ಶನಿವಾರ, ನವೆಂಬರ್ 28, 2020
22 °C
ಹಲವು ಸಂಗತಿಗಳ ಪ್ರಭಾವದಿಂದ ಆಗುತ್ತಿರುವ ಪಲ್ಲಟಗಳಾದರೂ ಏನು?

ಸಂಗತ| ದಲಿತ ರಾಜಕಾರಣ, ಬಿಹಾರದ ಜಾಡು

ವಾದಿರಾಜ್ Updated:

ಅಕ್ಷರ ಗಾತ್ರ : | |

Prajavani

ಬಿಹಾರ ವಿಧಾನಸಭಾ ಚುನಾವಣೆಯ ಫಲಿತಾಂಶ ಹಲವು ಮುಖದ ಚರ್ಚೆಯನ್ನು ಹುಟ್ಟುಹಾಕಿದೆ. ‘ಅಭಿವೃದ್ಧಿಯೇ ಚುನಾವಣೆಯ ವಿಷಯ’ ಎಂದು ಯಾರು ಎಷ್ಟೇ ಹೇಳಿದರೂ ಬಿಹಾರದ ಮಟ್ಟಿಗೆ ಜಾತಿ ಸಮೀಕರಣದ್ದೇ ಪಾರುಪತ್ಯ. ಹಾಗೆ ನೋಡಿದರೆ, ಬಿಹಾರ ಹಿಂದುಳಿದ ವರ್ಗಗಳ ರಾಜಕಾರಣದ ಕರ್ಮಭೂಮಿ. ಸಾಮಾಜಿಕ ನ್ಯಾಯದ ಮೊದಲ ಸಾಲಿನ ನೇತಾರ ಕರ್ಪೂರಿ ಠಾಕೂರ್ ಇಲ್ಲಿಯವರೆ. ಸುಪ್ರಸಿದ್ಧ ‘ಮಂಡಲ್ ವರದಿ’ ರೂಪಿಸಿದ ಬಿಂದೇಶ್ವರಿ ಪ್ರಸಾದ್ ಮಂಡಲ್ ಕೂಡಾ ಬಿಹಾರದವರೆ.

ರಾಮವಿಲಾಸ್ ಪಾಸ್ವಾನ್‌ರಂತಹ ಅತಿರಥ ದಲಿತ ನಾಯಕರಿದ್ದರೂ ‘ದಲಿತ ರಾಜಕಾರಣ’ ಮುನ್ನೆಲೆಗೆ ಬಂದಿದ್ದು ನಿತೀಶ್‌ ಕುಮಾರ್ ಮುಖ್ಯಮಂತ್ರಿಯಾದ ಕಾಲದಲ್ಲಿ. ನಿತೀಶ್ 2007ರಲ್ಲಿ ಮಹಾದಲಿತ್ ಆಯೋಗ ರಚಿಸಿದರು. ಬಿಹಾರದ 22 ಪರಿಶಿಷ್ಟ ಜಾತಿಗಳಲ್ಲಿ ಪಾಸ್ವಾನ್, ಪಾಸಿ, ದೋಬಿ, ಚಮ್ಮಾರ್ ಜಾತಿಗಳಷ್ಟೆ ಬಹುಪಾಲು ಅವಕಾಶ ಪಡೆಯುತ್ತಿವೆ, ಉಳಿದ 18 ಜಾತಿಗಳು ಮೀಸಲಾತಿಯ ಅವಕಾಶಗಳಿಂದ ದೂರವೇ ಉಳಿದಿವೆ ಎಂದು ಆಯೋಗದ ವರದಿ ಹೇಳಿತು.

ಸರ್ಕಾರದ ಸೌಲಭ್ಯಗಳು ಈ ಜಾತಿಗಳಿಗೆ ಸಿಗುವಂತೆ ಮಾಡಲು ನಿತೀಶ್ ‘ಮಹಾದಲಿತ್ ವಿಕಾಸ್ ಮಿಷನ್’ ಹುಟ್ಟುಹಾಕಿದರು. ರಾಜಕೀಯ ಒತ್ತಡಕ್ಕೆ ಮಣಿದು ಪಾಸಿ (ಹೆಂಡ ಇಳಿಸುವವರು), ದೋಬಿ (ಮಡಿವಾಳರು) ಜಾತಿಗಳನ್ನು ಮಹಾದಲಿತರೊಳಗೆ ಸೇರಿಸಲಾಯಿತು. ಅಸ್ಪೃಶ್ಯತೆಯ ಸೋಂಕಿಲ್ಲದ ಪಾಸಿ, ದೋಬಿಗಳು ಮಹಾದಲಿತರಾದದ್ದು, ನಿಜ ಅಸ್ಪೃಶ್ಯರಾದ ಚಮ್ಮಾರರನ್ನು ಬೀದಿಗೆ ಇಳಿಸಿತು. 2010ರಲ್ಲಿ ನಿತೀಶ್ ನೇತೃತ್ವದ ಸರ್ಕಾರವು ಚಮ್ಮಾರರನ್ನೂ ಮಹಾದಲಿತರೆಂದು ಘೋಷಿಸಿತು. ಈ ಒಟ್ಟು ಬೆಳವಣಿಗೆಯು ಪಾಸ್ವಾನ್ ಸಮುದಾಯ- ನಿತೀಶ್ ನಡುವೆ ಅಂತರ ನಿರ್ಮಿಸಿದರೂ ರಾಜಕೀಯ ಲಾಭಕ್ಕೆ ಕುಂದು ತಂದಿರಲಿಲ್ಲ.

2011ರ ಜನಗಣತಿಯಂತೆ, ಬಿಹಾರದ ದಲಿತರಲ್ಲಿ ಪಾಸ್ವಾನರು ಶೇ 30ರಷ್ಟಿದ್ದರೆ, ಚಮ್ಮಾರರು ಶೇ 31ರಷ್ಟಿದ್ದಾರೆ. ಇಲಿ ಹಿಡಿದು ತಿನ್ನುವವರು ಎಂದು ಗುರುತಿಸಲಾಗುವ ಮುಷಹರ್ ಸಮುದಾಯ ಶೇ 16, ಪಾಸಿ, ದೋಬಿ ಜಾತಿಗಳವರು ತಲಾ ಶೇ 5, ಉಳಿದ 17 ಸಣ್ಣ ಜಾತಿಗಳವರು ಶೇ 13ರಷ್ಟಿದ್ದಾರೆ. ಬಿಹಾರ ವಿಧಾನಸಭೆಯಲ್ಲಿ ಪರಿಶಿಷ್ಟ ಜಾತಿಗಳಿಗೆ ಮೀಸಲಾದ 38, ಪರಿಶಿಷ್ಟ ಪಂಗಡಕ್ಕೆ ಮೀಸಲಾದ 2  ಕ್ಷೇತ್ರಗಳಿವೆ.

ರಾಮವಿಲಾಸ್ ಪಾಸ್ವಾನ್‌ರ ನಿಧನದ ಬೆನ್ನಲ್ಲೇ ಮಗ ಚಿರಾಗ್ ಪಾಸ್ವಾನ್, ನಿತೀಶ್ ವಿರುದ್ಧ ಬಂಡೆದ್ದದ್ದು ಚುನಾವಣೆಗೆ ಮತ್ತಷ್ಟು ತೀವ್ರತೆ ತಂದಿತ್ತು. ಕೊರೊನಾ ಲಾಕ್‌ಡೌನ್ ಸಮಯದಲ್ಲಿ ಹತಾಶರಾದ ಲಕ್ಷಾಂತರ ವಲಸೆ ಕಾರ್ಮಿಕರಲ್ಲಿ ಬಿಹಾರದ್ದು ಸಿಂಹಪಾಲು. ಅವರಲ್ಲಿ ಹೆಚ್ಚಿನವರು ದಲಿತರು. ಈ ಎಲ್ಲ ಸಂಗತಿ ಗಳಿಂದ ಪ್ರಭಾವಿತವಾದ 40 ಮೀಸಲು ಕ್ಷೇತ್ರಗಳ ಫಲಿತಾಂಶ ಬಿಹಾರದ ದಲಿತ ರಾಜಕಾರಣದೊಳಗೆ ಆಗುತ್ತಿರುವ ಪಲ್ಲಟಗಳನ್ನು ದಾಖಲಿಸುತ್ತದೆ. 2015ರ ಚುನಾವಣೆಯಲ್ಲಿ 5 ಸ್ಥಾನಗಳಿಗೆ ಸೀಮಿತವಾಗಿದ್ದ ಬಿಜೆಪಿ ಬಲ ಈ ಸಲ 10ಕ್ಕೆ ಏರಿದೆ. ಜೆಡಿಯು 11ರಿಂದ 8ಕ್ಕೆ, ಆರ್‌ಜೆಡಿ 14ರಿಂದ 9ಕ್ಕೆ, ಕಾಂಗ್ರೆಸ್ ಬಲ 5ರಿಂದ 4ಕ್ಕೆ ಇಳಿದಿದೆ. ಮಾವೊವಾದಿ ಕಮ್ಯುನಿಸ್ಟ್‌ ಪಕ್ಷದ ಬಲ 1ರಿಂದ 3ಕ್ಕೇರಿದೆ.

ಜಾತಿವಾರು ನೋಡುವುದಾದರೆ ಪಾಸ್ವಾನ್ 13, ಚಮ್ಮಾರ್ 13, ಮುಷಹರ್ 7, ಪಾಸಿ 3, ಚೌಪಾಲ್, ವಾಲ್ಮೀಕಿ ತಲಾ ಒಬ್ಬರು, ಪರಿಶಿಷ್ಟ ಪಂಗಡದ ಇಬ್ಬರು ಗೆದ್ದಿದ್ದಾರೆ. ಬಿಜೆಪಿಯಿಂದ ಗೆದ್ದ 10ರಲ್ಲಿ ಪಾಸ್ವಾನ್ 6, ಚಮ್ಮಾರ್, ಮುಷಹರ್, ವಾಲ್ಮೀಕಿ, ಎಸ್‌ಟಿ ತಲಾ ಒಬ್ಬರು ಶಾಸಕರಿದ್ದರೆ, ಜೆಡಿಯು ಗೆದ್ದ 8ರಲ್ಲಿ ಪಾಸ್ವಾನ್ 3, ಚಮ್ಮಾರ್ 2, ಮುಷಹರ್ 2, ಪಾಸಿ ಒಬ್ಬರು ಶಾಸಕರಿದ್ದಾರೆ. ಜಿತನ್ ರಾಮ್ ಮಾಂಝಿಯವರ ಹಿಂದುಸ್ಥಾನ್ ಅವಾಮ್ ಮೋರ್ಚಾದಿಂದ ಗೆದ್ದ ಮೂವರೂ ಮುಷಹರ್ ಸಮುದಾಯದವರು. ವಿಐಪಿ ಪಕ್ಷದಿಂದ ಪಾಸ್ವಾನ್ ಸಮುದಾಯದವರೊಬ್ಬರು ಗೆದ್ದಿದ್ದಾರೆ.

ಆರ್‌ಜೆಡಿಯಿಂದ ಗೆದ್ದ 9ರಲ್ಲಿ 2 ಪಾಸ್ವಾನ್, 3 ಚಮ್ಮಾರ್, 2 ಪಾಸಿ ಹಾಗೂ ಮುಷಹರ್, ಚೌಪಾಲರು ತಲಾ ಒಬ್ಬರಿದ್ದಾರೆ. ಕಾಂಗ್ರೆಸ್‌ನಿಂದ ಗೆದ್ದ ಐವರಲ್ಲಿ ಒಬ್ಬರು ಎಸ್‌ಟಿಯಾದರೆ, ನಾಲ್ವರು ಚಮ್ಮಾರರಿರುವುದು ದಲಿತ ನಾಯಕ ಬಾಬು ಜಗಜೀವನರಾಂ ಕುಟುಂಬದ ಪ್ರಭಾವವನ್ನು ತೋರಿಸುತ್ತದೆ. ತನ್ನ ನೆಲೆ ವಿಸ್ತರಿಸಿಕೊಂಡಿರುವ ಮಾವೊವಾದಿ ಕಮ್ಯುನಿಸ್ಟ್‌ ಪಕ್ಷದಿಂದ ಗೆದ್ದ ಮೂವರೂ ಚಮ್ಮಾರ ರಾದರೆ, ಸಿಪಿಐನಿಂದ ಗೆದ್ದ ಸದಸ್ಯ ಪಾಸ್ವಾನ್ ಸಮುದಾಯದವರು.

ದಲಿತರು- ಮಹಾದಲಿತರು ಎಂಬ ವಿಂಗಡಣೆಯ ನಂತರ ಮೂರು ಚುನಾವಣೆಗಳು ಬಂದು ಹೋಗಿವೆಯಾದರೂ ಮುಷಹರ್ ಬಿಟ್ಟರೆ ಉಳಿದ ಮಹಾದಲಿತರಿಗೆ ಪ್ರಾತಿನಿಧ್ಯ ನಿರೀಕ್ಷಿಸಿದಂತೆ ಸಿಕ್ಕಿಲ್ಲ. ದಲಿತ ಚಹರೆಯ ಪಕ್ಷಗಳೆನಿಸಿದ ಮಾಯಾವತಿ ನೇತೃತ್ವದ ಬಿಎಸ್‌ಪಿ, ಚಿರಾಗ್ ಅವರ ಎಲ್‌ಜೆಪಿಯು ಮೀಸಲು ಕ್ಷೇತ್ರಗಳಲ್ಲಿ ಯಾರನ್ನಾದರೂ ಸೋಲಿಸುವ ಸಾಮರ್ಥ್ಯ ಪಡೆದಿವೆಯೇ ವಿನಾ ಗೆಲ್ಲುವ ಶಕ್ತಿ ಹೊಂದಿಲ್ಲ. 40 ಮೀಸಲು ಕ್ಷೇತ್ರಗಳಲ್ಲಿ ಈ ಎರಡೂ ಪಕ್ಷಗಳು ಎರಡನೇ ಸ್ಥಾನವನ್ನೂ ಪಡೆದಿಲ್ಲ.

ಮೀಸಲು ಕ್ಷೇತ್ರಗಳಲ್ಲಿ ದಲಿತ ಮಹಿಳೆಯರ ಪ್ರಾತಿನಿಧ್ಯದ ವಿಷಯದಲ್ಲಿ ಬಿಹಾರ ಸ್ವಲ್ಪ ಮುಂದೆ ಇದೆ. ಆರ್‌ಜೆಡಿ, ಬಿಜೆಪಿಯಿಂದ ಇಬ್ಬರು ಗೆದ್ದಿದ್ದಾರೆ. ಜೆಡಿಯು, ಕಾಂಗ್ರೆಸ್, ಎಚ್ಎಎಮ್‌ನಿಂದ ತಲಾ ಒಬ್ಬರು ವಿಜೇತರಾಗಿದ್ದಾರೆ. ಭಂಗಿ ಸಮುದಾಯದ ಮಹಿಳೆ ಭಾಗೀರಥಿ ದೇವಿ ಅವರು ಆರು ದಲಿತ ಮಹಿಳಾ ಸದಸ್ಯರೊಂದಿಗೆ ಶಾಸನಸಭೆ ಪ್ರವೇಶಿಸುತ್ತಾರೆಂದರೆ ಆ ಮಟ್ಟಿಗೆ ಪ್ರಜಾಪ್ರಭುತ್ವ ಯಶಸ್ಸಿನತ್ತ ಸಾಗಿದೆ ಎಂದು ಹೇಳಬಹುದು.

ಲೇಖಕ: ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು