ಗುರುವಾರ , ಏಪ್ರಿಲ್ 9, 2020
19 °C
ನಿಯಮಿತ ವಾರ್ಷಿಕ ಹಣ ಪಾವತಿಸದ ಹಾಗೂ ಬಾಕಿ ಹಣ ಉಳಿಸಿಕೊಂಡಿರುವ ದೇಶಗಳನ್ನು ಮಣಿಸಲು ದೊಡ್ಡ ತಾಕತ್ತಿನ ಈ ಸಂಸ್ಥೆ ಏನು ಮಾಡಬಹುದು?

ವಿಶ್ವಸಂಸ್ಥೆಗೂ ತಟ್ಟಿದೆ ಆರ್ಥಿಕ ಬಿಸಿ!

ಶ್ರೀಗುರು Updated:

ಅಕ್ಷರ ಗಾತ್ರ : | |

Prajavani

ಹಲವಾರು ಜಾಗತಿಕ ಒಪ್ಪಂದ, ಬಹುಪಕ್ಷೀಯ ಮಾತುಕತೆ, ಅನುಷ್ಠಾನ ಮತ್ತು ಪರಿಣಾಮಗಳ ಕುರಿತು ವಿಶ್ವದ ಎಲ್ಲ ರಾಷ್ಟ್ರಗಳನ್ನು ಹದ್ದುಬಸ್ತಿನಲ್ಲಿಡುವ ದೊಡ್ಡ ತಾಕತ್ತಿನ ವಿಶ್ವಸಂಸ್ಥೆಯು ಪ್ರಸಕ್ತ ದಿನಗಳಲ್ಲಿ ತೀವ್ರ ಹಣಕಾಸಿನ ತೊಂದರೆಗೆ ಸಿಲುಕಿದೆ. ಅಗತ್ಯ ಧನಸಂಗ್ರಹ ಇಲ್ಲದಿರುವುದರಿಂದ ತನ್ನ ಕೆಲಸ– ಕಚೇರಿಗಳಿಗೆ ಬೇಕಾದ ವಸ್ತುಗಳ ಖರೀದಿ, ಸಿಬ್ಬಂದಿ ನೇಮಕಾತಿ, ಅಧಿಕಾರಿಗಳ ಪ್ರವಾಸ ಮತ್ತು ಕಚೇರಿ ಸಮಯ ನಂತರದ ಸಭೆ, ಪಾರ್ಟಿಗಳನ್ನು ತಡೆಹಿಡಿದಿದೆ. ಸಮಾವೇಶಗಳನ್ನು ಮುಂದೂಡಿದೆ. ಈ ದಶಕದಲ್ಲೇ ಇದು ಅತ್ಯಂತ ದೊಡ್ಡ ಬಿಕ್ಕಟ್ಟು ಎಂದಿರುವ ವಿಶ್ವಸಂಸ್ಥೆ, ಪರಿಸ್ಥಿತಿ ಹೀಗೇ ಮುಂದುವರಿದರೆ ತನ್ನ ಸಿಬ್ಬಂದಿಗೆ ಸಂಬಳ ನೀಡಲೂ ಕಷ್ಟವಾಗುತ್ತದೆ ಎಂದಿದೆ.

ಮೂರನೇ ಒಂದು ಭಾಗದಷ್ಟು ಸದಸ್ಯ ರಾಷ್ಟ್ರಗಳು ವಿಶ್ವಸಂಸ್ಥೆಗೆ ಕಟ್ಟಲೇಬೇಕಾದ ನಿಗದಿತ ವಾರ್ಷಿಕ ಮೊತ್ತವನ್ನು ಬಾಕಿ ಇರಿಸಿಕೊಂಡಿರುವುದು ಬಹಿರಂಗಗೊಂಡಿದೆ. ಬಾಕಿ ಮೊತ್ತದ ಪ್ರಮಾಣದಲ್ಲಿ ಅಮೆರಿಕ ಮೊದಲ ಸ್ಥಾನದಲ್ಲಿದೆ. ಭಾರತವು ನಿಗದಿತ ಸಮಯಕ್ಕೆ ತನ್ನ ಪಾಲಿನ ಹಣ ಕಟ್ಟಿ ಮೆಚ್ಚುಗೆ ಪಡೆದುಕೊಂಡಿದೆ.

ವಿಶ್ವಸಂಸ್ಥೆಯ ಪ್ರತೀ ಸದಸ್ಯ ರಾಷ್ಟ್ರವೂ ಹೊಸ ವರ್ಷದ ಮೊದಲ ತಿಂಗಳಿನೊಳಗಾಗಿ ತನ್ನ ಪಾಲಿನ ಹಣವನ್ನು ನೀಡಬೇಕೆಂಬುದು ನಿಯಮ. ವಿಶ್ವಸಂಸ್ಥೆಯ ವಾರ್ಷಿಕ ಬಜೆಟ್ ಮತ್ತು ಆಯಾ ದೇಶದ ಆರ್ಥಿಕ ಗಾತ್ರಕ್ಕನುಗುಣವಾಗಿ ಮೊತ್ತವನ್ನುನಿಗದಿಗೊಳಿಸಲಾಗುತ್ತದೆ. ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಕಾಯಂ ಸದಸ್ಯತ್ವ ಹೊಂದಿರುವ ಅಮೆರಿಕ, ಬ್ರಿಟನ್, ಫ್ರಾನ್ಸ್, ಚೀನಾ ಮತ್ತು ರಷ್ಯಾ ಬೇರೆ ದೇಶಗಳಿಗೆ ಹೋಲಿಸಿದರೆ ಹೆಚ್ಚೇ ಹಣ ನೀಡುತ್ತವೆ. ಹೀಗೆ ಹಣ ನೀಡುವ ಸದಸ್ಯ ರಾಷ್ಟ್ರಗಳು ಅಂತರರಾಷ್ಟ್ರೀಯ ಶಾಂತಿಪಾಲನಾ ಪಡೆಗೆ ಪ್ರತ್ಯೇಕ ಹಣ ನೀಡಬೇಕೆಂಬ ನಿಯಮವಿದೆ.

ಅಮೆರಿಕ ತನ್ನ ಪಾಲಿನ 2019ರ ಬಾಕಿ 647 ದಶಲಕ್ಷ ಡಾಲರ್‌ಗಳನ್ನು ( ಸುಮಾರು ₹4,529 ಕೋಟಿ) ಇಲ್ಲಿಯವರೆಗೂ ನೀಡಿಲ್ಲ. ಅಲ್ಲದೆ ಹಿಂದಿನ ವರ್ಷಗಳ ₹ 2,667 ಕೋಟಿ ಮೊತ್ತದ ಬಾಕಿ ಇರುವುದು ಈ ಬಿಕ್ಕಟ್ಟಿಗೆ ಮುಖ್ಯ ಕಾರಣ ಎನ್ನಲಾಗಿದೆ. ವಿಶ್ವಸಂಸ್ಥೆಗೆ ಸದಸ್ಯರಾಗಿರುವ 194 ದೇಶಗಳ ಪೈಕಿ 131 ದೇಶಗಳು ಈಗಾಗಲೇ ತಮ್ಮ ಭಾಗದ ಹಣ ಸಂದಾಯ ಮಾಡಿವೆ. ಉಳಿದ 63 ದೇಶಗಳು ಇನ್ನೂ ಸಂದಾಯ ಮಾಡದಿರುವುದರಿಂದ ಸುಮಾರು 1.38 ಬಿಲಿಯನ್ ಡಾಲರ್ (₹ 9,660 ಕೋಟಿ) ಬಾಕಿ ಇದೆ ಎಂದಿರುವ ವಿಶ್ವಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಆಂಟೋನಿಯೊ ಗುಟೆರಸ್, ವಿಶ್ವದ ಅನೇಕ ಕಡೆ ನಿಯೋಜಿಸಲಾಗಿರುವ ಶಾಂತಿಪಾಲನಾ ಪಡೆಗಳಿಗೆ ಮೀಸಲಾದ ಹಣವನ್ನು ಮುಂದಿನ ತಿಂಗಳಿನಿಂದ ಸಿಬ್ಬಂದಿಯ ಸಂಬಳಕ್ಕೆ ಬಳಸಲಾಗುತ್ತದೆ, ಆದ್ದರಿಂದ ಬಾಕಿ ಉಳಿಸಿಕೊಂಡಿರುವ ಸದಸ್ಯರು ಬೇಗ ಹಣ ಸಂದಾಯಿಸಬೇಕೆಂದು ಆಗ್ರಹಿಸಿದ್ದಾರೆ. ಬಾಕಿ ಉಳಿಸಿಕೊಂಡಿರುವ ರಾಷ್ಟ್ರಗಳ ಪೈಕಿ ಅಮೆರಿಕ, ಬ್ರೆಜಿಲ್, ಅರ್ಜೆಂಟೀನಾ, ಮೆಕ್ಸಿಕೊ, ಇರಾನ್, ಇಸ್ರೇಲ್ ಮತ್ತು ವೆನಿಜುವೆಲಾಗಳ ಪಾಲು ಶೇ 97ರಷ್ಟಿದೆ ಎಂದು ತಿಳಿದುಬಂದಿದೆ.

ಈ ರೀತಿಯ ಆರ್ಥಿಕ ಬಿಕ್ಕಟ್ಟು 1960ರಲ್ಲೂ ಇತ್ತು ಎಂದಿದ್ದಾರೆ ತಜ್ಞರು. ಕಾಂಗೊ ಗಣರಾಜ್ಯದಲ್ಲಿ ಶಾಂತಿಪಾಲನಾ ಪಡೆಯ ಕಾರ್ಯಾಚರಣೆಯನ್ನು ವಿರೋಧಿಸಿದ್ದ ಅಂದಿನ ಸೋವಿಯತ್ ಒಕ್ಕೂಟ ಮತ್ತು ಫ್ರಾನ್ಸ್‌ ತಮ್ಮ ಪಾಲಿನ ಹಣ ನೀಡಿರಲಿಲ್ಲ. ಅಮೆರಿಕ ಕೂಡ ಎರಡನೇ ಜಾರ್ಜ್‌ ಬುಷ್‌ ಅವರ ಅಧಿಕಾರಾವಧಿಯಲ್ಲಿ ವಿಶ್ವಸಂಸ್ಥೆಗೆ ಹಣ ನೀಡುವುದನ್ನು ನಿಲ್ಲಿಸಿತ್ತು. ಒಪ್ಪಂದಗಳು, ಕಾರ್ಯಸೂಚಿ, ನೀಲನಕ್ಷೆಗಳನ್ನು ಬಳಸಿ 2030ರ ವೇಳೆಗೆ ಸಾಧಿಸಬೇಕಿರುವ ಸುಸ್ಥಿರ ಅಭಿವೃದ್ಧಿಯ ಕೆಲಸಗಳು ತೀವ್ರವಾಗಲಿವೆ. ಭೂಗೋಳವನ್ನು ಬಾಧಿಸುತ್ತಿರುವ ಹವಾಮಾನ ವೈಪರೀತ್ಯದಂತಹ ಬೃಹತ್ ಸಮಸ್ಯೆಯನ್ನು ಎದುರಿಸಲು ಬಹುರಾಷ್ಟ್ರಗಳ ಪ್ರಾತಿನಿಧ್ಯ ಮತ್ತು ನೆರವು ಬೇಕೇಬೇಕು. ಅವೆಲ್ಲವನ್ನೂ ನಿಭಾಯಿಸಲು ವಾರ್ಷಿಕ 2.87 ಬಿಲಿಯನ್ ಡಾಲರ್‌ನ (₹20,090 ಕೋಟಿ) ಅವಶ್ಯಕತೆ ಇದೆ.

ಸಿರಿಯಾ, ಇರಾಕ್ ಮತ್ತು ಮ್ಯಾನ್ಮಾರ್‌ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ತನಿಖಾ ಸಂಸ್ಥೆಗಳಿಗೆ 60 ಜನರ ಹೊಸ ನೇಮಕಾತಿ ನಡೆಯಬೇಕಿದೆ. ಹಣ ಇರದಿದ್ದುದರಿಂದ ಅದನ್ನು ನಿಲ್ಲಿಸಲಾಗಿದೆ. 2020ಕ್ಕೆ 75ನೇ ವರ್ಷಾಚರಣೆ ನಡೆಯಬೇಕಿರುವ ವಿಶ್ವಸಂಸ್ಥೆಯ ಜಿನೀವಾ, ವಿಯೆನ್ನಾ, ನೈರೋಬಿ, ನ್ಯೂಯಾರ್ಕ್ ಶಾಖೆಗಳ ಕೆಲಸಗಳೂ ಏರುಪೇರಾಗಲಿವೆ. ಆಂಟೋನಿಯೊ ಅವರ ಹೇಳಿಕೆಯನ್ನು ಟೀಕಿಸಿರುವ ಡೊನಾಲ್ಡ್‌ ಟ್ರಂಪ್, ಬಾಕಿ ಇರುವುದು ಅಮೆರಿಕದ್ದಷ್ಟೇ ಅಲ್ಲ, ಬೇರೆ ದೇಶಗಳೂ ಬಾಕಿ ಉಳಿಸಿಕೊಂಡಿವೆ, ಅವುಗಳಿಂದಲೂ ವಸೂಲು ಮಾಡಿ ಎಂದು ಟ್ವೀಟ್ ಮಾಡಿದ್ದಾರೆ. ಅಲ್ಲದೆ, ತಾವು ಕೊಡುತ್ತಿರುವ ಹಣ ಕೆಲವು ಅನುಪಯುಕ್ತ ಕೆಲಸಗಳಿಗೆ ಖರ್ಚಾಗುತ್ತಿರುವುದು ತಮಗೆ ಬೇಕಿಲ್ಲ ಎಂದಿದ್ದಾರೆ. ಟ್ರಂಪ್‍ ನೇತೃತ್ವದ ಸರ್ಕಾರದ ಕಾರ್ಯವೈಖರಿಯಿಂದ ವಿಶ್ವಸಂಸ್ಥೆ ಕಂಗೆಟ್ಟು ಕೂತಿದೆ.

ಮೊತ್ತ ಪಾವತಿ ಬಾಕಿ ಉಳಿಸಿಕೊಂಡಿರುವ ದೇಶಗಳನ್ನು ಬಗ್ಗಿಸಲು ಹೆಚ್ಚಿನ ದಂಡ ಹಾಕಬೇಕು ಮತ್ತು ಅವುಗಳ ವ್ಯಾಪಾರ, ವ್ಯವಹಾರಗಳ ಮೇಲೆ ಆರ್ಥಿಕ ದಿಗ್ಬಂಧನ ಹೇರಬೇಕು ಎಂದಿರುವ ತಜ್ಞರು, ಆಯಾ ದೇಶಗಳಿಗೆ ನೀಡಲಾಗಿರುವ ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ಮತದಾನದ ಹಕ್ಕನ್ನು ಕಸಿದುಕೊಂಡಾಗ ಮಾತ್ರ ಪರಿಸ್ಥಿತಿಯನ್ನು ನಿಯಂತ್ರಿಸಬಹುದು ಎಂದು ಸಲಹೆ ನೀಡಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಪ್ರತಿಕ್ರಿಯಿಸಿ (+)