ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಭವಿಷ್ಯದ ಭೂತ’ಗಳ ಡಿಎನ್‌ಎ!

Last Updated 19 ಏಪ್ರಿಲ್ 2019, 19:50 IST
ಅಕ್ಷರ ಗಾತ್ರ

ಬಜಾರ್‌ದಾಗ್‌ ಸಂತಿ ಮಾಡುವಾಗ ಒಂದೆಡೆ, ‘ಅಬ್‌ ಹೋಗಾ ನ್ಯಾಯ್‌’ ಘೋಷಣೆ ಕಿವಿಗೆ ಬೀಳಾಕತ್ತಿದ್ರ, ಇನ್ನೊಂದು ಕಡೆ, ‘ಫಿರ್‌ ಏಕ್‌ ಬಾರ್‌ ಮೋದಿ ಸರ್ಕಾರ್‌’ ಕೇಳಾಕತ್ತಿತ್ತು. ಆ ಗದ್ದಲದಾಗ್‌ ಕಾಯಿಪಲ್ಲೆ ಅಂಗಡಿ ಮುಂದ್‌ ನಿಂತು ಹೆಂಡ್ತಿ ಏನೇನ್‌ ತರಾಕ್‌ ಹೇಳ್ಯಾಳ್‌ ಅಂತ ನೆನಪ್‌ ಮಾಡ್ಕೊತ್ತಿದ್ದೆ. ಏಕಾಏಕಿ ಬೆನ್ನಿಗೆ ರಪ್ಪನೆ ಏಟ್‌ ಬಿದ್ದಿದ್ದಕ್ಕ ತಿರುಗಿ ನೋಡಿದ್ರ ಮುಖವಾಡ ಧರಿಸಿದ್ದವನ ನೋಡಿ ಬೆಚ್ಚಿಬಿದ್ದೆ.

‘ಏಯ್‌, ನನ್ನ ಮಾರಿಮ್ಯಾಗ್‌ ದೆವ್ವ ಕುಣ್ಯಾಕತ್ತದ ಏನ್‌’ ಅಂತ ಪರಿಚಿತ ದನಿ ಕೇಳಿ ಸಮಾಧಾನ ಆಗೂದಕ್ಕೂ, ಪ್ರಭ್ಯಾ ಮುಖವಾಡ ಕಳಚಿ ಹೀ ಹೀ ಅಂತ ಹಲ್‌ ಕಿಸಿಯುವುದಕ್ಕೂ ಸರಿಹೋಯ್ತು.

‘ಅಭ್ಯರ್ಥಿ ಪರವಾಗಿ ವೋಟ್ ಕೇಳುದಕ್ಕ ಬ್ಯಾರೆದವ್ರ ಮುಖವಾಡ ಹಾಕ್ಕೊಂಡಿಯಲ್ಲ. ಇದೆಂಥಾ ರಾಜಕಾರಣಲೇ’ ಎಂದೆ. ‘ಇವ್ರ ಹೆಸರ್‌ನಾಗ್‌ ವೋಟ್‌ ಬೀಳು ಛಾನ್ಸ್‌ ಭಾಳ್‌ ಅದಾವ್‌’ ಅಂದ. ‘ಇನ್ನೊಬ್ಬರ ಹೆಸರ್‌ನ್ಯಾಗ್‌ ಲಾಗಾ ಹಾಕೋದು ಎಷ್ಟ್‌ ದಿನ ನಡೀತದ. ಹೆಂಗ್‌ ನಡ್ದದ ಪ್ರಚಾರದ ಜೋಷ್‌’ ಅಂತ ಕೇಳುತ್ತಿದ್ದಂತೆ, ‘ಅದರ್‌ ಬಗ್ಗೇನ್‌ ಹೇಳುದೈತಿ ಬಾ’ ಅಂತ ನನ್ನ ಎಳಕೊಂಡು ಪಕ್ಯಾನ ಚಾದಂಗಡಿಗೆ ಹೋದ.

ಎರ‍್ಡ ಹಾಫ್‌ ಕೇಟಿ ತಂದಿಟ್ಟ ಪಕ್ಯಾನ ನೋಡತಿದ್ಹಂಗ್‌, ‘ನೀ ವರ್ಷಗಳಿಂದ ಚಹಾ ಮಾರಾಕತ್ತಿ. ನಸೀಬ್‌ ತೆರ‍್ದದ ಏನ್‌. ಚೌಕೀದಾರ್‌ ಆದ್ರ ಭವಿಷ್ಯದಾಗರs ಅದೃಷ್ಟ ಹುಡ್ಕೊಂಡ್‌ ಬರಬಹುದು’ ಎಂದೆ.

‘ಅನೇಕರು ತಮ್ಮ ಹೆಸರಿನ ಹಿಂದ್‌ ಮುಂದ ಚೌಕೀದಾರ್‌ ಅಂತ ಬ(ರ)ಡಕೋಳಾಕತ್ತಾರ್‌. ಚಾಯ್‌ವಾಲಾ ಹೆಂಗ್‌ ಮರ‍್ತ ಹೋಗೆದಲ್ಲ, ಹಂಗ್‌, ಇದು ಕೂಡ ಎರಡೆ ದಿನದಾಗ್ ಹಳ್ಳಾ ಹಿಡ್ಕೊಂಡ್‌ ಹೋಗ್ತದ. ಹೊಲಾ – ಮನಿ, ಫ್ಯಾಕ್ಟರಿ ಕಾಯೊ ಕೆಲ್ಸಕ್‌ ಬರ‍್ತೀರಿ ಏನ್‌ ಅಂತ ಕೇಳ್ಕೊಂಡ್‌ ಬರಾವ್ರನ್ನ ನೋಡಿ ಚೌಕೀದಾರ್‌ ಹೆಸರ್ನ ಬರ್ಕೊಂಡ್ ಸ್ಪೀಡ್‌ನ್ಯಾಗ್‌ ಅಳಸಿ ಹಾಕ್ತಾರ್‌ ನೋಡ್ರಿ’ ಅಂದ ಪಕ್ಯಾ ಗ್ವಾಡಿಗೆ ಉಗುಳ್‌ ಹಚ್ಚಿದ.

‘ಕಾಕಾರ ಡಿಎನ್‌ಎ ಅಂದ್ರೇನ್’ ಅಂತ ಪಕ್ಯಾನ ಹೆಂಡ್ತಿ ಪಮ್ಮಿ, ಬಿಸಿಬಿಸಿ ಭಜಿ ತಂದು ಇಡುತ್ತಲೇ ಕೇಳಿದಳು. ‘ಹುಟ್ಟು ಗುಣಾ ಬೇ’ ಎಂದೆ ತಟಕ್ಕನೆ. ‘ಇದರ್ ಡಿಎನ್ಎದಾಗ ಚಾ ಮಾರೋದು, ಕಪ್ಪು ಬಸಿ ತೊಳ್ಯೋದs ಅದ ಅಂತ ಗೊತ್ತಿದ್ರ ನಾ ಇವ್ನ ಈ ಜನ್ಮದಾಗ ಕಟ್ಕೊತ್ತಿರಲಿಲ್ಲ ನೋಡ್ರಿ’ ಎಂದಳು. ‘ಡಿಎನ್‌ಎ ನೋಡಿ ಟಿಕೆಟs ಕೊಡುದಿಲ್ಲ, ಇನ್ನ ಹೆಣ್ ಕೊಡ್ತಾರೇನ್‌ ಮೂದೇವಿ’ ಅಂತ ಪಕ್ಯಾ ಮೂದಲಿಸಿದ.

‘ಪ್ರಭ್ಯಾ, ನಿಮ್ಮ ಪಾರ್ಟಿಯವರು ಅಭ್ಯರ್ಥಿಗಳ ಡಿಎನ್‌ಎ ನೋಡಿ ಟಿಕೆಟ್‌ ಕೊಡುದಿಲ್ಲಂತ ಮುಖಂಡ ನೊಬ್ಬ ಹೇಳಿ, ಅನೇಕರ ಅನಂತ್‌ ಸಂತೋಷಕ್ಕ ಕಲ್‌ ಹಾಕ್ಯಾನಲ್ಲ’ ಎಂದೆ.

‘ಹೌದು, ಏನೀಗ? ಕೆಲವರಿಗೆ ಕುಟುಂಬದ ಭೂತ್‌ ಬಡದಿದ್ರ, ಇನ್ನೂ ಕೆಲವರಿಗೆ ಡಿಎನ್‌ಎ ಭೂತ್‌ ಹಿಡ್ಕೊಂಡದ’ ಅಂತ ದೆವ್ವ ಬಡ್ಕೊಂಡವರ ಥರಾ ಬಡಬಡಿಸತೊಡಗಿದ. ಅವನ ಮೈಯ್ಯಾಗಿನ ಭೂತದ ಡಿಎನ್‌ಎ ಸಕ್ರಿಯಗೊಂಡಂಗ್‌ ಭಾಸವಾಗಿ, ಮಮತಾ ದೀದಿ ರಾಜ್ಯದಾಗ ‘ಭವಿಷ್ಯದ ಭೂತಗಳು’ ಸಿನಿಮಾ ಸುದ್ದಿ ಮಾಡಿದ್ದೂ ನೆನಪಾತು.

‘ಇಂಥಿಂಥವರು ನನಗ್‌ ವೋಟ್‌ ಹಾಕದಿದ್ರ ಸರಿ ಇರುವುದಿಲ್ಲ, ಸನ್ಯಾಸಿಗೆ ವೋಟ್ ಹಾಕದಿದ್ದರೆ ಶಾಪ ತಟ್ಟತದ್‌, ನಿಮ್ಮ ಮೊದಲ ಮತ ಸೈನಿಕರಿಗೆ ಮೀಸಲಾಗಿರಲಿ, ಅಲಿ; ಬಜರಂಗ ಬಲಿ ಅಂತ ಕೆಲ ಭೂತಗಳು ಬಡಬಡಿಸ್ಯಾವ್‌. ದೊಡ್ಡ ಭೂತವೊಂದು ದೇವರನಾಡಿನ್ಯಾಗ್‌ ಚುನಾವಣಾ ಭೂತಕ್ಕೆ ಅಂಜಿ ಬ್ಯಾರೆಕಡಿ ಅಯ್ಯಪ್ಪಸ್ವಾಮಿ ಬಗ್ಗೆ ಮಾತಾಡೇದ್‌. ಇದಕ್ಕೆಲ್ಲ ಯಾವ ಡಿಎನ್‌ಎ ಕಾರಣ. ನಿಂಗೇನರ ಗೊತ್ತಿದ್ರ ಹೇಳ್‌’ ಅಂತ ಪ್ರಭ್ಯಾನ ಕಾಲ ಎಳೆದೆ.

‘ಇನ್ನೊಂದು ದೊ(ದ)ಡ್ಡ ಭೂತಕ್ಕ ರಫೇಲ್‌ ದೆವ್ವ ಬಡ್ಕೊಂಡದ. ಕೆಲವಕ್ಕ ಕಳ್ಳೆತ್ತು ಭೂತ ಆವರಿಸಿಕೊಂಡದ. ಇನ್ನೂ ಕೆಲವಕ್ಕ ಮೈಕ್‌ ಮುಂದ್‌ ಅಳುವ ದೆವ್ವ ಮೈಮ್ಯಾಲ್‌ ಬಂದದ’ ಅಂತ ಪ್ರಭ್ಯಾ ತಿರುಗೇಟ್‌ ಕೊಟ್ಟ.

‘ಮಾಯಾ, ಮೇನಕಾ, ಯೋಗಿ, ಆಜಂ(ಚೆಡ್ಡಿ)ಖಾನ್‌ಗೆ ಚುನಾವಣಾ ಆಯೋಗ ಸದ್ಯಕ್ಕಂತೂ ಭೂತಾ ಬಿಡಿಸೇದ್‌. ಈ ಬಾರಿ ಇನ್ನೂ ಎಂಥೆಂಥಾ ಭೂತಗಳು ಆರ‍್ಸಿ ಬರ‍್ತಾವೊ ಗೊತ್ತಿಲ್ಲ’ ಎಂದೆ. ‘ಭೂತಗಳಿಗೂ ಜಾತಿ–ಧರ್ಮ ಇರ್‍ತಾವ್‌ ಏನ್ರಿ’ ಅಂತ ಪಮ್ಮಿ ಕೇಳಿದಳು. ‘ಕೆಲ ಭೂತಗಳು ರಾಮಗ್‌ ಮೂಲ್ಯಾಗ್‌ ಕುಂದ್ರಿಸಿ, ಬಸವಣ್ಣಗ ತಗಲ್‌ ಹಾಕ್ಕೊಂಡಿರೋದು ನೋಡಿದ್ರ, ನಿನ್ನ ಮಾತ್‌ ಖರೆ ಅನಸ್ತದ’ ಎಂದೆ.

‘ಭಾರತ್‌ ಹೊಳ್ಯಾಕತ್ತದ ಅಂತ ಭರ್ಜರಿ ಪ್ರಚಾರ ಮಾಡಿದವ್ರು 2004ರಾಗ್‌ ಮಣ್ಣ ಮುಕ್ಕಿದ್ದನ್ನು ಸೋನಿಯಮ್ಮಾ, ‘ನಮೋ’ಗೆ ನೆನಪಿಸಿರುವುದನ್ನು ಮರಿಬ್ಯಾಡಪಾ’ ಎಂದು ಪ್ರಭ್ಯಾಗೆ ಮಾತಿನಾಗs ತಿವಿದೆ.

ಈ ‘ಭವಿಷ್ಯದ ಭೂತ’ಗಳಿಂದ ಮುಂದ ಇನ್ನೂ ಏನೇನ್‌ ಕೇಳಬೇಕಾಗತೈತಿ ಅಂತ ಕಿವಿ ಮುಟ್ಟಿಕೊಂಡು ಶಾಂತಂ ಪಾಪಂ ಅನ್ನುತ್ತ ಎದ್ದು ಹೊರಟೆ. ಅದೇ ಹೊತ್ತಿಗೆ ರೇಡಿಯೊದಾಗ್‌, ‘ಓ.. ಇನಿಯಾ, ತಂಗಾಳಿಯಲ್ಲಿ ನನ್ನನ್ನು ಸೇರಲೂ ಬಾ ಬಾ ಎನ್ನುವ ಮೋಹಿನಿ ಕಾಟದ ಹಾಡು, ನನ್ನ ಪಾಲಿಗೆ ‘ಭಭೂ’ಗಳೆಲ್ಲ, ‘ಓ.. ಮತದಾರಾ...ಚುನಾವಣೇಲಿ ನನಗೆ ವೋಟ್‌ ಮಾಡಲೂ ಬಾ ಬಾ..’ ಅಂತ ಹಾಡುತ್ತಿರುವಂತೆ ಭಾಸವಾಯ್ತು.

‘ಅಯ್ಯ, ಏನ್‌ ದೆವ್ವಾ, ದೆವ್ವಾ ಅಂತ ಬಡಬಡಸಾಕತ್ತೀರಿ, ಏಳ್ರಿ. ಬಿಸಿಲ್‌ ಕುಂಡಿ ಮ್ಯಾಲ್‌ ಬಿದ್ದದ್‌’ ಅಂತ ಹೆಂಡ್ತಿ ಜೋರ್‌ ಮಾಡುತ್ತಿದ್ದಂತೆ ಭಯಾನಕ ಕನಸಿನಿಂದ ಎಚ್ಚರಗೊಂಡು ಕಣ್ಣು ಹೊಸಕಿಕೊಳ್ಳುತ್ತ ಹಾಸಿಗೆ ಜಾಡಿಸಿ ಎದ್ದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT