ಶನಿವಾರ, 27 ಜುಲೈ 2024
×
ADVERTISEMENT
ಈ ಕ್ಷಣ :
ADVERTISEMENT

ಸಂಗತ | ಅರಮನೆಯಾಚೆಗಿನ ನಿಜ ಅರಸ!

ನಶ್ವರತೆಗಿರುವ ಪ್ರಖರ ಮೌಲ್ಯವನ್ನು ಬುದ್ಧ ಅನಾವರಣಗೊಳಿಸುವ ಪರಿ ಅನನ್ಯ
Published 22 ಮೇ 2024, 0:30 IST
Last Updated 22 ಮೇ 2024, 0:30 IST
ಅಕ್ಷರ ಗಾತ್ರ

ಗೌತಮ ಬುದ್ಧ ರಾಜಕೀಯ ಅಧಿಕಾರವನ್ನು ಎಂದೂ ಆಶ್ರಯಿಸಲಿಲ್ಲ. ಆದರೂ ಅವನು ನೀತಿ ಮತ್ತು ಹೊಣೆಗಾರಿಕೆಯ ತಳಹದಿಯಲ್ಲಿ ಜನಪ್ರಾತಿನಿಧ್ಯವನ್ನು ನಿರ್ವಹಿಸಬೇಕೆಂದು ಒತ್ತಿಹೇಳಿ, ತಾನು ಅರಮನೆಯ ಹೊರಗಿನ ನಿಜ ಅರಸನೆನ್ನಿಸಿದ. ಯಾವುದೇ ರಾಜಕೀಯ ವ್ಯವಸ್ಥೆಯು ಸಂಪೂರ್ಣ ಸಂತೋಷ, ಸಮಾಧಾನ ತರದು. ಆದರೆ ಪ್ರಜೆಗಳು ಮೂಲಭೂತ ಹಕ್ಕುಗಳಿಂದ ವಂಚಿತರಾಗಬಾರದಷ್ಟೆ. ಅವರಿಗೆ ಕನಿಷ್ಠ ಅನುಕೂಲಗಳಾದ ಉದ್ಯೋಗ, ಅನ್ನ, ನೀರು, ನೆರಳು, ಗೌರವ ಸಲ್ಲಲೇಬೇಕು.

ಬುದ್ಧ ನೀಡಿದ ಎರಡು ಮಹತ್ತರ ವಿಶ್ವಸಂದೇಶ ಗಳೆಂದರೆ, ಅಹಿಂಸೆ ಮತ್ತು ಶಾಂತಿ. ಯಾವುದೂ ಶಾಶ್ವತವಲ್ಲ ಎಂಬ ವಾಸ್ತವ ಅರಿತವ ವ್ಯಸನಮುಕ್ತ ಎಂದ ಆತ ಎಲ್ಲ ಕಾಲಕ್ಕೂ ಸಲ್ಲುವ ಮನೋವೈದ್ಯ. ಬುದ್ಧನಿಗೆ ‘ಜ್ಞಾನೋದಯ’ದ ನಂತರ ಸೂಕ್ಷ್ಮವೂ ಕಠಿಣವೂ ಆದ ತಾನು ಕಂಡ ಸತ್ಯಾಂಶಗಳನ್ನು ಜನರಲ್ಲಿ ಹಂಚಿಕೊಳ್ಳುವುದು ಹೇಗೆಂಬ ಪ್ರಶ್ನೆ ಮೂಡಿತು. ಆದರೆ ಕೆಲವರಿಗಾದರೂ ಅವು ತಲುಪುತ್ತವೆ ಎಂಬ ದೃಢ ನಿಲುವಿನಿಂದ ಬೋಧನೆಗಳಿಗೆ ಆತ ಮುಂದಾದ.

‘ನಮ್ಮ ಆಗುಹೋಗುಗಳ ನಿಯಂತ್ರಣ ನಮ್ಮಿಂದಲೇ’ ಎಂದ ಬುದ್ಧನ ಬೋಧನೆಗಳು ಯಾರೇ ಅನುಸರಿಸಬಹುದಾದಷ್ಟು ಸರಳ. ಬದುಕು ಒಮ್ಮೆ ಮಾತ್ರ ಲಭಿಸುವ ಅವಕಾಶವಾದ್ದರಿಂದ ಅದನ್ನು ಹೇಗೆಂದರೆ ಹಾಗೆ ಕಳೆಯಬಾರದು ಎಂದ ಬುದ್ಧ. ನಾವೆಸಗುವ ಪ್ರಮಾದಗಳಿಂದ ಇತರರಿಗೆ ತೊಂದರೆ ಆಗುವುದಿರಲಿ, ನಮ್ಮನ್ನೇ ಹಿಂಸೆಗೆ ಗುರಿಪಡಿಸಿಕೊಳ್ಳುತ್ತೇವೆ. ಬುದ್ಧನ ಬಳಿ ಬರುತ್ತಿದ್ದ ಅಭಿಮಾನಿಗಳ ಪೈಕಿ ಹಲವರು ‘ಸಂತೋಷಕ್ಕೆ ದಾರಿ ಸೂಚಿಸಿ ಗುರುವೇ’ ಎಂದು ಮೊರೆಯಿಟ್ಟವರೆ. ಅವರಿಗೆಲ್ಲ ದೊರೆಯುತ್ತಿದ್ದ ಮಾರ್ಗದರ್ಶನ ಒಂದೇ- ‘ಸಂತೋಷಕ್ಕೆ ದಾರಿಯಿಲ್ಲ, ಏಕೆಂದರೆ ಸಂತೋಷವೇ ಒಂದು ದಾರಿ’.

ತನ್ನ ‍‘ಮಂಗಲಸೂತ್ರ’ ಮಂತ್ರ ಪಠಣದಲ್ಲಿ ಬುದ್ಧ ಕೃತಜ್ಞತೆಯೇ ಎಲ್ಲ ಸದ್ಗುಣಗಳ ತಾಯಿ ಎನ್ನುತ್ತಾನೆ. ತಮ್ಮನ್ನು ಕಟ್ಟಾ ಧಾರ್ಮಿಕ ಅವಿಶ್ವಾಸಿ ಎಂದು ಕರೆದುಕೊಂಡ ಆಲ್ಬರ್ಟ್‌ ಐನ್‌ಸ್ಟೀನ್‌ ‘ಆಧುನಿಕ ವಿಜ್ಞಾನದ ಆಶಯಗಳಿಗೆ ಅನುರೂಪವಾದ ಧರ್ಮ ಯಾವುದಾದರೂ ಇದ್ದರೆ ಅದುವೆ ಬೌದ್ಧಧರ್ಮ’ ಎಂದರು. ಒಂದು ಧರ್ಮವು ರಾಜಕೀಯ ಇಚ್ಛೆಗಳಿಗೆ ಓಲೈಕೆಯಾದರೆ ಅದರ ನೈತಿಕ ಗೊತ್ತು ಗುರಿಗಳು ನೆಲಕಚ್ಚುತ್ತವೆ. ಬದಲಾವಣೆಗಳಿಗೆ ತೆರೆದ ಮನಸ್ಸು, ಪ್ರಕೃತಿಯೊಡನೆ ಅನುಸಂಧಾನ, ಆಂತರಿಕ ಶಾಂತಿ ಹಾಗೂ ಸಣ್ಣಪುಟ್ಟ ಸಂಗತಿಗಳಿಗೂ ಮೆಚ್ಚುಗೆ ಬದುಕಿಗೆ ರಹದಾರಿ. 

ಇಂದ್ರಿಯ ಬುದ್ಧಿಮತ್ತೆ ಮತ್ತು ತೀವ್ರತರ ಸ್ವಯಂಶಿಸ್ತು- ಇವೆರಡರ ನಡುವಿನ ‘ಮಧ್ಯಮಾರ್ಗ’ ಎಂದು ಕರೆಯಲಾಗುವ ಸುಲಭ ವಿಧಾನವನ್ನು ಜನರಿಗೆ ಉಪದೇಶಿಸಿದ್ದು ಬುದ್ಧನ ಹೆಗ್ಗಳಿಕೆ. ಮಹಿಳೆಯರಿಗೆ ಧಾರ್ಮಿಕ ಸ್ವಾತಂತ್ರ್ಯ ಇರಬೇಕೆಂದು ಪ್ರತಿಪಾದಿಸಿದ ಮೊದಲಿಗ ಬುದ್ಧ. ಕೋಸಲ ದೇಶದ ದೊರೆ ತನ್ನ ರಾಣಿ ಹೆಣ್ಣುಮಗುವಿಗೆ ಜನ್ಮ ನೀಡಿದ್ದಕ್ಕೆ ನೊಂದುಕೊಳ್ಳುತ್ತಾನೆ. ಈ ಪರಿತಾಪ ಅರ್ಥಹೀನ ಎಂದು ಅವನನ್ನು ತರಾಟೆಗೆ ತೆಗೆದುಕೊಳ್ಳುತ್ತಾನೆ ಬುದ್ಧ. ಒಬ್ಬಳು ಹೆಣ್ಣುಮಗಳು ಗಂಡಿನಷ್ಟೇ ಸಮನಾಗಿ ಶ್ರೇಯಸ್ಸು ತಲುಪಿ ಸಮಾಜವನ್ನು ಉನ್ನತೀಕರಿಸಬಲ್ಲಳು ಎನ್ನುವ ಪಾಠದಿಂದ ರಾಜನ ಕಣ್ಣು ತೆರೆಯಿಸುತ್ತಾನೆ.

ನಶ್ವರತೆಗಿರುವ ಪ್ರಖರ ಮೌಲ್ಯವನ್ನು ಬುದ್ಧ ಅನಾವರಣಗೊಳಿಸುವ ಪರಿ ಸ್ವಾರಸ್ಯಕರವಾಗಿದೆ. ಒಂದು ವೇಳೆ ಸಾವೆನ್ನುವುದೇ ಇಲ್ಲವಾದರೆ ಬದುಕನ್ನು ವ್ಯಾಮೋಹ ಮತ್ತು ಹಂಬಲವೇ ಆಳುತ್ತವೆ. ಮರಣ ಒಂದಲ್ಲೊಂದು ದಿನ ಬರುತ್ತದೆ ಎಂದು ತಿಳಿದೂ ಮನುಷ್ಯ ಬಗೆ ಬಗೆ ರಂಪ, ರಗಳೆಗಿಳಿಯುತ್ತಾನೆ. ಇನ್ನು ಅಮರತ್ವ ಎಂತಹ ಅನಾಹುತಗಳನ್ನು ಸೃಷ್ಟಿಸಬಹುದು? ನಮ್ಮ ತೃಪ್ತಿ, ಸಮಾಧಾನವೇ ನಮ್ಮನ್ನು ನಿಷ್ಕ್ರಿಯತೆಗೆ ದೂಡಬಾರದೆಂಬುದು ಬುದ್ಧನ ಎಚ್ಚರಿಕೆ.

ಖಂಡಾಂತರ ವ್ಯಾಧಿ ಕೋವಿಡ್-‌ 19 ಕಾಟ ಜಯಿಸಿದ್ದೇವೆ, ವಾಯುಗುಣ ಬದಲಾವಣೆ, ಜಾಗತಿಕ ತಪನದಂಥ ಸವಾಲುಗಳಿಗೆ ಕಾರಣ ಹಾಗೂ ಪರಿಹಾರೋಪಾಯಗಳ ಅನ್ವೇಷಣೆ ಸಾಗಿದೆ. ಬುದ್ಧನ ಹಿತನುಡಿಗಳು ಹಿಂದೆಂದೂ ಇಲ್ಲದಷ್ಟು ನಮಗೆ ಪ್ರಸ್ತುತವಾಗಬೇಕಿವೆ. ಬುದ್ಧನ ಪ್ರವಚನಗಳಲ್ಲಿ
ನೀಡಿದ ದೃಷ್ಟಾಂತಗಳು, ಉಪಕಥೆಗಳು ಬಹು ಮನೋಜ್ಞವಾಗಿವೆ. ಒಮ್ಮೆ ಅವನು ರೇಷ್ಮೆ ಕರವಸ್ತ್ರವೊಂದನ್ನು ತೋರಿಸಿ ಅದರ ಎರಡು ಮೂಲೆಗಳನ್ನು ಬಿಗಿದು ಕಟ್ಟಿ ಒಂದು ಗಂಟು ಮಾಡುತ್ತಾನೆ. ಇಗೋ ಗಂಟು ಬಿಡಿಸಿ ಅಂತ ಶಿಷ್ಯರಿಗೆ ಆದೇಶಿಸಿದಾಗ ಎಲ್ಲರಿಗೂ ಅದು ಸಮಸ್ಯೆ. ಒಬ್ಬ ಶಿಷ್ಯ ಕರವಸ್ತ್ರವನ್ನು ಮತ್ತೂ ಎಳೆದಾಗ ಗಂಟು ಕಗ್ಗಂಟಾಗಿ ಬಿಡಿಸಲು ಮತ್ತೂ ತೊಂದರೆಯೇ ಆಗಿತ್ತು. ಆಗ ಬುದ್ಧ ‘ಶಿಷ್ಯರೇ, ಗಂಟು ಬಿಡಿಸಬೇಕಾದರೆ ಇರುವ ಉಪಾಯವೆಂದರೆ ಅದು ಹೇಗೆ ಗಂಟಾಯಿತೆಂದು ಸಹನೆಯಿಂದ ಪರಾಮರ್ಶಿಸ
ಬೇಕು. ಆಗ ಕರವಸ್ತ್ರವನ್ನು ಹಿಂದಿನ ಸ್ಥಿತಿಗೆ ತರಬಹುದು’ ಎಂದ.

ಗೊಂದಲಗಳು, ಭಿನ್ನಾಭಿಪ್ರಾಯಗಳೂ ಹಾಗೆಯೇ ತಾನೆ? ಅವುಗಳ ಮೂಲಗಳನ್ನು ಹುಡುಕಿಯೇ ಪರಿಹರಿಸುವುದು ಬುದ್ಧಿವಂತಿಕೆ. ಕತ್ತರಿಸಿದರೆ ವಸ್ತ್ರವೇ ಹಾಳು. ಒಂದು ವಿದ್ಯಮಾನದ ಹಿಂದೆ ಹಲವಾರು ಕಾರಣಗಳು ಹಾಗೂ ಕರಾರುಗಳ ಸಾಲುಗಳೇ ಇರುತ್ತವೆ. ಸಂದ ದಿನಗಳು ಎಷ್ಟೇ ಗೌಜಾಗಿದ್ದರೂ ಮತ್ತೆ
ಪ್ರಾರಂಭಿಸಬಹುದಲ್ಲ ಎಂಬುದು ಬುದ್ಧನ ಪ್ರಶ್ನೆ. ಬುದ್ಧ 45 ವರ್ಷಗಳ ಕಾಲ ವಿವಿಧೆಡೆಗಳಲ್ಲಿ ಸಂಚರಿಸಿ ಪ್ರವಚನಗಳನ್ನು ನೆರವೇರಿಸಿದ. ಅಂಗುಲಿಮಾಲಾನಂತಹ ದುರುಳರನ್ನೂ ಗೆದ್ದ ಸಂತ ಬುದ್ಧ. ಬುದ್ಧಪೂರ್ಣಿಮೆಯ ಈ ಹೊತ್ತಿನಲ್ಲಿ (ಮೇ 23) ನಾವೆಲ್ಲರೂ ಬುದ್ಧನ ಚಿಂತನೆಗಳನ್ನು ಅಳವಡಿಸಿಕೊಳ್ಳಲು ಪ್ರಯತ್ನಿಸೋಣ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT