ಬುಧವಾರ, ಸೆಪ್ಟೆಂಬರ್ 23, 2020
27 °C
ಕಾಲವಶರಾದವರನ್ನು ಸಮಾಜಹಿತ ಕೈಂಕರ್ಯಗಳಲ್ಲಿ ಕಾಣಲು ಧಾರಾಳ ಅವಕಾಶಗಳಿವೆ

ಸಂಗತ | ಸಾವು: ಬದಲಾಗಬೇಕು ನಿಲುವು

ಯೋಗಾನಂದ Updated:

ಅಕ್ಷರ ಗಾತ್ರ : | |

Prajavani

ಮೃತ ಪತ್ನಿಯ ಪ್ರತಿಮೆಯನ್ನು ಹೊಸ ಮನೆಯಲ್ಲಿ ಪ್ರತಿಷ್ಠಾಪಿಸಿ, ಅವರ ಅಗಲಿಕೆಯನ್ನು ತುಂಬಿಕೊಳ್ಳಲು ಪ್ರಯತ್ನಿಸಿದ ವರದಿ (ಪ್ರ.ವಾ., ಆ. 12) ಕಣ್ಣಾಲಿಗಳನ್ನು ತೇವಗೊಳಿಸಿತು. ಕಾಲಕ್ಕೆ ಸಂದ ಪ್ರೀತಿಪಾತ್ರರು ನಮ್ಮೊಂದಿಗೆ ಇದ್ದಂತೆಯೇ ತೋರುವ ಭಾವದ ಇದಕ್ಕೂ ಪ್ರಖರ ಸಾಧ್ಯತೆಗಳನ್ನೂ ಯೋಚಿಸುವಂತಾಯಿತು.

ನಿಜವೆ, ಕಾಲವಾದ ಆಪ್ತೇಷ್ಟರು ಸೃಷ್ಟಿಸುವ ಶೂನ್ಯ ಸಹಿಸುವುದು ಬಹು ಕಠಿಣ. ಆದರೆ ಸಾವು ಅಸಹಜವಲ್ಲ, ಬದುಕಿನ ಭಾಗವಾಗಿ ಸಾವನ್ನು ಅನುಸಂಧಾನಿಸದಿರುವುದೇ ಅಸಹಜ. ಚಿಕಿತ್ಸೆಗೆ ಆಸ್ಪತ್ರೆಗೆ ದಾಖಲಾಗಿರುವ ರೋಗಿಯ ಆಯುಷ್ಯವನ್ನು ವೈದ್ಯರು ವೃದ್ಧಿಸುತ್ತಾರೆಂದೇ ಬಂಧುಮಿತ್ರರು ಭಾವಿಸುತ್ತಾರೆ. ಹಾಗಾಗಿಯೇ ರೋಗಿಯ ಯಾವುದೇ ಬಗೆಯ ಸಾವಿಗೆ ವೈದ್ಯರೇ ಹೊಣೆಗಾರರಾಗುತ್ತಾರೆ! ವೈದ್ಯರಿಗಿರುವ ಇತಿಮಿತಿಗಳನ್ನು ಅರಿಯಲು ವ್ಯವಧಾನ ಮೂಲೆಗುಂಪಾಗಿರುತ್ತದೆ. ಸಾವಿನ ಅನುಮೋದನೆಗೆ ನಮ್ಮ ದಿನಮಾನಗಳ ಅನುಭವಗಳನ್ನು ಸಕಾರಾತ್ಮಕವಾಗಿ ಪರಿವರ್ತಿಸುವ ಶಕ್ತಿಯಿದೆ. ಬದುಕಿನ ಬಗ್ಗೆ ಸಾವು ಅಪಾರ ಕಲಿಸುತ್ತದೆ.

‘ಮೃತ್ಯು ಬದುಕಿರುವಾಗ ಬಾರದು, ಸತ್ತಾಗ ಕಾಡದು. ಮರಣವು ಬದುಕಿರುವವರಿಗಾಗಲೀ ಸತ್ತವರಿಗಾಗಲೀ ಸಂಬಂಧಿಸಿದ್ದೇ ಅಲ್ಲ’ ಎನ್ನುವುದುಕ್ರಿ.ಪೂ. ಮೂರನೆಯ ಶತಮಾನದ ಗ್ರೀಕ್ ತತ್ವಜ್ಞಾನಿ ಎಪಿಕ್ಯುರಸ್‍ನ ಮಾರ್ಮಿಕ ಮಾತು.

ರಾಮಾಯಣದಲ್ಲಿ ತಂದೆ ದಶರಥ ನಿಧನ ಹೊಂದಿದಾಗ ಭರತ ರೋದಿಸುತ್ತಾನೆ. ‘ಜಗತ್ತಿನಲ್ಲಿ ಎಲ್ಲರೂ ತಂದೆಯನ್ನು ಕಳೆದುಕೊಳ್ಳದೆ ವಿಧಿಯಿಲ್ಲ, ಶೋಕಿಸದಿರು’ ಅಂತ ಋಷಿಗಳು ಸಂತೈಸುತ್ತಾರೆ. ಅಂತೆಯೇ ವಿಭೀಷಣನು ಅಣ್ಣ ರಾವಣನ ಅಂತ್ಯಕ್ರಿಯೆಗೆ ಹಿಂಜರಿದಾಗ ರಾಮ ‘ಮರಣದೊಂದಿಗೆ ವೈರವೂ ನಾಶವಾಗುತ್ತದೆ, ಅಂತ್ಯಕ್ರಿಯೆ ನೆರವೇರಿಸು’ ಎನ್ನುವ ಸನ್ನಿವೇಶವೂ ಮನೋಜ್ಞ. ಇನ್ನು ಮಹಾಭಾರತದಲ್ಲಿ ನಶ್ವರತೆ ಮತ್ತೂ ನವಿರಾಗಿ ಬಿಂಬಿತವಾಗಿದೆ. ಜಗತ್ತಿನಲ್ಲಿ ಅತ್ಯಂತ ವಿಸ್ಮಯ ಯಾವುದೆಂಬ ಯಕ್ಷನ ಪ್ರಶ್ನೆಗೆ, ಮನುಷ್ಯ ತಾನು ಅಮರನೆಂದು ತಿಳಿದಿರುವುದು ಎಂಬ ಧರ್ಮರಾಜನ ಉತ್ತರ ಅದೆಷ್ಟು ನಿಷ್ಠುರ, ಬೋಧಪ್ರದ.

ಶರಣರು ಮರಣವನ್ನು ಮಹಾನವಮಿಯೆಂದು ಬರಮಾಡಿಕೊಂಡವರು. ‘ಇದ್ದಾಗ ಮಾರಕ, ಮರಣಿಸಿದಾಗ ಸ್ಮಾರಕ’ ಎಂಬ ಲೋಕದ ಡೊಂಕನ್ನು ಟೀಕಿಸುವ ಧೈರ್ಯವನ್ನೂ ಅವರು ಮೆರೆದಿದ್ದು ವಿಶೇಷ. ಇದೇ ಹಿನ್ನೆಲೆಯಲ್ಲಿ ಅಲ್ಲಮಪ್ರಭು ‘ರೂಪವಾದುದಕ್ಕೆ ಪ್ರಳಯವಾಯಿತು’ ಎನ್ನುತ್ತಾರೆ. ನಮ್ಮ ಜನಪದದಲ್ಲಿ ಇಂದಿಗೂ ‘ಮದುವೆಗೆ, ಮಣ್ಣಿಗೆ ಹೋಗಲು ತಪ್ಪಬಾರದು’ ಎಂಬ ಶ್ರೇಷ್ಠ ಕಟ್ಟುಪಾಡೊಂದು ಉಳಿದಿದೆ.

ಒಂದು ಸಂದರ್ಭ ನೆನಪಾಗುತ್ತದೆ. ಆಕೆ ತನ್ನ ಪತಿಯ ಶವದ ಮುಂದೆ ‘ಬೆಳಿಗ್ಗೆ ತಿಂಡಿ ತಿನ್ನದೆ ಹೊರಟುಹೋದರು’ ಅಂತ ಗೋಳಾಡುತ್ತಾಳೆ. ವೃದ್ಧರೊಬ್ಬರು ‘ಸರೋತು, ತಿಂಡಿ ತಿಂದು ತೇಗೋಗಂಟ ಎಮ ಸುಮ್ಕಿರತಾನ ಯೋಳು’ ಎಂದು ಸಂತೈಸುತ್ತಾರೆ. ಪ್ರಕೃತಿಯ ವಿದ್ಯಮಾನವಾದ ಸಾವಿನಲ್ಲಿ ಕ್ರೌರ್ಯ, ದಯಾಹೀನತೆಯನ್ನಲ್ಲದೆ ಸ್ವಾಭಾವಿಕತೆಯನ್ನು ಕಾಣಬೇಕಿದೆ. ಏನೋ ಆಗಬಾರದ್ದು ಆಗಿದೆ, ಆಕಾಶ ಕಳಚಿ ಬಿದ್ದಿದೆ, ತುಂಬಲಾಗದ ನಷ್ಟ, ಪ್ರಪಂಚವೇ ಬರಿದು ಮುಂತಾದ ಉದ್ಗಾರಗಳಿಗೆ ಅರ್ಥವಿಲ್ಲ. ಸಾವು ಸ್ವಾಭಾವಿಕವಾದ್ದರಿಂದ ಅದಕ್ಕೆ ನಮ್ಮ ಪ್ರತಿಕ್ರಿಯೆ ಕೂಡ ಸ್ವಾಭಾವಿಕವಾಗಿರಬೇಕು, ನೈಜವಾಗಿರಬೇಕು.

ಆತ್ಮೀಯರು ಇನ್ನಿಲ್ಲವಾದಾಗ, ಎಲ್ಲಿ ಅವರನ್ನು ಮರೆತುಬಿಡುತ್ತೇವೆಯೋ ಎಂಬ ಆತಂಕವೇ ದುಃಖವನ್ನು ಮೀರಿರುತ್ತದೆ. ಆ ಕಾರಣಕ್ಕೆ ಯಾವುದಾದರೊಂದು ಸ್ಮಾರಕವನ್ನೋ ಹೆಗ್ಗುರುತನ್ನೋ ನೆಲೆಗೊಳಿಸಲು ಮನಸ್ಸು ಹಪಹಪಿಸುವುದು ಸರಿಯೆ. ಚಿಂತಿಸಬೇಕಾದದ್ದು
ವಿಧಿವಶರಾದವರ ಬಗ್ಗೆ ಅಲ್ಲ, ಇರುವವರ ಬಗ್ಗೆ. ಆಪ್ತರ ಮೃತ್ಯುವು ಭ್ರಮೆ, ದಿಗ್ಭ್ರಮೆ, ಖಿನ್ನತೆಗಳನ್ನು ಸೃಷ್ಟಿಸಿದರೆ ಪ್ರಕೃತಿಯನ್ನು ಅಪಮಾನಿಸಿದಂತೆ.

ಆಗಿಹೋದ ನೆಂಟರಿಷ್ಟರನ್ನು ಸ್ಮರಿಸುತ್ತ, ಅವರಿಲ್ಲದ ಸ್ಥಿತಿಗೆ ಹೊಂದಿಕೊಳ್ಳುವುದೇ ಪ್ರಬುದ್ಧತೆ. ದಾರ್ಶನಿಕ ಡಿ.ವಿ.ಜಿ. ಅವರು ಅತಿ ಸರಳವಾಗಿ ಮರಣವನ್ನು ನಿರ್ವಚಿಸುತ್ತಾರೆ: ‘ಮರಣದಿಂ ಮುಂದೇನು? ಪ್ರೇತವೋ? ಭೂತವೋ?‌| ಪರಲೋಕವೋ? ಪುನರ್ಜನ್ಮವೋ? ಅದೇನೋ!|| ತಿರುಗಿ ಬಂದವರಿಲ್ಲ, ವರದಿ ತಂದವರಿಲ್ಲ| ಧರೆಯ ಬಾಳ್ಗದರಿನೇಂ– ಮಂಕುತಿಮ್ಮ||

ಮೃತರ ಹೆಸರಿನಲ್ಲಿ ಏನೆಲ್ಲ ಸಾಮಾಜಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬಹುದು. ಸಸಿ ನೆಟ್ಟು ಪೋಷಿಸಿದರೆ ಅದು ನಾಳೆ ಮರವಾಗುತ್ತದೆ. ಅದರಿಂದ ಆಮ್ಲಜನಕ ಒದಗುವುದಲ್ಲದೆ ಮೇಲ್ಮಣ್ಣಿಗೆ ಆಧಾರವಾಗುವುದು. ಹಲವಾರು ಕ್ರಿಮಿ, ಕೀಟಾದಿ ಪ್ರಾಣಿಗಳಿಗೆ ಮರ ಆಶ್ರಯ ನೀಡುತ್ತದೆ. ಎಂದಮೇಲೆ ಮರ ಒಂದು ಸಜೀವ ಸ್ಮಾರಕ. ಆಸ್ಪತ್ರೆ, ಶಾಲಾ ಕಾಲೇಜಿಗೆ ದೇಣಿಗೆ ಕೊಡಬಹುದು. ಸಂಘ, ಸಂಸ್ಥೆಗಳ ಗ್ರಂಥಾಲಯಗಳಿಗೆ ಪುಸ್ತಕಗಳನ್ನು ನೀಡಬಹುದು. ಸಂಪನ್ಮೂಲ ಭಾಷಣ, ಉಪನ್ಯಾಸಗಳ ಏರ್ಪಾಟಿಗೆ ದತ್ತಿ ಸ್ಥಾಪಿಸಬಹುದು. ಕ್ರೀಡಾ ಪಂದ್ಯಗಳನ್ನು ಆಯೋಜಿಸಬಹುದು. ಗ್ರಂಥಗಳಿಗೆ ಬಹುಮಾನ, ಪ್ರಶಸ್ತಿಗಳನ್ನು ಪ್ರತಿಷ್ಠಾಪಿಸಬಹುದು. ಅನುಕೂಲವಿದ್ದರೆ ಒಂದು ಶಾಲೆಯನ್ನೇ ತೆರೆಯಬಹುದು.

ಕಾಲವಶರಾದವರನ್ನು ಪುತ್ಥಳಿಗೂ ಮೀರಿದ ಸಮಾಜಹಿತ ಕೈಂಕರ್ಯಗಳಲ್ಲಿ ಕಾಣಲು ಧಾರಾಳ ಅವಕಾಶಗಳಿವೆ. ಪ್ರತಿಮೆ, ಪ್ರತಿರೂಪಗಳಿಗೆ ಅಳಿವುಂಟು. ಅವುಗಳ ನಿರ್ವಹಣೆಗೆ ಪರಿಶ್ರಮ, ವೆಚ್ಚ ಒಂದೆಡೆ. ಆದರೆ ಸದಾಶಯ, ಸದ್ಗುರಿ, ಉನ್ನತಾದರ್ಶಗಳು ಅವಿನಾಶಿ, ಅಮರ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.