ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ನೆನಪಾಗುತ್ತಿದ್ದಾನೆ... ಡಾಂಟೆ

ಇಟಾಲಿಯನ್‌ ಕವಿಯ ಕೃತಿಯ ಮರುಓದು ವರ್ತಮಾನದ ಭಾರತಕ್ಕೆ ಅತ್ಯಂತ ಪ್ರಸ್ತುತ
Last Updated 14 ಏಪ್ರಿಲ್ 2022, 20:30 IST
ಅಕ್ಷರ ಗಾತ್ರ

ಡಾಂಟೆ ಮಧ್ಯಯುಗದ ಇಟಾಲಿಯನ್ ಕವಿ. ಅವನ ‘ಡಿವೈನ್ ಕಾಮಿಡಿ’ (ಮೂಲ ಹೆಸರು, ಕಾಮಿಡಿಯಾ) ಇಟಾಲಿಯನ್ ಭಾಷೆಯ ಶ್ರೇಷ್ಠ ಸಾಹಿತ್ಯ ಕೃತಿಯೆಂದು ಪರಿಗಣಿತವಾಗಿದೆ. ಕಾಮಿಡಿಯಾ, ಅಂದರೆ ಸುಖಾಂತ್ಯ. ಯಾಕೆಂದರೆ, ಸತ್ತ ಮನುಷ್ಯನ ಆತ್ಮವು ನರಕ ಮತ್ತು ಪ್ರಾಯಶ್ಚಿತ್ತ ಲೋಕಗಳನ್ನು ದಾಟಿ, ಸ್ವರ್ಗ ತಲುಪಿ ದೇವರ ದರ್ಶನ ಪಡೆಯುವುದರೊಂದಿಗೆ
ಅಂತ್ಯವಾಗುತ್ತದೆ ಇದು.

ಈ ಕೃತಿಯ ಮರುಓದು, ಎರಡು ಕಾರಣಗಳಿಗಾಗಿ ವರ್ತಮಾನದ ಭಾರತಕ್ಕೆ ಅತ್ಯಂತ ಪ್ರಸ್ತುತವಾಗಿದೆ: ಆ ಕಾಲದ ಕ್ಯಾಥೊಲಿಕ್ ಧರ್ಮಗುರುಗಳ ದುರ್ವ್ಯವಹಾರ
ಗಳನ್ನು ಡಾಂಟೆ ತರಾಟೆಗೆ ತೆಗೆದುಕೊಂಡ ರೀತಿ ಮತ್ತು ಶಾಸ್ತ್ರೀಯ ಭಾಷೆ ಲ್ಯಾಟಿನ್ ಬದಲಾಗಿ ಪ್ರಾದೇಶಿಕ ಆಡುಭಾಷೆ ಟಸ್ಕನ್ ಇಟಾಲಿಯನ್‌ನಲ್ಲಿ ಬರೆದು ಜನಸಾಮಾನ್ಯರನ್ನು ತನ್ನ ಓದುಗರನ್ನಾಗಿಸಿದ್ದು.

ಕಾಮಿಡಿಯಾವನ್ನು ಡಾಂಟೆ 1308ರಲ್ಲಿ ಆರಂಭಿಸಿ, 1320ರಲ್ಲಿ ಪೂರ್ಣಗೊಳಿಸಿದ. ಬೈಬಲ್‌ನಲ್ಲಿ ಚಿತ್ರಣಗೊಂಡ ನರಕ, ಪ್ರಾಯಶ್ಚಿತ್ತ ಮತ್ತು ಸ್ವರ್ಗಗಳ ಪರಿಕಲ್ಪನೆಯನ್ನು ಕ್ಯಾಥೊಲಿಕ್ ಧರ್ಮಗುರುಗಳು ತಮಗಿಷ್ಟಬಂದಂತೆ ಉಪದೇಶಿಸಿ, ಜನಸಾಮಾನ್ಯರ ಮುಗ್ಧತೆಯ ಲಾಭ ಪಡೆದು ಅವರಲ್ಲಿ ಪಾಪದ ಭಯ ಹುಟ್ಟಿಸಿ, ಪ್ರಾಯಶ್ಚಿತ್ತಕ್ಕೆಂದು ದುಬಾರಿ ಪರಿಹಾರ ಮಾರ್ಗ ಸೂಚಿಸಿ ಲೂಟಿ ಮಾಡುವುದನ್ನು ಕಣ್ಣಾರೆ ನೋಡಿದ್ದ ಡಾಂಟೆ. ಸ್ವರ್ಗ, ನರಕವೆಂದರೆ ಅದಲ್ಲ, ಸರಳ ಮಾರ್ಗವಿದೆ ಎನ್ನುವ ಧ್ಯೇಯದೊಂದಿಗೆ, ಪರ್ಯಾಯ ಧರ್ಮಸೂತ್ರವನ್ನು ಜನರಿಗೆ ನೀಡಬೇಕೆನ್ನುವ ಮಹದಾಸೆಯಿಂದ ಈ ಮೇರುಕೃತಿಯ ರಚನೆಗೆ ಮುಂದಾಗುತ್ತಾನೆ.

ವರ್ತಮಾನದ ಜಗತ್ತಿನಲ್ಲಿ ಧರ್ಮಗಳ ನಡುವೆ ಹೆಚ್ಚುತ್ತಿರುವ ಕಂದಕಗಳ ಮಧ್ಯೆ, ಡಾಂಟೆ ನಮಗೆ ಹೆಚ್ಚು ಪ್ರಸಕ್ತವಾಗಿ ಕಾಣಿಸುತ್ತಾನೆ. ಅವನ ಕೃತಿಯಲ್ಲಿ ಕ್ರೈಸ್ತ ಮತ್ತು ಇಸ್ಲಾಂ ಧರ್ಮದ ಅನುಯಾಯಿಗಳ ಸೌಹಾರ್ದ ಸಮನ್ವಯವನ್ನು ನೋಡಬಹುದು. ಡಾಂಟೆಯ ಪಯಣಕ್ಕೆ ಮಾರ್ಗದರ್ಶಕನಾಗಿ ಮುನ್ನಡೆಸುವವನು ಗುರುಸಮಾನನಾದ ಲ್ಯಾಟಿನ್ ಸಾಹಿತಿ ವರ್ಜಿಲ್. ಇಸ್ಲಾಂ ಅನುಯಾಯಿಗಳನ್ನು ಕೂಡ ಡಾಂಟೆ ತನ್ನ ಪಯಣದಲ್ಲಿ ಭೇಟಿಯಾಗುತ್ತಾನೆ. ವಿಶೇಷ ವೆಂದರೆ, ಕ್ರೈಸ್ತ ಪರಿಕಲ್ಪನೆಯ ಸಾವಿನ ನಂತರದ ಲೋಕಗಳಲ್ಲಿ ಭೇಟಿಯಾಗುವ ಅನ್ಯಧರ್ಮೀಯರನ್ನು ಸಂಯಮದಿಂದ ಚಿತ್ರಿಸಿ, ಅವರನ್ನು ತನ್ನ ಸಹಪಯಣಿಗರನ್ನಾಗಿಸುತ್ತಾನೆಯೇ ವಿನಾ ಇಲ್ಲಿ ಅನ್ಯಧರ್ಮಗಳ ನಿಂದನೆಯಿಲ್ಲ, ಬದಲಾಗಿ ಸಹಿಷ್ಣುತೆಯಿದೆ.

ಸದ್ಯ, ಪ್ರಾದೇಶಿಕ ಭಾಷೆಗಳ ಸ್ಥಾನದಲ್ಲಿ ಹಿಂದಿಯನ್ನು ಹೇರಬೇಕೆನ್ನುವ ಹೇಳಿಕೆಗಳ ನಡುವೆ, ಡಾಂಟೆಯ ನಡೆ ವಿಶೇಷವೆನಿಸುತ್ತದೆ. ತನ್ನ ಕಾಲದ ಸಾಹಿತ್ಯ ಕ್ಷೇತ್ರದಲ್ಲಿ ಪ್ರಾಬಲ್ಯ ಹೊಂದಿದ್ದ ಬುದ್ಧಿವಂತರ ಭಾಷೆ, ಲ್ಯಾಟಿನ್‌ನ ಸ್ಥಾನದಲ್ಲಿ ತನ್ನ ಹುಟ್ಟೂರು ಫ್ಲಾರೆನ್ಸ್‌ನ ಆಡುಭಾಷೆ ಟಸ್ಕನ್ ಇಟಾಲಿಯನ್‌ನಲ್ಲಿ ಬರೆಯುವುದರ ಮೂಲಕ ತನ್ನ ಸಾಹಿತ್ಯವನ್ನು ಜನಸಾಮಾನ್ಯರಿಗೆ ತಲುಪಿಸಿದ್ದ. ಇದು ಇಟಾಲಿಯನ್ ಭಾಷೆಯ ಬೆಳವಣಿಗೆಗೆ ಮುನ್ನುಡಿಯಾಗಿ, ಆನಂತರದ ದಿನಗಳಲ್ಲಿ ಶ್ರೇಷ್ಠ ಸಾಹಿತ್ಯ ಇಟಾಲಿಯನ್ ಭಾಷೆಯಲ್ಲಿ ಬರಲಾರಂಭಿಸಿತು. ಮಾತ್ರವಲ್ಲ, ಅವನು ಬಳಸಿದ ಟಸ್ಕನ್ ಇಟಾಲಿಯನ್ ಭಾಷೆ, ಇಟಲಿಯ ಅಧಿಕೃತ ಭಾಷೆಯ ಸ್ಥಾನ ಪಡೆಯಿತು. ವಿಶೇಷವೆಂದರೆ, ಸುಮಾರು 80 ವರ್ಷಗಳ ನಂತರ ಇಂಗ್ಲಿಷಿನ ಆದಿಕವಿ ಚಾಸರ್ ಕೂಡ ಶಾಸ್ತ್ರೀಯ ಭಾಷೆಗಳನ್ನು ಬಿಟ್ಟು, ಲಂಡನ್ನಿನ ಇಂಗ್ಲಿಷಿನಲ್ಲಿ ಬರೆದು ಅದನ್ನು ಅಧಿಕೃತ ಇಂಗ್ಲಿಷ್ ಭಾಷೆಯನ್ನಾಗಿಸಿದ. ಈ ರೀತಿ, ಯುರೋಪಿನಲ್ಲಿ ಪ್ರಾದೇಶಿಕ ಭಾಷೆಗಳ ಸಾಹಿತ್ಯದ ಬೆಳವಣಿಗೆಗೆ ಡಾಂಟೆ ಕಾರಣನಾಗುತ್ತಾನೆ.

ಈ ಕೃತಿಯ ಮೂರು ಭಾಗಗಳಾದ ಇನ್ಫರ್ನೋ (ನರಕ), ಪುರ್ಗಟೋರಿಯೊ (ಪ್ರಾಯಶ್ಚಿತ್ತ) ಮತ್ತು ಪ್ಯಾರಾಡಿಸೊ (ಸ್ವರ್ಗ), ಬೈಬಲ್‌ಗಿಂತ ವಿಭಿನ್ನ ಮತ್ತು ಸರಳವಾದ ಮರಣಾನಂತರದ ಜೀವನವನ್ನು ಕೊಡುತ್ತವೆ. ಇಲ್ಲಿ ತಪ್ಪು ಮಾಡಿದವನು ಯಾರೇ ಆಗಿರಲಿ, ಅವನಿಗೆ ನಿರ್ದಾಕ್ಷಿಣ್ಯವಾಗಿ ಶಿಕ್ಷೆ ಸಿಗುತ್ತದೆ. ಹಾಗಾಗಿ, ಡಾಂಟೆಯ ನರಕದಲ್ಲಿ ಧರ್ಮಗುರುಗಳು ಕೂಡ ಜನಸಾಮಾನ್ಯರನ್ನು ವಂಚಿಸಿದ್ದಕ್ಕಾಗಿ ಘೋರ ಶಿಕ್ಷೆ ಅನುಭವಿಸುತ್ತಾರೆ. ಈ ಕೃತಿಯು ಮನುಷ್ಯನ ಆತ್ಮದ ಪಯಣವಾಗಿದ್ದರಿಂದ, ಡಾಂಟೆ ಬೇರೆ ಯಾರನ್ನೂ ಸಾಯಿಸದೆ, ಸ್ವತಃ ಮುಖ್ಯಪಾತ್ರವಾಗಿ ನರಕಕ್ಕೆ ಪಯಣಿಸುತ್ತಾನೆ. ಅಲ್ಲಿ ಸಂಪೂರ್ಣ ಕತ್ತಲಲ್ಲಿ ಕ್ರೂರ ಮೃಗಗಳ ನಡುವೆ ಸಿಲುಕಿ ಕಷ್ಟಪಡುತ್ತಾನೆ. ಆದರೆ ಅವನಿಗಿರುವ ಆಶಾದೀಪವೆಂದರೆ, ದೂರದಲ್ಲಿರುವ ಪರ್ವತದ ಹಿಂದೆ ಕಾಣಿಸುವ ಸೂರ್ಯನ ಕಿರಣ. ಅದು ತಾನು ತಲುಪಬೇಕಿರುವ ಸ್ವರ್ಗದ ಪ್ರವೇಶದ್ವಾರವೆಂದು ಅವನಿಗೆ ತಿಳಿದಿದೆ. ನರಕದಲ್ಲಿ ಮನುಷ್ಯನ ಪಾಪಕರ್ಮಗಳಿಗೆ ಅನುಸಾರವಾಗಿ ವಿಭಿನ್ನ ಶಿಕ್ಷೆಗಳನ್ನು
ಕೊಡುತ್ತಿರುವುದನ್ನು ನೋಡಿ ವಿಚಲಿತನಾಗುವ ಅವನಿಗೆ, ವರ್ಜಿಲ್ ಆತ್ಮಸ್ಥೈರ್ಯ ತುಂಬುತ್ತಾನೆ.

ಇಲ್ಲಿಂದ ಮುಂದಕ್ಕೆ, ತಮ್ಮ ಪಾಪಗಳಿಂದ ಮುಕ್ತಿ ಕಾಣಬಯಸುವವರಿಗೆ ಪ್ರಾಯಶ್ಚಿತ್ತ ಲೋಕದ ಪ್ರವೇಶ ದೊರೆಯುತ್ತದೆ. ಇಲ್ಲಿ, ಪಾಪಗಳ ಶುದ್ಧೀಕರಣ ನಡೆಯುತ್ತದೆ. ಡಾಂಟೆಯ ಆತ್ಮಸಖಿ ಬಿಯಾಟ್ರಿಸ್ ಸ್ವರ್ಗದಲ್ಲಿ ಅವನನ್ನು ಬರಮಾಡಿಕೊಂಡು ಮಾರ್ಗದರ್ಶನ ನೀಡುತ್ತಾಳೆ. ಸದ್ಗುಣಗಳ ಆಕರವಾದ ಸ್ವರ್ಗದಲ್ಲಿ, ಡಾಂಟೆ ಹಲವಾರು ಮಹಾನ್ ಸಂತರನ್ನು ಭೇಟಿ ಮಾಡಿ ಮಾತುಕತೆಯಾಡುತ್ತಾನೆ. ಅಂತಿಮವಾಗಿ ಡಾಂಟೆಗೆ ದೇವರ ದರ್ಶನವಾಗುವುದರೊಂದಿಗೆ ಈ ಕೃತಿ ಮುಕ್ತಾಯಗೊಳ್ಳುತ್ತದೆ.

ಕೊನೆಯದಾಗಿ, ಮನುಷ್ಯ ಜಗತ್ತಿಗೆ ಡಾಂಟೆ ಕೊಟ್ಟ ಸಂದೇಶವೆಂದರೆ, ‘ಜೀವನವಿರುವುದು ವಿವೇಚನಾರಹಿತವಾಗಿ ಬದುಕುವುದಕ್ಕಲ್ಲ, ಬದಲಾಗಿ, ಸದ್ಗುಣ ಮತ್ತು ಜ್ಞಾನ ಸಂಪಾದಿಸಲು’.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT