ಭಾನುವಾರ, 3 ಡಿಸೆಂಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಶಿಕ್ಷಕ ಸಮುದಾಯ– ತಾರತಮ್ಯವೇಕೆ?

ತನ್ನೊಳಗೇ ಅಸಮಾನತೆಯನ್ನು ಪೋಷಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆ ಹೊರಗಿನ ಸಮಾಜದಲ್ಲಿ ಸಮಾನತೆಯನ್ನು ಹೇಗೆ ಸ್ಥಾಪಿಸಬಲ್ಲದು?
Last Updated 17 ಜನವರಿ 2022, 19:54 IST
ಅಕ್ಷರ ಗಾತ್ರ

ಸೇವಾ ಭದ್ರತೆಗಾಗಿ ಆಗ್ರಹಿಸುತ್ತಿರುವ ಅತಿಥಿ ಉಪನ್ಯಾಸಕರ ಬೇಡಿಕೆ ಕೆಲವು ಗಂಭೀರ ಪ್ರಶ್ನೆಗಳನ್ನು ಮೂಡಿಸುವುದಲ್ಲದೆ, ಸರ್ಕಾರದ ಕೆಲವು ಲೋಪಗಳನ್ನು ಸಹ ಎತ್ತಿ ತೋರಿಸುತ್ತದೆ. ಬಡಪಾಯಿ ಅತಿಥಿ ಉಪನ್ಯಾಸಕರು ವೇತನದ ಪ್ರಮಾಣವನ್ನು ಆಧರಿಸಿ ಸರ್ಕಾರಿ ಗುಮಾಸ್ತರಿಗೆ ಪ್ರತೀ ಸಂಬಳಕ್ಕೂ ಲಂಚ ನೀಡಬೇಕಾಗಿದೆ. ಅಲ್ಲದೆ ‘₹ 50 ಲಕ್ಷದಿಂದ 60 ಲಕ್ಷ ಹಣ ಕೊಟ್ಟು ಹುದ್ದೆ ಪಡೆಯಲು ಪೈಪೋಟಿಗೆ ಇಳಿಯುವ ಸ್ಥಿತಿ ನಿರ್ಮಾಣವಾಗಿದೆ’ ಎಂದು ಸ್ವತಃ ಉನ್ನತ ಶಿಕ್ಷಣ ಸಚಿವರೇ ಇತ್ತೀಚೆಗೆ ಹೇಳಿಕೆ ನೀಡಿದ್ದರು (ಪ್ರ.ವಾ., ಅ. 24). ಇಂತಹ ಸನ್ನಿವೇಶದಲ್ಲಿ ಹಣ, ಪ್ರಭಾವಗಳ ಬಲವಿಲ್ಲದ ಅರ್ಹರಾದ ಅಭ್ಯರ್ಥಿಗಳ ಕೊಡುಗೆಗಳಿಂದ ವಿದ್ಯಾರ್ಥಿ ಸಮುದಾಯ ವಂಚಿತವಾಗುತ್ತದೆ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಯಾವುದೇ ಅಭಿವೃದ್ಧಿಶೀಲ ದೇಶವು ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸಲು ತನ್ನ ಬಜೆಟ್‌ನಲ್ಲಿ ಬಹುದೊಡ್ಡ ಪಾಲನ್ನು ಶಿಕ್ಷಣಕ್ಕೆ ಮೀಸಲಿಡುವುದನ್ನು ಯಾರೂ ವಿರೋಧಿಸಲಾರರು. ಆದರೆ ಆ ಹಣ ಉನ್ನತ ಶಿಕ್ಷಣದ ಸರ್ವಾಂಗೀಣ ಅಭಿವೃದ್ಧಿಗೆ ವಿನಿಯೋಗವಾಗುತ್ತಿದೆಯೇ ಎಂದು ಅವಲೋಕಿಸಿದರೆ ವಿಷಾದವಾಗುತ್ತದೆ.

ಏಳನೇ ಪರಿಷ್ಕೃತ ವೇತನ ಆಯೋಗದ ಶಿಫಾರಸಿನ ಪ್ರಕಾರ, ಪದವಿ ಮತ್ತು ಸ್ನಾತಕೋತ್ತರ ಪದವಿ ತರಗತಿಗಳಿಗೆ ಪಾಠ ಮಾಡುವ ಉಪನ್ಯಾಸಕರು ಸರಾಸರಿ ಒಂದೂವರೆ ಲಕ್ಷದಿಂದ ಎರಡೂವರೆ ಲಕ್ಷ ರೂಪಾಯಿಗಳವರೆಗೆ ಸಂಬಳ ಪಡೆಯು
ತ್ತಿದ್ದಾರೆ. ಯುಜಿಸಿಯ ಈ ದುಬಾರಿ ಉಪಕ್ರಮವು ಶೈಕ್ಷಣಿಕ ಗುಣಮಟ್ಟದ ಉನ್ನತಿಗೆ ಯಾವುದೇ ರೀತಿಯಲ್ಲಿ ನೆರವಾದಂತಿಲ್ಲ. ಬದಲಾಗಿ ಮಾರಕವಾಗಿ ಪರಿಣಮಿಸಿದ ನಿದರ್ಶನಗಳು ಇವೆ.

ಇದಕ್ಕೆ ವ್ಯತಿರಿಕ್ತವಾಗಿ ಸರ್ಕಾರಿ ಉಪನ್ಯಾಸಕರ ವೇತನದ ಶೇ 10ಕ್ಕಿಂತಲೂ ಕಡಿಮೆ ಪ್ರಮಾಣದ ವೇತನ ಪಡೆಯುತ್ತ ಅತಂತ್ರ ಸ್ಥಿತಿಯಲ್ಲಿ ಬಾಳ್ವೆ ಮಾಡುತ್ತಿರುವ ಬಹುಸಂಖ್ಯಾತರಾದ ಅತಿಥಿ ಉಪನ್ಯಾಸಕ ಸಮುದಾಯವೂ ಉಂಟು. ಶಿಕ್ಷಕ ಸಮುದಾಯದ ಅಸಹನೆಯ ಬೇರುಗಳು ಅವೈಜ್ಞಾನಿಕವಾದ ಈ ವೇತನ ತಾರತಮ್ಯದಲ್ಲಿ ಹುದುಗಿವೆ. ಶಿಕ್ಷಣದ ಮೂಲ ಆಶಯವೇ ಸಮಾನತೆಯ ಸ್ಥಾಪನೆಯಾಗಿದೆ. ಆದರೆ ತನ್ನೊಳಗೇ ಅಸಮಾನತೆಯನ್ನು ಪೋಷಿಸಿಕೊಂಡಿರುವ ಶಿಕ್ಷಣ ವ್ಯವಸ್ಥೆ ಹೊರಗಿನ ಸಮಾಜದಲ್ಲಿ ಸಮಾನತೆಯನ್ನು ಹೇಗೆ ಸ್ಥಾಪಿಸುತ್ತದೆ ಎಂಬುದು ಬಗೆಹರಿಯದ ಪ್ರಶ್ನೆಯಾಗಿದೆ. ತನ್ನ ನೌಕರಿಗಾಗಿ 60 ಲಕ್ಷ ಹಣ ಖರ್ಚು ಮಾಡಬಲ್ಲ ಶಿಕ್ಷಕನಿಂದ ಶೈಕ್ಷಣಿಕ ಕೈಂಕರ್ಯವನ್ನು ನಿರೀಕ್ಷಿಸಲೂ ಆಗದು.

ಸಮಾನತೆ ಸ್ಥಾಪನೆಯ ಪ್ರಶ್ನೆ ಹಾಗಿರಲಿ. ಈ ತಾರತಮ್ಯದ, ವಿಷಮಾನುಪಾತದ ಈ ಅವೈಜ್ಞಾನಿಕ ವೇತನ ನೀತಿಯಿಂದ ಅಂತಿಮವಾಗಿ ಓದುವ ಮಕ್ಕಳಿಗೆ ಅನ್ಯಾಯವಾಗುತ್ತಿದೆ.

ಮೊನ್ನೆ ದಿನ, ತಿಂಗಳಿಗೆ 40 ಸಾವಿರ ರೂಪಾಯಿ ಆದಾಯ ತೆರಿಗೆ ಪಾವತಿಸುವ ನನ್ನ ಸ್ನೇಹಿತರಾದ ಕೆಲವು ಸರ್ಕಾರಿ ಉಪನ್ಯಾಸಕರು ಆದಾಯ ತೆರಿಗೆ ಪಾವತಿಯಿಂದ ಬಚಾವಾಗುವ ದಾರಿಗಳನ್ನು ಹುಡುಕುತ್ತಿದ್ದರು. ವಾಮಮಾರ್ಗಗಳ ಬಗೆಗೆ ಗಂಟೆಗಟ್ಟಲೆ ಚರ್ಚಿಸುತ್ತಿದ್ದರು. ಲೆಕ್ಕಾಚಾರದಲ್ಲಿ ಮುಳುಗಿದ್ದರು. ಇಂಥವರಿಂದ ಗಂಭೀರ ಅಕಡೆಮಿಕ್‌ ಚರ್ಚೆ ನಿರೀಕ್ಷಿಸಲು ಸಾಧ್ಯವಿಲ್ಲ.

ಇನ್ನು ಕಡಿಮೆ ವೇತನ ಪಡೆಯುವ ಉಪನ್ಯಾಸಕರು ತಮ್ಮ ಜೀವನೋಪಾಯಕ್ಕಾಗಿ ಶಿಕ್ಷಕ ವೃತ್ತಿಯಲ್ಲದೆ ಅನ್ಯ ವೃತ್ತಿ, ವ್ಯವಹಾರೋದ್ಯಮಗಳಲ್ಲಿ ಅನಿವಾರ್ಯವಾಗಿ ತೊಡಗಿಕೊಳ್ಳಬೇಕಾಗಿದೆ. ಇಂತಹವರಿಗೆ ತಮ್ಮ ಶೈಕ್ಷಣಿಕ ಗುಣಮಟ್ಟವನ್ನು ಹೆಚ್ಚಿಸಿಕೊಳ್ಳುವ ಅನುಕೂಲವಾಗಲೀ ವ್ಯವಧಾನವಾಗಲೀ ಇರುವುದಿಲ್ಲ. ಒಟ್ಟಿನಲ್ಲಿ ಕುರುಡು ಕಾಂಚಾಣವು ಈ ಎರಡೂ ನಮೂನೆಯ ಉಪನ್ಯಾಸಕರನ್ನು ದಾರಿ ತಪ್ಪಿಸಿದೆ. ಅಂತಿಮವಾಗಿ ವಿದ್ಯಾರ್ಥಿಗಳ ಕಲಿಕೆಗೆ ಈ ಎರಡೂ ನಮೂನೆಯ ಉಪನ್ಯಾಸಕರಿಂದ ಅನ್ಯಾಯವಾಗುತ್ತಿದೆ.

ಗುತ್ತಿಗೆ ಕಾರ್ಮಿಕರು- ಪೌರಕಾರ್ಮಿಕರು, ಅತಿಥಿ ಶಿಕ್ಷಕರು- ಉಪನ್ಯಾಸಕರು, ಅಂಗನವಾಡಿ- ಆಶಾ ಕಾರ್ಯಕರ್ತೆಯರು, ಗುತ್ತಿಗೆ ವೈದ್ಯರು ತಮ್ಮ ಬದುಕುವ ಹಕ್ಕನ್ನು ಘೋಷಿಸಿ ಧ್ವನಿ ಎತ್ತಿದಾಗಲೆಲ್ಲ ಆಳುವ ಸರ್ಕಾರಗಳು ಅಂತಹ ಬೇಡಿಕೆಗಳ ನ್ಯಾಯೋಚಿತತೆಯನ್ನು ಪರಿಗಣಿಸದೆ ಅಪರಾಧಿಗಳಂತೆ ತಲೆಮರೆಸಿಕೊಳ್ಳುವುದು, ವೇತನವನ್ನು ಅಷ್ಟಿಷ್ಟು ಹೆಚ್ಚಿಸಿ ಸಮಸ್ಯೆಯನ್ನು ತಾತ್ಕಾಲಿಕವಾಗಿ ಮುಂದೂಡುವುದು ಶೋಭೆ ತರುವ ಸಂಗತಿಯಲ್ಲ. ಇಂದು ಎಲ್ಲ ವೃತ್ತಿಗಳಲ್ಲಿ ಕಂಡುಬರುತ್ತಿರುವ ಈ ಬಗೆಯ ತಾರತಮ್ಯಗಳನ್ನು ಹಂತ ಹಂತವಾಗಿ ಕಡಿಮೆ ಮಾಡುವ, ಇಲ್ಲವಾಗಿಸುವ ದಿಸೆಯಲ್ಲಿ ಸರ್ಕಾರಗಳು ಕಾರ್ಯಪ್ರವೃತ್ತವಾಗಬೇಕಿದೆ.

ನಮ್ಮ ನಾಯಕರು ನಾಳೆ ತಮ್ಮ ಮಕ್ಕಳು, ಮೊಮ್ಮಕ್ಕಳು ಇದೇ ಕಾರ್ಮಿಕರ, ಇದೇ ಶಿಕ್ಷಕರ, ಇದೇ ವೈದ್ಯರುಗಳ ಆಶ್ರಯದಲ್ಲಿ ಬಾಳಬೇಕಾಗುತ್ತದೆ ಎಂಬ ಅರಿವಿನೊಂದಿಗೆ ಇವರ ಸಮಸ್ಯೆಗಳತ್ತ ಕಣ್ತೆರೆದು ನೋಡಬೇಕಾಗಿದೆ. ವ್ಯವಸ್ಥೆಯ ಯಾವುದೇ ಹಂತದಲ್ಲಿ ತಾರತಮ್ಯ ಕಂಡುಬಂದರೆ ಅದನ್ನು ಪ್ರಜಾಪ್ರಭುತ್ವ ವ್ಯವಸ್ಥೆ ಎನ್ನಲು ಬರುವುದಿಲ್ಲ.

ಸಮಾನತೆಯ ಮೌಲ್ಯವನ್ನರಿಯದಿದ್ದ ಮಧ್ಯಯುಗದ ಕೆಲವು ಹಿತಾಸಕ್ತಿಗಳು ತಾರತಮ್ಯಶ್ರೇಣೀಕರಣವನ್ನು ಪೋಷಿಸಿಕೊಂಡಿದ್ದವು. ಆದರೆ ಪ್ರಜಾಪ್ರಭುತ್ವವನ್ನೇ ಪರಮಮೌಲ್ಯವೆಂದು ನಂಬಿರುವ ನಾವು ಅದೇಕೆ ಯಥಾಸ್ಥಿತಿಯನ್ನು ವ್ಯವಸ್ಥಿತವಾಗಿ ಮುಂದುವರಿಸಿಕೊಂಡು ಬರುತ್ತಿದ್ದೇವೆ ಎಂಬುದು ಅರ್ಥವಾಗುತ್ತಿಲ್ಲ.

ಲೇಖಕ: ಸಹಾಯಕ ಪ್ರಾಧ್ಯಾಪಕ, ಜ್ಯೋತಿನಿವಾಸ್‌ ಕಾಲೇಜ್, ಬೆಂಗಳೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT