ಶುಕ್ರವಾರ, 19 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ: ಉದ್ಯಾನಕ್ಕೆ ಬಂದರೂ ಉಪಟಳ ತಪ್ಪದು!

ಉದ್ಯಾನಗಳಿಗೆ ಬರುವ ಆರೋಗ್ಯಾಕಾಂಕ್ಷಿಗಳಿಗೆ ತಮ್ಮಿಂದ ಇತರರಿಗೆ ಆಗಬಹುದಾದ ಹಿಂಸೆಯ ಅರಿವು ಇರಬೇಕಲ್ಲವೇ?
Published 17 ಸೆಪ್ಟೆಂಬರ್ 2023, 20:18 IST
Last Updated 17 ಸೆಪ್ಟೆಂಬರ್ 2023, 20:18 IST
ಅಕ್ಷರ ಗಾತ್ರ

‘ದೊರೆ, ಇಲ್ಲಿ ಬಂದು ಬಟ್ಟೆ ಒಗೆಯುವುದೇ ನೀನೇ ಹೇಳಪ್ಪ. ಅವರ ಮನೇಲಿ ನೀರಿಗೆ ಬರವ?’ ಮನೆಗೆ ಹತ್ತಿರದ ಉದ್ಯಾನದ ಕಲ್ಲುಬೆಂಚಿನ ಮೇಲೆ ಕುಳಿತಿದ್ದಾಗ ವೃದ್ಧರೊಬ್ಬರು ನನ್ನತ್ತ ಬಂದವರೇ ಕೇಳಿದ ಪ್ರಶ್ನೆಯಿದು. ಮೊದಲು ಕಕ್ಕಾಬಿಕ್ಕಿಯಾದ ನಾನು ‘ಅಂಕಲ್, ಅದು ಚಪ್ಪಾಳೆ ಸದ್ದು. ಕೈ ಜೋರಾಗಿ ತಟ್ಟಿದ್ರೆ ರೋಗರುಜಿನ ವಾಸಿಯಾಗುತ್ತಂತೆ’ ಎಂದು ವಿವರಿಸಿದೆ. ‘ಚಪ್ಪಾಳೆ ವ್ಯಾಯಾಮ’ದ ಸತ್ಯಾಸತ್ಯತೆಯನ್ನು ವೈದ್ಯರ ಅಭಿಪ್ರಾಯಕ್ಕೆ ಬಿಡೋಣ. ಆದರೆ ಉದ್ಯಾನಗಳಲ್ಲಿ ಹೀಗೆ ಕರತಾಡನ ಮಾಡುವ ಆರೋಗ್ಯಾಕಾಂಕ್ಷಿಗಳಿಗೆ ಇತರರಿಗೆ ಆಗುವ ಹಿಂಸೆಯ ಅರಿವಿರಬೇಕಲ್ಲವೇ?

ರಾಜ್ಯದಾದ್ಯಂತ ಸರ್ಕಾರವು ನಗರಗಳಲ್ಲಿ ಉದ್ಯಾನಗಳನ್ನು ನಿರ್ಮಿಸಿ ಅಭಿವೃದ್ಧಿಪಡಿಸಿರುವುದು ಸ್ತುತ್ಯರ್ಹ. ತೋಟಗಾರಿಕೆ ಇಲಾಖೆಯೇ ಇದ್ದು ಉದ್ಯಾನಗಳ ನಿರ್ವಹಣೆಯೂ ತಕ್ಕಮಟ್ಟಿಗೆ ಚೆನ್ನಾಗಿದೆ. ಮಹಾನಗರಗಳಲ್ಲಂತೂ ಕೆಲವು ಸ್ವಯಂ ಸೇವಾ ಸಂಸ್ಥೆಗಳು ವೃಕ್ಷಗಳ ಪೋಷಣೆಯನ್ನು ಪ್ರಾಯೋಜಿಸಿ ಪರಿಸರ ಕೈಂಕರ್ಯ ಮೆರೆದಿವೆ. ಏಕಾಂತಕ್ಕೆ, ನಡಿಗೆಗೆ, ನೀರವತೆಗೆ, ವಾಯುವಿಹಾರಕ್ಕೆ, ಲಘು ವ್ಯಾಯಾಮಕ್ಕಾಗಿ ಉದ್ಯಾನಗಳಿಗೆ ಜನ ಬೆಳಗ್ಗೆ, ಸಂಜೆ ಬರುತ್ತಾರೆ. ಇಲ್ಲಾದರೂ ಅಷ್ಟು ಗಿಡ, ಮರ, ಹಕ್ಕಿ, ಕೀಟಗಳನ್ನು ಕಂಡು ಆನಂದಿಸೋಣ ಎಂದು ಪರಿಸರದ ಸಹವಾಸಕ್ಕೆ ಹಂಬಲಿಸುತ್ತಾರೆ.

ಓದಲು, ಬರೆಯಲು, ಗ್ರಂಥ ಪರಾಮರ್ಶಿಸಲು ಗಿಡ, ಮರಗಳ ಸನ್ನಿಧಿಗೆ ಸಾಟಿಯಿಲ್ಲ. ವೃದ್ಧರಿಗಂತೂ ಪಾರ್ಕ್ ತಮ್ಮ ಗತದ ದಿನಮಾನಗಳನ್ನು ಮೆಲುಕು ಹಾಕಲು, ಪರಿಚಿತರೊಂದಿಗೆ ಹಂಚಿಕೊಳ್ಳಲು ಅನನ್ಯ ತಾಣ. ಸಾರ್ವಜನಿಕರ ಸಹಕಾರವಿಲ್ಲದಿದ್ದರೆ ನಂದನವನವೇ ಆಗಲಿ ಅಧ್ವಾನವಾಗುತ್ತದೆ. ಚಪ್ಪಾಳೆಯ ಸದ್ದಿನ ಕಿರಿಕಿರಿ ಉದ್ಯಾನವನಕ್ಕೆ ಭೇಟಿ ನೀಡುವವರ ನೆಮ್ಮದಿ ಕಸಿಯುವುದು ಮಾತ್ರವಲ್ಲ, ಕೆಲವೇ ಸಂಖ್ಯೆಯಲ್ಲಿ ಅಲ್ಲಿಗೆ ಬರುವ ಗುಬ್ಬಿ, ಮೈನಾ, ಪಾರಿವಾಳಗಳು ಬೆದರಿ ಕಂಗಾಲಾಗುತ್ತವೆ. ಅಳಿಲುಗಳು ಹೆದರಿ ಹಣ್ಣುಹಂಪಲು ಸೇವಿಸದೆ, ಜೀವ ಉಳಿಸಿಕೊಂಡರೆ ಸಾಕೆಂದು ದೂರ ಸರಿಯುತ್ತವೆ. ಪಾರ್ಕಿನಲ್ಲಿ ಜನರ ಅತ್ಯುತ್ಸಾಹ, ಆರ್ಭಟಕ್ಕೆ ಹೆದರಿ ಜೇನು, ಕಣಜ ಗೂಡು ಕಟ್ಟಿಕೊಳ್ಳುವುದನ್ನು ಬಿಟ್ಟಿವೆ. ಗುಬ್ಬಿಗಳ ವಿಳಾಸವೇ ಇಲ್ಲ.

ಇತರರೂ ತಮ್ಮ ನೆಮ್ಮದಿ, ಆರೋಗ್ಯಕ್ಕಾಗಿ ಹಂಬಲಿಸುತ್ತಾರೆ ಎಂಬ ಪ್ರಜ್ಞೆ ಚಪ್ಪಾಳೆಗೆ ಇರಬೇಕಲ್ಲವೇ? ತಾವಿರುವ ಬಡಾವಣೆಯಲ್ಲಿ ಒಂದು ಪುಟ್ಟ ಅರಣ್ಯವಿರಲಿ ಎಂದು ಆಶಿಸದವರು ಯಾರು? ಆರೋಗ್ಯವರ್ಧನೆಗೆಂದು ಹಿಮ್ಮುಖವಾಗಿ ನಡೆಯುವವರು ಪರರಿಗೆ ಅಡ್ಡಬಂದು ಅವರ ಆಯ ತಪ್ಪಿಸಬಹುದಲ್ಲವೇ? ಮೊಬೈಲಿನಲ್ಲಿ ಏರುಧ್ವನಿಯ ಸಂಭಾಷಣೆಯು ಗದ್ದಲ ಮಾಲಿನ್ಯವನ್ನು ತಾರಕಕ್ಕೇರಿಸುತ್ತದೆ. ಇಯರ್ ಫೋನಿಲ್ಲದೆ ಸಂಗೀತ ಆಲಿಸುವವರದ್ದೇ ಒಂದು ಕಾಟ. ಮೊಬೈಲ್‌ ಸಂಭಾಷಣೆಯಿಂದಾಗುವ ಕಿರಿಕಿರಿ ಕಡಿಮೆಯೇನಲ್ಲ. ‘ದಯವಿಟ್ಟು ಮೆಲುಧ್ವನಿಯಲ್ಲಿ ಮಾತಾಡಿ, ನಿಮ್ಮಂತೆಯೇ ಮಂದಿ ಇಲ್ಲಿಗೆ ಬರುತ್ತಾರೆ’ ಎಂಬ ಗೋಗರೆತಕ್ಕೆ ಒರಟು, ಹೊಣೆಗೇಡಿತನದ ಪ್ರತಿಕ್ರಿಯೆಗಳು ಸಿದ್ಧವಾಗಿರುತ್ತವೆ. ಇದು ಎಲ್ಲರಿಗೂ ಸೇರಿದ ತಾಣ ಎಂಬ ವಾದಕ್ಕೆ ‘ಹೌದು, ನಿಮ್ಮದಲ್ಲವಲ್ಲ’ ಎನ್ನುವ ಪ್ರತಿತರ್ಕ!

ಪಾರ್ಕ್‍ನಲ್ಲಿ ಹೂವಿನ ಗಿಡಗಳಿದ್ದರೆ ಅವುಗಳ ಪಾಡಿಗೆ ಬಿಡದೆ ಕೀಳುವವರಿರುತ್ತಾರೆ. ಹೂವನ್ನಷ್ಟೇ ಕಿತ್ತರೆ ನಾಳೆ ಚಿಗುರುತ್ತದೆ, ಆದರೆ ಬಳ್ಳಿಸಮೇತ ಕೊಯ್ದರೆ? ತಮಗೆ ಬೇಕಾದ ಅಪರೂಪದ ಸಸ್ಯಗಳಿಗೆ ಲಗ್ಗೆ ಹಾಕುವ ಪಡೆಗಳಿರುತ್ತವೆ. ಈ ದಿಸೆಯಲ್ಲಿ ಜೇನು, ದುಂಬಿ ನಮಗೆ ಪಾಠವನ್ನೇ ಕಲಿಸುತ್ತವೆ. ಅವು ಹೂವಿಗೆ ಕೊಂಚವೂ ಧಕ್ಕೆಯಾಗದಂತೆ ಮಕರಂದವನ್ನು ಮಾತ್ರ ಹೀರುತ್ತವೆ.

ಬಹುಮುಖ್ಯ ಸಂಗತಿಯೆಂದರೆ, ಬಿಡುಬೀಸಾದ ಉದ್ಯಾನಗಳಲ್ಲಿ ಪ್ರಾಣಿ ಪಕ್ಷಿಗಳಿಗೆ ಜನ ಯಾವುದೇ ಆಹಾರ ಉಣಿಸುವ ಅಗತ್ಯವೇ ಇರದು. ಬ್ರೆಡ್, ಬನ್, ಬಿಸ್ಕತ್, ಚೌಚೌ ತುಣುಕುಗಳನ್ನು ಸಿಂಪಡಿಸಿದರೆ ಅನನುಕೂಲವೇ ಹೆಚ್ಚು. ಏಕೆಂದರೆ ಅಳಿದುಳಿದದ್ದನ್ನು ಸೇವಿಸಲು ಇಲಿ, ಹೆಗ್ಗಣಗಳು ದಾಳಿಯಿಡುತ್ತವೆ. ಅವನ್ನು ಹುಡುಕಿಕೊಂಡು ಹಾವುಗಳು ಬರತೊಡಗಿ ಉದ್ಯಾನದಲ್ಲಿ ಭಯದ ವಾತಾವರಣವೇ ಸೃಷ್ಟಿಯಾಗಬಹುದು. ಹಸಿದ ಇಲಿಗಳು ವಿದ್ಯುತ್ತಿನ ತಂತುಗಳನ್ನು ಕಡಿದು ತುಂಡಾಗಿಸಿ ಭಾರಿ ಅನಾಹುತಕ್ಕೆ ಆಸ್ಪದವಾಗಬಹುದು.

ಪ್ರಾಣಿ ಪಕ್ಷಿಗಳು ತಮ್ಮ ಆಹಾರವನ್ನು ತಾವೇ ಸಹಜವಾಗಿ ಕಂಡುಕೊಂಡು ಸೇವಿಸಲು ಬಿಡುವುದು ವಿವೇಕ. ಮರಗಳು ‘ಪ್ರೇಮ ಬರಹ’ಗಳನ್ನು ಬರೆಸಿಕೊಂಡಿರುತ್ತವೆ! ಒಪ್ಪ ಓರಣವಾದ ಬಂಡೆಗಳ ಮೇಲೆ ಚಿತ್ರ ವಿಚಿತ್ರ ಗೀಚುಗಳು. ಇನ್ನು ವಾರಾಂತ್ಯದಲ್ಲಿ ಪಾರ್ಕಿನಲ್ಲಿ ಅಲ್ಲಲ್ಲಿ ಜನ ಗುಂಪುಗೂಡಿ ಚೀಟಿ ಮೀಟಿಂಗ್ ನಡೆಸುವುದಿದೆ. ಮೆಲುಧ್ವನಿಯಲ್ಲಿ ಗುಂಪು ಯಾವುದೇ ವಿಷಯ ಚರ್ಚಿಸುತ್ತಿದ್ದರೆ ಯಾರೂ ಆಕ್ಷೇಪಿಸರು. ಆದರೆ ಚೀರಾಟ, ಕೂಗಾಟ, ಜಗಳ ಇಡೀ ಪಾರ್ಕಿನ ನೀರವತೆಯನ್ನು ಕಸಿಯುತ್ತದೆ. ನಿಶ್ಶಬ್ದ ಅರಸಿ ಬಂದವರು ‘ಗದ್ದಲ, ಗೌಜಿನಿಂದ ಪಾರಾಗಲು ಇಲ್ಲಿಗೆ ಬಂದರೆ ಇಲ್ಲೂ ಅದೇನೆ?’ ಎಂದು ಮುಜುಗರಪಡುವ ದಯನೀಯ ಸ್ಥಿತಿ.

ಅಲ್ಲಿ ಶಿಸ್ತು ಎಷ್ಟರಮಟ್ಟಿಗೆ ನರಳಿರುತ್ತದೆಂದರೆ, ಚಿಣ್ಣರ ವ್ಯಾಯಾಮದ ಅಂಗಳಕ್ಕೆ ದೊಡ್ಡವರು ಪ್ರವೇಶಿಸಿರುತ್ತಾರೆ! ಮಂಟಪಗಳೇನೊ ಅಂದ ಚಂದವಾಗಿವೆ. ಅಲ್ಲಿ ಕುಳಿತರೆ ಆತ್ಮಾನಂದವೇ ಹೌದು. ಆದರೆ ತಿಂದುಂಡ ಎಲೆಗಳು, ಕಾಗದದ ತಟ್ಟೆಗಳು ಅಲ್ಲಿ ಪ್ರತ್ಯಕ್ಷವಾದರೆ?! ‘ಬರ್ತ್‌ ಡೇ’ ಪಾರ್ಟಿಯ ಸಡಗರವೇ ಮೂಲವಾಗಿ ಪಿಜ್ಜಾ, ಗೋಬಿ ಮಂಜೂರಿ, ಚುರುಮುರಿ ಚಪ್ಪರಿಸಿದ ರದ್ದಿಯ ಕಮಟು ವಾಸನೆ ಮೂಗಿಗೆ ರಾಚಿರುತ್ತದೆ. ಸಾಕುನಾಯಿಗಳನ್ನು ಪಾರ್ಕಿಗೆ ಕರೆದುಕೊಂಡು ಬಂದರೆ ಪ್ರಮಾದವೇನಾಗದು. ಭೇಟಿ ನೀಡುವವರು ಪ್ರಾಣಿಪ್ರೀತಿಯನ್ನು ಬೆಳೆಸಿಕೊಂಡಾರು. ಆದರೆ ಕರೆತರುವವರು ಅವು ವಿಸರ್ಜಿಸುವ ಮಲಮೂತ್ರಗಳನ್ನು ಸಂಗ್ರಹಿಸಿ ಹೊರಗೆ ಸೂಕ್ತವಾಗಿ ವಿಲೇವಾರಿ ಮಾಡಬೇಕಷ್ಟೆ. ಪಾಶ್ಚಾತ್ಯ ದೇಶಗಳಲ್ಲಿ ಶ್ವಾನಗಳಿಗೆ ಮೀಸಲಾದ ಉದ್ಯಾನಗಳಿವೆ. ಅಲ್ಲಿ ನಾಯಿಗಳ ಒಡೆಯರು ನಿಗದಿತ ನಿಯಮಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು.

ಹತ್ತೊಂಬತ್ತನೆಯ ಶತಮಾನದ ಸ್ಕಾಟಿಶ್ ಮುಯಿರ್ ಎಂಬ ಪರಿಸರವಾದಿಯ ನುಡಿಯಿದು: ‘ಪ್ರತಿ ಎರಡು ಪೀತದಾರು (ಪೈನ್) ಮರಗಳ ನಡುವೆ ಹೊಸ ಬದುಕಿಗೆ ತೆರೆಯುವ ಬಾಗಿಲಿದೆ. ಮರಕ್ಕೆ ಸೂರ್ಯರಶ್ಮಿಯಂತೆ ಅದು ಮನುಷ್ಯನಲ್ಲಿ ನೆಮ್ಮದಿಯನ್ನುಂಟು ಮಾಡುತ್ತದೆ’.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT