ಮಂಗಳವಾರ, ಅಕ್ಟೋಬರ್ 22, 2019
23 °C
ಬಿ.ಇಡಿ ಶಿಕ್ಷಣ ವ್ಯವಸ್ಥೆಯು ಪ್ರತೀ ಬಾರಿ ಬದಲಾವಣೆಗೆ ತೆರೆದುಕೊಳ್ಳುವಾಗಲೂ ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಯ ಭರವಸೆ ಮೂಡಿಸುತ್ತದೆ

ಬಿ.ಇಡಿ: ಸ್ಥಿತ್ಯಂತರದ ಹಾದಿ

Published:
Updated:
Prajavani

ದೇಶದ ಶಿಕ್ಷಣ ವ್ಯವಸ್ಥೆಯನ್ನು ಬಲಪಡಿಸಲು ಬೇಕಾಗಿರುವ ಬಿ.ಇಡಿ ಶಿಕ್ಷಣ ಪದ್ಧತಿಯು ಕಳೆದ ಕೆಲ ವರ್ಷಗಳಿಂದ ಪ್ರಯೋಗಕ್ಕೆ ಒಳಗಾಗುತ್ತಲೇ ಇದೆ. ಬಿ.ಇಡಿ ಪದವಿಯು ಒಂದು ವರ್ಷದ ಅವಧಿಯದ್ದಾಗಿತ್ತು. ನ್ಯಾಯಮೂರ್ತಿ ಜೆ.ಎಸ್‌.ವರ್ಮಾ ಸಮಿತಿಯ ಸಲಹೆಯಂತೆ 2015-16ರಿಂದ, ಆವರೆಗೆ ಇದ್ದ ಒಂದು ವರ್ಷದ ಬಿ.ಇಡಿ ಪದವಿಯನ್ನು ಎರಡು ವರ್ಷಗಳಿಗೆ ವಿಸ್ತರಿಸಲಾಯಿತು. ಎರಡು ವರ್ಷಗಳ ಬಿ.ಇಡಿ ಶಿಕ್ಷಣವನ್ನು ಒಂದು ನಿರ್ದಿಷ್ಟ ಚೌಕಟ್ಟಿಗೆ ಒಳಪಡಿಸುವ ಹಂತದಲ್ಲಿರುವಾಗಲೇ ನಾಲ್ಕು ವರ್ಷಗಳ ಅವಧಿಯ ಸಮಗ್ರ ಬಿ.ಇಡಿ ಕೋರ್ಸ್‌ಗೆ ಕೇಂದ್ರ ಸರ್ಕಾರ ಅಧಿಸೂಚನೆ ಹೊರಡಿಸಿದೆ. ಬಿಎ– ಬಿ.ಇಡಿ, ಬಿಎಸ್‍ಸಿ– ಬಿ.ಇಡಿ, ಬಿಕಾಂ– ಬಿ.ಇಡಿ ಎಂಬ ಮೂರು ಬಗೆಯ ಕೋರ್ಸ್‌ಗಳಿದ್ದು, ಅವು ಪ್ರಸಕ್ತ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ಬರಲಿವೆ.

ಅಮೆರಿಕ, ಕೆನಡಾದಂತಹ ಮುಂದುವರಿದ ರಾಷ್ಟ್ರಗಳಲ್ಲಿ ಶಿಕ್ಷಣ ಪದವಿಯು ಒಂದು ವರ್ಷದಿಂದ ಐದು ವರ್ಷಗಳ ಅವಧಿಯದ್ದಾಗಿದ್ದು, ಬಿ.ಇಡಿ ಪದವಿ ಪೂರ್ಣಗೊಳಿಸಿದವರು ಹೈಸ್ಕೂಲು ಶಿಕ್ಷಕರಾಗಲುಅರ್ಹರಾಗಿರುತ್ತಾರೆ. ಅಮೆರಿಕದಲ್ಲಿ ಪ್ರಾಥಮಿಕ, ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಎಂಬ ಮೂರು ವಿಭಾಗಗಳಿಗೆ ಅನುಗುಣವಾಗಿ ತರಬೇತಿ ನೀಡಲಾಗುತ್ತದೆ. ಇನ್ನು ಆಸ್ಟ್ರೇಲಿಯಾದಲ್ಲಿ ನಾಲ್ಕು ವರ್ಷಗಳ ಬಿ.ಇಡಿ ಪದವಿ ಜಾರಿಯಲ್ಲಿದೆ. ಇಲ್ಲಿ ಪ್ರಶಿಕ್ಷಣಾರ್ಥಿಯು ಬೇರೆ ಬೇರೆ ಜ್ಞಾನ ಶಾಖೆಗಳನ್ನು ಅಧ್ಯಯನ ಮಾಡಬಹುದು.

ಆಸ್ಟ್ರೇಲಿಯಾದ ಹೆಚ್ಚಿನ ವಿಶ್ವವಿದ್ಯಾಲಯಗಳಲ್ಲಿ ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಎಂಬ ಎರಡು ರೀತಿಯ ಶಿಕ್ಷಣ ವ್ಯವಸ್ಥೆ ಇದೆ. ನಮ್ಮ ಪಕ್ಕದ ರಾಷ್ಟ್ರ ಬಾಂಗ್ಲಾದೇಶದಲ್ಲಿಯೂ ಇದು ನಾಲ್ಕು ವರ್ಷಗಳ ಆನರ್ಸ್ ಪದವಿಯಾಗಿದೆ. ಇದರ ಜೊತೆಗೆ, ಬೇರೆ ಬೇರೆ ನಮೂನೆಯ ಡಿಪ್ಲೊಮಾ ಶಿಕ್ಷಣ ಪದವಿಯೂ ಇದೆ. ಪ್ರಾಥಮಿಕ ಮತ್ತು ಪ್ರೌಢಶಿಕ್ಷಣದಲ್ಲಿ ಬೋಧಿಸಲು ಬಯಸುವವರಿಗೆ ಈ ಡಿಪ್ಲೊಮಾ ಪದವಿಯ ಅವಶ್ಯಕತೆ ಇರುತ್ತದೆ. ಇನ್ನು ಶಿಕ್ಷಣ ಪಠ್ಯಕ್ರಮದಲ್ಲಿ ಅಭಿವೃದ್ಧಿ ಹಾಗೂ ಶೈಕ್ಷಣಿಕ ಸಂಶೋಧನೆ ಕ್ಷೇತ್ರದಲ್ಲಿ ಮುಂದೆ ಸಾಗಲು ಬಯಸುವವರು ಕನಿಷ್ಠ ವಿದ್ಯಾರ್ಹತೆಯಾಗಿ ಬಿ.ಇಡಿ ಆನರ್ಸ್ ಪದವಿಯನ್ನು ಪಡೆದಿರಲೇಬೇಕು. ಐರ್ಲೆಂಡ್‍ನಲ್ಲಿಯೂ ನಾಲ್ಕು ವರ್ಷಗಳ ಬ್ಯಾಚುಲರ್ ಪದವಿ ಚಾಲ್ತಿಯಲ್ಲಿದೆ. ಒಟ್ಟಾರೆ, ಪ್ರಪಂಚದ ಮೂಲೆ ಮೂಲೆಯಲ್ಲಿಯೂ ಬಿ.ಇಡಿ ಶಿಕ್ಷಣ ವ್ಯವಸ್ಥೆಯು ಬದಲಾಗುತ್ತಿದೆ ಮತ್ತು ಪ್ರತಿ ಬದಲಾವಣೆಯೂ ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಯ ಭರವಸೆಯನ್ನು ಬಿತ್ತುತ್ತದೆ.

ದೇಶದಲ್ಲಿ ಪ್ರಸ್ತುತ ಜಾರಿಯಾಗಲಿರುವ ನಾಲ್ಕು ವರ್ಷಗಳ ಅವಧಿಯ ಕೋರ್ಸ್‌ನ ಪ್ರಮುಖ ಲಕ್ಷಣಗಳೆಂದರೆ, ಇದೊಂದು ಸಮನ್ವಯ ಶಿಕ್ಷಣ ಕಾರ್ಯಕ್ರಮ. ಇದರಲ್ಲಿ ಕಲಾ ವಿಭಾಗ, ವಿಜ್ಞಾನ ವಿಭಾಗ ಮತ್ತು ವಾಣಿಜ್ಯ ವಿಭಾಗಗಳೆಂಬ ಮೂರು ಜ್ಞಾನ ಶಾಖೆಗಳಿವೆ. ನಾಲ್ಕು ವರ್ಷಗಳ ಬಿ.ಇಡಿ ಅವಧಿಯು ಎಂಟು ಸೆಮಿಸ್ಟರ್‌ಗಳನ್ನು ಒಳಗೊಂಡ ಶೈಕ್ಷಣಿಕ ಕಾರ್ಯಕ್ರಮ.

ಇಷ್ಟರವರೆಗೆ ಬಿ.ಇಡಿ ಶಿಕ್ಷಣದಲ್ಲಿ ಬೋಧನಾ ಕೌಶಲಗಳನ್ನು ಕಲಿಸಲಾಗುತ್ತಿತ್ತು. ಪಾಠ ಬೋಧನೆಯ ವಿಷಯಗಳನ್ನು ಹೆಚ್ಚಾಗಿ ಕಲಿಸಲಾಗುತ್ತಿರಲಿಲ್ಲ. ಇದರಿಂದ, ತರಗತಿಯಲ್ಲಿ ಕಲಿತ ವಿಷಯವನ್ನು ಅನ್ವಯಿಸುವಾಗ ಅಭ್ಯರ್ಥಿಗಳು ವಿಫಲರಾಗುತ್ತಿದ್ದರು. ನಾಲ್ಕು ವರ್ಷಗಳ ಬಿ.ಇಡಿ ಪದವಿಯಲ್ಲಿ ವಿಷಯ ಪ್ರಾವೀಣ್ಯಕ್ಕೂ ಪ್ರಾಮುಖ್ಯ ಇರುವುದರಿಂದ ಉತ್ತಮ ಗುಣಮಟ್ಟವನ್ನು ನಿರೀಕ್ಷಿಸಬಹುದಾಗಿದೆ.

ಈ ಪದವಿಗೆ ಪ್ರವೇಶ ಪಡೆಯಲು ದ್ವಿತೀಯ ಪಿಯುಸಿ ಅಂಕಗಳೇ ಮಾನದಂಡ. ಇಂದಿನ ವಿದ್ಯಾರ್ಥಿಗಳು ಉನ್ನತ ಪದವಿಯ ವ್ಯಾಸಂಗಕ್ಕೆ ಹಾತೊರೆಯುವುದರಿಂದ, ನಾಲ್ಕು ವರ್ಷಗಳ ಪದವಿ ಮುಗಿದ ನಂತರವೂ ಕಲಿಯುವ ಅವಕಾಶ ಇದೆ. ಈ ಮೂಲಕ ಸಂಶೋಧನಾ ಕ್ಷೇತ್ರಕ್ಕೂ ಹೊರಳಿಕೊಳ್ಳಬಹುದು. ಈ ಕೋರ್ಸ್‌, ಸಾಂಪ್ರದಾಯಿಕ ಪದವಿ ಶಿಕ್ಷಣವನ್ನು ಉಳಿಸುವ ಪ್ರಯತ್ನವನ್ನು ಖಂಡಿತವಾಗಿಯೂ ಮಾಡುತ್ತದೆ. ಬಿ.ಇಡಿ ಕಾಲೇಜುಗಳಲ್ಲಿ ಪ್ರಯೋಗಾಲಯವು ಅಸ್ತಿತ್ವಕ್ಕೆ ಬಂದು, ವೃತ್ತಿಪರರು ರೂಪುಗೊಳ್ಳಲು ಅನುವಾಗಿಸುತ್ತದೆ.

ಕೆಲವೊಂದು ಪ್ರತಿಷ್ಠಿತ, ಅಂದರೆ ಕೇವಲ ಬಿ.ಇಡಿ ಪದವಿಗೆ ಮೀಸಲಾದ ಶಿಕ್ಷಣ ವಿದ್ಯಾಲಯಗಳನ್ನು, ಯಾವ ಸಮೀಕ್ಷೆಯನ್ನೂ ನಡೆಸದೆ ಒಮ್ಮಿಂದೊಮ್ಮೆಗೇ ‘ಕಡಿಮೆ ಗುಣಮಟ್ಟ’ ಹೊಂದಿವೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯ ಹೇಳಿರುವುದು ನೋವಿನ ಸಂಗತಿ. ಕಡಿಮೆ ಗುಣಮಟ್ಟ ಎಂದು ಹೇಳಲು ಇರುವ ಮಾನದಂಡಗಳಾವುವು? ಇದರ ಬಗ್ಗೆ ಎಲ್ಲಿಯೂ ಉಲ್ಲೇಖಗಳಿಲ್ಲ. ಇನ್ನು ಹೊಸ ಕೋರ್ಸ್‌ನ ಆರಂಭಕ್ಕೆ ಒಮ್ಮೆ ಎನ್.ಸಿ.ಟಿ.ಇ. (ನ್ಯಾಷನಲ್‌ ಕೌನ್ಸಿಲ್‌ ಫಾರ್‌ ಟೀಚರ್‌ ಎಜುಕೇಷನ್‌) ಅನುಮತಿ ಪಡೆದುಕೊಂಡ ನಂತರ, ಅಂತಹ ವಿದ್ಯಾಲಯಗಳನ್ನು ಯಾರೂ ಕೇಳುವವರೇ ಇಲ್ಲ, ಯಾವುದೇ ರೀತಿಯ ಗುಣಮಟ್ಟದ ತಪಾಸಣೆಯೂ ಇರುವುದಿಲ್ಲ ಎಂದಾದರೆ, ನಾಲ್ಕು ವರ್ಷಗಳ ಬಿ.ಇಡಿ ಕೂಡ ತನ್ನ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಾಗದು. ಒಟ್ಟಿನಲ್ಲಿ, ಬದಲಾವಣೆ ಜಗದ ನಿಯಮ. ಶಿಕ್ಷಣ ಪದ್ಧತಿಯೂ ಇದರಿಂದ ಹೊರತಾಗಿಲ್ಲ. ಹೀಗಾಗಿ ಈ ಬದಲಾವಣೆಯು ಒಂದು ಬಲಿಷ್ಠ ಶಿಕ್ಷಣ ವ್ಯವಸ್ಥೆಗೆ ನಾಂದಿ ಹಾಡಬೇಕು ಎಂಬ ಆಶಯವಂತೂ ಇದ್ದೇ ಇದೆ.

 ಲೇಖಕ: ಸಹಾಯಕ ಪ್ರಾಧ್ಯಾಪಕ, ಶ್ರೀನಿವಾಸ್‌ ಯೂನಿವರ್ಸಿಟಿ ಕಾಲೇಜ್‌ ಆಫ್‌ ಎಜುಕೇಷನ್‌, ಮಂಗಳೂರು

ಚುನಾವಣಾ ಫಲಿತಾಂಶ 2019 | ಹರಿಯಾಣ ಮತ್ತು ಮಹಾರಾಷ್ಟ್ರ ವಿಧಾನಸಭೆ 2019 ಚುನಾವಣೆಗೆ ಸಂಬಂಧಿಸಿದ ಸಮಗ್ರ ಸುದ್ದಿ, ಮಾಹಿತಿ, ವಿಶ್ಲೇಷಣೆ ಇಲ್ಲಿ ಲಭ್ಯ.

ಮಹಾರಾಷ್ಟ್ರ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

ಹರಿಯಾಣ ವಿಧಾನಸಭೆಯ ಫಲಿತಾಂಶಕ್ಕಾಗಿ ಇಲ್ಲಿ ಕ್ಲಿಕ್ ಮಾಡಿ

Post Comments (+)