ಸೋಮವಾರ, 6 ಮೇ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಗತ: ಪೂರ್ವಗ್ರಹ ಹತ್ತಿಕ್ಕುವ ಬಗೆ ಹೇಗೆ?

ತಾವು ನಂಬಿರುವುದೆಲ್ಲವೂ ನಿಜ ಅಂದುಕೊಳ್ಳುವಂತೆ ಮಾಡುವ ಭ್ರಮೆಗಳಿಗೆ ಡೀಪ್‌ಫೇಕ್ ಮಾಹಿತಿಗಳು ಮತ್ತಷ್ಟು ಬಲ ನೀಡುತ್ತವೆ
ಡಾ.ಎ. ಶ್ರೀಧರ
Published 24 ಡಿಸೆಂಬರ್ 2023, 21:04 IST
Last Updated 24 ಡಿಸೆಂಬರ್ 2023, 21:04 IST
ಅಕ್ಷರ ಗಾತ್ರ

ಕೆಲವು ಪ್ರಸಿದ್ಧ ವ್ಯಕ್ತಿಗಳ ಡೀಪ್‌ಫೇಕ್‌ ವಿಡಿಯೊಗಳು ಈಚೆಗೆ ಸಾಮಾಜಿಕ ಜಾಲತಾಣಗಳ ಮೂಲಕ ಹರಿದಾಡಿದ ಸಂಗತಿಯು ಕೃತಕ ಬುದ್ಧಿ ಸಾಮರ್ಥ್ಯ (ಎ.ಐ) ದುರ್ಬಳಕೆಗೆ ಸಂಬಂಧಿಸಿದ ಕಳವಳ ಹೆಚ್ಚುವಂತೆ ಮಾಡಿದೆ. ಡೀಪ್‌ಫೇಕ್ ವಿಡಿಯೊಗಳ ಮಾಹಿತಿಯು ಯುದ್ಧ, ಪರಸ್ಪರ ಸಂಘರ್ಷ, ಕೋಮು ವೈಷಮ್ಯ, ಕ್ರೌರ್ಯ, ಸಮೂಹ ಮನೋಚಂಚಲ ಮತ್ತು ಸಮೂಹಸನ್ನಿಗೂ ಪ್ರಬಲ ಪ್ರೇರಣೆಯಾಗುವ ಸಾಧ್ಯತೆ ಇದೆ. ಸಾರ್ವಜನಿಕ ಅಭಿಪ್ರಾಯ ರೂಪಿಸುವಲ್ಲಿಯೂ ತನ್ನದೇ ಕೊಡುಗೆ ನೀಡಬಲ್ಲದು. 

ಈ ಬಗೆಯ ವಿಡಿಯೊಗಳನ್ನು ವೀಕ್ಷಿಸುತ್ತಿರುವಾಗ ಉದ್ರೇಕದ ಭಾವ ವ್ಯಕ್ತವಾಗುವುದರೊಂದಿಗೆ, ಆ ದೃಶ್ಯಾವಳಿಗಳೆಲ್ಲವೂ ಸತ್ಯ ಎನ್ನುವಂತಹ ನಂಬಿಕೆಯೂ ಗಟ್ಟಿಯಾಗಬಹುದು. ವ್ಯಕ್ತಿಯಲ್ಲಿ ಇಂತಹ ಮನಃಸ್ಥಿತಿ ಮೂಡಿಸುವುದಕ್ಕೆ ಕೃತಕ ಬುದ್ಧಿಸಾಮರ್ಥ್ಯದಿಂದ ಸೃಷ್ಟಿಯಾದಂತಹ ಸತ್ಯವಲ್ಲದ ಆಡಿಯೊ, ವಿಡಿಯೊಗಳು ಪ್ರಮುಖ ಕಾರಣ. ಇವು ಕಂಪ್ಯೂಟರ್, ಮೊಬೈಲ್‌ ಫೋನ್‌ಗಳ ಮೂಲಕ ವ್ಯಕ್ತಿಯ ಮನಸ್ಸಿನ ಮೇಲೆ ಹಿಡಿತಸಾಧಿಸಬಲ್ಲವು, ನಾಗರಿಕತೆಗೇ ಮಾರಕವಾಗಬಲ್ಲವು.

ಮಾನವೀಯ ಸಂವೇದನೆಗಳ ಕಾರಣದಿಂದಲೇ ಅತ್ಯಂತ ಪ್ರಭಾವಶಾಲಿ ಎನ್ನಿಸಿಕೊಂಡಿರುವ ಮನುಷ್ಯನಲ್ಲಿ ಇರುವ ಅಮಾನವೀಯ ಗುಣವನ್ನು ಕ್ಷಣ ಮಾತ್ರದಲ್ಲಿ ಹೊರಗೆಡವಬಲ್ಲ ತಂತ್ರಜ್ಞಾನವು ವ್ಯಕ್ತಿಯ ತಿಳಿವಳಿಕೆಗೆ ದೊಡ್ಡ ಸವಾಲಾಗಿದೆ. ನಾವು ವೀಕ್ಷಿಸುವ ವಿಕೃತ ದೃಶ್ಯಾವಳಿಗಳು, ಆಲಿಸುವ ಕಟು ಧ್ವನಿಗಳು ನೈಜವಲ್ಲ ಎನ್ನುವುದನ್ನು ಗುರುತಿಸಲು ಸಾಧ್ಯವಾಗದಂತಹ ಪರಿಸ್ಥಿತಿಯತ್ತ ವೇಗವಾಗಿ ಜಾರುತ್ತಿದ್ದೇವೆ. ಹೀಗಿದ್ದಾಗ ಮಾನವ ಸಂಬಂಧ, ವ್ಯವಹಾರಗಳಿಗೆ ಧಕ್ಕೆ ಉಂಟಾಗುವುದರಲ್ಲಿ ಯಾವ ಸಂದೇಹವೂ ಇರದು.

ಇಂತಹ ಆತಂಕಗಳ ನಡುವೆಯೇ ಸುಳ್ಳಿನ ಕಂತೆಗಳನ್ನು ಬಿಡಿಸಿ, ಸತ್ಯವನ್ನಷ್ಟೇ ಗುರುತಿಸಬಲ್ಲ ತಂತ್ರಾಂಶಗಳನ್ನು ರೂಪಿಸುವ ಪ್ರಯತ್ನಗಳೂ ಮುಂದುವರಿದಿವೆ. ಡೀಪ್‌ಫೇಕ್ ಮಾಹಿತಿಗಳನ್ನು ನಿಖರವಾಗಿ ವಿಂಗಡಿಸುವ ಪ್ರಯತ್ನಗಳು ಎಷ್ಟೇ ಪರಿಣಾಮಕಾರಿಯಾಗಿದ್ದರೂ ಮನುಷ್ಯ ಸ್ವಭಾವದಿಂದ ಮೂಡುವ ನಿರಂಕುಶ ಅಧಿಕಾರದ ಹಂಬಲ, ಅತಿ ದುರಾಸೆ, ದರ್ಪ ಧೋರಣೆ, ಹದಗೆಟ್ಟ ವ್ಯಕ್ತಿತ್ವದ ಪರಿಣಾಮ ಹೆಚ್ಚು ಅಪಾಯಕಾರಿ. ಆಗಿಂದಾಗ್ಗೆ ನೀಗಿಸದೇ ಬೆಳೆಸಿಕೊಂಡು ಬಂದಂತಹ ಮನುಷ್ಯ ದೌರ್ಬಲ್ಯಗಳಿವು. ತನ್ನ ಹಾಗೂ ಇತರರ ನೆಮ್ಮದಿಯ ಬದುಕನ್ನು ನಾಶ ಮಾಡುವ ಒಳಮನಸ್ಸಿನ ಉಗ್ರ ಬಯಕೆಯೇ ಅತಿದೊಡ್ಡ ಸಮಸ್ಯೆ.

ಕಂಪ್ಯೂಟರ್, ಮೊಬೈಲ್‌ ಫೋನ್‌ ಮೂಲಕ ಅಂತರ್ಜಾಲದಲ್ಲಿ ಸದಾ ವಿಹರಿಸುವವರು, ವ್ಯವಹರಿಸುವವರು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುವ ಡೀಪ್‌ಫೇಕ್ ವಿಡಿಯೊಗಳ ಸ್ವರೂಪ ಮತ್ತು ತಿರುಳನ್ನು ಗುರುತಿಸಬಲ್ಲರು. ತಾವು ನೋಡುತ್ತಿರುವ ವಿಡಿಯೊ, ಆಡಿಯೊಗಳಲ್ಲಿ ಹುಸಿತನ ಇರಬಹುದು ಎನ್ನುವ ಸಂದೇಹದ ಭಾವನೆಯೇ ವಿಚಾರ ಮಾಡುವಂತೆ ಅವರನ್ನು ಉತ್ತೇಜಿಸುವುದು. ಆದರೆ, ಈ ಅಭಿಪ್ರಾಯವನ್ನು ಬೆಂಬಲಿಸುವ ಮನೋವೈಜ್ಞಾನಿಕ ಅಧ್ಯಯನದ ಪ್ರಕಾರ, ಆನ್‌ಲೈನ್ ಸಂಪರ್ಕವನ್ನು ಅನುಭವ ಮತ್ತು ಅಗತ್ಯಕ್ಕಾಗಿ ಉಪಯೋಗಿಸುವವರಲ್ಲಿ ಅಂತರ್ಜಾಲದ ಮೂಲಕ ಹರಿದಾಡುವ ವಿಡಿಯೊಗಳನ್ನು ಶಂಕೆಯಿಂದ ನೋಡುವವರ ಸಂಖ್ಯೆ ಅಷ್ಟೇನೂ ಬೆಳೆಯುತ್ತಿಲ್ಲ. ಆದರೆ ತಮ್ಮ ಅಭಿಪ್ರಾಯ, ಬಯಕೆಗಳನ್ನು ಬೆಂಬಲಿಸುವ ವಿಡಿಯೊಗಳನ್ನು ನೋಡಬೇಕೆನಿಸುವವರನ್ನು ಕ್ಷಣಮಾತ್ರದಲ್ಲಿ ಗುರುತಿಸಿ ತಮ್ಮತ್ತ ಸೆಳೆಯಬಲ್ಲ ವಿಡಿಯೊಗಳ ಸಂಖ್ಯೆ ಅಂದಾಜಿಗೂ ಸಿಗದು. ಹೀಗಾಗಿ, ನೇರವಾಗಿ ವ್ಯಕ್ತಗೊಳ್ಳುವ ಪೂರ್ವಗ್ರಹಗಳು, ಸಾಮಾಜಿಕ ಸಭ್ಯತೆಯ ಕಾರಣದಿಂದ ಹೊರಬರಲು ಹಿಂಜರಿಯುವ ಪೂರ್ವಗ್ರಹಗಳು ಸಾಮಾಜಿಕ ಮಾಧ್ಯಮದ ವೈಯಕ್ತಿಕ ಖಾತೆಗಳ ಮೂಲಕ ಸಲೀಸಾಗಿ ಪ್ರಚುರಗೊಳ್ಳುತ್ತವೆ.

ಎಲ್ಲ ವಿಧದ ಪೂರ್ವಗ್ರಹಗಳೂ ಜನಮಾನಸದಲ್ಲಿ ಇಳಿಯುವ ಪ್ರಯತ್ನವನ್ನು ಮಾಡುತ್ತಲೇ ಇರುತ್ತವೆ. ಕೆಲವರಿಗಂತೂ ತಮ್ಮ ಮನೋಗೊಂದಲ, ತಮ್ಮಲ್ಲಿ ಹುದುಗಿರುವ ಅಸಹನೀಯ ಬಯಕೆಗಳಿಗೆ ಇಂತಹ ವಿಡಿಯೊಗಳೇ ಶಮನಕಾರಿ. ತಾವು ನಂಬಿರುವುದೆಲ್ಲವೂ ನಿಜ ಅಂದುಕೊಳ್ಳುವಂತೆ ಮಾಡುವ ಭ್ರಮೆಗಳಿಗೆ ಡೀಪ್‌ಫೇಕ್ ಮಾಹಿತಿಗಳು ಮತ್ತಷ್ಟು ಬಲ ನೀಡುತ್ತವೆ.

ಪೂರ್ವಗ್ರಹದಿಂದ ತುಂಬಿರುವ ನಮ್ಮ ನಂಬಿಕೆಗಳಿಗೂ ಭಾವುಕತನಕ್ಕೂ ಅತಿ ಹತ್ತಿರದ ನಂಟು. ಈ ನಮೂನೆಯ ಮಾನಸಿಕ ಸ್ಥಿತಿಯು ತಂತ್ರಜ್ಞಾನ ಆಧಾರಿತ ಕೃತಕ ಬುದ್ಧಿಸಾಮರ್ಥ್ಯವು ಸೃಷ್ಟಿಸುವ ಹುಸಿತನಕ್ಕಿಂತಲೂ ಹೆಚ್ಚು ಅಪಾಯಕಾರಿ. ಹೀಗಾಗಿ, ವಿಚಾರ ಮಾಡದೇ ಸಮ್ಮತಿಸುವ ಮನಸ್ಸು ಡೀಪ್‌ಫೇಕ್ ಮಾಹಿತಿಗಳನ್ನು ಸದಾ ಆದರದಿಂದ ಸ್ವಾಗತಿಸಲು ಹವಣಿಸುತ್ತಲೇ ಇರುತ್ತದೆ.

ಸಾಮಾಜಿಕ ಮಾಧ್ಯಮಗಳ ತಂತ್ರಜ್ಞಾನವು ಈ ವಾಸ್ತವವನ್ನು ಬಲು ಚೆನ್ನಾಗಿ ಅರ್ಥಮಾಡಿಕೊಂಡಿರುತ್ತದೆ. ಸುಲಭವಾಗಿ ಸಂಪರ್ಕಿಸಿ ಪ್ರತಿಕ್ರಿಯಿಸಬಹುದಾದ ಈ ಮಾಧ್ಯಮಗಳ ಅನುಯಾಯಿಗಳು ಯಾವಾಗಲೂ ಬೃಹತ್ ಸಂಖ್ಯೆಯಲ್ಲಿಯೇ ಇರುತ್ತಾರೆ, ಜನ ಮರುಳೋ ಜಾತ್ರೆ ಮರುಳೋ ಎನ್ನುವಂತೆ. ಆದ್ದರಿಂದಲೇ ಇಂದಿನ ಪೀಳಿಗೆಯ ಮನಸ್ಸಿನಲ್ಲಿ ಪೂರ್ವಗ್ರಹದ ಛಾಯೆ ಹೆಚ್ಚು ಪ್ರಾಬಲ್ಯ ಪಡೆಯದಂತೆ ಎಚ್ಚರ ವಹಿಸಬೇಕಾಗಿದೆ. ಈ ಕೆಲಸವನ್ನು ಯಾರು ಮಾಡಬಲ್ಲರು? ಇಂದಿನ ವಾತಾವರಣದಲ್ಲಿ ಶಾಲಾ ಪಠ್ಯದ ಮೂಲಕವಂತೂ ಸಾಧ್ಯ ಆಗದು. ಹಾಗಿದ್ದರೆ ಯಾರಿಂದ? ಬಹುಶಃ ಮನೆಯ ವಾತಾವರಣ ಮತ್ತು ಪೂರ್ವಗ್ರಹದಿಂದಾಗುವ ತೊಂದರೆಗಳ ಬಗ್ಗೆ ತಿಳಿಯಲು ಉತ್ಸುಕರಾಗಿರುವ ವಯಸ್ಕರು ಮತ್ತು ಪೋಷಕರಿಂದ ಸಾಧ್ಯವಾಗಬಹುದೇನೊ. ಸಾಚಾತನದ ಮುಖವಾಡವಿರುವ ಇವುಗಳನ್ನು ತಡೆಹಿಡಿಯಬಲ್ಲ ಯಶಸ್ವಿ ಪ್ರಯತ್ನಗಳಲ್ಲಿ ಮಾಧ್ಯಮಗಳ ಪಾತ್ರ ಮಹತ್ವದ್ದೇ ಆಗಿರುತ್ತದೆ.

ಲೇಖಕ: ಮನೋವಿಜ್ಞಾನಿ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT