ಶುಕ್ರವಾರ, 26 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಡಾಕ್ಟರ್‌, ತುಸು ನಿಲ್ಲಿ ಪ್ಲೀಸ್‌!

ವೈದ್ಯರ ಮಾನಸಿಕ ಒತ್ತಡಕ್ಕೆ ವೈದ್ಯರೇ ಚಿಕಿತ್ಸೆ ಮಾಡಿಕೊಳ್ಳಬೇಕು
Last Updated 24 ಆಗಸ್ಟ್ 2020, 19:30 IST
ಅಕ್ಷರ ಗಾತ್ರ

ನಂಜನಗೂಡಿನ ವೈದ್ಯಾಧಿಕಾರಿ ಡಾ. ಎಸ್‌.ಆರ್‌.ನಾಗೇಂದ್ರ ಅವರು ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಮೇಲಧಿಕಾರಿಯನ್ನು ಅಮಾನತು ಮಾಡಬೇಕೆಂದು ಸರ್ಕಾರದ ಮೇಲೆ ವೈದ್ಯರು ಒತ್ತಡ ಹೇರಿದರು. ಮುಷ್ಕರಕ್ಕೆ ಮುಂದಾಗಿದ್ದರು...

ಈ ಗೋಜಲುಗಳಾಚೆ ನಿಂತು ನೋಡಿದರೆ ನಮಗೆ ಬೇರೆಯದೇ ಚಿತ್ರಣ ಕಾಣಸಿಗುತ್ತದೆ. ದಾಖಲೆಗಳ ಪ್ರಕಾರ, ಇತರೆಲ್ಲ ವೃತ್ತಿಗಳಿಗಿಂತ ವೈದ್ಯಕೀಯ ವೃತ್ತಿಯಲ್ಲಿದ್ದವರಲ್ಲೇ ಅತಿಹೆಚ್ಚು ಆತ್ಮಹತ್ಯೆ ಸಂಭವಿಸುತ್ತಿರುತ್ತದೆ. ನಮ್ಮ ದೇಶದಲ್ಲಿ ಈ ಕುರಿತು ಅಂಕಿಅಂಶಗಳು ಸಿಗುತ್ತಿಲ್ಲ. ಆದರೆ ಎಲ್ಲ ಸುಧಾರಿತ ದೇಶಗಳಲ್ಲೂ ಇದನ್ನೇ ಎತ್ತಿ ತೋರಿಸುವ ದಾಖಲೆಗಳು ಸಿಗುತ್ತವೆ.

ಅಮೆರಿಕದಲ್ಲಿ ಪ್ರತಿವರ್ಷ 400ಕ್ಕೂ ಹೆಚ್ಚು ವೈದ್ಯರು ತಮ್ಮ ಪ್ರಾಣವನ್ನು ತಾವೇ ತೆಗೆದುಕೊಳ್ಳುತ್ತಾರೆ. ಜಪಾನ್‌ನಲ್ಲಿ ಅತಿಯಾದ ಓವರ್‌ಟೈಮ್‌ನಿಂದಾಗಿ ಆತ್ಮಹತ್ಯೆ ಮಾಡಿಕೊಂಡ ವೈದ್ಯರ ಕುಟುಂಬಕ್ಕೆ ಸರ್ಕಾರವೇ ತಿಂಗಳಿಗೆ 20,000 ಡಾಲರಿನಷ್ಟು (₹ 14.83 ಲಕ್ಷ) ಮಾಸಾಶನ ಕೊಡುತ್ತದೆ. ಮೃತವ್ಯಕ್ತಿ ಖಾಸಗಿ ಆಸ್ಪತ್ರೆಯ ವೈದ್ಯರಾಗಿದ್ದರೆ ಕಂಪನಿಯು 16 ಲಕ್ಷ ಡಾಲರಿನಷ್ಟು (₹ 11.86 ಕೋಟಿ) ಪರಿಹಾರ ಕೊಡಬೇಕಾಗುತ್ತದೆ. ವೈದ್ಯವೃತ್ತಿಯವರ ಆತ್ಮಹತ್ಯೆಗೆ ಕೆಲವು ವಿಶೇಷ ಕಾರಣಗಳಿರುತ್ತವೆ. ಕೆಲಸದ ಒತ್ತಡ, ಕೆಲಸದ ಮಧ್ಯೆ ತಮ್ಮಿಂದಾದ ಪ್ರಮಾದಗಳ ಬಗ್ಗೆ ಅಪರಾಧೀ ಭಾವ, ಖಿನ್ನತೆ, ಸದಾ ಆತಂಕಿತ, ಸದಾ ದುಃಖತಪ್ತ ಜನರ ಮಧ್ಯೆಯೇ ಕೆಲಸ ಮಾಡಬೇಕಾದ ಅನಿವಾರ್ಯ, ನಿದ್ರಾಹೀನತೆ, ಕುಟುಂಬದ ಸದಸ್ಯರ ಜೊತೆಗಿನ ನೆಮ್ಮದಿ ಸಮಯದ ಅಭಾವ ಇವೆಲ್ಲವೂ ಕಾರಣವಿದ್ದೀತು.

ಈಗಂತೂ ಆಸ್ಪತ್ರೆಗಳೇ ಕೊರೊನಾ ವೈರಾಣುಗಳ ನಾಭಿಕೇಂದ್ರ ಆಗಿರುವುದರಿಂದ ಆರೋಗ್ಯ ಸಿಬ್ಬಂದಿಯ ಮೇಲೆ ಅಪಾರ ಒತ್ತಡ ಇರುತ್ತದೆ. ಎಲ್ಲ ದೇಶಗಳಲ್ಲೂ ವೈದ್ಯರು ದೊಡ್ಡ ಸಂಖ್ಯೆಯಲ್ಲಿ ಕೊರೊನಾ ಸೋಂಕಿಗೆ ಒಳಗಾಗುತ್ತಿದ್ದಾರೆ.

ಖಿನ್ನತೆಯಿಂದ ಬಳಲುವ ವೈದ್ಯರು ರೋಗಿಯ ಸಾವಿಗೂ ಕಾರಣರಾಗುತ್ತಾರೆ. ವೃತ್ತಿಗೆ ಸೇರುವ ಮುನ್ನ ಪ್ರತೀ ವೈದ್ಯರೂ ತಾನು ‘ಯಾರಿಗೂ ತೊಂದರೆ ಕೊಡುವುದಿಲ್ಲ’ ಎಂದು ಮುಂತಾಗಿ ಹಿಪ್ಪೊಕ್ರಟಿಕ್‌ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಬೇಕಾಗುತ್ತದೆ. ಎಲ್ಲರ ಕ್ಷೇಮವನ್ನೇ ಬಯಸುತ್ತ, ಪರಿಸ್ಥಿತಿಯ ಒತ್ತಡಕ್ಕೆ ಸಿಲುಕಿ ಆತ್ಮಹತ್ಯೆಯೇ ಅನಿವಾರ್ಯವಾದ ನತದೃಷ್ಟ ವೈದ್ಯರ ಬಗ್ಗೆ ಅದೇ (‘ಡೂ ನೋ ಹಾರ್ಮ್’) ಹೆಸರಿನ ಸಾಕ್ಷ್ಯಚಿತ್ರವೊಂದು ಅತ್ಯಂತ ಹೃದಯಂಗಮವಾಗಿದೆ. ಒತ್ತಡಕ್ಕೆ ಸಿಲುಕಿದ ವೈದ್ಯರುಗಳಿಂದಾಗಿ ಸಂಭವಿಸುವ ಪ್ರಮಾದಗಳಿಂದಲೇ (ಹೃದ್ರೋಗ ಮತ್ತು ಕ್ಯಾನ್ಸರ್‌ ನಂತರ) ಅತಿಹೆಚ್ಚು ರೋಗಿಗಳು ಸಾಯುತ್ತಾರೆ ಎಂದು ಅದರಲ್ಲಿ ದಾಖಲಿಸಲಾಗಿದೆ.

ಭಾರತದಲ್ಲಿ, ಅದರಲ್ಲೂ ಸಣ್ಣ ಪಟ್ಟಣಗಳಲ್ಲಿ ವೈದ್ಯರ ಖಿನ್ನತೆಗೆ ಇನ್ನೂ ಅನೇಕ ಕಾರಣಗಳಿರುತ್ತವೆ: ಸಲಕರಣೆಗಳ ಅಭಾವ, ಸಹಾಯಕ ಸಿಬ್ಬಂದಿಯ ಅಭಾವ, ಔಷಧಗಳ ಅಭಾವ, ಆಸ್ಪತ್ರೆಯಲ್ಲಿ ಸ್ಥಳಾಭಾವ, ರಜೆಯ ಅಭಾವ, ಸ್ವಂತಕ್ಕೆ ಸೂಕ್ತ ಸೂರಿನ ಅಭಾವ ಇತ್ಯಾದಿ. ಇವೆಲ್ಲಕ್ಕಿಂತ ಹೆಚ್ಚಾಗಿ, ಸರ್ಕಾರದ ವೈಫಲ್ಯಗಳಿಗೆಲ್ಲ ವೈದ್ಯರನ್ನೇ ದೂಷಿಸುವ ನಮ್ಮ ಮನೋಭಾವ ಬೇರೆ!

ಸರ್ಕಾರವೇನೊ ಡಾ. ನಾಗೇಂದ್ರ ಅವರ ಆತ್ಮಹತ್ಯೆಯ ಬಗ್ಗೆ ತನಿಖೆ ನಡೆಸಲಿದೆಯಂತೆ. ಸರ್ಕಾರದ ಅವಜ್ಞೆಯಿಂದಾಗಿ ಅವ್ಯವಸ್ಥೆಗಳ ಸಾಗರದಲ್ಲಿ ಏಗಬೇಕಾದ ವೈದ್ಯರ ಬಗ್ಗೆ ಅಥವಾ ಆ ಮೇಲಧಿಕಾರಿಯ ಬಗ್ಗೆ ಸರ್ಕಾರವೇ ನಡೆಸುವ ವಿಚಾರಣೆಯಿಂದ ಏನು ಹೊಸದು ಗೊತ್ತಾದೀತು? ಜಪಾನ್‌ ಮಾದರಿಯ ಕಾನೂನು ಇಲ್ಲೂ ಜಾರಿಗೆ ಬರುವಂತೆ ನಮ್ಮ ವೈದ್ಯರು ಒತ್ತಾಯಿಸಬೇಕು. ಜೊತೆಗೆ ತಮ್ಮ ವೃತ್ತಿಯ ಇಂಥ ಅಭಾವ ಅಥವಾ ಅಪಾಯಗಳ ಮಧ್ಯೆ ಮನಸ್ಸಿನ ಸ್ಥಿಮಿತವನ್ನು ಹೇಗೆ ಕಾಪಾಡಿಕೊಳ್ಳಬೇಕು ಎಂಬುದರ ಕುರಿತು ವೈದ್ಯವೃಂದವೇ ಆಗಾಗ ಮೆಡಿಕಲ್‌ ವಿದ್ಯಾರ್ಥಿಗಳಿಗೆ, ನಿವಾಸಿ ವೈದ್ಯರಿಗೆ, ವೈದ್ಯರಿಗೆ ತರಬೇತಿ ಮತ್ತು ಸಮಾಲೋಚನ ಸೌಲಭ್ಯಗಳನ್ನು ಕಲ್ಪಿಸಬೇಕು. ಯಾರೋ ಒಬ್ಬ ಅಧಿಕಾರಿಯನ್ನು ಅಮಾನತು ಮಾಡಿದರೆ ವ್ಯವಸ್ಥೆ ಸರಿಯಾಗಲಾರದು.

ನಾಗೇಶ ಹೆಗಡೆ, ವಿಜ್ಞಾನ ಲೇಖಕ, ಕೆಂಗೇರಿ

***

ದುಷ್ಪರಿಣಾಮ ಯೋಚಿಸಿ

ನಾಲ್ಕು ವರ್ಷಗಳ ಹಿಂದೆ ಆರೋಗ್ಯ ಸಚಿವರಾಗಿದ್ದವರು ವೈದ್ಯರನ್ನು ನಿಯಂತ್ರಿಸಲು ಕಠಿಣ ಮಸೂದೆಯೊಂದನ್ನು ವಿಧಾನಸಭೆಯಲ್ಲಿ ಮಂಡಿಸಿದರು. ಅದರ ಪ್ರಕಾರ, ವೈದ್ಯರ ವಿರುದ್ಧ ರೋಗಿ ಅಥವಾ ಅವರ ಕಡೆಯವರು ದೂರು ಸಲ್ಲಿಸಿದರೆ ಸಾಕು ಕೂಡಲೇ ಆ ವೈದ್ಯರನ್ನು ಜೈಲಿಗೆ ಅಟ್ಟಲು ಅವಕಾಶ ಕೊಡುವಂತಹ ಪ್ರಸ್ತಾವ ಇತ್ತು. ವೈದ್ಯರ ಮೂಲಭೂತ ಹಕ್ಕಿಗೆ ಚ್ಯುತಿ ತರುವ ಆ ಸುದ್ದಿಯಿಂದ ವೈದ್ಯ ಸಮೂಹದಲ್ಲಿ ಭಯದ ವಾತಾವರಣ ಉಂಟಾಯಿತು. ಕೊನೆಗೆ ವೈದ್ಯರು ಸಾರಾಸಗಟಾಗಿ ಅದರ ಬಾಧಕಗಳನ್ನು ಆಗಿನ ಮುಖ್ಯಮಂತ್ರಿಗೆ ಮನದಟ್ಟು ಮಾಡಿದರು. ವಿವಿಧ ರಾಜಕೀಯ ಪಕ್ಷಗಳ ಕೆಲವು ನಾಯಕರೂ ಸೇರಿ ಮಸೂದೆಯಿಂದ ಆ ಅಂಶಗಳನ್ನು ತೆಗೆಸಿಹಾಕಿದರು.

ಈಗ ಯಾವುದೇ ರೋಗಿ ಸಾವಿಗೀಡಾದರೆ ಅಥವಾ ವೈದ್ಯರ ಕೆಲಸ ನಿಧಾನವಾಯಿತೆಂದರೆ
ಕೂಡಲೇ ಸಾರ್ವಜನಿಕರು, ಮೇಲಧಿಕಾರಿಗಳ ನೆನಪಿಗೆ ಬರುವುದು ವೈದ್ಯರಿಗೆ ಜೈಲಿನ ಹಾದಿ ತೋರಿಸಬೇಕೆಂಬ ಕಲ್ಪನೆ. ಒಬ್ಬ ರಾಜಕಾರಣಿ ತಾನು ಮಾಡುವ ಕಾನೂನುಗಳು ಭವಿಷ್ಯದಲ್ಲಿ ಯಾವ ರೀತಿ ದುಷ್ಪರಿಣಾಮ ಬೀರುತ್ತವೆ ಎಂಬುದನ್ನು ಯೋಚಿಸಬೇಕು.

-ಡಾ. ಕೆ.ಆರ್.ಶ್ರೀಧರ್, ಮನೋವೈದ್ಯ, ಶಿವಮೊಗ್ಗ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT