್ಟಣ್ಣನವರ ಹೆಸರಿನ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ನಾರಾಯಣ್ ಸಿನಿಮಾಗಳ ಒಂದು ಹಾಸ್ಯಪ್ರಸಂಗದಂತೆಯೇ ಕಾಣಿಸುತ್ತದೆ.

ಸ್ವಂತಿಕೆ, ಪ್ರಯೋಗಶೀಲತೆ ಹಾಗೂ ಕನ್ನಡಪ್ರಜ್ಞೆ ಪುಟ್ಟಣ್ಣನವರ ಸಿನಿಮಾಗಳ‌ ಪ್ರಮುಖ ಗುಣಗಳು. ಇವುಗಳಲ್ಲಿ ಒಂದಕ್ಕೂ ನ್ಯಾಯ ಸಲ್ಲಿಸಲಾಗದ ನಿರ್ದೇಶಕನನ್ನು ಪುಟ್ಟಣ್ಣನವರ ಹೆಸರಿನಲ್ಲಿ ಗುರ್ತಿಸುವುದು ಪ್ರಶಸ್ತಿಯ ಆಶಯಕ್ಕೆ ವಿರುದ್ಧವಾದುದು. ಪುಟ್ಟಣ್ಣನವರಂತೆ ನಾರಾಯಣ್‌ ಸಾಹಿತ್ಯಕೃತಿಗಳನ್ನು ತಮ್ಮ ಸಿನಿಮಾಗಳಿಗೆ ಬಳಸಿಕೊಳ್ಳಲಿಲ್ಲ. ಕವಿತೆಗಳನ್ನು ಸಿನಿಮಾಕ್ಕೆ ಅಳವಡಿಸುವ ಪ್ರಯೋಗಶೀಲತೆಯನ್ನೂ ಮಾಡಲಿಲ್ಲ. ತಾರಾವರ್ಚಸ್ಸಿನ ವಿಷ್ಣುವರ್ಧನ್‌ರಿಗೆ ಪೊದೆಮೀಸೆಯನ್ನು ಅಂಟಿಸಿದ್ದು ಬಿಟ್ಟರೆ, ಹೊಸ ಪ್ರತಿಭೆಗಳನ್ನು ಹುಟ್ಟುಹಾಕಲಿಲ್ಲ. ಪುಟ್ಟಣ್ಣನವರ ‘ಬೆಳ್ಳಿಮೋಡ’, ‘ಶರಪಂಜರ’, ‘ನಾಗರಹಾವು’, ‘ಗೆಜ್ಜೆಪೂಜೆ’, ‘ರಂಗನಾಯಕಿ’, ‘ಸಾಕ್ಷಾತ್ಕಾರ’ದಂಥ ಪ್ರಯೋಗಗಳ ಸಾಲಿನಲ್ಲಿ ನಾರಾಯಣ್‌ರ ಯಾವ ಚಿತ್ರವನ್ನು ಗುರ್ತಿಸುವುದು?

ನಾರಾಯಣ್‌ ಅವರ ಪ್ರತಿಭೆಯನ್ನು ಅವಮಾನಿಸುವುದು ಅಥವಾ ಪುಟ್ಟಣ್ಣನವರನ್ನು ಎತ್ತಿಹಿಡಿಯುವುದು ಈ ಟಿಪ್ಪಣಿಯ ಉದ್ದೇಶವಲ್ಲ. ವ್ಯಾಪಾರಿ ನೆಲೆಗಟ್ಟಿನಲ್ಲಿ ಚಿತ್ರರಂಗ ಲವಲವಿಕೆಯಿಂದಿರುವುದಕ್ಕೆ ನಾರಾಯಣ್‌ ಅವರಂಥ ನಿರ್ದೇಶಕರು ಅಗತ್ಯ. 25 ವರ್ಷಗಳಲ್ಲಿ ಸುಮಾರು ಐವತ್ತು ಚಿತ್ರಗಳನ್ನು ನಿರ್ದೇಶಿಸಿರುವುದು ಕೂಡ ಕಡಿಮೆಯೇನಲ್ಲ. ಈ ನಿಟ್ಟಿನಲ್ಲಿ ಅವರ ಸಾಧನೆಯನ್ನು ಗುರ್ತಿಸುವುದಾದಲ್ಲಿ ಜೀವಮಾನ ಸಾಧನೆಗಾಗಿ ಇರುವ ‘ವಿಷ್ಣುವರ್ಧನ್‌ ಪ್ರಶಸ್ತಿ’ ರೂಪದ ಗೌರವಗಳಿಗೆ ಅವರನ್ನು ಆಯ್ಕೆ ಮಾಡಬಹುದಿತ್ತು. ಆದರೆ, ಪುಟ್ಟಣ್ಣನವರ ಹೆಸರಿನ ಪ್ರಶಸ್ತಿ ನೀಡುವುದು ಪ್ರಶಸ್ತಿಗೂ ಗೌರವವಲ್ಲ, ಪುರಸ್ಕೃತರ ಸಾಧನೆಗೆ ಸಂದ ನ್ಯಾಯವೂ ಆಗುವುದಿಲ್ಲ. ಈವರೆಗೆ ಒಮ್ಮೆಯೂ ತಮ್ಮ ನಿರ್ದೇಶನಕ್ಕಾಗಿ ರಾಜ್ಯಪ್ರಶಸ್ತಿ ಪಡೆಯದ ನಿರ್ದೇಶಕರನ್ನು ‘ಪುಟ್ಟಣ್ಣ ಪೀಠ’ದಲ್ಲಿ ಕೂರಿಸುವುದು ಸಿನಿಮೀಯ.

ನಿರ್ದೇಶಕರಾಗಿ ನಾರಾಯಣ್‌ ಇತ್ತೀಚಿನ ಸಿನಿಮಾ ‘ಮನಸು ಮಲ್ಲಿಗೆ’ ಮರಾಠಿಯ ‘ಸೈರಾಟ್‌’ನ ಕನ್ನಡ ಅವತರಣಿಕೆ. ಮೂಲಚಿತ್ರದಲ್ಲಿನ ಸಂಕೀರ್ಣತೆ ಕನ್ನಡದಲ್ಲಿ ತೆಳುವಾದ ಕಾರಣಕ್ಕೋ ಏನೋ ಅದು ಸಹೃದಯರ ಗಮನಸೆಳೆಯದೆ ಹೋಯಿತು. ಇನ್ನು ಅವರ ಬಹು ನಿರೀಕ್ಷೆಯ ‘ಭೂಮಿಪುತ್ರ’ (ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ ಅವರ ಜೀವನ–ಸಾಧನೆ ಆಧರಿಸಿದ ಚಿತ್ರ) ಚಿತ್ರೀಕರಣಕ್ಕೆ ಮೊದಲೇ ತಣ್ಣಗಾದಂತಿದೆ. ಅದರ ಕವಲುರೂಪ ಎನ್ನುವಂತೆ ‘ಕುಮಾರಣ್ಣ’ನ ಕುರಿತು ನಾರಾಯಣ್‌ ಕಿರುಚಿತ್ರವೊಂದನ್ನು ರೂಪಿಸಿದ್ದಾರೆ. ವಂಚನೆಪ್ರಕರಣವೊಂದಲ್ಲಿ ಮೋಸಹೋಗುವ ಮೂಲಕ ಇತ್ತೀಚೆಗೆ ಸುದ್ದಿಯಾಗಿದ್ದ ಅವರು, ಈಗ ‘ಪುಟ್ಟಣ್ಣ ಕಣಗಾಲ್‌’ ಪ್ರಶಸ್ತಿಯ ಮೂಲಕ ಸುದ್ದಿಕೇಂದ್ರದಲ್ಲಿ ನಿಂತಿದ್ದಾರೆ. ನಿರ್ದೇಶಕರಾಗಿ ಸುದ್ದಿಯಾಗುವ ಬದಲು ಬೇರೆ ಕಾರಣಗಳಿಗಾಗಿ ಸುದ್ದಿಯಲ್ಲಿರುವುದು ಅವರಿಗೆ ಇರುಸುಮುರುಸು ಉಂಟುಮಾಡಿದ್ದರೂ ಅಚ್ಚರಿಯಿಲ್ಲ.

ಪ್ರಶಸ್ತಿ ನೀಡುವವರು ಆಯಾ ಪ್ರಶಸ್ತಿಯ ಹಿಂದಿನ ಆಶಯಗಳನ್ನು ಗುರ್ತಿಸಬೇಕಾಗುತ್ತದೆ. ಅರ್ಹರು ಇಲ್ಲದೆ ಹೋದರೆ ಪ್ರಶಸ್ತಿ ನೀಡಲೇಬೇಕೆನ್ನುವ ಸಂಪ್ರದಾಯವನ್ನು ಪಾಲಿಸಬೇಕಾಗಿಯೂ ಇಲ್ಲ. ಅದೇ ರೀತಿ, ಪ್ರಶಸ್ತಿಗೆ ಪರಿಗಣಿಸಲಿಕ್ಕೆ ವಯಸ್ಸು ಕಡ್ಡಾಯ ಮಾನದಂಡ ಆಗಬೇಕಾಗಿಯೂ ಇಲ್ಲ. ಅಂತರರಾಷ್ಟ್ರೀಯ ವೇದಿಕೆಗಳಲ್ಲಿ ಕನ್ನಡದ ಪುಲಕವನ್ನು ಮೂಡಿಸಿದ ‘ತಿಥಿ’ ಸಿನಿಮಾದ ರಾಮ್‌ ರೆಡ್ಡಿ ಅವರಂಥ ಕಿರಿಯರನ್ನು ಗೌರವಿಸಿದರೆ ಪುಟ್ಟಣ್ಣ ಹೆಸರಿನ ಪ್ರಶಸ್ತಿಯ ಹೊಳಪು ಹೆಚ್ಚುತ್ತದೆ. ‍ಪಿ. ಶೇಷಾದ್ರಿ, ಯೋಗರಾಜ ಭಟ್‌ ಅವರಂಥ ನಿರ್ದೇಶಕರ ಸಿನಿಮಾಗಳಲ್ಲಿನ ಸ್ವಂತಿಕೆಯನ್ನೂ ನಾವು ಮರೆಯಬಾರದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT