ಭಾನುವಾರ, ಸೆಪ್ಟೆಂಬರ್ 26, 2021
23 °C
ದೇಶದ ಭ್ರಷ್ಟಾಚಾರ ನಿರ್ಮೂಲನಾ ಸಾಮರ್ಥ್ಯದ ಬಗ್ಗೆ ಜನ ನಿರಾಶಾವಾದಿಗಳಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ

ಸಂಗತ: ಭ್ರಷ್ಟಾಚಾರವೆಂಬ ವೈರಸ್‌ಗೆ ಮದ್ದೆಲ್ಲಿ?

ಡಾ. ಸರ್ಫ್ರಾಜ್‌ ಚಂದ್ರಗುತ್ತಿ Updated:

ಅಕ್ಷರ ಗಾತ್ರ : | |

Prajavani

ಭ್ರಷ್ಟಾಚಾರ ಎಂಬುದು ವಿಶ್ವವ್ಯಾಪಿಯಾದ ರೋಗ ನಿಜ. ಆದರೂ ಮೂವತ್ಮೂರು ಕೋಟಿ ದೇವತೆಗಳು ನೆಲೆಸಿದ್ದಾರೆಂದು ಹೇಳಲಾಗಿರುವ ನಮ್ಮ ದೇಶದಲ್ಲೇಕೆ ನೈತಿಕತೆ ಹಿಂದೆ ಸರಿದು, ಇಷ್ಟೊಂದು ಪ್ರಮಾಣದಲ್ಲಿ ಭ್ರಷ್ಟಾಚಾರ ವಿಜೃಂಭಿಸುತ್ತಿದೆ ಎಂಬುದು ಅರ್ಥವಾಗುವುದಿಲ್ಲ. ಬದುಕೇ ಬೇರೆ ಧರ್ಮವೇ ಬೇರೆ ಎಂಬ ನೀಚ ಮನಃಸ್ಥಿತಿಯಿಂದಾಗಿ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ ಭಾರಿ ಗಂಡಾಂತರ ಉಂಟಾಗಿರುವುದಂತೂ ಸತ್ಯ.

ಕೊಪ್ಪಳದಲ್ಲಿ ಯಶಸ್ವಿ ಟೌನ್‍ಶಿಪ್‍ನ ಕುಡಿಯುವ ನೀರು ಮತ್ತು ಒಳಚರಂಡಿ ಕಾರ್ಯಕ್ಕೆ ಅನುಮತಿ ನೀಡಲು ಮುಂಗಡವಾಗಿ ಲಂಚ ಪಡೆದುಕೊಳ್ಳುವಾಗ ಜಲಮಂಡಳಿಯ ಮುಖ್ಯ ಎಂಜಿನಿಯರ್‌ ಒಬ್ಬರನ್ನು ಭ್ರಷ್ಟಾಚಾರ ನಿಗ್ರಹ ದಳ ಇತ್ತೀಚೆಗೆ ಬಂಧಿಸಿರುವುದು ವರದಿಯಾಗಿತ್ತು. ಪಿಎಚ್‍.ಡಿ ವಿದ್ಯಾರ್ಥಿಯೊಬ್ಬರಿಂದ ಲಂಚ ಪಡೆದ ಆರೋಪ ಸಾಬೀತಾದ್ದರಿಂದ ವಿಶ್ವವಿದ್ಯಾಲಯದ ಪ್ರಾಧ್ಯಾಪಕಿಯೊಬ್ಬರಿಗೆ ಜೈಲುವಾಸ ಸಮೇತ ದಂಡ ವಿಧಿಸಲಾಗಿರುವ ಸುದ್ದಿ ಸದ್ದುಮಾಡಿದೆ. ಜಮೀನಿನ ಮ್ಯುಟೇಷನ್ ಮಾಡಿಕೊಡಲು ತಹಶೀಲ್ದಾರರೊಬ್ಬರು ಲಂಚಕ್ಕೆ ಬೇಡಿಕೆಯಿಟ್ಟು, ಮುಂಗಡ ಸ್ವೀಕರಿಸುವಾಗ ಎಸಿಬಿ ಬಲೆಗೆ ಬಿದ್ದಿದ್ದಾರೆ.

ಇಂತಹ ನೂರಾರು ಘಟನೆಗಳಿಗೆ ಈ ದೇಶದ ಪ್ರಜೆ ಮೂಕಪ್ರೇಕ್ಷಕನಾಗಿದ್ದಾನೆ. ಸಾಮಾಜಿಕ, ರಾಜಕೀಯ, ಔದ್ಯೋಗಿಕ ಹೀಗೆ ಎಲ್ಲ ಸ್ತರಗಳಲ್ಲಿಯೂ ಕಾಸು ಕೊಡದೆ ಕೆಲಸವಾಗದು ಎಂಬ ಸ್ಥಿತಿ ನಿರ್ಮಾಣವಾಗಿದೆ. ಲಂಚ ಸರಾಗವಾಗಿ ಹರಿದುಬರಲು ಎಲ್ಲ ಸರ್ಕಾರಿ ಕಚೇರಿಗಳಲ್ಲಿ ಮಧ್ಯವರ್ತಿಗಳು ಹುಟ್ಟಿಕೊಂಡಿದ್ದಾರೆ. ಮತ್ತೂ ವಿಚಿತ್ರವೆಂದರೆ, ಸರ್ಕಾರಿ ಕಚೇರಿಗಳಲ್ಲಿ ದೇವರ ಫೋಟೊ ತೂಗುಹಾಕಿ ಪೂಜೆ, ಪ್ರಸಾದ ಎಲ್ಲ ಆದ ಮೇಲೆ ದಂಧೆ ಶುರುವಾಗುತ್ತದೆ! ದೇವರಿಗೆ ತಪ್ಪು ಕಾಣಿಕೆ ಸಲ್ಲಿಸಿ ಯಾವ ಅನಾಚಾರವನ್ನಾದರೂ ಮಾಡಬಹುದೆಂಬ ವಿನಾಶಕಾರಿ ಮನಃಸ್ಥಿತಿ ನಮ್ಮ ಸುತ್ತ ಬೆಳೆದುಹೋಗಿದೆ.

‘ನಾವು ಪ್ರತೀ ತುತ್ತು ಅನ್ನ ತಿನ್ನುವಾಗಲೂ ಈ ಅನ್ನ ನಮ್ಮ ಬೆವರಿನಿಂದ ಬೇಯಿಸಿದ್ದೇ ಅಥವಾ ಯಾರದ್ದೋ ಕಣ್ಣೀರಿನಿಂದಲೇ ಎಂದು ಆಲೋಚಿಸಬೇಕು’ ಎಂದಿದ್ದರು ಡಿವಿಜಿ. ಆದರೆ ಇಂದು ಅನೇಕರು ಕಾಡಿಸಿ ಪೀಡಿಸಿ ಪ್ರತಿದಿನ, ಪ್ರತಿಕ್ಷಣ ಲಂಚಕ್ಕಾಗಿ ನಾಲಗೆ ಚಾಚುತ್ತಾರೆ. ಈ ಹಿಂದೆ ಲೋಕಾಯುಕ್ತ, ಈಗಿನ ಎಸಿಬಿ, ಐಟಿ ದಾಳಿಯ ಸಂದರ್ಭದಲ್ಲಿ ಇಂತಹ ಹೆಗ್ಗಣಗಳ ವಿರಾಟ್‌ರೂಪಗಳನ್ನು ನೋಡಿ ಜನ ನಿಬ್ಬೆರಗಾಗಿದ್ದಾರೆ. ಇಂಥ ವ್ಯವಸ್ಥೆಯನ್ನು ಕಂಡೇ ಕವಿ ಬಿ.ಸಿ.ರಾಮಚಂದ್ರ ಶರ್ಮ- ‘ಕಡಲುಗಳ್ಳರ ಕಾಟ ಕೊನೆಗೊಂಡರೇನಂತೆ, ಒಡಲುಗಳ್ಳರು ಇನ್ನೂ ಇಲ್ಲೆ ಇಹರೋ’ ಎಂದು ಉದ್ಗರಿಸಿದ್ದಾರೆ
(‘ಎಂದಿಗೆ’- ಕವನ).

ಇವರೆಲ್ಲರ ನಡುವೆ, ತಮ್ಮ ವೃತ್ತಿಧರ್ಮಕ್ಕೆ ಲೋಪವಾಗದಂತೆ ಅತ್ಯಂತ ಪ್ರಾಮಾಣಿಕತೆಯಿಂದ ಜನಸೇವೆ ಮಾಡುವ ಅಧಿಕಾರಿಗಳಿದ್ದಾರೆ. ಪ್ರಜಾತಂತ್ರ ವ್ಯವಸ್ಥೆಯಲ್ಲಿ ಎಲ್ಲವೂ ಹಾಳಾಗಿಲ್ಲ, ಒಳ್ಳೆಯದು ಇನ್ನೂ ಇದೆ ಎಂಬ ಭರವಸೆ ಉಳಿಸಿಕೊಳ್ಳುವಂತೆ ಅವರು ಬದುಕುತ್ತಿದ್ದಾರೆ. ಆದರೆ ಇಂತಹ ಪ್ರಾಮಾಣಿಕ ಸೇವಕರನ್ನು ಹುಡುಕಿ ವ್ಯವಸ್ಥೆ ಬೇಟೆಯಾಡಿರುವ ಉದಾಹರಣೆಗಳೂ ಇವೆ!

1974ರ ಜೂನ್ 5ರಂದು ಪಟ್ನಾದ ಗಾಂಧಿ ಮೈದಾನದಲ್ಲಿ ಜಯಪ್ರಕಾಶ್‍ ನಾರಾಯಣ್ ‘ಈ ದೇಶದಲ್ಲಿ ಹೆಚ್ಚುತ್ತಿರುವುದು ಎರಡೇ. ಒಂದು, ಬೆಲೆಗಳು. ಮತ್ತೊಂದು, ಭ್ರಷ್ಟಾಚಾರ. ಲಂಚ ನೀಡದೆ ಇಲ್ಲಿ ಯಾವ ಕೆಲಸವೂ ನಡೆಯುವುದಿಲ್ಲ. ವಿದ್ಯೆ ನೀಡುವ ಸಂಸ್ಥೆಗಳೂ ಭ್ರಷ್ಟಾಚಾರದ ಆಗರಗಳಾಗಿವೆ’ ಎಂದಿದ್ದರು. ಅಂದಿನ ಸ್ಥಿತಿ ಇಂದಿಗೂ ಬದಲಾಗಿಲ್ಲ.

ಭ್ರಷ್ಟಾಚಾರವು ಕೊರೊನಾಕ್ಕಿಂತ ಭೀಕರ ವೈರಸ್‌! ಭ್ರಷ್ಟಾಚಾರದಿಂದ ಇಡೀ ಸಮಾಜದ-ದೇಶದ ನೈತಿಕತೆಯ ಅಧಃಪತನವಾಗುತ್ತದೆ. ಏಷ್ಯಾ ಖಂಡದಲ್ಲಿಯೇ ಭಾರತದಲ್ಲಿ ಅತಿ ಹೆಚ್ಚು ಲಂಚದ ಪ್ರಕರಣಗಳು ದಾಖಲಾಗುತ್ತಿವೆ ಎಂದು ಭ್ರಷ್ಟಾಚಾರದ ಮೇಲಿನ ಕಣ್ಗಾವಲು ಸಂಸ್ಥೆ ಟ್ರಾನ್ಸ್‌ಪರೆನ್ಸಿ ಇಂಟರ್‌ನ್ಯಾಷನಲ್‌ ಸಮೀಕ್ಷೆ ಹೇಳಿರುವುದು ವರದಿಯಾಗಿದೆ.

ಆಫ್ರಿಕಾದ ಜನಪ್ರಿಯ ಲೇಖಕ ಚಿನುವ ಅಚಿಬೆ ‘ಎ ಮ್ಯಾನ್ ಆಫ್ ದಿ ಪೀಪಲ್’ (ಜನನಾಯಕ- ಅನು: ವಿಕ್ರಂ ಚದುರಂಗ) ಕಾದಂಬರಿಯಲ್ಲಿ ರಾಜಕಾರಣದ ಭ್ರಷ್ಟ ವ್ಯವಸ್ಥೆ ಕುರಿತು ಮನೋಜ್ಞ ಚಿತ್ರಣ ನೀಡುತ್ತಾರೆ. ಆಫ್ರಿಕಾದ ಗೂಗಿ, ವೋಲೆ ಶೋಯಿಂಕಾ ಅವರ ಕೃತಿಗಳಲ್ಲಿ ಹಾಗೂ ಕನ್ನಡದ ಸಂದರ್ಭದಲ್ಲಿ ಮಾಸ್ತಿ, ಕಾರಂತ, ಲಂಕೇಶ್, ತೇಜಸ್ವಿ, ಅನಂತಮೂರ್ತಿ ಮೊದಲಾದವರ ಬರಹಗಳಲ್ಲಿ ರಾಜಕಾರಣದ ಭ್ರಷ್ಟಗೊಂಡ ವ್ಯವಸ್ಥೆಯ ಚಿತ್ರಣವಿದೆ.

ಸರ್ಕಾರಿ ನೌಕರರನ್ನು ಕಚೇರಿಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳುವಂತೆ ಮಾಡಲು ಪ್ರಧಾನಿ ಇತ್ತೀಚೆಗೆ ‘ಮಿಷನ್ ಕರ್ಮಯೋಗಿ’ ಎಂಬ ಯೋಜನೆ ರೂಪಿಸಿದ್ದಾರೆ. ಈ ಮೂಲಕ ಅವರು ದಕ್ಷ ಹಾಗೂ ಚೈತನ್ಯಯುತರಾಗಿ ಕರ್ತವ್ಯ ನಿರ್ವಹಿಸಲು ಸೂಕ್ತ ತರಬೇತಿ ನೀಡುವ ಪ್ರಸ್ತಾವವಿದೆ ಎಂದು ಹೇಳಲಾಗಿದೆ. 2022ರ ಡಿಸೆಂಬರ್ ವೇಳೆಗೆ ದೇಶವನ್ನು ಭ್ರಷ್ಟಾಚಾರ ಮುಕ್ತಗೊಳಿಸಬೇಕೆಂಬ ಸಂಕಲ್ಪವನ್ನು ಸರ್ಕಾರ ಘೋಷಿಸಿದೆ. ಈ ಕುರಿತು ಜನಾಭಿಪ್ರಾಯ ಕೇಳಿ ‘ಲೋಕಲ್ ಸರ್ಕಲ್’ ಸಂಸ್ಥೆ ನಡೆಸಿದ ಸಮೀಕ್ಷೆಯಲ್ಲಿ, ಜನ ಭ್ರಷ್ಟಾಚಾರ ನಿರ್ಮೂಲನೆ ಕಷ್ಟ ಸಾಧ್ಯ ಎಂದಿದ್ದಾರೆ. ದೇಶದ ಭ್ರಷ್ಟಾಚಾರ ನಿರ್ಮೂಲನಾ ಸಾಮರ್ಥ್ಯದ ಬಗ್ಗೆ ಅವರು ನಿರಾಶಾವಾದಿಗಳಾಗಿದ್ದಾರೆ ಎನ್ನುತ್ತದೆ ಸಮೀಕ್ಷೆ. ಏನೇ ಇರಲಿ, ಸರ್ಕಾರದ ಈ ನಿರ್ಧಾರ ಜನಸಾಮಾನ್ಯರಲ್ಲಿ ವ್ಯವಸ್ಥೆಯ ಸುಧಾರಣೆ ಕುರಿತು ಸಣ್ಣ ಪ್ರಮಾಣದಲ್ಲಾದರೂ ಭರವಸೆಯನ್ನು ಹುಟ್ಟುಹಾಕಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು