ಭಾನುವಾರ, ಜೂನ್ 20, 2021
30 °C
ಬೇಕಿದೆ ವಿನಾಯ್ತಿ

ಸಂಗತ | ಶಿಕ್ಷಣ ಸಾಲದ ‘ಋಣಭಾರ’ದಲ್ಲಿ ವಿದ್ಯಾರ್ಥಿವೃಂದ

ಬಿ.ಎಸ್.ಶಿವಣ್ಣ ಮಳವಳ್ಳಿ Updated:

ಅಕ್ಷರ ಗಾತ್ರ : | |

ಶೈಕ್ಷಣಿಕ ಸಾಲ

ಜಾಗತಿಕ ಆರ್ಥಿಕ ಹಿಂಜರಿತ ಹಾಗೂ ಹಣಕಾಸು ವ್ಯವಸ್ಥೆ ನಿರ್ವಹಣೆಯಲ್ಲಿನ ವೈಫಲ್ಯದ ಫಲವಾಗಿ, ದೇಶದಲ್ಲಿ ಕಳೆದ ಡಿಸೆಂಬರ್ ಹೊತ್ತಿಗೆ ನಿರುದ್ಯೋಗದ ಸಮಸ್ಯೆ ಹೆಚ್ಚಿನ ಪ್ರಮಾಣದಲ್ಲಿ ಕಾಣತೊಡಗಿತು. ಅನೇಕ ಕ್ಷೇತ್ರಗಳಲ್ಲಿ ಉದ್ಯೋಗ ಕಡಿತದ ಭೀತಿ ಕಾಣಿಸಿಕೊಂಡಿತ್ತು. ಹೊಸ ಉದ್ಯೋಗ ಸೃಷ್ಟಿ ಸಾಧ್ಯತೆಗಳು ಕ್ಷೀಣಿಸತೊಡಗಿದವು. ಆದರೂ ವಿತ್ತೀಯ ನಿರ್ವಹಣೆಯಲ್ಲಿ ಯಾವ ಲೋಪವೂ ಆಗಿಲ್ಲ ಎಂಬ ಧೋರಣೆಯನ್ನು ಕೇಂದ್ರ ಸರ್ಕಾರ ಮುಂದುವರಿಸಿತು. ಆದರೆ, ವಾಸ್ತವದಲ್ಲಿ ಜನಸಾಮಾನ್ಯರು ಇದರ ಬಿಸಿ ಅನುಭವಿಸ ತೊಡಗಿದ್ದರು.

ಇವೆಲ್ಲದರ ಮಧ್ಯೆ ಒಂದು ವಿಚಾರವನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಗಂಭೀರವಾಗಿ ತೆಗೆದುಕೊಳ್ಳಲೇ ಇಲ್ಲ. ಅದು, ವಿದ್ಯಾರ್ಥಿಗಳಿಗೆ ನೀಡಿದ್ದ ಶೈಕ್ಷಣಿಕ ಸಾಲ. ದೇಶ– ವಿದೇಶದ ಶ್ರೇಷ್ಠ ವಿದ್ಯಾಸಂಸ್ಥೆಗಳಲ್ಲಿ ಪದವಿ ಪಡೆಯುವುದಕ್ಕಾಗಿ ಕೋಟ್ಯಂತರ ವಿದ್ಯಾರ್ಥಿಗಳು ರಾಷ್ಟ್ರೀಕೃತ ಬ್ಯಾಂಕ್‌ಗಳಿಂದ ಅವಧಿ ಸಾಲವನ್ನು ಪಡೆದಿದ್ದರು. ಆದರೆ, ರಾಷ್ಟ್ರದಲ್ಲಿ ಬೀಸಿದ ಆರ್ಥಿಕ ಹಿಂಜರಿತದ ಸುಳಿಗಾಳಿ ಈ ವಿದ್ಯಾರ್ಥಿಗಳಿಗೆ ಗಂಭೀರ ಸಂಕಷ್ಟವನ್ನು ತಂದೊಡ್ಡಿತ್ತು. ಆರ್ಥಿಕ ಬಿಕ್ಕಟ್ಟಿನಿಂದಾಗಿ ವಿದ್ಯಾರ್ಥಿಗಳ ಪೋಷಕರು ಸಾಲದ ಕಂತು ಕಟ್ಟುವುದಕ್ಕೆ ಹೈರಾಣಾಗಿ ಹೋಗಿದ್ದರು. 2016ರಿಂದ 2019ರ ಅವಧಿಯಲ್ಲಿ ಶೈಕ್ಷಣಿಕ ಸಾಲದ ಬಾಕಿ ಕಂತಿನ ಪ್ರಮಾಣ ₹67,685 ಕೋಟಿಯಿಂದ ₹ 75,450 ಕೋಟಿಗೆ ಏರಿಕೆಯಾಗಿತ್ತು ಎಂದು ಅಂದಾಜಿಸಲಾಗಿದೆ. ಶೈಕ್ಷಣಿಕ ಸಾಲ ಪಡೆದ ಬಹುಪಾಲು ಮಂದಿ ತೀವ್ರ ಸಂಕಷ್ಟ ಎದುರಿಸಬೇಕಾದ ಸ್ಥಿತಿ ಉಂಟಾಗಿದೆ. ಇವೆಲ್ಲವೂ ರಾಷ್ಟ್ರೀಕೃತ ಬ್ಯಾಂಕ್‌ಗಳಿಂದಲೇ ಲಭ್ಯವಾದ ಮಾಹಿತಿಗಳು.

ಹೀಗಾಗಿ, ಕೇಂದ್ರ ಸರ್ಕಾರವು ಶೈಕ್ಷಣಿಕ ಸಾಲ ಮನ್ನಾ ಮಾಡಬೇಕೆಂಬ ದೊಡ್ಡ ಮಟ್ಟದ ಕೂಗು ಕೇಳಲಾರಂಭಿಸಿತು. ಆದರೆ, ದೇಶದ ವಿದ್ಯಾರ್ಥಿ ಸಮೂಹದ ಕಂಬನಿಯು ಕೇಂದ್ರ ಹಣಕಾಸು ಸಚಿವರ ಮನ ಕರಗಿಸಲಿಲ್ಲ. ಶೈಕ್ಷಣಿಕ ಸಾಲ ಮನ್ನಾ ಮಾಡುವ ಪ್ರಸ್ತಾವ ಸರ್ಕಾರದ ಮುಂದೆ ಇಲ್ಲ ಎಂದು, ಡಿಸೆಂಬರ್‌ನಲ್ಲಿ ಮುಕ್ತಾಯಗೊಂಡ ಲೋಕಸಭಾ ಅಧಿವೇಶನದ ಸಂದರ್ಭದಲ್ಲಿ ನಿರ್ಮಲಾ ಸೀತಾರಾಮನ್ ಘೋಷಿಸಿಬಿಟ್ಟರು.

ಹೀಗೆ ಮೊದಲೇ ಸಂಕಷ್ಟದಲ್ಲಿದ್ದ ಈ ವಿದ್ಯಾರ್ಥಿ ಸಮೂಹವನ್ನು ಕೋವಿಡ್‌ ಬಿಕ್ಕಟ್ಟಿನ ಈ ಸಂದರ್ಭ ಇನ್ನಷ್ಟು ಕಂಗೆಡಿಸಿದೆ. ಶೈಕ್ಷಣಿಕ ಸಾಲದ ಹೊರೆಯೊಂದಿಗೆ ಸಣ್ಣಪುಟ್ಟ ಕೆಲಸ ಪಡೆದವರಿಗೆ ಈಗ ಉದ್ಯೋಗ ಭದ್ರತೆ ಇಲ್ಲ. ಹಲವಾರು ಜನ ಈಗಾಗಲೇ ಕೆಲಸ ಕಳೆದುಕೊಂಡಿದ್ದಾರೆ. ಭವಿಷ್ಯದಲ್ಲಿ ಉದ್ಯೋಗ ಸೃಷ್ಟಿ ಹಾಗೂ ಲಭ್ಯತೆಯ ಪ್ರಮಾಣ ಇನ್ನಷ್ಟು ಹದಗೆಡುವ ಸಾಧ್ಯತೆ ಇರುವುದರಿಂದ ಆತಂಕಕಾರಿ ಸನ್ನಿವೇಶ ನಿರ್ಮಾಣವಾಗಿದೆ.

ಇಷ್ಟಾದರೂ, ಕೋವಿಡ್ ತಂದೊಡ್ಡಿದ ಸಂಕಷ್ಟದಿಂದ ಹೊರಬರಲು ಕೇಂದ್ರ ಸರ್ಕಾರ ಘೋಷಣೆ ಮಾಡಿದ ವಿವಿಧ ಆರ್ಥಿಕ ಪ್ಯಾಕೇಜ್‌ಗಳಲ್ಲಿ ಶೈಕ್ಷಣಿಕ ಸಾಲ ಮನ್ನಾ ಸೇರ್ಪಡೆಯಾಗದೇ ಇರುವುದು ವಿಷಾದನೀಯ. ₹ 20 ಲಕ್ಷ ಕೋಟಿ ಮೊತ್ತದ ಪ್ಯಾಕೇಜ್‌ಗೆ ವಿದ್ಯಾರ್ಥಿ ಸಾಲ ಯಾವುದೇ ಹೊರೆಯಾಗುತ್ತಿರಲಿಲ್ಲ.

ವಿದೇಶ ವ್ಯಾಸಂಗಕ್ಕೆ ತೆರಳಿರುವ ಅನೇಕ ಮಂದಿಗೆ ಈಗ ಬ್ಯಾಂಕ್ ಕಿರುಕುಳವು ಅಸಹನೀಯ ವಾತಾವರಣವನ್ನು ಸೃಷ್ಟಿಸುತ್ತಿದೆ. ‘ಮಾಂಗಲ್ಯವನ್ನು ಅಡವಿಟ್ಟು ಸಾಲ ಕಟ್ಟಿದೆ ಕಂದಾ’ ಎಂಬ ಹೆತ್ತ ತಾಯಿಯ ಆರ್ತನಾದ ಅವರ ಅಂತರಂಗವನ್ನು ಸುಡುತ್ತಿದೆ. ಗೃಹ ಹಾಗೂ ಕೈಗಾರಿಕಾ ಸಾಲಗಾರರಿಗೆ ನೀಡಿದ ಕಂತು ಕಟ್ಟುವ ಅವಧಿ ಮುಂದೂಡಿಕೆ ಸೌಲಭ್ಯವನ್ನೂ ಸರ್ಕಾರವು ವಿದ್ಯಾರ್ಥಿ ವರ್ಗಕ್ಕೆ ನೀಡದೇ ಇರುವುದು ಅಸಮಂಜಸ.

ಕೊರೊನಾ ಸೋಂಕಿನ ಕಾರಣದಿಂದ ರಾಜ್ಯದ ಆರ್ಥಿಕ ಪರಿಸ್ಥಿತಿಯೂ ಸರಿಯಿಲ್ಲ ಎಂಬುದನ್ನು ಒಪ್ಪಿಕೊಳ್ಳೋಣ. ಆದರೆ, ನಿರ್ವಹಿಸಲೇಬೇಕಾದ ಕೆಲ ಜವಾಬ್ದಾರಿಗಳಿಂದ ಯಾರೂ ನುಣುಚಿಕೊಳ್ಳಲಾಗದು. ಶೈಕ್ಷಣಿಕ ಸಾಲ ಮನ್ನಾದ ವಿಚಾರದಲ್ಲಿ ರಾಜ್ಯ ಸರ್ಕಾರವು ಸ್ವಯಂಪ್ರೇರಣೆಯಿಂದ ದೊಡ್ಡ ಮನಸ್ಸು ಮಾಡಬಹುದಿತ್ತು. ಇಂತಹ ವಿದ್ಯಾರ್ಥಿಗಳ ಪಟ್ಟಿ ತಯಾರಿಸಿ, ಯಾವುದೇ ಜಾತಿ, ಧರ್ಮದ ಭೇದವಿಲ್ಲದೆ ಒಂದಿಷ್ಟು ಸಹಾಯಧನ ನೀಡುವುದಕ್ಕೆ ಅವಕಾಶವಿತ್ತು.

ದೇಶದ ಪ್ರತಿಭಾ ಪಲಾಯನದ ಬಗ್ಗೆ ಮಾತನಾಡುವ ವರ್ಗ, ಈ ಶೈಕ್ಷಣಿಕ ಸಾಲದ ಹೊರೆಯ ಬಗ್ಗೆ ಕಿಂಚಿತ್ ಕಾಳಜಿಯನ್ನೂ ವಹಿಸದೆ ಇರುವುದು ದುರ್ದೈವದ ಸಂಗತಿ. ವಿದೇಶದಲ್ಲಿ ವ್ಯಾಸಂಗ ಮಾಡಿ ಬಂದವರಿಗೆ ತಕ್ಷಣ ಉದ್ಯೋಗ ಸಿಗುತ್ತದೆ ಎಂಬ ಪರಿಸ್ಥಿತಿ ಈಗ ಇಲ್ಲ. ಹದಿನೈದು ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಅವಧಿಯ ಸಾಲ ಪಡೆದ ವಿದ್ಯಾರ್ಥಿಗಳಿಗೆ ಬಡ್ಡಿ ಕಡಿತದ ಸೌಲಭ್ಯ ನೀಡುವ ನಿರೀಕ್ಷೆಯೂ ಈಗ ಹುಸಿಯಾಗಿದೆ. ಕೇಂದ್ರ ಸರ್ಕಾರ ಈ ವಿಚಾರವನ್ನು ಗಂಭೀರವಾಗಿ ಪರಿಗಣಿಸದೇ ಇದ್ದರೆ, ಶೈಕ್ಷಣಿಕ ಸಾಲ ತೀರಿಸಲಾಗದ ವಿದ್ಯಾರ್ಥಿಗಳು ಹತಾಶೆಗೆ ಒಳಗಾಗುತ್ತಾರೆ. ಭವಿಷ್ಯದ ಬಗ್ಗೆ ಭರವಸೆ ಕಳೆದುಕೊಳ್ಳುತ್ತಾರೆ. ಮುಂದೆ ಸಾಲ ಪಡೆದು ತಮ್ಮ ಉನ್ನತ ಶಿಕ್ಷಣದ ಕನಸನ್ನು ನನಸು ಮಾಡಿಕೊಳ್ಳಬಹುದು ಎಂದುಕೊಂಡಿರುವ ಇತರ ವಿದ್ಯಾರ್ಥಿಗಳ ನಿರೀಕ್ಷೆ ಮೇಲೂ ತಣ್ಣೀರೆರಚಿದಂತಾಗುತ್ತದೆ. ಸಾಲಗಾರ ವಿದ್ಯಾರ್ಥಿಗಳತ್ತ ಕೇಂದ್ರ ಸರ್ಕಾರವು ಈಗ ವಾತ್ಸಲ್ಯ ಹಾಗೂ ಮಮತೆಯ ದೃಷ್ಟಿ ಹರಿಸಬೇಕಾಗಿದೆ.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು