ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಕು ವಿತರಣೆ ಹೀಗೂ ಇರಬಹುದು

ಸ್ಥಳೀಯ ಜನಪ್ರತಿನಿಧಿಗಳು, ಖರ್ಚಿಲ್ಲದೇ ಜನರ ಮನಗೆಲ್ಲಲು ಸಾಧ್ಯ!
Last Updated 27 ಮಾರ್ಚ್ 2020, 20:30 IST
ಅಕ್ಷರ ಗಾತ್ರ

ಕೊರೊನಾ ವೈರಸ್‌ ಹಾವಳಿ ಎಲ್ಲೆಡೆ ಆತಂಕಕ್ಕೆ ಕಾರಣವಾಗಿದೆ. ಸರ್ಕಾರಗಳು ಜನರ ಮಂಗಚೇಷ್ಟೆಗಳನ್ನು ತಡೆಯಲಾರದೆ ದಿನಕ್ಕೊಂದು, ಗಂಟೆಗೊಂದು ನಿರ್ಧಾರ ತೆಗೆದುಕೊಳ್ಳುತ್ತಿವೆ. ಶೇ 100ರಷ್ಟು ಲಾಕ್‍ಡೌನ್ ಅಂದ ಸರ್ಕಾರದ ನಿರ್ಧಾರವನ್ನು ಪಾಲಿಸಲು ಪೊಲೀಸರು ಕೆಲವೆಡೆ, ಬೀದಿಯಲ್ಲಿ ಸಿಕ್ಕವರಿಗೆಲ್ಲಾ ಚೆನ್ನಾಗಿ ಬಾರಿಸಿದರು. ಈಗ ಸರ್ಕಾರ ನಿಗದಿತ ಅವಧಿಯಲ್ಲಿ ಖರೀದಿಗೆ ಹೊರಗೆ ಬರಬಹುದು ಎನ್ನುತ್ತಿದೆ. ಇಂತಹ ಸಂದರ್ಭಗಳಲ್ಲಿ ಬೆಂಗಳೂರಿನ ಕನಿಷ್ಠ 10 ಲಕ್ಷ ಜನ ಅನಿವಾರ್ಯ ಪರಿಸ್ಥಿತಿಯಲ್ಲಿ ಹೊರಗೆ ಬರುತ್ತಾರೆ. ಹೀಗಾದಾಗ ಕೊರೊನಾಕ್ಕೆ ಹಬ್ಬ.

ಮೊದಲ ಹಂತವಾಗಿ, ವಾಹನಗಳಲ್ಲಿ ಬಂದವರನ್ನು ತಡೆದು ಚಕ್ರಗಳ ಗಾಳಿ ಬಿಟ್ಟರೆ, ಗಾಡಿ ತಳ್ಳಿಕೊಂಡು ಹೋಗುವುದರಲ್ಲಿ ಸುಸ್ತಾಗುವ ಜನ, ಮತ್ತೆ ಹೊರಗೆ ಬರಲಾರರು. ಹೊರಗೆ ಬಂದವರ ವಿರುದ್ಧ ಪ್ರಕರಣ ದಾಖಲಿಸಲಾಗುತ್ತದೆ ಎಂದು ಹೆದರಿಸಿ ಜನಸಂದಣಿ ತಡೆಯಬಹುದು. ಆದರೆ ಅಗತ್ಯ ವಸ್ತುಗಳನ್ನು ಕೊಳ್ಳುವುದು ಹೇಗೆ ಮತ್ತು ಯಾವಾಗ ಎಂಬ ದೊಡ್ಡ ಪ್ರಶ್ನೆ ಉದ್ಭವಿಸುತ್ತದೆ. ಈಗಾಗಲೇ ಸಣ್ಣ-ಪುಟ್ಟ ಅಂಗಡಿಗಳು ಮಾಲು ಬಾರದೆ ಬಾಗಿಲು ತೆರೆಯುತ್ತಿಲ್ಲ. ಜನ ದೂರದ ಸೂಪರ್ ಮಾರ್ಕೆಟ್‍ಗಳಿಗೆ ಹೋಗಬೇಕಾದ ಅನಿವಾರ್ಯ ಸ್ಥಿತಿ ಒದಗುತ್ತಿದೆ. ಕೆಲವು ಸಂಘಟನೆಗಳು ಬಡವರಿಗೆ ದಿನಸಿ ಪ್ಯಾಕೆಟ್ ನೀಡುವ ಕಾರ್ಯ ಕೈಗೊಂಡಿವೆ. ಆದರೆ ಅದು ಕೆಳವರ್ಗಕ್ಕೆ ಮಾತ್ರ ಸೀಮಿತವಾಗಿದ್ದು, ಮಧ್ಯಮ ವರ್ಗ ಮತ್ತು ಮೇಲ್ಮಧ್ಯಮ ವರ್ಗದ ಜನ ಖರೀದಿಗೆ ಹೊರಗೆ ಬರಲೇಬೇಕಾಗುತ್ತದೆ. ಈ ಆತಂಕ ನಿವಾರಣೆಗೆ ಇಲ್ಲಿದೆ ಒಂದು ಸರಳ ಉಪಾಯ:

ಬೆಂಗಳೂರಿನಲ್ಲಿ ಕಾರ್ಪೊರೇಟರುಗಳಿದ್ದಂತೆ ಗ್ರಾಮಾಂತರ ಪ್ರದೇಶದಲ್ಲಿ ತಾಲ್ಲೂಕು ಪಂಚಾಯಿತಿ ಹಾಗೂ ಗ್ರಾಮ ಪಂಚಾಯಿತಿ ಸದಸ್ಯರು ಇದ್ದಾರೆ. ಅವರೆಲ್ಲರಿಗೂ ಹಿಂಬಾಲಕ ಹುಡುಗರ ಪಡೆ ಇದ್ದೇ ಇರುತ್ತದೆ. ಆ ಹುಡುಗರು ಅಲ್ಲಿಯವರೇ ಆಗಿದ್ದು ಆ ಪ್ರದೇಶದಲ್ಲಿ ಎಷ್ಟು ಜನರಿದ್ದಾರೆ, ಎಷ್ಟು ಮನೆಗಳಿವೆ, ಎಷ್ಟು ಅಂಗಡಿಗಳಿವೆ, ಅಲ್ಲಿನ ಆಟೊಗಳು, ಗೂಡ್ಸ್ ಆಟೊಗಳು ಎಷ್ಟಿವೆ, ಪೇಪರ್ ಹಾಕುವ ಹುಡುಗರು ಮತ್ತು ಡೆಲಿವರಿ ಬಾಯ್ಸ್ ಯಾರು ಎಂಬ ಪೂರ್ಣ ವಿವರ ಹೊಂದಿರುತ್ತಾರೆ. ಗ್ರಾಮಾಂತರ ಪ್ರದೇಶಗಳಲ್ಲಿ ಸ್ತ್ರೀಶಕ್ತಿ ಸಂಘಗಳು, ಅಂಗನವಾಡಿ ಕಾರ್ಯಕರ್ತೆಯರ ಸೇವೆಯನ್ನೂ ಬಳಸಿಕೊಳ್ಳಬಹುದು.

ಕಾರ್ಪೊರೇಟರ್ ತಮ್ಮ ಹಿಂಬಾಲಕರನ್ನು ಸೇರಿಸಿಕೊಂಡು ಒಬ್ಬೊಬ್ಬನಿಗೆ ಒಂದು ರಸ್ತೆಯಂತೆ ಹಂಚಬೇಕು. ಆಗ ಪ್ರತಿಯೊಬ್ಬನಿಗೂ ಸುಮಾರು 40- 50 ಮನೆಗಳ ಉಸ್ತುವಾರಿ ದೊರೆಯುತ್ತದೆ. ಆತ ತನಗೆ ವಹಿಸಲಾದ ರಸ್ತೆಯಲ್ಲಿ ಇರುವ ಮನೆಗಳ, ಜನರ ವಿವರ ಸಂಗ್ರಹಿಸಿ, ಮನೆಯ ಒಬ್ಬರ ಫೋನ್‌ ನಂಬರ್ ಪಡೆದುಕೊಂಡು ತನ್ನ ಫೋನ್‌ ನಂಬರ್ ಅವರಿಗೆ ಕೊಟ್ಟು, ಆ ಮನೆಗೆ ಬೇಕಾದ ದಿನಸಿ, ಔಷಧಿ, ಮಾಸ್ಕ್, ತರಕಾರಿ ಇತ್ಯಾದಿಗಳನ್ನು ಒದಗಿಸುವುದಾಗಿ ಹೇಳಿ, ವಾಟ್ಸ್‌ಆ್ಯಪ್ ಮಾಡುವಂತೆ ವಿನಂತಿಸಬೇಕು. ಅಗತ್ಯ
ಇದ್ದವರು ಕೊಟ್ಟ ವಿವರ ಆಧರಿಸಿ, ಅವರಿಗೆ ಬೇಕಾದ ವಸ್ತುಗಳನ್ನು ಅಂಗಡಿಗಳಿಂದ ಕೊಂಡು ಮನೆಗೆ ತಲುಪಿಸಬೇಕು. ಇಲ್ಲಿ ಹಾಪ್‍ಕಾಮ್ಸ್ ಸೇವೆಯನ್ನೂ ಬಳಸಿಕೊಂಡರೆ ಮಾರುಕಟ್ಟೆಯನ್ನೂ ಬಂದ್ ಮಾಡಬಹುದು. ದಿನಸಿಯ ಸಾಮಾನ್ಯ ಪ್ಯಾಕೆಟ್ ಒಂದನ್ನು ಮಾಡಿ, ಅದರಲ್ಲಿ 10 ಕೆ.ಜಿ. ಅಕ್ಕಿ, ಒಂದು ಲೀಟರ್ ಅಡುಗೆ ಎಣ್ಣೆ, ಉಪ್ಪು, ಗೋಧಿಹಿಟ್ಟು, ಅಕ್ಕಿಹಿಟ್ಟು, ಖಾರದಪುಡಿ, ಬೇಳೆ ಇತ್ಯಾದಿ ವಸ್ತುಗಳನ್ನು ಸೇರಿಸಿ, ಅದಕ್ಕೆ ತಕ್ಕಂತೆ₹500 ಅಥವಾ ₹1,000 ಬೆಲೆ ನಿಗದಿಪಡಿಸಬಹುದು.

ತಮಗೆ ಬೇಕಾದ ವಸ್ತುಗಳು ಮನೆಗೇ ಬಂದಾಗ ಜನ ಹೊರಹೋಗುವ ಸಾಹಸ ಮಾಡಲಾರರು! ಆಟೊಗಳಿಗೆ ಸೂಕ್ತ ಬಾಡಿಗೆ ಕೊಟ್ಟರೆ ಅವರೂ ಕೈಜೋಡಿಸಿಯಾರು. ಮೊದಲ ಒಂದೆರಡು ದಿನದ ಒತ್ತಡ ಕ್ರಮೇಣ ಕಡಿಮೆಯಾಗುತ್ತದೆ.

ಈ ಕಾರ್ಯ ಕೈಗೊಳ್ಳಲು ಸರ್ಕಾರದ ಅನುಮತಿಯೇನೂ ಬೇಕಾಗದು. ಸ್ಥಳೀಯ ಪೊಲೀಸರನ್ನು ಕಾರ್ಪೊರೇಟರ್ ವಿಶ್ವಾಸಕ್ಕೆ ತೆಗೆದುಕೊಂಡು ತನ್ನ ಹುಡುಗರಿಗೆ ಗುರುತಿನ ಚೀಟಿ, ಮಾಸ್ಕ್ ಮತ್ತು ಕೈಗವಸು ಕೊಟ್ಟು ಅವರ ಸೇವೆಯನ್ನು ಅಧಿಕೃತಗೊಳಿಸಬೇಕು. ಈ ಕೆಲಸಗಳಿಗೆ ಭಾರಿ ಖರ್ಚೇನೂ ಆಗುವುದಿಲ್ಲ.

ತನ್ನ ಏರಿಯಾದಲ್ಲಿ ಕಾರ್ಪೊರೇಟರ್ ಸ್ವತಃ ನಿಂತು ದಿನಸಿ ವಿತರಣೆ, ಔಷಧಿ ಸಿಂಪಡಣೆ, ಮಾಸ್ಕ್ ವಿತರಣೆ ಮುಂತಾದ ಕಾರ್ಯಗಳನ್ನು ಮಾಡಿಸಿದಾಗ ಅವರಿಗೆ ಸಿಗುವ ಪ್ರಚಾರ, ಬೇರೆ ಯಾವ ಕಾರ್ಯದಿಂದಲೂ ದೊರೆಯುವುದಿಲ್ಲ. ಕಾರ್ಪೊರೇಟರ್ ಅಥವಾ ಪುರಸಭೆ ಸದಸ್ಯರಿಗೆ ಜನರ ಖುದ್ದು ಪರಿಚಯವಾಗುತ್ತದೆ. ಕಾಸು ಖರ್ಚಿಲ್ಲದೇ ಜನರ ಮನಗೆಲ್ಲಬಹುದು. ಗೆದ್ದವರು ಮತ್ತು ಸೋತ ಅಭ್ಯರ್ಥಿಗಳು ಪಕ್ಷಭೇದ ಮರೆತು ಒಟ್ಟಾಗಿ ಸೇರಿ ಈ ಕಾರ್ಯವನ್ನು ಮಾಡಬಹುದು.

ಜನ ಕೂಡ ಇಂತಹ ಸಂದರ್ಭಗಳಲ್ಲಿ ತಮ್ಮ ಪಕ್ಷನಿಷ್ಠೆ, ದೊಡ್ಡಸ್ತಿಕೆಗಳನ್ನು ಬಿಟ್ಟು ಸಹಕರಿಸಬೇಕು! ಇದರಿಂದ ಪರಸ್ಪರ ಸಂಪರ್ಕ ಮತ್ತು ಕಾಯಿಲೆ ಹರಡುವ ಅಪಾಯಗಳನ್ನು ದೂರವಿಡಬಹುದು. ಇಂತಹ ಕ್ರಮಗಳು ಹೊಸತೊಂದು ಸ್ಟಾರ್ಟ್‌ಅಪ್‌ ಉದ್ಯಮಕ್ಕೂ ದಾರಿ ಮಾಡುತ್ತವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT