ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ದ್ವೇಷದಾಟ: ಪರ್ಯಾಯದ ಸಾಧ್ಯತೆ

Last Updated 7 ಆಗಸ್ಟ್ 2019, 20:00 IST
ಅಕ್ಷರ ಗಾತ್ರ

ದೇಶ ಇಂದು ಜಾತಿಕಾರಣದ ಕಡೆ ಸರಿದಾಗಿದೆ. ಜಾತ್ಯತೀತ ಪಕ್ಷವೆಂಬುದು ಈ ರಾಜ್ಯದಲ್ಲಿ ಜಾತಿ ಎಂಬುದನ್ನು ಇಸ್ಪೀಟು ಎಲೆಗಳಾಗಿ ಮಾಡಿಕೊಂಡು, ಕುಟುಂಬ ಪರಿವಾರಕ್ಕೆ ಎಲೆಗಳನ್ನಾಗಿ ಬಿಚ್ಚಿ ನೋಡಿದೆ. ಅದೇ ಕಾರಣಕ್ಕೆ ಸೋಲುತ್ತಿದೆ. ಈ ನಡುವೆ ದಕ್ಷಿಣ ಭಾರತವು ‘ಅಯೋಧ್ಯೆ ರಾಮ’ನನ್ನು ರಾಜಕೀಯವಾಗಿ ಬಿಟ್ಟುಕೊಂಡಿಲ್ಲ ಎಂಬುದಕ್ಕೆ, ನಾಲ್ಕೈದು ಬಾರಿ ಇದೇ ಜಾತಿಕಾರಣವನ್ನು ಟ್ರಂಪ್ ಕಾರ್ಡನ್ನಾಗಿ ಬಿಟ್ಟರೂ ಆ ಪಕ್ಷ ಅತಂತ್ರ ಸ್ಥಿತಿಯಲ್ಲಿಯೇ ಇದೆ.

ಗಾಂಧೀಜಿ, ಕರ್ನಾಟಕಕ್ಕೆ ಬಂದಾಗ ಬಸವಣ್ಣನ ತತ್ವಕ್ಕೆ ಬೆರಗಾಗಿದ್ದರು. ವೈದಿಕ ಅನಿಷ್ಟಗಳಿಗೆ ಸಡ್ಡು ಹೊಡೆದು ನಿಂತ ಬ್ರಾಹ್ಮಣ ಜೀವವೊಂದು ಬಸವಧರ್ಮ ಸ್ಥಾಪಿಸಿದ್ದು ಒಂದು ಜಗತ್ ಅಚ್ಚರಿ. ಅದನ್ನು ಪಾಲಿಸಬೇಕಾದವರು ಜಾತಿ ಎಂಬ ಕಾರಣಕ್ಕೆ ಎರಡು ದೋಣಿಗಳಲ್ಲಿ ಕಾಲಿಟ್ಟಿರುವುದು ಬಸವಣ್ಣನಿಗೆ ಮಾಡುವ ಅಪಚಾರ.

ದೇಶದಲ್ಲೀಗ ರಾಜಕೀಯವಾಗಿ ಎರಡು ಪ್ರಮುಖ ಪಕ್ಷಗಳಲ್ಲಿ ಒಂದು ಅಧಿಕಾರದಲ್ಲಿ ಇರಬೇಕಾದ ಸ್ಥಿತಿಯಿದೆ. ಒಂದು ಪಕ್ಷವಂತೂ ಕುರ್ಚಿ ಮೇಲೆ ಅಪಾರ ದಿನ ಕುಳಿತು ಜಡ್ಡುಗಟ್ಟಿ, ಅದರ ಹಿನ್ನೆಲೆಯೇ ಮರೆತುಹೋಗಿ ಅರೆಪ್ರಜ್ಞಾ ಅವಸ್ಥೆಯಲ್ಲಿದೆ. ಆಳುತ್ತಿರುವ ಪಕ್ಷವಂತೂ ‘ಜೈ ಶ್ರೀರಾಮ್’ ಎಂದು ಇಡೀ ದೇಶದ ಜನ ದೇಶಭಕ್ತಿಯಾಗಿ ಕೂಗಿ ಹೇಳಬೇಕು ಎಂದು ಚಾಟಿ ಹಿಡಿದು ನಿಂತಿದೆ. ಇಲ್ಲದಿದ್ದರೆ ‘ಈ ಹಿಂದೂ ದೇಶ ಬಿಟ್ಟು ಹೊರಡಿ’ ಎಂದು ಬಾರಿಸುತ್ತಿದೆ.

ಶ್ರೀರಾಮನು ಜಗದೇಕ ರಾಮನಾಗಬೇಕೆಂದು ಗಾಂಧೀಜಿ ಹೇಳಿದರು. ವಾಲ್ಮೀಕಿ ರಾಮನನ್ನು ಸಾರ್ವತ್ರಿಕ ಶ್ರೀರಾಮನನ್ನಾಗಿ ಕುವೆಂಪು ದರ್ಶನಕ್ಕೊಡ್ಡಿದರು. ಇದನ್ನು ಪಾಲಿಸಿದರೆ ಸಿಂಹಾಸನಕ್ಕೇರಲು ಇರುವ ಅಡ್ಡದಾರಿಗಳು ತಪ್ಪಿಹೋಗುತ್ತವೆಂಬ ಭಯ ಕೆಲವರಲ್ಲಿದೆ. ಜಗತ್ತಿನ ಯಾವುದೇ ದೇಶದಲ್ಲಿ ಭಾರತ ಅಥವಾ ಇಂಡಿಯಾ ಎಂದಾಕ್ಷಣ ‘ಗಾಂಧೀಜಿ ಭಾರತ’ ಎಂದು ನೆನಪು ಮಾಡಿಕೊಳ್ಳುವಷ್ಟು, ಶ್ರೀರಾಮನ ಭಕ್ತರಾಗಿದ್ದ ಗಾಂಧೀಜಿ ತತ್ವಗಳು ನಮ್ಮಲ್ಲುಂಟು. ಅವು ಬಸವನ-ಬುದ್ಧನ ತತ್ವಗಳು. ಅವೇ, ಜನಸಮೂಹವನ್ನು ವಿಶ್ವಮಾನವ ತತ್ವದಲ್ಲಿ ಕಾಯುವ ಊರುಗೋಲುಗಳು.

ಇವಲ್ಲದೆ ಚಾಣಕ್ಯನೆಂದೋ ಮನು ಎಂದೋ ದೇಶದಾಚೆ ನಿಂತು ಉಚ್ಚರಿಸಿದರೆ, ಇದೇನು ಇವರು ಮನುಷ್ಯರೇ ಎಂದು ಕೇಳಿಬಿಡಬಹುದು. ಆದರೆ, ನಾಯಕರು ಏರಿ ಕೂರುವ ಸಿಂಹಾಸನಕ್ಕೆ ಈ ದೇಶದ ಜನರು ಇದೇ ಮನು, ಚಾಣಕ್ಯರ ರೂಪಕದಲ್ಲಿ ಊರುಗೋಲಾಗಿ ಒಂದು ಕಾಲನ್ನು ನಿಲ್ಲಿಸುತ್ತಿದ್ದಾರೆ ಯಾಕೆ ಎಂಬ ಪ್ರಶ್ನೆ ಏಳುತ್ತದೆ. ಅದಕ್ಕೆ ಮುಖ್ಯ ಕಾರಣ, ರಾಷ್ಟ್ರೀಯತೆ ಎಂಬುದರ ಅಪತಿಳಿವಳಿಕೆ. ಬರ್ಟ್ರಂಡ್‌ ಹೇಳಿದಂತೆ, ರಾಷ್ಟ್ರೀಯತೆ ಎಂಬುದು ಸಮೂಹ ಸನ್ನಿಗೆ ಇನ್ನೊಂದು ಹೆಸರು. ಮಾರ್ಕ್ಸ್ ಹೇಳಿದಂತೆ, ಧರ್ಮವೆಂಬುದು ಅಫೀಮು. ಈಗಂತೂ ಎಲ್ಲರ ಅಂಗೈ ಯಲ್ಲಿ ಮೊಬೈಲ್ ಇದೆ. ಅದರೊಳಗಿನ ‘ದ್ವೇಷ’ ಎಂಬ ಆಟವು ಯುವಜನಾಂಗಕ್ಕೆ ಸುಲಭವಾಗಿ ತಲುಪುವ ಎಲ್ಲಾ ವ್ಯವಸ್ಥೆ ಇದೆ. ಸುಶಿಕ್ಷಿತ ಸಮುದಾಯವಂತೂ ಇಂಡಿಯಾದಿಂದ ಅಮೆರಿಕದವರೆಗೆ ಧಾರ್ಮಿಕ–ರಾಜಕೀಯ ಮಾಫಿಯಾದ ಬಲೆಯೊಳಗೆ ಸಿಕ್ಕಿಹಾಕಿಕೊಂಡಿದೆಯೇನೊ ಎಂಬ ಅನುಮಾನ ಮೂಡುತ್ತದೆ.

ಈ ದೇಶದ ಮತದಾರರಲ್ಲಿ ಹಲವರು ಸ್ವತಃ ತೀರ್ಮಾನ ತೆಗೆದುಕೊಳ್ಳುವಷ್ಟು ಪ್ರಬುದ್ಧರಾಗಿಲ್ಲ. ಚುನಾವಣೆಯಲ್ಲಿ ಮತದಾನ ಎಂಬುದು ಸಮೂಹ ಸನ್ನಿಯಾಗಿದೆ. ವಿದ್ಯಾವಂತ ಸಮೂಹ ಸಹ ಇದಕ್ಕೆ ಹೊರತಾಗಿಲ್ಲ. ರಾಷ್ಟ್ರೀಯತೆ ಎಂದರೆ ಸರ್ವ ಜನರ ದೇಶಿ ಅಭಿವೃದ್ಧಿ. ಜಲ– ನೆಲ– ಗಾಳಿಯ ಅಭಿವೃದ್ಧಿ. ಅದೇ ಜಿಡಿಪಿ ಅಭಿವೃದ್ಧಿ. ಅರಳಿ ಬೀಜ ಬೇರು ಬಿಡುವುದು ಮನುಷ್ಯ ನಿರ್ಮಿಸಿದ ಕಟ್ಟಡವೆಂಬುದರ ಸಂದಿಯಲ್ಲಿ. ಕಾಲಮಾನದಲ್ಲಿ ಆ ಕಟ್ಟಡವನ್ನೇ ಬೀಳಿಸುವ ಶಕ್ತಿ ಅಣು ಗಾತ್ರದ ಬೀಜಕ್ಕಿರುತ್ತದೆ. ವಿಜ್ಞಾನ ಸ್ವರೂಪದ ಅಭಿವೃದ್ಧಿಯು ಯಾಂತ್ರಿಕ. ಗಾಂಧೀಜಿ ಹೇಳಿದಂತೆ ‘ಮಾನವೀಯ ಮೌಲ್ಯವಿರದ ವಿಜ್ಞಾನದಿಂದ ಯಾವ ಉಪಯೋಗವೂ ಇಲ್ಲ’.

ಬಹುತೇಕ ರಾಜಮಹಾರಾಜರು ಎಷ್ಟೇ ಐಷಾರಾಮಿಯಾಗಿ ಬದುಕಿದರೂ ಜನರ ಸರಳ ಜೀವನಕ್ಕೆ ಅಗತ್ಯವಿರುವ ಕೆರೆಕುಂಟೆ, ಬಾವಿ ಇತ್ಯಾದಿಗಳ ವ್ಯವಸ್ಥೆ ಮಾಡಿದ್ದರು. ಜನರು ಇದ್ದಲ್ಲಿಯೇ ಇರಲು ನೆರವಾಗಿದ್ದರು. ಆಗಲೂ ಐಷಾರಾಮಿಯಾಗಿ ಬೀದಿಬೀದಿಯಲ್ಲಿ ರತ್ನ, ವಜ್ರ, ವೈಢೂರ‍್ಯದ ಸಂತೆ ಮಾಡಿದವರು ಹಾಳು ನಗರವಾಗಿಸಿದರು. ಈಗಿನ ರಾಜಕೀಯ ದೊರೆಗಳು ಇಡೀ ದೇಶದ ಸಂಪತ್ತನ್ನು, ಆಗ ರೈತರು ಹಗೇವಿನಲ್ಲಿ ಆಹಾರ ತುಂಬಿಕೊಳ್ಳುತ್ತಿದ್ದ ರೀತಿಯಲ್ಲಿ ತುಂಬಿಕೊಂಡು, ಅದರ ಮೇಲೆ ಸಿಂಹಾಸನವೇರಿ ಕುಳಿತು
ಬಿಟ್ಟಿದ್ದಾರೆ. ಈ ಸಿರಿಗರ ಹೊಡೆದ ಹಗೇವು ಬಡವರು ತಿನ್ನುವ ಬೀಜವಾಗಿಲ್ಲ. ಲಕ್ಷ್ಮಿ ಚಂಚಲೆ ಎಂಬ ಅರಿವು ಈ ಬಾಚುವಿಕೆಗೆ ಅರ್ಥವಾಗುವುದೇ ಇಲ್ಲ. ಈ ನಡುವೆ ಗಾಂಧಿ ಭಾರತದಲ್ಲಿ ಅಂಬೇಡ್ಕರ್ ನೀಡಿದ ಸಂವಿಧಾನವನ್ನು ಅಳಿಸಿಹಾಕಲಾಗುವುದಿಲ್ಲ. ಕಾಲ ಕಾಯುತ್ತಿದೆ. ಈಗಿರುವವರು ಬದಲಾಗದಿದ್ದರೆ, ಮತ್ತೆರಡು ಪರ್ಯಾಯ ಪಕ್ಷಗಳನ್ನು ರೂಪಿಸುವ ಬೀಜಗಳು
ಮತದಾರರ ಮನದಲ್ಲಿ ಮೊಳಕೆ ಒಡೆಯಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT