ಶನಿವಾರ, 4 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: 3 ಪರೀಕ್ಷೆ ಮತ್ತು ಮೌಲ್ಯಮಾಪನದ ಗುಣಮಟ್ಟ

Published 11 ಸೆಪ್ಟೆಂಬರ್ 2023, 23:30 IST
Last Updated 11 ಸೆಪ್ಟೆಂಬರ್ 2023, 23:30 IST
ಅಕ್ಷರ ಗಾತ್ರ

ರಾಜ್ಯದಲ್ಲಿ ಇದೇ ಶೈಕ್ಷಣಿಕ ವರ್ಷದಿಂದ ಎಸ್‍ಎಸ್‍ಎಲ್‍ಸಿ ಮತ್ತು ದ್ವಿತೀಯ ಪಿಯುಸಿ ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಲು ಶಿಕ್ಷಣ ಇಲಾಖೆ ನಿರ್ಧರಿಸಿದೆ. ಪ್ರಸ್ತುತ ಪರೀಕ್ಷಾ ವ್ಯವಸ್ಥೆಯಲ್ಲಿದ್ದ ಒಂದು ವಾರ್ಷಿಕ ಮತ್ತು ಪೂರಕ ಪರೀಕ್ಷೆ ಅಥವಾ ಸಪ್ಲಿಮೆಂಟರಿಯ ಬದಲಾಗಿ, ವಾರ್ಷಿಕ ಪರೀಕ್ಷೆ ಒಂದು, ಎರಡು, ಮೂರು ಎಂದು ಮರುನಾಮಕರಣ ಮಾಡಲಾಗಿದೆ.

ಪ್ರತಿ ವಿದ್ಯಾರ್ಥಿಯ ಕಲಿಯುವ ವೇಗ ಮತ್ತು ವಿಧಾನ ಬೇರೆಯಾಗಿರುತ್ತದೆ. ಈ ರೀತಿ ಮೂರು ಪರೀಕ್ಷೆಗಳನ್ನು ನಡೆಸುವುದರಿಂದ ಅವರ ವೇಗಕ್ಕೆ ಸರಿಯಾಗಿ ಕಲಿಯುವಂತೆ ಮಾಡುವ ಮತ್ತು ಸಮಯದ ಮಿತಿಯಿಂದ ಉಂಟಾಗುವ ಒತ್ತಡ ಕಡಿಮೆ ಮಾಡುವ ಉದ್ದೇಶವನ್ನು ಇದು ಹೊಂದಿದೆ ಎಂದು ಇಲಾಖೆ ತಿಳಿಸಿದೆ. ವಿದ್ಯಾರ್ಥಿಗಳು ಮತ್ತು ಪೋಷಕರ ದೃಷ್ಟಿಯಿಂದ, ಬೇರೆ ಬೇರೆ ಹಂತಗಳಲ್ಲಿ ವರ್ಷಕ್ಕೆ ಮೂರು ಪರೀಕ್ಷೆ ನಡೆಸುವ ಈ ತೀರ್ಮಾನ ಸೂಕ್ತವಾದದ್ದು.

ಶಾಲೆಗೆ ಹೋಗುವ ಯಾವುದೇ ವಿದ್ಯಾರ್ಥಿಗೂ ಪರೀಕ್ಷೆ ಎಂದರೆ ಬಹು ದೊಡ್ಡ ಸವಾಲು. ವರ್ಷವಿಡೀ ಓದಿ, ಕಲಿತಿದ್ದನ್ನು ಎರಡು- ಮೂರು ಗಂಟೆಗಳ ಅವಧಿಯಲ್ಲಿ ನೆನಪಿಟ್ಟು ಹಾಳೆಗಿಳಿಸುವುದು, ಅದರ ಮೌಲ್ಯಮಾಪನದ ಮೇಲೆ ಅಂಕವನ್ನು ನಿರ್ಧರಿಸುವುದು ಪರೀಕ್ಷೆಯ ಕುರಿತ ಹೆದರಿಕೆ, ಒತ್ತಡವನ್ನು ಹೆಚ್ಚಿಸುತ್ತದೆ. ಒಂಬತ್ತನೇ ತರಗತಿಯವರೆಗೆ ಕಡ್ಡಾಯ ತೇರ್ಗಡೆ ಜಾರಿಯಲ್ಲಿದೆ. ಆದರೆ ಹತ್ತನೇ ತರಗತಿ ನಂತರ ಉತ್ತಮ ಕಾಲೇಜಿಗೆ ಪ್ರವೇಶ ಸಿಗಬೇಕೆಂದಾದಾಗ ಮತ್ತು ಪಿಯುಸಿಯಲ್ಲಿ ವೃತ್ತಿಪರ ಕೋರ್ಸ್, ಆನಂತರ ಉನ್ನತ ಶಿಕ್ಷಣ ಆಯ್ಕೆ ಮಾಡಿಕೊಳ್ಳುವಾಗ ಒಂದೊಂದು ಅಂಕಕ್ಕೂ ಪರದಾಡುವ ಪರಿಸ್ಥಿತಿ ಇದೆ. ವರ್ಷದಿಂದ ವರ್ಷಕ್ಕೆ ನಿರ್ಣಾಯಕವಾದ ಈ ಪರೀಕ್ಷೆಗಳಲ್ಲಿ ತೀವ್ರವಾದ ಪೈಪೋಟಿ ಹೆಚ್ಚುತ್ತಲೇ ಇದೆ. ಹೀಗಾಗಿ, ಭವಿಷ್ಯವನ್ನೇ ನಿರ್ಣಯಿಸುವ ಇಂತಹ ಪರೀಕ್ಷೆಗಳನ್ನು ವರ್ಷಕ್ಕೊಮ್ಮೆ ಎದುರಿಸುವಾಗ ವಿದ್ಯಾರ್ಥಿಗಳಲ್ಲಿ ಸಹಜವಾಗಿಯೇ ಅಪಾರವಾದ ಒತ್ತಡ ಸೃಷ್ಟಿಯಾಗುತ್ತದೆ. ಇದೇ ಕಾರಣಕ್ಕಾಗಿ ಪೋಷಕರಿಗೂ ಅಂಕ ಗಳಿಕೆಯೇ ಮುಖ್ಯವಾದ ಈ ಪರೀಕ್ಷೆಗಳ ಕುರಿತು ಎಲ್ಲಿಲ್ಲದ ಮಹತ್ವ ಮತ್ತು ಆತಂಕ.

ಈ ಪರೀಕ್ಷೆಯ ಭಯ, ಪೋಷಕರ ಅತಿಯಾದ ನಿರೀಕ್ಷೆ ಮತ್ತು ಒಂದು ಪರೀಕ್ಷೆ ಹಾಳಾದರೆ ಜೀವನ ವ್ಯರ್ಥ ಎನ್ನುವ ಮನೋಭಾವ ಹದಿಹರೆಯದ ವಿದ್ಯಾರ್ಥಿಗಳಲ್ಲಿ ತೀವ್ರವಾದ ಮಾನಸಿಕ ಒತ್ತಡಕ್ಕೆ ಪ್ರಮುಖ ಕಾರಣ. ಪರೀಕ್ಷೆ ಮತ್ತು ಫಲಿತಾಂಶದ ಸಮಯದಲ್ಲಿ ವಿದ್ಯಾರ್ಥಿಗಳಲ್ಲಿ ಆತ್ಮಹತ್ಯೆ ಪ್ರಯತ್ನವೂ ಅಧಿಕವಾಗಿರುತ್ತದೆ. ಕಡಿಮೆ ಅಂಕ ಅಥವಾ ಫೇಲ್ ಎಂದೊಡನೆ ಶಿಕ್ಷಣವನ್ನೇ ನಿಲ್ಲಿಸುವವರೂ ಅನೇಕರು.

ಸಪ್ಲಿಮೆಂಟರಿ ಪರೀಕ್ಷೆಗಳು ಇದ್ದರೂ ಆ ಹೆಸರೇ ವಿದ್ಯಾರ್ಥಿಗಳಿಗೆ ಕೀಳರಿಮೆಯನ್ನು ಉಂಟುಮಾಡುತ್ತದೆ. ಒಂದೊಮ್ಮೆ ತೇರ್ಗಡೆಯಾಗಿದ್ದರೂ ತಾವು ಬಯಸಿದಷ್ಟು ಅಂಕಗಳು ಬರದೇ ಇದ್ದಲ್ಲಿ ಮತ್ತೆ ಪ್ರಯತ್ನ ಮಾಡಲು ಬಹಳಷ್ಟು ಕಾಯಬೇಕು. ತಾವು ಓದಿದ್ದಕ್ಕೆ ಸರಿಯಾದ ಅಂಕಗಳು ಸಿಗದ ಅತೃಪ್ತ ಮನಸ್ಸಿನಿಂದಲೇ ಸಿಕ್ಕ ಕಾಲೇಜು ಮತ್ತು ಕೋರ್ಸಿಗೆ ವಿದ್ಯಾರ್ಥಿಗಳು ಅನಿವಾರ್ಯವಾಗಿ ಸೇರಬೇಕಿತ್ತು. ಈಗ ಮೊದಲ ಕಡ್ಡಾಯ ಪರೀಕ್ಷೆಯಲ್ಲಿ ಕಡಿಮೆ ಅಂಕಗಳು ದೊರೆತರೆ, ಮತ್ತೆರಡು ಅವಕಾಶಗಳು ಸಿಗುವುದರಿಂದ ವಿದ್ಯಾರ್ಥಿಗಳಿಗೆ ಕಷ್ಟಪಟ್ಟು ಓದಲು, ಉತ್ತಮ ಅಂಕ ಗಳಿಸಲು ಸಹಕಾರಿ.

ಮೊದಲ ಪ್ರಯತ್ನ ಸರಿಯಾಗದಿದ್ದರೆ ಮತ್ತೊಂದರಲ್ಲಿ ಮಾಡಬಹುದು ಎಂಬ ಭರವಸೆ ಇರುತ್ತದೆ. ಹೀಗೆ ಪರೀಕ್ಷೆಯ ಬಗ್ಗೆ ಭಯ ತೊಲಗಿಸಿ, ಫಲಿತಾಂಶ ಉತ್ತಮಗೊಳಿಸಲು ಅವಕಾಶ ನೀಡುವ, ಆತ್ಮವಿಶ್ವಾಸ ಮೂಡಿಸುವ ಈ ಪರಿಷ್ಕೃತ ವ್ಯವಸ್ಥೆಯನ್ನು ಇಲಾಖೆ ‘ವಿದ್ಯಾರ್ಥಿಸ್ನೇಹಿ’ ಎಂದು ಕರೆದಿದ್ದು ಸೂಕ್ತವಾಗಿದೆ.

ಆದರೆ ಇದೇ ಸಮಯದಲ್ಲಿ ಗಮನಿಸಬೇಕಾದ ಇನ್ನಿತರ ಅಂಶಗಳೂ ಇವೆ. ಹೊಸ ವ್ಯವಸ್ಥೆಯಲ್ಲಿ, ಮೊದಲ ಕಡ್ಡಾಯ ಪರೀಕ್ಷೆ ಮಾರ್ಚ್‌ನಲ್ಲಿ ಆರಂಭವಾದರೆ ಉಳಿದೆರಡು ಐಚ್ಛಿಕ ಪರೀಕ್ಷೆಗಳು ಮೇ ಮತ್ತು ಜುಲೈನಲ್ಲಿ ನಡೆಯಲಿವೆ. ಮಾರ್ಚ್‌ನಿಂದ ಆಗಸ್ಟ್‌ವರೆಗೆ ಪರೀಕ್ಷೆ ಮತ್ತು ಫಲಿತಾಂಶಗಳ ಕಾಲ. ಆರು ತಿಂಗಳ ಕಾಲ ಪರೀಕ್ಷೆಯನ್ನೇ ಮಾಡುತ್ತಿದ್ದರೆ ಮಕ್ಕಳಿಗೆ ಪಾಠವನ್ನು ಯಾವಾಗ ಮಾಡುವುದು ಎನ್ನುವ ಪ್ರಶ್ನೆ ಶಿಕ್ಷಕರನ್ನು ಕಾಡುತ್ತಿದೆ. ಸಮಯಕ್ಕೆ ಸರಿಯಾಗಿ ಪಠ್ಯಪುಸ್ತಕಗಳು ಲಭ್ಯವಾಗದೇ ಇರುವುದರ ಜತೆಗೆ ಶಿಕ್ಷಕರ ಕೊರತೆಯೂ ರಾಜ್ಯದಲ್ಲಿ ಬಹಳಷ್ಟು ಶಾಲೆಗಳಲ್ಲಿದೆ. ಹೀಗಿರುವಾಗ ವರ್ಷವಿಡೀ ಪಾಠ ಮಾಡಿದರೂ ಪಠ್ಯಕ್ರಮವನ್ನು ಮುಗಿಸುವುದು ಕಷ್ಟ. ಅದರ ನಡುವೆ ಆರು ತಿಂಗಳ ಕಾಲ ಈ ಚಟುವಟಿಕೆಗಳಲ್ಲಿ ಶಿಕ್ಷಕರು ವ್ಯಸ್ತರಾದರೆ ಪಾಠ ನಡೆಯುವುದು ಹೇಗೆ?

ಪರೀಕ್ಷೆಯನ್ನು ನಡೆಸುವುದು ಸುಲಭವಾದ ಮಾತಲ್ಲ. ಅದರಲ್ಲೂ ನಿರ್ಣಾಯಕವಾದ ಪರೀಕ್ಷೆಗಳನ್ನು ಕಟ್ಟುನಿಟ್ಟಾಗಿ ಶಿಸ್ತುಬದ್ಧವಾಗಿ ನಡೆಸಬೇಕು. ಅವುಗಳಿಗೆ ಅಗತ್ಯ ವ್ಯವಸ್ಥೆ, ಖರ್ಚುವೆಚ್ಚದ ಬಗ್ಗೆ ಯೋಚಿಸುವುದೂ ಮುಖ್ಯ. ಹಾಗೆಯೇ ಮೌಲ್ಯಮಾಪನದ ಗುಣಮಟ್ಟವನ್ನು ಕಾಯ್ದುಕೊಳ್ಳುವುದೂ ದೊಡ್ಡ ಹೊಣೆಯೇ ಸರಿ.

ಮಕ್ಕಳಿಗೆ ಪರೀಕ್ಷೆ, ಫಲಿತಾಂಶದ ಕುರಿತು ಅನಗತ್ಯ ಒತ್ತಡ ಸೃಷ್ಟಿಸಬಾರದು ಎನ್ನುವುದೇನೋ ಸರಿ. ಆದರೆ ಕಡ್ಡಾಯ ತೇರ್ಗಡೆ, ಮೂರು ಪರೀಕ್ಷೆಯಂತಹ ಕ್ರಮಗಳಿಂದಾಗಿ ಶಿಕ್ಷಣದ ಗುಣಮಟ್ಟ ಕುಸಿದರೆ ಎನ್ನುವ ಆತಂಕವೂ ಜನರನ್ನು ಕಾಡುತ್ತಿದೆ. ಮೊದಲ ಪರೀಕ್ಷೆ ಕಡ್ಡಾಯ, ಉಳಿದೆರಡು ಐಚ್ಛಿಕ ಸರಿ. ಆದರೂ ಎಷ್ಟೇ ಅಂಕ ತೆಗೆದರೂ ಜಗತ್ತು ತೀರಾ ಸ್ಪರ್ಧಾತ್ಮಕವಾಗಿರುವ ಸಂದರ್ಭದಲ್ಲಿ, ಮೂರು ಪರೀಕ್ಷೆಗಳಿರುವಾಗ, ಎಲ್ಲವನ್ನೂ ಬರೆದು ಇನ್ನಷ್ಟು ಅಂಕಗಳನ್ನು ಪಡೆಯಬೇಕೆಂಬ ಒತ್ತಡ ಮಕ್ಕಳ ಮೇಲೆ ಹೆಚ್ಚುವ ಸಾಧ್ಯತೆ ಇದೆ. ಪೋಷಕರೂ ಮಕ್ಕಳಿಂದ ಮತ್ತಷ್ಟನ್ನು ನಿರೀಕ್ಷಿಸಬಹುದು.

ಶಿಕ್ಷಣ ತಜ್ಞರ ಪ್ರಕಾರ, ಮಕ್ಕಳಿಗೆ ಪರೀಕ್ಷೆಯ ಕುರಿತು ಸ್ವಲ್ಪಮಟ್ಟಿಗೆ ಒತ್ತಡ ಬೇಕು. ಹಾಗಿದ್ದಾಗ ಮಾತ್ರ ಅವರು ಮನಸ್ಸಿಟ್ಟು ಕಷ್ಟಪಟ್ಟು ಓದುತ್ತಾರೆ. ಈ ರೀತಿಯಾಗಿ ಮೂರು ಪರೀಕ್ಷೆಗಳಿದ್ದಾಗ, ಇದಲ್ಲದಿದ್ದರೆ ಅದು, ಆಮೇಲೆ ಓದೋಣ ಎಂದು ಮುಂದೂಡುವ, ಉದಾಸೀನ ಮಾಡುವ ಪ್ರವೃತ್ತಿಯನ್ನೂ ಅವರಲ್ಲಿ ಕಾಣಬಹುದು. ಹೀಗಾಗಿ, ಪರೀಕ್ಷಾ ವ್ಯವಸ್ಥೆಯಲ್ಲಿ ಬದಲಾವಣೆ ಜತೆ ವಿದ್ಯಾರ್ಥಿಗಳು ಪರೀಕ್ಷೆಗಳನ್ನು ಎದುರಿಸಲು ಸಮರ್ಥರಾಗುವ ಹಾಗೆ ಶಿಕ್ಷಣ ವ್ಯವಸ್ಥೆ ಮತ್ತು ಶಿಕ್ಷಕರನ್ನು ಬಲಪಡಿಸುವ ಕಡೆಗೂ ಇಲಾಖೆ ಗಮನ ಹರಿಸುವುದು ಒಳ್ಳೆಯದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT