ಆ ಅಂಬಾನಿ ಅಲ್ಲ!

ಮಂಗಳವಾರ, ಜೂಲೈ 16, 2019
23 °C

ಆ ಅಂಬಾನಿ ಅಲ್ಲ!

Published:
Updated:
Prajavani

ಅಕಾಲ ವೃದ್ಧಾಪ್ಯಕ್ಕೀಡಾದ ವ್ಯಕ್ತಿಯೊಬ್ಬರು ಇಸ್ರೊ ಮುಖ್ಯಸ್ಥರ ಕಾರನ್ನು ಅಡ್ಡಗಟ್ಟಿದರು. ಚೂಪು ಮೂಗು, ಬೋಳುನೆತ್ತಿ, ಧೋತರ, ನೆಹರೂಕೋಟು... ಎಲ್ಲೋ ನೋಡಿದ್ದೇನಲ್ಲ ಎಂದು ಮುಖ್ಯಸ್ಥರು ತಲೆ ಕೆರೆದುಕೊಂಡರು.

‘ಅಡ್ಡಬಿದ್ದೆ ಬುದ್ಯೋರ... ನಾನು ಸಾಮಿ... ಅದೇ ಶ್ರೀಸಾಮಾನ್ಯ...’ ಪೆಚ್ಚುನಗೆ ಬೀರಿದ ವ್ಯಕ್ತಿ.

ಮುಖ್ಯಸ್ಥರಿಗೆ ನೆನಪಾಯಿತು. ‘ಅಂದ್ರೆ ಆರ್‌.ಕೆ. ಲಕ್ಷ್ಮಣರ ಕಾಮನ್‌ಮ್ಯಾನ್... ಆದರೆ ಲಕ್ಷ್ಮಣರು ತೀರಿಕೊಂಡು ನಾಲ್ಕು ವರ್ಷದ ಮೇಲಾಯಿತಲ್ಲಯ್ಯ...’

‘ಅವ್ರು ಪುಣ್ಯವಂತ್ರು ಸತ್ತು ಸ್ವರ್ಗ ಸೇರಿದ್ರು, ಭಾರತದ ಶ್ರೀಸಾಮಾನ್ಯನಿಗೆ ಆ ಯೋಗಾಯೋಗವೆಲ್ಲಿ... ನಾವು ಅಮರ ಜೀವಚ್ಛವಗಳು’ ಶ್ರೀಸಾಮಾನ್ಯ ಅಲವತ್ತುಕೊಂಡ.

‘ಅದೇನೋ ಆಕಾಸದಾಗೆ ಮನೆ ಕಟ್ಟುಸ್ತೀರಂತೆ... ಇಲ್ಲಂತೂ ಆಶ್ರಯ ಮನಿನೂ ಸಿಗಲಿಲ್ಲ. ಮ್ಯಾಗೆ ಅಷ್ಟಕೊಂದು ಜಾಗ ಅದಲ್ಲ ಸಾಮಿ... ನಮಗೂ ಸೈಟೋ, ಮನಿನೋ ಮಾಡಿಕೊಡಿ’  ಶ್ರೀಸಾಮಾನ್ಯ ಹಲ್ಲುಗಿಂಜಿದ.

‘ಅದು ಅಂಬಾನಿ ಕಣಯ್ಯಾ’.

‘ಅಂಬಾನಿಗೋಳಿಗೆ ಅಲ್ಲೂ ಅರಮನೆ ಕಟ್ಟಿಸತೀರ?’ ಶ್ರೀಸಾಮಾನ್ಯ ಹೌಹಾರಿಬಿಟ್ಟ.

‘ಆ ಅಂಬಾನಿ ಅಲ್ಲಪ್ಪ... ಅದು ನಾನೂರು ಕಿ.ಮೀ. ಮೇಲಿರೋ ಅಂತರಿಕ್ಷ ಬಾಹ್ಯಾಕಾಶ ನಿಲ್ದಾಣ. ವಿಜ್ಞಾನಿಗಳು ಮಾತ್ರ ಹೋಗಿಬರತಾರ’. ಮುಖ್ಯಸ್ಥರು ಹೆಮ್ಮೆಯಿಂದ ವಿವರಿಸಿದರು.

‘ಅಷ್ಟ್ ಎತ್ತರದಾಗೆ ದೇಸೀ ಮಂದಿನೇ ಸೇರಿಕ್ಯಂಡು ನಿಲ್ದಾಣ ಕಟ್ಟತೀರ. ಮತ್ತೆ ಬರೀ ಇಪ್ಪತ್ತು ಮೂವತ್ತು ಅಡಿ ಮಲದ ಗುಂಡಿ ಒಳಗೆ ಇಳಿಸಿ ಸಾಫ್ ಮಾಡೋ ಮಶಿನ್ ಯಾವಾಗ ಕಂಡ್ ಹಿಡಿತೀರ ಸಾಮಿ?’

‘ಅಂತಾ ಮಶಿನ್ ಕಂಡ್‌ಹಿಡಿಯೋದು ಸ್ವಚ್ಛ ಭಾರತ ಮಿಶನ್ ಕೆಲಸ ಕಣಯ್ಯಾ’ ಎನ್ನುತ್ತ ಮುಖ್ಯಸ್ಥರು ಕಾರಿಳಿದು ಒಳಗೋಡಿದರು!

ಅಲ್ಲಿಂದ ಶ್ರೀಸಾಮಾನ್ಯನ ಸವಾರಿ ಮಹಾಕಾಳಿ ಹೋಮ ಮಾಡುತ್ತಿರುವಲ್ಲಿಗೆ ಚಿತ್ತೈಸಿತು. ಸಾಹಿತಿಗಳ ಭಾವಚಿತ್ರದ ಮೇಲೆ ಮೂತ್ರಿಸುತ್ತಿದ್ದ ಸ್ವಾಮೀಜಿ ಪಕ್ಕ ನಿಂತ. ‘ಬುದ್ಯೋರ... ಸಾಹಿತಿಗಳ ಫೋಟೊ ಮ್ಯಾಲಷ್ಟೇ ಯಾಕೆ... ಈ ಶ್ರೀಸಾಮಾನ್ಯನ ಮೇಲೂ ಉಚ್ಚೆಹೊಯ್ರಿ. ನಮ್ಮನ್ನೂ ವಸಿ ಬ್ಯಾರೆ ಛಲೋ ದೇಶಕ್ಕೆ ಗಡೀಪಾರು ಮಾಡಿಬುಡಿ. ದೇಸ ಎಷ್ಟು ಕ್ಲೀನಾಗತದೆ ಅಲ್ಲವರಾ’ ಎಂದ!

ಬರಹ ಇಷ್ಟವಾಯಿತೆ?

 • 11

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !