ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ| ಮಜ್ಜಿಗೆ ಹುಳಿ, ಕೋಳಿ ಸಾರು ಹಳತಾಯಿತು!

ಕೊರೊನಾ ತಂದೊಡ್ಡಿರುವ ಸಂಕಟಗಳಲ್ಲಿ ಎಲ್ಲರಿಗೂ ಕಾಣುವಂಥವು ಕೆಲವಾದರೆ, ಲೋಕದ ಕಣ್ಣಿಗೆ ಕಾಣದ ಹೊಟ್ಟೆಯ ಸಂಕಟದ ಕಥನಗಳು ಹಲವು ಇವೆ
Last Updated 20 ಮೇ 2020, 22:16 IST
ಅಕ್ಷರ ಗಾತ್ರ

ಕೋವಿಡ್‌– 19 ತಂದೊಡ್ಡಿದ ತುರ್ತು ಲಾಕ್‍ಡೌನ್, ವಲಸೆ ಕಾರ್ಮಿಕರ ಬದುಕನ್ನು ಅತಂತ್ರಗೊಳಿಸಿದ ಕರುಣಾಜನಕ ಕಥನಗಳಿಗೆ ದೇಶದ ಬೀದಿಗಳು ಇಂದಿಗೂ ಸಾಕ್ಷಿಯಾಗುತ್ತಲೇ ಇವೆ. ಇಡೀ ಭಾರತ ಅವರ ಹೀನಾಯ ಸ್ಥಿತಿಯನ್ನು ನೋಡುತ್ತಿದೆ. ಅವರ ಮಹಾವಲಸೆಯ ದಯನೀಯ ಸ್ಥಿತಿಯನ್ನು ನೋಡಿದವರ ಮನಸು ಒಂದರೆಗಳಿಗೆಯಾದರೂ ಒದ್ದಾಡದಿರಲು ಸಾಧ್ಯವೇ ಇಲ್ಲ.

ಇದು ಎಲ್ಲರಿಗೂ ಕಾಣುವ ಸಂಕಟವಾದರೆ, ಲೋಕದ ಕಣ್ಣಿಗೆ ಕಾಣದ ಹೊಟ್ಟೆಯ ಸಂಕಟದ ಕಥನಗಳೂ ಇವೆ. ಕೋವಿಡ್– 19 ತಂದಿತ್ತ ಕಷ್ಟಗಳಲ್ಲಿ ನಮ್ಮ ಕಣ್ಣಿಗೆ ಕಾಣುತ್ತಿರುವುದು ಐಸ್‍ಬರ್ಗಿನ ತುದಿ ಮಾತ್ರ. ಯಾರಿಗೂ ಅರಿವಾಗದ ಹಾಗೂ ಅಷ್ಟು ಸುಲಭವಾಗಿ ಅರ್ಥವೂ ಆಗದ ಸಮಸ್ಯೆಗಳು, ಮಳೆ ಹನಿಸಿದ ಟಾರುರೋಡಿನಿಂದ ಏಳುವ ಹಬೆಯಂತೆ ಇದೀಗ ಹಗೂರಕ್ಕೆ ಏಳಲು ಶುರುವಾಗಿವೆ.

ಹೌದು, ಅದು ಚಿಕ್ಕಪುಟ್ಟ ನೌಕರಿ, ವ್ಯಾಪಾರ ಇತ್ಯಾದಿ ಮಾಡುವ ಮಧ್ಯಮವರ್ಗದವರ ಆರ್ಥಿಕ ಸಂಕಷ್ಟ. ಅದರಲ್ಲೂ ಮಲೆನಾಡಿನ ಮಧ್ಯಮವರ್ಗದವರದ್ದು ಮತ್ತೊಂದು ಥರದ್ದೇ ಆದ ಫಜೀತಿ.ಇಲ್ಲಿಂದ ಬೆಂಗಳೂರಿಗೆ ಹೋಗಿ ಬದುಕು ಕಟ್ಟಿಕೊಂಡಿದ್ದವರಲ್ಲಿ ಬಹುತೇಕರು ಸಣ್ಣ ಪುಟ್ಟ ಅಂಗಡಿ ಇಟ್ಟುಕೊಂಡಿದ್ದವರು, ಚಿಕ್ಕ ಉದ್ಯೋಗ ಮಾಡಿಕೊಂಡಿದ್ದವರು. ಅವರೆಲ್ಲ ಊರಿಗೆ ಮರಳಿ ಎರಡು ತಿಂಗಳೇ ಕಳೆದುಹೋಗಿವೆ. ಕೋಳಿ ಸಾರು, ಮಜ್ಜಿಗೆ ಹುಳಿ, ಹಳ್ಳಿಯ ಹೊಸ ರುಚಿ, ತೋಟದ ಬದಿಯ ಫೋಟೊಗಳು ಎಲ್ಲವೂ ಹಳತಾಗಿವೆ. ಅದೇ ರೀತಿ ಬೆಂಗಳೂರಿನಿಂದ ಆಗಾಗ್ಗೆ ಬಂದು ನಾಲ್ಕು ದಿನ ಇದ್ದು ಹೋಗುತ್ತಿದ್ದ ಕುಟುಂಬದ ಸದಸ್ಯರೂ ಹಳಬರಾಗಿದ್ದಾರೆ. ಹಾಗಾಗಿ ಇದೀಗ ನಿಜವಾಗಿ ಸಂಕಷ್ಟದ ಸಮಯ.

ಮಲೆನಾಡಿನ ಮಧ್ಯಮವರ್ಗವೆಂದರೆ, ಹತ್ತು ಎಕರೆಗಿಂತ ಕಡಿಮೆ ಅಡಿಕೆ ತೋಟ ಹೊಂದಿರುವವರೇ. ಒಬ್ಬನೇ ಮಗ ಇದ್ದರೆ ಸಮಸ್ಯೆಯಿಲ್ಲ. ಇಬ್ಬರು– ಮೂವರು ಗಂಡುಮಕ್ಕಳಿದ್ದರೆ ಒಬ್ಬ ಮಾತ್ರ ಮನೆಯಲ್ಲಿದ್ದು ಇನ್ನಿಬ್ಬರು ಹೊರಗಡೆ ಇರುತ್ತಾರೆ ಎಂದುಕೊಳ್ಳೋಣ. ಅವರು ಹಬ್ಬ ಹರಿದಿನಗಳಲ್ಲಿ ಊರಿಗೆ ಬರುತ್ತಾರೆ. ಒಂದಿಷ್ಟು ಅಕ್ಕಿಯೋ ಕಾಳು ಮೆಣಸೋ ಅಥವಾ ಕಷ್ಟಕಾಲದಲ್ಲಿ ಒಂದಿಷ್ಟು ಹಣವನ್ನೋ ಪಡೆದುಕೊಳ್ಳುತ್ತಿರುತ್ತಾರೆ. ಊರಲ್ಲೇ ಇದ್ದವರು ಕಷ್ಟವೋ ಸುಖವೋ ಸಂಸಾರ ನಡೆಸಿಕೊಂಡು ಹೋಗುತ್ತಿರುತ್ತಾರೆ. ಕೆಲವು ಕಡೆ ಬೆಂಗಳೂರಿ
ನಲ್ಲಿದ್ದವರೇ ಮನೆಕಡೆ ಇರುವವರಿಗೆ ಸಹಾಯ ಮಾಡುತ್ತಿರುತ್ತಾರೆ. ಒಟ್ಟಿನಲ್ಲಿ ದೂರ ಇದ್ದುಕೊಂಡೇ ಹೇಗೋ ಬಾಂಧವ್ಯ, ಸಂಸಾರ ನಡೆದುಕೊಂಡು ಹೋಗುತ್ತಿತ್ತು. ಆದರೀಗ ಕೊರೊನಾ ತಂದಿಟ್ಟ ಆರ್ಥಿಕ ಸಂಕಷ್ಟಕ್ಕೆ ಬಡವರು, ಮಧ್ಯಮವರ್ಗದವರ ಬದುಕು ಮೂರಾಬಟ್ಟೆಯಾಗಿ ಹೋಗುತ್ತಿದೆ.

ಕೆಲವರು ಸುತ್ತಿ ಬಳಸಿ ಅಕ್ಕ ಪಕ್ಕದವರ ಹತ್ತಿರ, ಇನ್ನು ಇಲ್ಲೇ ಇರೋದೋ ಏನೋ ಎಂದು ಸೂಚ್ಯವಾಗಿ ಹೇಳುತ್ತಿದ್ದರೆ, ಇನ್ನು ಕೆಲವರು ಆಸ್ತಿ ಪಾಲು ಮಾಡಿಕೊಳ್ಳಲು ನೇರವಾಗಿಯೇ ಕೇಳುತ್ತಿದ್ದಾರೆ. ಹೀಗಾಗಿ, ಕೋರ್ಟ್‌ಗಳಲ್ಲಿ ಈಗ ಭೂವ್ಯಾಜ್ಯದ ಕೇಸುಗಳು ಹೆಚ್ಚಬಹುದು. ಹಣದ ಮುಗ್ಗಟ್ಟು ಸಂಬಂಧಗಳನ್ನು ಕಹಿಯಾಗಿಸುತ್ತಿದೆ. ಇಲ್ಲಿ ಯಾರೂ ಯಾರನ್ನೂ ದೂಷಿಸುವಂತಿಲ್ಲ. ಎಲ್ಲರದ್ದೂ ಉಳಿವಿಗಾಗಿ ಹೋರಾಟ. ಅನಿವಾರ್ಯದಿಂದ, ಹಣದ ಮುಗ್ಗಟ್ಟಿನಿಂದ ಆಡಲಾಗದೇ ಅನುಭವಿಸಲಾಗದೇ ಇರುವವರ ಸಂಕಟಗಳು ಒಂದೆಡೆಯಾದರೆ ಮನುಷ್ಯತ್ವವನ್ನು ಮರೆತಂತೆ ಆಡುವ ಮತ್ತೊಂದು ಥರದ ವ್ಯಕ್ತಿಗಳೂ ಇದ್ದಾರೆ.

ಮಲೆನಾಡಿನ ಕುಗ್ರಾಮದ ಮನೆಯೊಂದರಲ್ಲಿ ನಡೆದ ನೈಜ ಸಂಗತಿಯಿದು. ಮನೆಯ ಒಬ್ಬ ಮಗ ಮತ್ತು ಹೆಂಡತಿ ಇಬ್ಬರೂ ಸರ್ಕಾರಿ ನೌಕರರು, ಊರಿನಲ್ಲಿಯೇ ಇರುವವರು. ಮತ್ತಿಬ್ಬರು ಬೆಂಗಳೂರಿನಲ್ಲಿ ಹೋಟೆಲಿನಲ್ಲಿಯೋ ಗ್ಯಾರೇಜಿನಲ್ಲಿಯೋ ಕೆಲಸ ಮಾಡುತ್ತಿದ್ದವರು. ಬೆಂಗಳೂರಿನಲ್ಲಿದ್ದವರು ಲಾಕ್‍ಡೌನ್ ಘೋಷಣೆ ನಂತರ ಸಂಸಾರ ಸಮೇತ ಮನೆಗೆ ಮರಳಿದ್ದಾರೆ. ಅವರು ಬರುತ್ತಿದ್ದಂತೆಯೇ, ಮನೆ
ಯಲ್ಲಿದ್ದ ಸರ್ಕಾರಿ ಸಂಬಳ ಪಡೆಯುವಾತ ಹೆಂಡತಿಯ ತವರುಮನೆಗೆ ಕುಟುಂಬ ಸಮೇತ ಹೋಗಿ ಉಳಿದಿದ್ದಾನೆ. ಮನೆಯಲ್ಲಿ ದಿನಸಿ ಗಿನಸಿ ಏನನ್ನೂ ಇಡದೆ.

ಈ ಸಂಗತಿ ಮನುಷ್ಯರಾದವರ ಎದೆಯ ಆಳವನ್ನು ಗಾಸಿಗೊಳಿಸದೇ ಇರದು. ಹೀಗೆ ನಿರ್ಲಿಪ್ತವಾಗಿ ಹೊರಟುಹೋದ ಆ ವ್ಯಕ್ತಿಯ ನಡೆಯು ಸಂಬಂಧಗಳ ಶಿಥಿಲತೆಯನ್ನು ಅರ್ಥಪೂರ್ಣವಾಗಿ ನಮ್ಮೆದುರು ಬಿಚ್ಚಿಡುತ್ತದೆ. ಮನೆಗೆ ಬಂದವರ ಹತ್ತಿರ ಒಂದೆರಡು ತಿಂಗಳು ದಿನಸಿಗಾಗುವಷ್ಟೂ ಹಣವಿರಲಿಲ್ಲವೇ ಎಂಬಂಥ ಪ್ರಶ್ನೆಗಳು ಇಲ್ಲಿ ಅನಗತ್ಯ (ಇರಲಿಲ್ಲ ಎಂಬುದು ಅಸಲಿ ವಿಚಾರ). ಆದರೆ ಚಿಕ್ಕಪುಟ್ಟ ನೌಕರಿ ಮಾಡುವ ಅಣ್ಣ– ತಮ್ಮಂದಿರು ಕೆಲಸವನ್ನೂ ಕಳೆದುಕೊಂಡು, ಸದ್ಯಕ್ಕೆ ಕೆಲಸ ಸಿಗುವ ಭರವಸೆಯನ್ನೂ ಕಳೆದುಕೊಂಡು ಮನೆಗೆ ಬಂದಾಗ, ಅವರ ಹೆಗಲ ಮೇಲೆ ಕೈಯನ್ನಿಟ್ಟು ‘ನೋಡುವಾ ಮಾರಾಯ, ನನಗೆ ಸಂಬಳ ಬರುವಷ್ಟು ದಿನ ಊಟಕ್ಕಂತೂ ತೊಂದರೆ ಇಲ್ಲ, ಮುಂದೆ ನೋಡೋಣ. ಎಲ್ಲರಿಗೂ ಆಗಿದ್ದು ನಮಗೂ ಆಗುತ್ತದೆ’ ಎಂದು ಧೈರ್ಯ ತುಂಬುವ ಕೆಲಸ ಮಾಡಬೇಕಿತ್ತು ಆ ಸಹೋದರ ಎಂದು ನಮಗನ್ನಿಸುವುದು ಒಂದು ಸಾಮಾನ್ಯ ಸಂಗತಿ. ಆದರೆ ಇಂದು ಅದು ಬಹುದೊಡ್ಡ ನಿರೀಕ್ಷೆಯಾಗಿದೆ. ಕೊರೊನಾ ಬಲಿ ಪಡೆಯುತ್ತಿರುವುದು ಜೀವಗಳನ್ನು ಮಾತ್ರವಲ್ಲ, ಸಂಬಂಧಗಳನ್ನು, ಭವಿಷ್ಯದ ಭರವಸೆಯನ್ನು ಕೂಡ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT